ಕೋಲು ನೀಡಿ ತಾನೇ ಹೊಡೆಸಿಕೊಳ್ಳುವುದೆಂದರೆ ಇದೇ!

ಕೋಲು ನೀಡಿ ತಾನೇ ಹೊಡೆಸಿಕೊಳ್ಳುವುದೆಂದರೆ ಇದೇ ಇರಬೇಕು, ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನವು ನಡೆದುಕೊಂಡಿರುವ ರೀತಿ!
ಭಾರತದ ಮೇಲೆ ಆರೋಪ ಹೊರಿಸಲು ಹೋಗಿ ತಾನೇ ಎಡವಟ್ಟು ಮಾಡಿಕೊಂಡು ಈಗ ವಿಶ್ವದ ಮುಂದೆ ನಗೆಪಾಟಲಿಗೀಡಾಗಿದೆ. ಕಾಶ್ಮೀರದಲ್ಲಿ ಭಾರತವು ದೌರ್ಜನ್ಯ ಎಸಗುತ್ತಿದೆ ಎಂದು ಆರೋಪಿಸುವ ಭರದಲ್ಲಿ ಪ್ಯಾಲೆಸ್ತೀನ್ ಯುವತಿಯೊಬ್ಬಳ ಚಿತ್ರವನ್ನು ತೋರಿಸಿ, ಅದು ಭಾರತೀಯ ಸೈನಿಕರಿಂದ ಪೆಲೆಟ್ ಗನ್ ದಾಳಿಗೊಳಗಾದ ಕಾಶ್ಮೀರಿ ಯುವತಿ ಎಂದು ಬಣ್ಣಿಸಿ ಅಪಹಾಸ್ಯಕ್ಕೀಡಾಗಿದೆ. ವಾಸ್ತವದಲ್ಲಿ ಅದು ಇಸ್ರೇಲ್‌ನಿಂದ ವೈಮಾನಿಕ ದಾಳಿಗೊಳಗಾದ ಪ್ಯಾಲೆಸ್ತೀನ್ ಯುವತಿಯದ್ದು. ಆದರೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನದ ರಾಯಭಾರಿಯಾಗಿರುವ ಮಲೀಹಾ ಲೋಧಿ ಅದನ್ನು ಕಾಶ್ಮೀರಿ ಯುವತಿಯ ಫೋಟೋ ಎಂದು ಬಿಂಬಿಸಲೆತ್ನಿಸಿದರು. ಸಾಮಾನ್ಯವಾದ ಯಾವುದಾದರೂ ಫೋಟೋವನ್ನು ಪ್ರದರ್ಶಿಸಿದ್ದರೆ ಪಾಕಿಸ್ಥಾನವು ಬಚಾವಾಗುತ್ತಿತ್ತೇನೋ. ಆದರೆ ಮಲೀಹಾ ಪ್ರದರ್ಶಿಸಿದ್ದು ಪ್ರಶಸ್ತಿ ವಿಜೇತ  ಹಾಗೂ ಅದಾಗಲೆ ವಿಶ್ವದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡ ಚಿತ್ರವನ್ನು. ಹಾಗಾಗಿ ಇಡೀ ಜಗತ್ತೇ ಪಾಕಿಸ್ಥಾನದ ‘ನಕಲಿತನ’ಕ್ಕೆ ಸಾಕ್ಷಿಯಾಯಿತು.
ಪಾಕಿಸ್ಥಾನಕ್ಕೆ ಅದಕ್ಕಿಂತಲೂ ದೊಡ್ಡ ಮುಜುಗರ ಒದಗಿದ್ದು ನಮ್ಮ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಿಂದ. ಭಾರತವಾದರೋ ವೈದ್ಯರು, ತಂತ್ರಜ್ಞರು ಮತ್ತು ಇಂಜಿನಿಯರ್‌ಗಳನ್ನು ಉತ್ಪಾದಿಸುತ್ತಿದೆ. ಆದರೆ ಪಾಕಿಸ್ಥಾನವು ಭಯೋತ್ಪಾದಕರನ್ನು ಉತ್ಪಾದಿಸುತ್ತಿದೆ ಎಂದು ಸುಷ್ಮಾ ಸ್ವರಾಜ್‌ರವರು ವ್ಯಂಗ್ಯವಾಡಿದ್ದರು. ಸುಷ್ಮಾ ಸ್ವರಾಜ್ ಮಾಡಿದ ಭಾಷಣವು ಪಾಕಿಸ್ಥಾನವನ್ನು ಅದೆಷ್ಟು ಬಲವಾಗಿ ಕುಟುಕಿದೆಯೆಂದರೆ ಸಾಮಾನ್ಯವಾಗಿ ವಿಶ್ವಸಂಸ್ಥೆಯಲ್ಲಿ ಪ್ರತ್ಯುತ್ತರ ನೀಡಲು ಕೆಳಹಂತದ ರಾಯಭಾರಿಗಳನ್ನು ಬಳಸಿಕೊಳ್ಳುವುದು ರೂಢಿಯಾದರೂ, ಪಾಕಿಸ್ಥಾನವು ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಮಲೀಹಾ  ಲೋಧಿಯವರನ್ನೆ ಕಣಕ್ಕಿಳಿಸಿತು. ಆದರೆ ಲೋಧಿಯವರು ಎಸಗಿದ ದೊಡ್ಡ ಪ್ರಮಾದವು ಪಾಕಿಸ್ಥಾನಕ್ಕೆ ಇನ್ನಷ್ಟು ದೊಡ್ಡ ಮುಖಭಂಗ ಉಂಟುಮಾಡಿದೆ. ಲೋಧಿಯವರಾದರೂ  ಅದೆಷ್ಟು ಹತಾಶವಾಗಿ ಪ್ರತಿಕ್ರಿಯಿಸಿದರೆಂದರೆ ತಾರ್ಕಿಕವಾಗಿ ತಮ್ಮ ದೇಶವನ್ನು ಸಮರ್ಥಿಸಿಕೊಳ್ಳಲಾಗದೆ, ಮೋದಿಯವರನ್ನು, ಆರೆಸ್ಸೆಸ್ಸನ್ನು ಟೀಕಿಸುತ್ತಾ ಸಣ್ಣತನ ಪ್ರದರ್ಶಿಸಿದರು. ಅವರು ಮಾತನಾಡಿದ್ದು ಭಾರತದ ವಿರೋಧ ಪಕ್ಷ ಮುಖಂಡನೊಬ್ಬ ಮಾತನಾಡಿದಂತಿತ್ತು. ಅದಕ್ಕೂ ಅವರು ಉದ್ರಿಯಾಗಿ ಬಳಸಿಕೊಂಡುದು ಇಲ್ಲಿನ ಕೆಲವು ವಿಚಾರವಾದಿಗಳ, ವಿಪಕ್ಷ ಮುಖಂಡರ ಮಾತುಗಳನ್ನು. ಇದರ ಮಧ್ಯೆಯೇ ಪಾಕಿಸ್ಥಾನವು ‘ಭಾರತವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಲು’ ಸಿದ್ಧತೆ ನಡೆಸುತ್ತಿದೆಯಂತೆ! ಈ ಮಾತು ಕೇಳಿ ಇಡೀ ಜಗತ್ತೇ ಬಿದ್ದು ಬಿದ್ದು ನಕ್ಕರೆ ಅದರಲ್ಲಿ ಅಚ್ಚರಿಯೇನಿಲ್ಲ.   ಭಯೋತ್ಪಾದಕರನ್ನಷ್ಟೇ ಉತ್ಪಾದಿಸುತ್ತಿರುವ, ಮೂಲಭೂತವಾದಿ ರಾಷ್ಟ್ರವೊಂದರಿಂದ ಇನ್ನಾವ ಬುದ್ಧಿವಂತ ಮಾತುಗಳನ್ನು ಕೇಳಲು ಸಾಧ್ಯ?!

LEAVE A REPLY