‘ಮಾರ್ನೆಮಿ ಪಿಲಿವೇಷ’ದ ಪರ್ಮಿಟ್ ಪಡೆಯಲೂ ಆಧಾರ್ ಕಡ್ಡಾಯ!

ಪುತ್ತೂರು: ನವರಾತ್ರಿಯ ಸಂದರ್ಭದಲ್ಲಿ ಮಾರ್ನೆಮಿ ಪಿಲಿವೇಷಗಳು ರಸ್ತೆಗಿಳಿಯುವುದು ಇಲ್ಲಿನ ವಾಡಿಕೆ. ಆದರೆ ಹುಲಿವೇಷಾಧಾರಿಗಳಾಗಿ ಪ್ರದರ್ಶನ ನೀಡುವವರು ಪೊಲೀಸ್ ಠಾಣೆಯಿಂದ ಪರ್ಮಿಟ್ ಪಡೆದುಕೊಳ್ಳುವ ನಿಯಮವನ್ನು ಈ ಬಾರಿ ಕಡ್ಡಾಯಗೊಳಿಸಲಾಗಿದೆ.
ಷರತ್ತುಬದ್ಧ ಪರ್ಮಿಟ್ ನೀಡುವ ಮೂಲಕ ಹುಲಿ ವೇಷದ ತಂಡಗಳನ್ನು ಕಾನೂನಿನ ಶಿಸ್ತಿಗೆ ಪೊಲೀಸರು ಒಳಪಡಿಸಿದ್ದಾರೆ. ಯಾವುದೇ ಕಾರಣಕ್ಕಾಗಿ ಪೊಲೀಸರ ಅನುಮತಿ ಇಲ್ಲದೇ ಹುಲಿ, ಶಾರ್ದುಲ್ಲಾ ಮತ್ತು ಕರಡಿ ಕುಣಿತದ ವೇಷಗಳು ರಸ್ತೆಗೆ ಇಳಿಯುವಂತಿಲ್ಲ.
ಆಧಾರ್ ಕಡ್ಡಾಯ
ಹುಲಿವೇಷ ಪ್ರದರ್ಶನ ನಡೆಸುವ ತಂಡದ ಮುಖ್ಯಸ್ಥರು ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯ ಜೊತೆಗೆ ಮತದಾರರ ಗುರುತಿನ ಚೀಟಿಯ ಪ್ರತಿಯ ಜೊತೆಗೆ ಆಧಾರ್ ಕಾರ್ಡ್‌ನ ಪ್ರತಿಯನ್ನು ಕೂಡ ಅಗತ್ಯವಾಗಿ ಲಗತ್ತಿಸಬೇಕು. ಅರ್ಜಿದಾರನ ಹೆಸರು ಮತ್ತು ವಿಳಾಸವನ್ನು ಖಚಿತಪಡಿಸಿಕೊಳ್ಳಲು ಈ ಎರಡು ದಾಖಲೆಗಳನ್ನು ಪೊಲೀಸ್ ಇಲಾಖೆ ಕೇಳುತ್ತಿದೆ. ಈಗ ಎಲ್ಲಾ ಸರಕಾರೀ ಅಥವಾ ಯಾವುದೇ ಸೌಲಭ್ಯಗಳಲ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಮಾರ್ನೆಮಿಯ ಪಿಲಿವೇಷದ ಪರ್ಮಿಟ್‌ಗು ಕೂಡ ಆಧಾರ್ ದಾಖಲೆ ಹೊರತುಪಡಿಸಲಾಗಿಲ್ಲ.
ವೇಷಧಾರಿಗಳಿಗೆ ಷರತ್ತುಗಳು
ಹುಲಿ, ಶಾರ್ದುಲ್ಲಾ, ಕರಡಿ ವೇಷಗಳನ್ನು ಧರಿಸಿ ರಸ್ತೆಯಲ್ಲಿ, ಅಂಗಡಿಗಳ ಮುಂದೆ, ಮನೆಯ ಅಂಗಳದಲ್ಲಿ ಪ್ರದರ್ಶನ ಮಾಡುವ ತಂಡಗಳಿಗೆ ಪೊಲೀಸರು ಷರತ್ತು ಬದ್ಧ ಪರ್ಮಿಟ್ ನೀಡುತ್ತಾರೆ. ರಾತ್ರಿ ೮ಗಂಟೆಯ ಒಳಗೆ ಪ್ರದರ್ಶನ ನಿಲುಗಡೆಗೊಳಿಸಬೇಕು. ರಾತ್ರಿಯ ವೇಳೆ ಯಾವುದೇ ಕಾರಣಕ್ಕೂ ಠಾಸೆ, ಡೋಲು ಮತ್ತಿತರ ಚರ್ಮ ವಾದ್ಯಗಳ ಸದ್ದುಮಾಡುವ ಮೂಲಕ ಶಬ್ದಮಾಲಿನ್ಯಕ್ಕೆ ಕಾರಣವಾಗಬಾರದು. ರಸ್ತೆಯಲ್ಲಿ ಚಲಿಸುವ ವಾಹನಗಳು ಮತ್ತು ನಾಗರಿಕರನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡಬಾರದು. ಸಾರ್ವಜನಿಕರು ತಮ್ಮ ಖುಷಿಯಿಂದ ನೀಡಿದ ಹಣವನ್ನು ಪಡೆದುಕೊಳ್ಳಬೇಕು. ತಂಡಗಳು ಪರಸ್ಪರ ಸ್ಪರ್ಧೆಗಿಳಿದು ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸಬಾರದು ಮತ್ತಿತರ ಷರತ್ತುಗಳನ್ನು ವಿಧಿಸಲಾಗಿದೆ.
ಇನ್ಸ್‌ಪೆಕ್ಟರ್‌ಗೆ ಅಧಿಕಾರ
ಹುಲಿ, ಶಾರ್ದುಲ್ಲಾ ಮತ್ತು ಕರಡಿ ವೇಷಗಳನ್ನು ಧರಿಸುವ ವೇಷಧಾರಿಗಳಿಗೆ ಷರತ್ತು ಬದ್ಧ ಪರ್ಮಿಟ್ ನೀಡುವ ಅಧಿಕಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆಯಾ ವ್ಯಾಪ್ತಿಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ನೀಡಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಅವರ ಅಧಿಕೃತ ಪರ್ಮಿಟ್ ಇಲ್ಲದೆ ಅಥವಾ ಪರ್ಮಿಟ್‌ನಲ್ಲಿ ಅನುಮತಿ ಪಡೆದ ವೇಷಗಳ ಸಂಖ್ಯೆಗಿಂತ ಹೆಚ್ಚು ವೇಷಧಾರಿಗಳು ತಂಡದಲ್ಲಿ ಇರಬಾರದು. ಯಾವುದೇ ಕಾರಣಕ್ಕೂ ಪರ್ಮಿಟ್ ನಿಯಮವನ್ನು ಉಲ್ಲಂಘಿಸಿದರೆ ಅಂತಹ ತಂಡಗಳ ಪ್ರದರ್ಶನವನ್ನು ರದ್ದುಪಡಿಸುವ ಅಧಿಕಾರವನ್ನು ಪೊಲೀಸ್ ಇನ್ಸ್‌ಪೆಕ್ಟರ್ ಹೊಂದಿರುತ್ತಾರೆ.

LEAVE A REPLY