ಸ್ವಚ್ಛ ಭಾರತ ಪ್ರೇರಣೆಯಲ್ಲಿ ಮೇಲ್ಸೇತುವೆ ಕೆಳಗೆ ಅರಳಿನಿಂತಿದೆ ನಂದನವನ!

  • ಕೀರ್ತಿರಾಜ್ ಕರಂದಾಡಿ
ಮಂಗಳೂರು: ಕೆಲವರು ಪ್ರಚಾರಕ್ಕೋ, ಪ್ರತಿಷ್ಠೆಗಾಗಿಯೇ ಏನಾದ ರೊಂದು ಯೋಜನೆಯನ್ನು ಕಾರ್ಯಗತಗೊಳಿಸುತ್ತಾರೆ. ಆದರೆ ಅದು ಅನುಷ್ಠಾನಗೊಂಡ ಬಳಿಕ ಮುಂದೆ ಅದರ ನಿರ್ವಹಣೆಯಲ್ಲಿ ತೊಡಗಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬರು ಕಾರ್ಯಗತಗೊಳಿಸಿದ ಯೋಜನೆಯನ್ನು ಕಳೆದ ಒಂದು ವರ್ಷದಿಂದ ನಿರ್ವಹಣೆ ಮಾಡಿ ಈಗ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಯಾರಿವರು ಸ್ವಚ್ಛತಾ ಪ್ರೇಮಿ?
ಇವರು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ವಿ.ಜಿ. ಗುರುಚಂದ್ರ ಹೆಗ್ಡೆ. ಅಕ ಜನ ಸಂಚಾರವಿರುವ ಪ್ರದೇಶವಾದ ಮಂಗಳೂರು- ಉಡುಪಿ ಮುಖ್ಯ ರಸ್ತೆಯಲ್ಲಿ ಸಿಗುವ   ಕೂಳೂರಿ ನಲ್ಲಿ ಸಮೃದ್ಧವಾದ ಹೂದೋಟವೊಂದು ತಲೆಯೆತ್ತಿ ಇಂದಿಗೆ ಒಂದು ವರ್ಷ ಕಳೆದಿದೆ. ತನ್ನ ವೃತ್ತಿ ಕ್ಷೇತ್ರದ ಈ ಪ್ರದೇಶ ಸ್ವಚ್ಛ ಮತ್ತು ಸುಂದರವಾಗಿ ಕಾಣಬೇಕೆಂಬ ಉದ್ದೇಶದೊಂದಿಗೆ ಇವರು ಕೂಳೂರು ಮಧ್ಯಭಾಗ ಮೇಲ್ಸೇತುವೆಯ ಅಡಿಯಲ್ಲಿ ಹೂದೋಟವನ್ನು ನಿರ್ಮಿಸಿದ್ದರು. ಮಾತ್ರವಲ್ಲ ತನ್ನ ಬಿಡುವಿನ ಸಮಯ ವನ್ನೆಲ್ಲಾ ಗಿಡಗಳ ಪಾಲನೆ ಪೋಷಣೆಗಾಗಿ  ಮೀಸಲಿಟ್ಟಿದ್ದಾರೆ ಈ ಸುಂದರ ಕಲ್ಪನೆಯ ರೂವಾರಿ ವಿ.ಜಿ. ಗುರುಚಂದ್ರ ಹೆಗ್ಡೆ.
ಹೌದು ಫಾಸ್ಟ್ ಪುಡ್‌ಗಳ ತ್ಯಾಜ್ಯದಿಂದ, ದಾರಿಹೋಕರು ಎಲ್ಲೆಂದರಲ್ಲಿ ಗುಟ್ಕಾ ತಿಂದು ಉಗುಳುತ್ತಿದ್ದರಿಂದ ಈ ಪ್ರದೇಶ ದುರ್ವಾಸನೆ ಬೀರುತ್ತಿತ್ತು. ಅಲ್ಲಿ ನಿಲ್ಲುವುದೇ ಅಸಹ್ಯವೆನಿಸುತ್ತಿತ್ತು. ಇದರಿಂದ ನೊಂದ ಗುರುಚಂದ್ರ ಹೆಗ್ಡೆಯವರು ತಾನೇ ಸ್ವತಃ ಮುಂದೆ ನಿಂತು ಸುಂದರ ಹೂದೋಟದ ಕಲ್ಪನೆಯನ್ನು ಮಾಡಿ ಅದನ್ನು ಸಾಕಾರಗೊಳಿಸಿದರು.
ತಾವೇ ಸ್ವತಃ ಬೆಳಿಗ್ಗೆ 5 ಗಂಟೆಯಿಂದ 7ರ ವರೆಗೆ ನಿತ್ಯ ಗಿಡಗಳಿಗೆ ನೀರೆರೆದು ಗೊಬ್ಬರ ಸಿಂಪಡಿಸಿ, ಪಾಲನೆ ಪೋಷಣೆ ಮಾಡುವುದರ ಮೂಲಕ ಗುರುಚಂದ್ರ ಹೆಗ್ಡೆಯವರು ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.
ಕೆಲವೊಮ್ಮೆ ಕುಡುಕರು ನಶೆಯಲ್ಲಿ ಗಿಡಗಳನ್ನು ತುಳಿದು ಹಾಕುತ್ತಾರೆ. ಕೆಲವರು ಉಗಿದು ಹಾನಿ ಮಾಡುತ್ತಾರೆ ಎಂಬ ನೋವನ್ನು ಕೂಡ ಅವರು ವ್ಯಕ್ತಪಡಿಸುತ್ತಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಪ್ರಚಾರದ ಅಪೇಕ್ಷೆಯೂ ಇಲ್ಲದೆ, ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಗುರುಚಂದ್ರ ಹೆಗ್ಡೆಯವರು ಇತರರಿಗೆ ಮಾದರಿಯಾಗಿದ್ದಾರೆ.
ಈ ಹೂದೋಟದಲ್ಲಿದೆ ನೋಡಿ ಬರೋಬ್ಬರಿ 250 ಬಗೆ ಗಿಡಗಳು!
ಗುಲಾಬಿ, ದಾಸವಾಳ, ತುಳಸಿ ಮಾತ್ರವಲ್ಲದೆ ವಿವಿಧ ತಳಿಯ 250 ಗಿಡಗಳು ಇಲ್ಲಿವೆ. ನೆಲಕ್ಕೆ ಇಂಟರ್‌ಲಾಕ್ ಅಳಡವಿಸಲಾಗಿದೆ. ಮೇಲ್ಸೇತುವೆಯ ಗೋಡೆಗಳಿಗೆ ತುಳನಾಡ ಸಂಸ್ಕೃತಿ ಬಿಂಬಿಸುವ ಭಿತ್ತಿ ಚಿತ್ರಗಳನ್ನು ಬಿಡಿಸುವುದರ ಮೂಲಕ ಹೂದೋಟದ ಸೌಂದರ್ಯ ಎದ್ದು ಕಾಣುತ್ತಿದೆ. ಈವರೆಗೆ ಒಟ್ಟು 6 ಲಕ್ಷ ರೂಪಾಯಿಗಳಷ್ಟು ಖರ್ಚಾಗಿದೆ.  ಈಗಲೂ ತಿಂಗಳಿಗೆ 1 ಸಾವಿರ ಖರ್ಚು ಮಾಡಲಾಗುತ್ತಿದೆ.

LEAVE A REPLY