ಕೃಷಿಕರ, ಬಡವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಭಾರತ ಸೂಪರ್ ಪವರ್ ಆಗಬೇಕು: ಹಂದೆ

ಮಂಗಳೂರು: ದೇಶದ ಗ್ರಾಮೀಣ ಕೃಷಿಕರ, ಬಡವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಭಾರತ ಸೂಪರ್ ಪವರ್ ಆಗಬೇಕು..
ಇದು ಮ್ಯಾಗೆಸ್ಸೆ ಪ್ರಶಸ್ತಿ ಪುರಸ್ಕೃತ, ಸೆಲ್ಕೋ ಫೌಂಡೇಷನ್ ಸಂಸ್ಥಾಪಕ ಹರೀಶ್ ಹಂದೆ ಆಶಯ.
ಮಂಗಳೂರಿನ ಪ್ರೆಸ್ ಕ್ಲಬ್ ವತಿಯಿಂದ  ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು.
ಭಾರತ ಐಟಿ, ತಾಂತ್ರಿಕ ಕ್ಷೇತ್ರಗಳಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಆದರೆ ಗ್ರಾಮೀಣ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪರಿಣಾಮಕಾರಿ ಕ್ರಮ ಆಗಿಲ್ಲ. ಒರಿಸ್ಸಾ, ಜಾರ್ಖಂಡ್‌ನ ಕೆಲ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕ ಆಫ್ರಿಕಾ ದೇಶಗಳಿಗಿಂತ ಕಡಿಮೆ ಇದೆ.  ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಮಂದಿ ಐಟಿ ಪದವೀಧರರು
ಹೊರಬರುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳ, ಕೃಷಿ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಇದುವರೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಗ್ರಾಮೀಣ ಸಮಸ್ಯೆಗಳಿಗೆ ಉಪಯುಕ್ತವಾದ ಸಾಧನಗಳನ್ನು ಬಳಸಿಕೊಳ್ಳುವಲ್ಲಿ ಎಡವಿದ್ದೇವೆ. ಐಟಿ ಕ್ಷೇತ್ರದಲ್ಲಿ ಎಷ್ಟೇ ಮುಂದುವರಿದರೂ ಗ್ರಾಮೀಣ ಕ್ಷೇತ್ರ ಉನ್ನತಿ ಕಾಣದಿದ್ದರೆ ಪ್ರಯೋಜನವಿಲ್ಲ ಎಂದರು.
ರುಡ್‌ಸೆಟ್ ಮುಂತಾದ ಸಂಸ್ಥೆಗಳು ಗ್ರಾಮೀಣ ಬದುಕನ್ನು ಬೆಳಗುವಲ್ಲಿ ಉತ್ತೇಜನ ನೀಡುತ್ತಿವೆ. ಕೃಷಿಕರಿಗೆ ಬೇಕಾದ ವಿವಿಧ ಬಗೆಯ ಸಲಕರಣೆಗಳ ತಯಾರಿ, ದುರಸ್ತಿ ಬಗ್ಗೆ ತರಬೇತಿ ನೀಡುತ್ತಿದೆ. ನಿಜವಾಗಿ ಗ್ರಾಮೀಣ ಬದುಕನ್ನು ಅಭಿವೃದ್ಧಿಪಡಿಸಲು ಇಂತಹ ಮಾದರಿ ಕೆಲಸಗಳು ಆಗಬೇಕು ಎಂದು ಅವರು ಹೇಳಿದರು.
ದೇಶದಲ್ಲಿ ಸುಮಾರು ೬೦ ಕೋಟಿ ಮಂದಿ ಬಡತನದಲ್ಲಿ ಇದ್ದಾರೆ. ಇದರಿಂದ ಹೊರಬರಲು ಏನು ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಯಬೇಕು. ಮಾಧ್ಯಮ ಕ್ಷೇತ್ರದಲ್ಲೂ ಈಶಾನ್ಯ ಭಾರತ ಹಾಗೂ ದಕ್ಷಿಣ ಭಾರತದ ಮಧ್ಯೆ ಸಮಸ್ಯೆಗಳ ನಿವಾರಣೆಗೆ ಪರಿಹಾರಗಳನ್ನು ಸೂಚಿಸುವ ಬಗ್ಗೆ ಪರಸ್ಪರ ಮಾತುಕತೆ ನಡೆಯಬೇಕು ಎಂದರು.
ದೇಶದಲ್ಲಿ ಈಗಲೂ 30 ಕೋಟಿ ಜನರ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇನ್ನೂ ಸಾಧ್ಯವಾಗಿಲ್ಲ. ೩೦ ಕೋಟಿ ಮಂದಿಗೆ ನಿಯಮಿತವಾಗಿ ವಿದ್ಯುತ್ ಸಿಗುತ್ತಿಲ್ಲ. ನಮ್ಮ ಸೋಲಾರ್ ಕಂಪನಿ ಕಳೆದ ೧೮ ವರ್ಷಗಳಿಂದ ಸೋಲಾರ್ ದೀಪಕ್ಕೆ ಒತ್ತು ನೀಡಿದೆ. ಕಳೆದ ವರ್ಷದಿಂದ ಗೃಹ ಬಳಕೆ ಉಪಕರಣಗಳಿಗೆ ಸೋಲಾರ್ ಬಳಕೆಯ ಬಗ್ಗೆ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಸೋಲಾರ್ ಪ್ಯಾನೆಲ್‌ಗೆ ಕಡಿಮೆ ವೆಚ್ಚ, ಆದರೆ ಬ್ಯಾಟರಿಗೆ ಅಧಿಕ ಮೊತ್ತ ಬೇಕಾಗುತ್ತದೆ ಎಂದರು.
ಶಾಲೆಗಳಿಗೆ ಕೇವಲ ವಿದ್ಯುತ್, ಕಂಪ್ಯೂಟರ್ ಸಂಪರ್ಕ
ಕಲ್ಪಿಸಿದರೆ ಪ್ರಯೋಜನವಿಲ್ಲ, ಅದರ ಬದಲು ಮನೆಗಳನ್ನು ಬೆಳಗಿದರೆ ಇನ್ನಷ್ಟು ಮಕ್ಕಳು ಶಾಲೆಗೆ ಬರಲು ಸಾಧ್ಯವಾಗುತ್ತದೆ. ಇದಕ್ಕಾಗಿಯೇ ನಮ್ಮ ಕಂಪನಿ ಸೋಲಾರ್ ಪ್ಯಾನೆಲ್‌ನ್ನು ಶಾಲೆಗೆ ನೀಡುತ್ತದೆ. ಮನೆಗೆ ನೀಡುವ ಸೋಲಾರ್ ದೀಪ ಬೆಳಗಬೇಕಾದರೆ ಮಕ್ಕಳು ಶಾಲೆಯಲ್ಲಿ ರಿಚಾರ್ಜ್ ಮಾಡಬೇಕು. ಅದಕ್ಕಾಗಿಯಾದರೂ ಶಾಲೆಗೆ ಬರಲೇ ಬೇಕಾಗುತ್ತದೆ ಎಂದರು.
ಹಳ್ಳಿಯಲ್ಲಿ ಕೆಲಸ ಸಿಗದಿದ್ದರೆ ಆತನಿಗೆ ಉದಾಸೀನ ಎನ್ನುತ್ತಾರೆ. ಅದೇ ಎಂಜಿನಿಯರಿಂಗ್ ಕಲಿತು ಕೆಲಸ ಇಲ್ಲದಿದ್ದರೆ ಕಂಪನಿ ನಷ್ಟದಲ್ಲಿದೆ, ಜಾಬ್ ಮಾರ್ಕೆಟ್ ಕುಸಿತಗೊಂಡಿದೆ ಎಂಬ ಸಬೂಬು ಹೇಳುತ್ತಾರೆ. ಇದು ಸಾಮಾನ್ಯರಿಗೂ, ಉನ್ನತ ವ್ಯಾಸಂಗ ಮಾಡಿದವರಿಗೂ ಇರುವ
ವ್ಯತ್ಯಾಸ. ಈ ತಾರತಮ್ಯದ ಭಾವನೆ ಮೊದಲು ದೂರವಾಗಬೇಕು. ಸಾಮಾಜಿಕ ಜಲತಾಣಗಳನ್ನು, ಇಂಟರ್‌ನೆಟ್‌ನ್ನು ಹೇರಳವಾಗಿ ಬಳಸುತ್ತಿರುವ ಯುವಜನತೆ ಸಾಧ್ಯವಾದಷ್ಟು ಮಟ್ಟಿಗೆ ಗ್ರಾಮೀಣ ಬದುಕು ಹಸನಾಗುವ ಬಗ್ಗೆ ಹೊಸ ಸಂಶೋಧನೆಗಳನ್ನು ಕೈಗೊಳ್ಳಬೇಕು. ಸಮಸ್ಯೆಗಳಿಗೆ ಪರಿಹಾರವನ್ನು ರೂಪಿಸಬೇಕು. ಯುವಜನತೆ ಎರಡು ಗಂಟೆಗಳಿಗಿಂತ ಹೆಚ್ಚು ಅವ ಕಂಪ್ಯೂಟರ್ ಮುಂದೆ ಕೂರುವುದು ಸಮಯ ವ್ಯರ್ಥ  ಎಂದರು.
ಭಾರತದಲ್ಲಿ ನಮ್ಮ ಕಂಪನಿಯ ಸೋಲಾರ ಕ್ರಾಂತಿ ಗಮನಿಸಿ
ಫಿಲಿಫೈನ್ಸ್ ಮತ್ತು ತಾಂಜನಿಯಾ ದೇಶಗಳಿಂದ ಆಹ್ವಾನ ಬಂದಿದೆ. ಆದರೆ ನಾವು ಸೋಲಾರ್ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದೇವೆ. ಮುಂದಿನ ವಾರ ನಮ್ಮ ಕಂಪನಿಯ ಅಕಾರಿಯೊಬ್ಬರು ಅಲ್ಲಿಗೆ ಭೇಟಿ ನೀಡಲಿದ್ದಾರೆ ಎಂದರು.
ಸೆಲ್ಕೊ ಕಂಪನಿ ಸಿಇಒ ಮೋಹನ ಹೆಗಡೆ, ಡಿಜಿಎಂ ಜಗದೀಶ್ ಪೈ, ಪ್ರೆಸ್‌ಕ್ಲಬ್ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಕಾರ್ಯದರ್ಶಿ ಆತ್ಮಭೂಷಣ್ ಉಪಸ್ಥಿತರಿದ್ದರು.

LEAVE A REPLY