ವಿಶಿಷ್ಟ ಚೇತನರಿಗೆ ಕ್ರೀಡಾ ಕಿಟ್ ಒದಗಿಸಲು ಕ್ರಮ: ಸಚಿವ ಪ್ರಮೋದ್ ಮಧ್ವರಾಜ್

ಬೆಂಗಳೂರು: ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವ ಖಾಸಗಿ ಸಂಘ ಸಂಸ್ಥೆಗಳನ್ನು ಗುರುತಿಸಿ ಪ್ರತಿ ವರ್ಷ 10 ಸಂಸ್ಥೆಗಳಿಗೆ 5 ಲಕ್ಷ ರೂಪಾಯಿಗಳ ಕ್ರೀಡಾ ಪೋಷಕ ಪ್ರಶಸ್ತಿಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾರಾಜ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷದಲ್ಲಿ ಕ್ರೀಡಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. 2017-18ನೇ ಸಾಲಿನಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಸಂಘ ಸಂಸ್ಥೆಗಳನ್ನು ಗುರುತಿಸಿ ಅದರಲ್ಲಿ 10 ಸಂಸ್ಥೆಗಳಿಗೆ ಕ್ರೀಡಾ ಪೋಷಕ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.
ವಿಶಿಷ್ಟಚೇತನ ಕ್ರೀಡಾಪಟುಗಳಿಗೆ ಅನುಕೂಲವಾಲೆಂದು ಕ್ರೀಡಾಂಗಣಗಳನ್ನು ವಿಶಿಷ್ಟಚೇತನ ಸ್ನೇಹಿಯಾಗಿಸಲು 2 ಕೋಟಿ ರೂ., ವಿಶಿಷ್ಟಚೇತನ ಕ್ರೀಡಾಪಟುಗಳಿಗೆ ಕ್ರೀಡಾ ಕಿಟ್ ಒದಗಿಸಲು 2 ಕೋಟಿ ರೂ. ಮೀಸಲಿಡಲಾಗಿದೆ. ಕ್ರೀಡಾಪಟುಗಳಿಗೆ ಗುಣಮಟ್ಟದ ಸೌಲಭ್ಯ ಒದಗಿಸಲು ಬೆಳಗಾವಿ, ಉಡುಪಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ 4 ಜಿಮ್‌ಗಳನ್ನು 2 ಕೋಟಿ, ಜಿಮ್ನಾಸ್ಟಿಕ್ ಸೌಲಭ್ಯ ನೀಡಲು ಬೆಳಗಾವಿ ಮತ್ತು ಮೈಸೂರಿನಲ್ಲಿ 2 ಕೋಟಿ, ಮಹಿಳಾ ಕ್ರೀಡಾಪಟುಗಳಿಗೆ ಬೆಳಗಾವಿ, ದಾವಣಗೆರೆ, ವಿಜಯಪುರ ಮತ್ತು ಉಡುಪಿಯಲ್ಲಿ ತಲಾ 1 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತ್ಯೇಕ ವಸತಿ ನಿಲಯಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ರಾಜ್ಯದ 1 ಸಾವಿರ ಪ್ರತಿಭಾವಂತ ಯುವ ಕ್ರೀಡಾಪಟುಗಳನ್ನು ಗುರುತಿಸಿ, ಕ್ರೀಡಾಪಟುಗಳ ಸಂಪೂರ್ಣ ಮಾಹಿತಿಗಳನ್ನೊಳಗೊಂಡ ದತ್ತಾಂಶ ಕೋಶ ಸ್ಥಾಪಿಸಲು, ಕಾಲ-ಕಾಲಕ್ಕೆ ಪರಾಮರ್ಶಿಸುವ ಮೂಲಕ ಅಗತ್ಯ ಬೆಂಬಲ ಮತ್ತು ಉತ್ತೇಜನ ನೀಡಿ ಒಲಿಂಪಿಕ್ಸ್ ಹಾಗೂ ಏಷ್ಯನ್ ಚಾಂಪಿಯನ್‌ಗಳನ್ನಾಗಿ ರೂಪಿಸಲು ಕರ್ನಾಟಕ ಸಹಸ್ರ ಕ್ರೀಡಾ ಪ್ರತಿಭಾ ಯೋಜನೆ ಮತ್ತು ಕಂಠೀರವ ಕ್ರೀಡಾಂಗಣ ಮತ್ತು ಉಡುಪಿ ಕ್ರೀಡಾಂಗಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ನ್ಯೂಟ್ರೀಶನ್, ಮೆಡಿಸನ್ ಫಿಸಿಯೋಥರೇಪಿ ಮತ್ತಿತರ ಸೌಲಭ್ಯ ಒದಗಿಸಲಾಗಿದೆ. ಕ್ರೀಡಾ ಪಟುಗಳ ಸಂಪೂರ್ಣ ಮಾಹಿತಿ, ಕ್ರೀಡಾ ಇಲಾಖೆಯ ಆಡಳಿತ ವರ್ಗದ ವ್ಯವಹಾರಗಳ ಬಗ್ಗೆ ಸಂಪೂರ್ಣ ಡಿಜಿಟಲೀಕರಣ ಮಾಡಲು 1 ಕೋಟಿ ರೂ.ವೆಚ್ಚದಲ್ಲಿ ಐಟಿ ಸೆಲ್ ಸ್ಥಾಪನೆಗೆ ಮುಂದಾಗಿದ್ದು, ಇದು ದೇಶದಲ್ಲೇ ಮೊದಲು ಎಂದರು.
ಕಳೆದ ನಾಲ್ಕುವರ್ಷಗಳಲ್ಲಿ ಒಟ್ಟು 711 ಕ್ರೀಡಾ ಪಟುಗಳಿಗೆ ಒಟ್ಟು 12.71 ಕೋಟಿ ನಗದು ಪುರಸ್ಕಾರ ನೀಡಲಾಗಿದ್ದು, ಶಿಘ್ರದಲ್ಲೇ ಇನ್ನೂ 9.35 ಕೋಟಿ ರೂ. ಮೊತ್ತದ ನಗದು ಪುರಸ್ಕಾರ ನೀಡಲಾಗುವುದು. ರಾಷ್ಟ್ರೀಯ ಕ್ರೀಡಾಕುಟದಲ್ಲಿ ವಿಜೇತರಾದವರಿಗೆ ನಗದು ಪರಿಸ್ಕರಿಸಲಾಗಿದ್ದು, ಚಿನ್ನದ ಪದಕ ಪಡೆದವರಿಗೆ 1 ರಿಂದ 5 ಲಕ್ಷ, ಬೆಳ್ಳಿ ಪದಕ ವಿಜೇತರಿಗೆ 50 ಸಾವಿರದಿಂದ 3 ಲಕ್ಷ, ಕಂಚಿನ ಪದಕ ಪಡೆದವರಿಗೆ 25 ಸಾವಿರದಿಂದ 2 ಲಕ್ಷದವರೆಗೆ ನಗದು ಹೆಚ್ಚಿಸಲಾಗಿದೆ ಮತ್ತು ಒಲಂಪಿಕ್‌ನಲ್ಲಿ ಚಿನ್ನ, ಬೆಳ್ಳಿ, ಕಂಚು ಗೆಲ್ಲುವ ರಾಜ್ಯದ ಕ್ರೀಡಾ ಪಟುಗಳಿಗೆ ಈ ಹಿಂದೆ ಕ್ರಮವಾಗಿ ಘೋಷಿಸಿದ 1 ಕೋಟಿ, 50 ಲಕ್ಷ, 25 ಲಕ್ಷಗಳ ನಗದು ಬಹುಮಾನ ಮೊತ್ತವನ್ನು ಕ್ರಮವಾಗಿ 5 ಕೋಟಿ, 3 ಕೋಟಿ, 2 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದರು.

LEAVE A REPLY