13 ವರ್ಷಗಳಿಂದ ಸ್ಥಗಿತಗೊಂಡಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಮತ್ತೆ ಪುನಶ್ಚೇತನ ಭಾಗ್ಯ

ಮಣಿಪಾಲ: ಕಳೆದ 13 ವರ್ಷಗಳಿಂದ ಸ್ಥಗಿತಗೊಂಡಿರುವ ಕರಾವಳಿ ಭಾಗದ ಏಕೈಕ ಸಕ್ಕರೆ ಕಾರ್ಖಾನೆಯಾಗಿರುವ ಬ್ರಹ್ಮಾವರ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಶನಿವಾರ ರಜತಾದ್ರಿಯ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಇರುವ ಕಾರ್ಖಾನೆಯ ಕಟ್ಟಡ ಯಂತ್ರೋಪಕರಣಗಳನ್ನು ಉಳಿಸಿಕೊಂಡು ಪುನರಾರಂಭಿಸುವ ಸಾಧ್ಯತೆ ಹಾಗೂ ಹಳೆಯ ಕಟ್ಟಡದ ಬದಲು ಹೊಸ ಕಟ್ಟಡ ನಿರ್ಮಾಣ, ಆಧುನಿಕ ಯಂತ್ರೋಪಕರಣಗಳ ಅಳವಡಿಕೆ ಮಾಡುವ ಕುರಿತು ತಜ್ಞರ ವರದಿ ಹಾಗೂ ಅವುಗಳಿಗೆ ತಗಲುವ ಹಣಕಾಸಿನ ವೆಚ್ಚದ ಬಗ್ಗೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಹಾಗೂ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಪ್ರತಿನಿಽಗಳೊಂದಿಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳುವುದಾಗಿ ಸಚಿವ ಪ್ರಮೋದ್ ತಿಳಿಸಿದರು.
ಈ ಹಿಂದೆ ಸಕ್ಕರೆ ಕಾರ್ಖಾನೆಯ ಜಾಗದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ಬಳಸಲು ಮಾತ್ರ ಚಿಂತಿಸಲಾಗಿತ್ತು. ರೈತರ ಅಭಿವೃದ್ಧಿಗಾಗಿ ನೀಡಿರುವ ಈ ಜಾಗವನ್ನು ಕೈಗಾರಿಕಾ ಇಲಾಖೆಗೆ ನೀಡುವ ಯಾವುದೇ ಉದ್ದೇಶ ಇಲ್ಲ ಎಂದು ಸಚಿವ ಪ್ರಮೋದ ಮಧ್ವರಾಜ್ ಸ್ಪಷ್ಟಪಡಿಸಿದರು.
ಇಲಾಖೆ ನಿರ್ದೇಶಕರಿಗೆ ಪ್ರಸ್ತಾವನೆ
ಕಾರ್ಖಾನೆ ಪುರ್ನಶ್ಚೇತನ ಬಗ್ಗೆ ಶುಗರ್ ಫೆಡರೇಷನ್ ಹಾಗೂ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡುವ ತಜ್ಞರ ನೇತೃತ್ವದಲ್ಲಿ ವಿಸ್ತೃತ ವರದಿ ತಯಾರಿಸಿ, ಅದನ್ನು ಜಿಲ್ಲಾಧಿಕಾರಿಗಳ ಮೂಲಕ ಸಕ್ಕರೆ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸುವಂತೆ ಕಾರ್ಖಾನೆಯ ಆಡಳಿತ ಮಂಡಳಿಗೆ ಸಚಿವರು ಸೂಚಿಸಿದರು. ಇದೇ ವೇಳೆ ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯವನ್ನು ಪ್ರತಿ ದಿನಕ್ಕೆ 1500 ಮೆಟ್ರಿಕ್ ಟನ್‌ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಿ ಹಾಗೂ ಕಾರ್ಖಾನೆಯಲ್ಲಿರುವ ಹಳೆಯ ಉಪಯೋಗಕ್ಕೆ ಬಾರದ ಉಪಕರಣಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಿ ಎಂದು ನಿರ್ದೇಶನ ನೀಡಿದರು.
ಕಬ್ಬು ಬೆಳೆಯಲು ರೈತರು ಸಿದ್ಧ
ಭಾರತೀಯ ಕಿಸಾನ್ ಸಂಘದ ಪದಾಕಾರಿಗಳು ಮಾತನಾಡಿ, ಭತ್ತದ ಬೆಳೆಗಿಂತ ಅರ್ಧದಷ್ಟು ನೀರಿನಲ್ಲಿ ಕಬ್ಬು ಬೆಳೆಯಬಹುದಾಗಿದೆ. ಸಕ್ಕರೆ ಕಾರ್ಖಾನೆ ನಡೆಯಲು ಅಗತ್ಯವಿರುವಷ್ಟು ಕಬ್ಬು ಜಿಲ್ಲೆಯ ರೈತರು ಬೆಳೆದೇ ಬೆಳೆಯುತ್ತಾರೆ. ಕಾರ್ಖಾನೆ ಇದ್ದಲ್ಲಿ ಕಬ್ಬು ಬೆಳೆಗಾರರು ನಷ್ಟ ಅನುಭವಿಸಲು ಸಾಧ್ಯವೇ ಇಲ್ಲ. ಸರಕಾರ ಕಬ್ಬಿಗೆ ಕನಿಷ್ಠ 3,000 ರೂ. ಬೆಂಬಲ ಬೆಲೆ ಘೋಷಣೆ ಮಾಡಿ, ಕಬ್ಬು ಲಾಭದಾಯಕ ಎಂಬ ಭಾವನೆಯನ್ನು ರೈತರಲ್ಲಿ ಮೂಡಿಸಬೇಕು, ಜಿಲ್ಲೆಯ ಹಡಿಲು ಬಿದ್ದಿರುವ ಗದ್ದೆಗಳಲ್ಲೂ ಕಬ್ಬು ಬೆಳೆಯಲು ರೈತರು ಸಿದ್ಧರಿದ್ದಾರೆ ಎಂದರು.
ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷ ಜಯಶೀಲ ಶೆಟ್ಟಿ ಮೊದಲಾದವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಜಿಲ್ಲಾಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿ.ಪಂ. ಸದಸ್ಯ ಎಂ. ಸುಧಾಕರ ಶೆಟ್ಟಿ, ಸಹಕಾರ ಇಲಾಖೆಯ ಉಪನಿಬಂಧಕ ಪ್ರವೀಣ್ ನಾಯಕ್, ವಾರಾಹಿ ಮುಖ್ಯ ಇಂಜಿನಿಯರ್ ಪದ್ಮನಾಭ, ವಿವಿಧ ರೈತ ಸಂಘಟನೆಗಳ ಪ್ರತಿನಿಗಳು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY