ದೇಶದ ಮೊದಲ ಸ್ಕಾರ್ಪಿಯನ್ ಜಲಾಂತರ್ಗಾಮಿ ನೌಕೆ ಕಲ್ವರಿ ಭಾರತೀಯ ನೌಕಾದಳಕ್ಕೆ ಸೇರ್ಪಡೆ

ಹೊಸದಿಲ್ಲಿ: ಭಾರತದ ಮೊದಲ ಸ್ಕಾರ್ಪಿಯನ್ ಜಲಾಂತರ್ಗಾಮಿ ನೌಕೆ ಕಲ್ವರಿಯನ್ನು ಮಜಾಗಾನ್ ಡಾಕ್ ಲಿಮಿಟೆಡ್ ಶಿಪ್ ಯಾರ್ಡ್‌ನಲ್ಲಿ ಭಾರತೀಯ ನೌಕಾದಳಕ್ಕೆ ಒಪ್ಪಿಸಲಾಗಿದೆ. ಶೀಘ್ರವೇ ಇದು ತನ್ನ  ಕಾರ್ಯವನ್ನು ಆರಂಭ ಮಾಡಲಿದೆ.
ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ಕಾರ್ಯಕ್ರಮದ ಅಭಿವೃದ್ಧಿಯ ಪ್ರಮುಖ ಮೈಲುಗಲ್ಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಜಾಗಾನ್ ಡಾಕ್ ಶಿಪ್ ಯಾರ್ಡ್ ಈ ಐತಿಹಾಸಿಕವಾದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಸ್ವದೇಶಿ ನಿರ್ಮಿತ ಮೊದಲ ಸ್ಕಾರ್ಪಿಯಾನ್ ಜಲಾಂತರ್ಗಾಮಿ ನೌಕೆ ಕಲ್ವರಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
೨ನೇ ಜಲಾಂತರ್ಗಾಮಿ ನೌಕೆಯಾದ ಐಎನ್‌ಎಸ್ ಕಂದೇರಿ ಮುಂದಿನ ಡಿಸೆಂಬರ್‌ನಲ್ಲಿ  ನೌಕಾಪಡೆಯನ್ನು ಸೇರ್ಪಡೆಯಾಗಲಿದೆ. ಇನ್ನೊಂದು ನೌಕೆ  ಕಾರಂಜ್ ಮುಂದಿನ ವರ್ಷ ಸೇನೆಗೆ ಸೇರ್ಪಡೆಯಾಗಲಿದ್ದು, ಉಳಿದವುಗಳು ೨೦೨೦ರ ವೇಳೆಗೆ ನೌಕಾಪಡೆಯನ್ನು ಸೇರಲಿವೆ ಎನ್ನಲಾಗಿದೆ.
6 ನೌಕೆಗಳ ನಿರ್ಮಾಣ
ಜಲಾಂತರ್ಗಾಮಿ ಯೋಜನೆ ೭೫ರ ಅಡಿಯಲ್ಲಿ  ಒಟ್ಟು 6 ಸ್ಕಾರ್ಪಿಯಾನ್ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕೆ 2005ರ ಅಕ್ಟೋಬರ್‌ನಲ್ಲಿ  ಒಪ್ಪಂದ ಮಾಡಿಕೊಳ್ಳಲಾಗಿತ್ತು. 30 ವರ್ಷಗಳ ಈ ಯೋಜನೆಗೆ 1999ರಲ್ಲಿ ಸಂಪುಟ ಸಮಿತಿಯು ಒಪ್ಪಿಗೆ ನೀಡಿತ್ತು. ಡಿಸಿಎಸ್‌ಎಸ್ ಆಫ್ ಫ್ರಾನ್ಸ್ ಸಹಯೋಗದಲ್ಲಿ  ಮಜಗಾನ್ ಡಾಕ್ ಶಿಪ್ ಯಾರ್ಡ್‌ನಲ್ಲಿ ನಿರ್ಮಾಣ ಕಾರ್ಯ ನಡೆದಿದೆ. 2020ರ ವೇಳೆ ಭಾರತೀಯ ನೌಕಾ ಪಡೆಯು ಒಟ್ಟು 24 ಆಧುನಿಕ  ಸಬ್‌ಮರೀನ್‌ಗಳನ್ನು ಹೊಂದಿರಲಿದೆ.
ಇದೀಗ ನೌಕಾಪಡೆ ಸೇರಿದ ಕಲ್ವರಿಯು ಟೈಗರ್ ಶಾರ್ಕ್ ರೀತಿಯಲ್ಲಿ  ಚುರುಕುತನವನ್ನು  ಹೊಂದಿದೆ.  ಭಾರತದ  ಸಾಗರದ ಅತ್ಯಂತ ಆಳದಲ್ಲಿ  ಕಾರ್ಯನಿರ್ವಹಿಸುವ ಸಾಮರ್ಥ್ಯವಿದ್ದು, ಎಂತಹ ಸಂದರ್ಭವನ್ನು ಕೂಡ ಎದುರಿಸಿ ಮುನ್ನುಗ್ಗುವ ಕಾರ್ಯಕ್ಷಮತೆ ಪಡೆದುಕೊಂಡಿದೆ.
ಹಳೆಯ ಕಲ್ವರಿ
ದೇಶದ ಮೊದಲ ಜಲಾಂತರ್ಗಾಮಿ ನೌಕೆಯಾಗಿದ್ದ  ಕಲ್ವರಿ 1967ರಲ್ಲಿ  ಕಾರ್ಯಾರಂಭ ಮಾಡಿತ್ತು. ಅದಾದ 30 ವರ್ಷದ ಬಳಿಕ  1996ರಲ್ಲಿ ಅದರ ಕಾರ್ಯ ಸ್ಥಗಿತವಾಗಿತ್ತು. ಇದೀಗ  ಹೊಸ ಅವತಾರದೊಂದಿಗೆ ಕಲ್ವರಿ ಸ್ಕಾರ್ಪಿಯಾನ್ ಜಲಾಂತರ್ಗಾಮಿ ನೌಕೆ ಮಜಗಾನ್ ಡಾಕ್ ಶಿಪ್ ಯಾರ್ಡ್‌ನಿಂದ  ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಂಡು  ಕಾರ್ಯಾರಂಭ ಮಾಡಲು ಅಣಿಯಾಗಿದೆ. ಭಾರತೀಯ ಜಲಾಂತರ್ಗಾಮಿ ನೌಕೆಗಳ ಕಾರ್ಯಾಚರಣೆಯ 50ನೇ ವರ್ಷದಲ್ಲಿ ಇದೀಗ ಹೆಚ್ಚು  ಪ್ರಾಮುಖ್ಯತೆಯೊಂದಿಗೆ ಕಲ್ವರಿ  ಕಾರ್ಯನಿರ್ವಹಣೆ ಮಾಡಲಿದೆ.

LEAVE A REPLY