ಉಡುಪಿ ಜಿಲ್ಲೆಯಲ್ಲಿ ಹೆಚ್ಚಿದ ಭಿಕ್ಷುಕರ ಹಾವಳಿ : ಪುನರ್ವಸತಿ ಕೇಂದ್ರಕ್ಕೆ 15 ಮಂದಿ

ಉಡುಪಿ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಪರಿಸರದಲ್ಲಿ ಕಳೆದ ಹಲವು ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದ ಹೊರ ರಾಜ್ಯಗಳ 15 ಮಂದಿ ಭಿಕ್ಷುಕರನ್ನು ಕೊಲ್ಲೂರು  ಪೊಲೀಸರು ಶುಕ್ರವಾರ ವಶಕ್ಕೆ ಪಡೆದು, ಅವರ ಊರು ಹಾಗೂ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಕೊಲ್ಲೂರು ದೇವಸ್ಥಾನದಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷಾಠಾಧಿಕಾರಿ ಡಾ. ಸಂಜೀವ ಎಂ. ಪಾಟೀಲ್ ನಿರ್ದೇಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಕೊಲ್ಲೂರು ಪೊಲೀಸ್ ಠಾಣಾ ಉಪನಿರೀಕ್ಷಕ ಶೇಖರ್ ನೇತೃತ್ವದ ತಂಡ ಶುಕ್ರವಾರ ಬೆಳಗಿನ ಜಾವ ೬ ಗಂಟೆ ಸುಮಾರಿಗೆ ದಾಳಿ ನಡೆಸಿ ತಮಿಳ್ನಾಡು ಹಾಗೂ ಕೇರಳ ಮೂಲದ ೧೫ ಮಂದಿ ಭಿಕ್ಷುಕರನ್ನು  ವಶಕ್ಕೆ ಪಡೆದರು. ಬಳಿಕ ಅವರನ್ನು     ಕೊಲ್ಲೂರು ಠಾಣೆಗೆ ಕರೆತಂದು ಅವರಲ್ಲಿ ೧೦ ಮಂದಿಯನ್ನು ಅವರವರ ಊರಿಗೆ ಕಳುಹಿಸಿದ್ದಾರೆ. ಉಳಿದ ಐವರನ್ನು ಮಂಗಳೂರಿನ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ ಎಂದು ಎಸ್ಪಿ ಡಾ. ಸಂಜೀವ ಎಂ. ಪಾಟೀಲ್ ತಿಳಿಸಿದ್ದಾರೆ.
ಉಡುಪಿ ನಗರದ ಸುತ್ತಮುತ್ತ ಭಿಕ್ಷುಕರ ಹಾವಳಿ ಹೆಚ್ಚಿದೆ. ಎಳೆಯ ಮಕ್ಕಳು, ಮಹಿಳೆಯರು, ಪುರುಷರು ಹಿರಿಯ ನಾಗರಿಕರು ಭಿಕ್ಷೆ ಬೇಡುವ ದೃಶ್ಯಗಳು ನಗರದ ಎಲ್ಲೆಡೆ ಸಾಮಾನ್ಯವಾಗಿದೆ.  ಜನನಿಬಿಡ ಪ್ರದೇಶಗಳಾದ ಬಸ್ಸುನಿಲ್ದಾಣ, ರಾಜಾಂಗಣ ವಾಹನ ನಿಲುಗಡೆ ಪ್ರದೇಶ, ರಥಬೀದಿ, ದೇವಸ್ಥಾನ ಮಸೀದಿ ಚರ್ಚುಗಳ ವಠಾರಗಳಲ್ಲಿ ಭಿಕ್ಷುಕರು ಭಿಕ್ಷೆಗಾಗಿ ಪೀಡಿಸುತ್ತಿರುತ್ತಾರೆ. ಅಲ್ಲದೆ ಹಬ್ಬ ಜಾತ್ರೆಯ ಸಂದರ್ಭಗಳಲ್ಲಿ ಸಣ್ಣ ಮಕ್ಕಳಿಗೆ ವೇಷ ಹಾಕಿಸಿ ಭಿಕ್ಷಾಟನೆಗೆ ಪ್ರಚೋದಿಸುವ ಕೃತ್ಯಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರು ತೊಂದರೆಯಾಗುತ್ತಿದೆ. ಆದ್ದರಿಂದ ಸಂಬಂಧಿತ ಇಲಾಖೆಗಳು ಭಿಕ್ಷುಕರನ್ನು ವಶಕ್ಕೆ ಪಡೆದು ಪುರ್ನವಸತಿ ಕೇಂದ್ರಕ್ಕೆ ಸೇರಿಸುವ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಹಾಗೂ ಪದಾಧಿಕಾರಿ ತಾರಾನಾಥ್ ಮೇಸ್ತ ಆಗ್ರಹಿಸಿದ್ದಾರೆ.

LEAVE A REPLY