ಸಿಲಿಕಾನ್ ಸಿಟಿ ಬೆಂಗಳೂರಿಗೆ ತಡರಾತ್ರಿಯಿಂದ ಮತ್ತೆ ಮಳೆಯ ಶಾಕ್!

ಬೆಂಗಳೂರು: ಮಂಗಳವಾರ ರಾತ್ರಿ ಸುಮಾರು ನಾಲ್ಕು ತಾಸುಗಳ ಕಾಲ ಸುರಿದ ಧಾರಾಕಾರ ಮಳೆಗೆ ರಾಜ್ಯ ರಾಜಧಾನಿ ಮತ್ತೆ ಹೈರಾಣವಾಗಿದ್ದು, ಹಲವೆಡೆಗಳಲ್ಲಿ ಅವಾಂತರ ಸೃಷ್ಟಿಸಿದೆ.
ನಗರದ ಬಹುತೇಕ ಕಡೆಗಳಲ್ಲಿ ಮಳೆ ನೀರು ಎಲ್ಲೆಂದರಲ್ಲಿ ನುಗ್ಗಿದ ಪರಿಣಾಮ ಸಮಸ್ಯೆ ಸೃಷ್ಟಿಸಿದರೆ, ಬೆಂಗಳೂರಿನ ವರ್ತೂರು, ಬೆಳ್ಳಂದೂರು ಹಾಗೂ ಸುಬ್ರಹ್ಮಣ್ಯಪುರ ಕೆರೆಯ ನಂತರ ಇದೀಗ ಕೆ.ಆರ್. ಪುರದ ವೈಟ್‌ಸಿಟಿ ಲೇಔಟ್‌ನ ಭಟ್ರಹಳ್ಳಿ ಕೆರೆಯಲ್ಲಿ ಕೂಡ ನಿನ್ನೆಯ ಮಳೆಯಿಂದ ನೊರೆ ಕಾಣಿಸಿಕೊಂಡಿದೆ. ನಗರದ ಕೋರಮಂಗಲ, ಶಾಂತಿನಗರ, ಆವಲಹಳ್ಳಿ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ರಾಜರಾಜೇಶ್ವರಿನಗರ, ಮಲ್ಲೇಶ್ವರ, ಯಶವಂತಪುರ, ಹೆಬ್ಬಾಳ, ಬನಶಂಕರಿ ಸೇರಿದಂತೆ ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ಜೆ.ಪಿ. ನಗರದ ಆರನೇ ಹಂತ ಮಳೆಯಿಂದ ಮತ್ತೆ ಮುಳುಗಡೆಯಾಗಿದ್ದರೆ, ಇನ್ನು ಕೆ.ಆರ್.ಪುರಂ, ಕೋರಮಂಗಲ, ಶಿವಾಜಿನಗರ, ಕೆ.ಆರ್. ಮಾರುಕಟ್ಟೆ ಮೊದಲಾದೆಡೆಗಳಲ್ಲಿಯೂ ಮಳೆ ಸಂಕಷ್ಟ ಹೊತ್ತುತಂದಿದೆ.

LEAVE A REPLY