ಚಿದಂಬರಂ ಪುತ್ರ ವಿರುದ್ಧ ಇಡಿ ಕ್ರಮ : 1.16 ಕೋಟಿ ರೂ. ಮೌಲ್ಯದ ಕಾರ್ತಿ ಆಸ್ತಿ ಜಪ್ತಿ

ಹೊಸದಿಲ್ಲಿ: ಏರ್ಸೆಲ್- ಮ್ಯಾಕ್ಸಿಸ್ ನಡುವಿನ ಒಪ್ಪಂದದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಸೇರಿದ್ದ 1.16 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಸೋಮವಾರ ಮುಟ್ಟುಗೋಲು ಹಾಕಿಕೊಂಡಿದೆ.
ಕಾರ್ತಿ ಚಿದಂಬರಂ ಬ್ಯಾಂಕಿನಲ್ಲಿ ಎಫ್‌ಡಿ ರೂಪದಲ್ಲಿ 96 ಲಕ್ಷ ರೂ. ಶೇಖರಿಸಿದ್ದರು. ಅಷ್ಟೇ ಅಲ್ಲದೇ ಕಂಪನಿಯ ಅಕೌಂಟ್‌ನಲ್ಲಿಯೂ ಕೂಡ ಇರಿಸಿದ್ದರು. ಜಾರಿ ನಿರ್ದೇಶನಾಲಯವು ಈ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಹಣ ಹೊಂದಿರುವ ಆರೋಪ ಎದುರಿಸುತ್ತಿದ್ದ ಕಾರ್ತಿಗೆ ಮತ್ತೊಮ್ಮೆ ಜಾರಿ ನಿರ್ದೇಶನಾಲಯದ ಅಕಾರಿಗಳು ಶಾಕ್ ನೀಡಿದ್ದಾರೆ.
ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆಡಳಿತದ ಅವಯಲ್ಲಿ ನಡೆದಿದ್ದ ಏರ್ಸೆಲ್-ಮ್ಯಾಕ್ಸಿಸ್ ಕಂಪನಿಯ ಒಪ್ಪಂದದ ಸಂದರ್ಭದಲ್ಲಿ ಕಾರ್ತಿ ಚಿದಂಬರಂಗೆ ಈ ಹಣವನ್ನು ಪರಿಹಾರದ ರೂಪದಲ್ಲಿ ನೀಡಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಈ ಹಿನ್ನೆಲೆಯಲ್ಲಿ ಕಾರ್ತಿ ಚಿದಂಬರಂ ಅವರು ಬೇರೊಬ್ಬ ವ್ಯಕ್ತಿಯನ್ನು ನಿಯಂತ್ರಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಅಕಾರಿಗಳು ತಿಳಿಸಿದ್ದಾರೆ. ಅಕೌಂಟ್ ತಪಾಸಣೆ ನಡೆಸಿದ ಸಂದರ್ಭದಲ್ಲಿ 90 ಲಕ್ಷ ರೂಪಾಯಿಗಳನ್ನು ಎಫ್‌ಡಿ ರೂಪದಲ್ಲಿ ಇರಿಸಲಾಗಿದೆ. ಅಲ್ಲದೇ ಉಳಿದ 26 ಲಕ್ಷ ರೂಪಾಯಿಗಳನ್ನು ಸೇವಿಂಗ್ಸ್ ರೂಪದಲ್ಲಿ ಇರಿಸಲಾಗಿದೆ. ಈ ಎಲ್ಲ ಮೊತ್ತವೂ ಕೂಡ ಎಎಸ್‌ಸಿಪಿಎಲ್ ಕಂಪನಿಯ ಜೊತೆ ಸಹಯೋಗ ಹೊಂದಿದೆ.
ಎಎಸ್‌ಸಿಪಿಎಲ್ ಕಂಪನಿಯ ಜೊತೆ ಕಾರ್ತಿ ಚಿದಂಬರಂ ಸಂಬಂಧ ಹೊಂದಿದ್ದಾನೆ ಎನ್ನುವ ಆರೋಪಗಳೂ ಸಹ ಈ ಸಂದರ್ಭದಲ್ಲಿ ಕೇಳಿ ಬಂದಿದೆ. ಅಲ್ಲದೇ ಎಸ್. ಬಾಲಕೃಷ್ಣನ್ ಎಂಬ ವ್ಯಕ್ತಿ ಕಾರ್ತಿ ಚಿದಂಬರಂ ಜೊತೆ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದು, ಕಾರ್ತಿಯ ಅಣತಿಯಂತೆ ನಡೆದುಕೊಳ್ಳುತ್ತಿದ್ದಾನೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಏರ್‌ಸೆಲ್-ಮ್ಯಾಕ್ಸಿಸ್ ಎಫ್‌ಡಿಐ ಒಪ್ಪಂದವು 3,500ಕೋಟಿ ರೂಪಾಯಿಗಳದ್ದಾಗಿತ್ತು. ಇದಕ್ಕೆ ಒಪ್ಪಿಗೆ ನೀಡುವ ಸಲುವಾಗಿ ಕಾರ್ತಿ ಚಿದಂಬರಂಗೆ ಕಮಿಷನ್ ನೀಡಲಾಗಿತ್ತು ಎನ್ನುವುದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಆರೋಪವಾಗಿದೆ.
ಈ ಯೋಜನೆಯಲ್ಲಿ ಎಫ್‌ಡಿಐ ಕಂಪನಿಯು ಪರೋಕ್ಷವಾಗಿ 375 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ 1650 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿತ್ತು. ಮಾಜಿ ಹಣಕಾಸು ಸಚಿವ ಚಿದಂಬರಂ ಅವರು ಮಲೇಷ್ಯಾದ ಟೆಲಿಕಾಂ ಕಂಪನಿಯಾದ ಸಿಸಿಇಎಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದೂ ಅಧಿಕಾರಿಗಳು ಆರೋಪಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಏರ್‌ಸೆಲ್ ಟೆಲಿವೆಂಚರ್ಸ್ ಲಿಮಿಟೆಡ್ ವತಿಯಿಂದ 26 ಲಕ್ಷ ರೂ. ಹಣ ಸಂದಾಯವಾಗಿದೆ. ಅಲ್ಲದೇ ಇಕ್ವಿಟಿ ಶೇರ್ ಮಾರಾಟದ ಕುರಿತೂ ಒಪ್ಪಂದವಾಗಿದೆ. ಕಾರ್ತಿ ಚಿದಂಬರಂ ಮೇಲೆ ಏರ್ಸೆಲ್-ಮ್ಯಾಕ್ಸಿಸ್ ಒಪ್ಪಂದದ ಹಗರಣಕ್ಕೆ ಸಂಬಂಸಿದಂತೆ ದಾಖಲಾದ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾರ್ತಿ ಚಿದಂಬರಂ ಅಕೌಂಟ್ ಮುಟ್ಟುಗೋಲು ಪ್ರಕರಣ ಹಾಗೂ ಕಾರ್ತಿ ಮೇಲಿನ ಅಧಿಕಾರಿಗಳ ಆರೋಪಕ್ಕೆ ಪ್ರತಿಯಾಗಿ ಮಾತನಾಡಿರುವ ಪಿ. ಚಿದಂಬರಂ, ಇದೊಂದು ಸುಳ್ಳು ಹಾಗೂ ಕಲ್ಪನೆಗಳ ಮಿಶ್ರಣವಾಗಿದೆ. ಕಾರ್ತಿ ಚಿದಂಬರಂ ಕೌಂಟ್ ಮುಟ್ಟುಗೋಲು ಮಾಡಿಕೊಳ್ಳುವ ಮೂಲಕ ನನ್ನನ್ನು ಹೆದರಿಸುವ ಯತ್ನ ಮಾಡಲಾಗುತ್ತಿದೆ. ಆದರೆ ಇದಕ್ಕೆಲ್ಲ ನಾನು ಹೆದರುವವನಲ್ಲ ಎಂದು ತಿಳಿಸಿದ್ದಾರೆ.
ಕಾರ್ತಿ ಚಿದಂಬರಂ ಮೇಲೆ ಒಂದು ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳುತ್ತಾರೆ. ಆದರೆ ಕಾರ್ತಿ ವಿರುದ್ಧ ಸಲ್ಲಿಕೆಯಾಗಿದ್ದ ಎಫ್‌ಐಆರ್ ಪ್ರಕ್ರಿಯೆ ಮುಂದುವರಿಯುತ್ತಿಲ್ಲ. ಅಲ್ಲದೇ ದೂರಿನಲ್ಲಿ ಕಾರ್ತಿಯ ಹೆಸರೂ ಇಲ್ಲ ಎಂದು ಪಿ. ಚಿದಂಬರಂ ತಿಳಿಸಿದ್ದಾರೆ.

LEAVE A REPLY