ಪ್ರಖ್ಯಾತ ಯಕ್ಷಗಾನ ಕಲಾವಿದರ ತೇಜೋವಧೆ: ನೆಲ್ಯಾಡಿಯಲ್ಲಿ ಖಂಡನಾ ನಿರ್ಣಯ

ಉಪ್ಪಿನಂಗಡಿ: ಯಕ್ಷಗಾನ ಪ್ರಸಂಗದಲ್ಲಿನ ದೃಶ್ಯವೊಂದನ್ನು ವಿವಾದಾತ್ಮಕ ದೃಷ್ಟಿಯಲ್ಲಿ ಗೋಚರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು ಕಲಾವಿದರ ತೇಜೋವಧೆಗೆ ಯತ್ನಿಸಿರುವ ಕೃತ್ಯವನ್ನು ನೆಲ್ಯಾಡಿಯ ಯಕ್ಷಕಲಾವಿದ ಪ್ರಶಾಂತ್ ಶೆಟ್ಟಿ ಅಭಿಮಾನಿ ಬಳಗವು ಖಂಡಿಸಿದ್ದು, ತೇಜೋವಧೆಗೆ ಮುಂದಾಗಿರುವ ಜಾಲವನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸುವ ಸಲುವಾಗಿ ಹೋರಾಟಕ್ಕೆ ಮುಂದಾಗುವುದಾಗಿ ಸೋಮವಾರ ನೆಲ್ಯಾಡಿಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ತುರ್ತು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆಯು ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, ಬಡತನದ ಹಿನ್ನೆಲೆಯಿಂದ ಬಂದು ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ಇದೀಗ ಶ್ರೇಷ್ಠ ಕಲಾವಿದನಾಗಿ ಜನಪ್ರಿಯವಾಗಿರುವ ಪ್ರಶಾಂತ್ ಶೆಟ್ಟಿ ಅವರನ್ನು ಮಾನಸಿಕವಾಗಿ ಕಂಗೆಡುವಂತೆ ಮಾಡುವ, ತನ್ಮೂಲಕ ಯಕ್ಷಗಾನ ಕ್ಷೇತ್ರದಿಂದ ಅವರನ್ನು ವಿಮುಖಗೊಳಿಸುವ ಜಾಲವೊಂದು ಕ್ರಿಯಾಶೀಲವಾಗಿದೆ. ಪ್ರಸಂಗದಲ್ಲಿನ ದೃಶ್ಯವನ್ನು ಅಶ್ಲೀಲ ಭಾವದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಅನಗತ್ಯ ವಿವಾದಗಳನ್ನು ಮೂಡಿಸುತ್ತಾ ಮುಗ್ದ ಕಲಾವಿದನ ಬದುಕಿನಲ್ಲಿ ಚೆಲ್ಲಾಟವಾಡುವ ನಡವಳಿಕೆ ಕಾಣಿಸುತ್ತಿದೆ. ನೆಲ್ಯಾಡಿಯ ಹಿರಿಮೆ ಗರಿಮೆಗೆ ಕಾರಣೀಕರ್ತರಾದ ಪ್ರಶಾಂತ್ ಶೆಟ್ಟಿ ಅವರ ತೇಜೋವಧೆಯನ್ನು ಸಹಿಸಲು ಸಾಧ್ಯವಿಲ್ಲ. ಅವರನ್ನು ಯಕ್ಷಗಾನ ಕ್ಷೇತ್ರದಿಂದ ಹಿಮ್ಮುಖಗೊಳಿಸಲು ಸಜ್ಜನ ಸಮಾಜ ಬಿಡದು. ಅನಗತ್ಯ ವಿವಾದದ ಕರಿ ನೆರಳಿನಿಂದ ಹೊರಬಂದು ಮತ್ತೆ ಯಕ್ಷಗಾನದಲ್ಲಿ ಕಲಾವಿದ್ವತ್ ಪ್ರದರ್ಶಿಸಲು ಪ್ರಶಾಂತ್ ಶೆಟ್ಟಿ ಅವರಿಗೆ ಇಡೀ ನಾಗರಿಕ ಸಮಾಜ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ ಎಂದರು.
ಪುತ್ತೂರು ಎಪಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು ಪ್ರಸ್ತಾವಿಕ ಮಾತನಾಡಿ, ನಮ್ಮ ಊರಿನ ಹೆಮ್ಮೆಯ ಯಕ್ಷ ಕಲಾವಿದನೊಬ್ಬನ ತೇಜೋವಧೆಯನ್ನು ನಾವು ಎಂದಿಗೂ ಸಹಿಸಲಾರೆವು. ಕಲಾವಿದರ ತೇಜೋವಧೆಯನ್ನು ಮಾಡುವುದು ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಿದಂತೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ಟಿ. ಮಾತನಾಡಿ ವೀಕ್ಷಕರಿಗಿಂತ ವಿಮರ್ಶಕರೇ ತುಂಬಿರುವ ಇಂದಿನ ದಿನಗಳಲ್ಲಿ ಕಲಾವಿದರನ್ನು ಅನಗತ್ಯ ವಿವಾದಗಳಲ್ಲಿ ಕೆಡವುತ್ತಿರುವುದು ಕಳವಳಕಾರಿ ವಿದ್ಯಾಮಾನ. ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಕಟೀಲು ಕ್ಷೇತ್ರದ ಪ್ರಸಿದ್ಧ ತಂಡದಲ್ಲಿ ಮುಖ್ಯ ಸ್ತ್ರೀ ಪಾತ್ರವನ್ನು ಅತ್ಯದ್ಭುತವಾಗಿ ನಿರ್ವಹಿಸುವ ಮೂಲಕ ಉತ್ತಮ ಹೆಸರನ್ನು ಗಳಿಸಿದವರು. ವಿನಾಕಾರಣ ಈ ರೀತಿಯ ದೋಷಾರೋಪಣೆಗಳ ಹಿಂದೆ ಕಲಾವಿದರ ಮನೋಸ್ಥೈರ್ಯ ಕುಸಿಯುವಂತೆ ಮಾಡುವ ಕಾರ್ಯದ ಹಿಂದೆ ಕಾಣದ ಕೈಗಳ ಪಾತ್ರವೂ ಇರಬಹುದಾಗಿದೆ ಎಂದರು.
ನೆಲ್ಯಾಡಿಯ ಸಾಮಾಜಿಕ ಮುಂದಾಳು ರವಿಪ್ರಸಾದ್ ಶೆಟ್ಟಿ, ಕಲಾವಿದರ ಬದುಕಿನಲ್ಲಿ ಚೆಲ್ಲಾಟವಾಡುವ ಶಕ್ತಿಗಳ ವಿರುದ್ಧ ಈಗಾಗಲೇ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮೂರಿನಲ್ಲೂ ಪ್ರಕರಣ ದಾಖಲಿಸಬೇಕಾಗಿದೆ. ಕೃತ್ಯ ಇದೇ ರೀತಿ ಮುಂದುವರಿದರೆ ಬಿದಿಗಿಳಿದು ಪ್ರತಿಭಟಿಸಲು ಹಿಂಜರಿಯೆವು ಎಂದು ಘೋಷಿಸಿದರು.
ಸಭೆಯಲ್ಲಿ ನೆಲ್ಯಾಡಿ ಕೌಕ್ರಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸುಧೀರ್ ಕುಮಾರ್, ನೆಲ್ಯಾಡಿ ವರ್ತಕರ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ನೆಲ್ಯಾಡಿಯ ಯಕ್ಷ ಕಲಾವಿದ ಪ್ರಶಾಂತ್ ಶೆಟ್ಟಿ ಅಭಿಮಾನಿಗಳ ಸಂಘದ ಅಧ್ಯಕ್ಷರೂ ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಲಕ್ಷ್ಮೀ ನಾರಾಯಣ ಭಾಗವತ್, ಅಗ್ರಾಳ ನಾರಾಯಣ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಉಪನ್ಯಾಸಕ ವಿಶ್ವನಾಥ ಶೆಟ್ಟಿ, ಉದ್ಯಮಿ ಸುಬ್ರಹ್ಮಣ್ಯ ಆಚಾರ್ಯ, ನಮ್ಮ ಕಲಾವಿದರು ನೆಲ್ಯಾಡಿ ತಂಡದ ಸಂಚಾಲಕ ದಯಾನಂದ ವಾಣಿಶ್ರೀ, ಶಿವಾಜಿ ಗ್ರೂಪ್ ಆಪ್ ಯಂಗ್ ಬಾಯ್ಸ್ ನ ಮಹೇಶ್, ದಯಾನಂದ, ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಬಾಣಜಾಲು, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಮುಖ್ಯ ಶಿಕ್ಷಕ ಆನಂದ ಅಜಿಲ, ಯತೀಶ್ ಕುಮಾರ್, ಶಾಸ್ತಾರೇಶ್ವರ ದೇವಸ್ಥಾನದ ಪದಾಧಿಕಾರಿ ಸುರೇಶ್ ಪಡಿಪ್ಪಂಡ, ಹಾರ್ಪಳ ಶಾಸ್ತಾರೇಶ್ವರ ಆಡಳಿತ ಮಂಡಳಿ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು, ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಳದ ಸಲಹೆಗಾರ ಟಿ.ಕೆ. ಶಿವದಾಸನ್, ಕೋಶಾಧಿಕಾರಿ ಉದಯ ಕುಮಾರ್ ಗೌಡ ದೋಂತಿಲ, ದಿನೇಶ್ ಟೈಲರ್, ಸುಂದರ ಟೈಲರ್, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ದೇಜಪ್ಪ ಗೌಡ, ಅನಿಲ್ ರೈ ಹಾರ್ಪಳ, ಶ್ರವಣ್ ಕುಮಾರ್, ಶಬರೀಶ ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳ ಪೋಷಕರು, ನೆಲ್ಯಾಡಿಯ ಯಕ್ಷಗಾನ ಕಲಾವಿದರು ಮತ್ತು ಪ್ರಶಾಂತ್ ಶೆಟ್ಟಿ ಅಭಿಮಾನಿ ಬಳಗದ ಸರ್ವಸದಸ್ಯರು ಸಭೆಯಲ್ಲಿ ಯಕ್ಷ ಕಲಾವಿದರಿಗೆ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದರು.

LEAVE A REPLY