ಅಯೋಧ್ಯಾದ ವಿವಾದಿತ ನಿವೇಶನ : ಇಬ್ಬರು ಹೊಸ ವೀಕ್ಷಕರ ನೇಮಕ

ಅಯೋಧ್ಯಾ: ವಿವಾದಿತ ಬಾಬ್ರಿ ಮಸೀದಿ – ರಾಮಜನ್ಮ ಭೂಮಿ ನಿವೇಶನದಲ್ಲಿ ಇಬ್ಬರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರನ್ನು ವೀಕ್ಷಕರಾಗಿ ಅಲಹಾಬಾದ್ ಹೈಕೋರ್ಟ್ ನೇಮಕ ಮಾಡಿದೆ.
ಬಸ್ತಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಇರ್ಫಾನ್ ಅಹ್ಮದ್ ಮತ್ತು ಫೈಝಾಬಾದ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಮರ್‌ಜೀತ್ ತ್ರಿಪಾಠಿ ಹೊಸದಾಗಿ ನೇಮಕಗೊಂಡಿರುವ ವೀಕ್ಷಕರಾಗಿದ್ದಾರೆ.
ವಿವಾದಿತ ನಿವೇಶನದ ಯಥಾ ಸ್ಥಿತಿ ಮತ್ತು ಸ್ವಾನಪಡಿಸಿಕೊಳ್ಳಲಾಗಿರುವ ಪಕ್ಕದ ಹೆಚ್ಚುವರಿ ಪ್ರದೇಶದ ಬಗ್ಗೆ ಅವರು 15 ದಿನಗಳಿಗೊಮ್ಮೆ ಸುಪ್ರೀಂಕೋರ್ಟ್‌ಗೆ ವರದಿಗಳನ್ನು ಸಲ್ಲಿಸಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಅಲಹಾಬಾದ್ ಹೈಕೋರ್ಟ್ ಹೊಸ ವೀಕ್ಷಕರನ್ನು ನೇಮಿಸಿದೆ ಎಂದು ಫೈಝಾಬಾದ್ ವಿಭಾಗೀಯ ಆಯುಕ್ತ ಹಾಗೂ ವಿವಾದಿತ ನಿವೇಶನದ ರಿಸೀವರ್ (ಅಕೃತ ವ್ಯಕ್ತಿ) ಮನೋಜ್ ಮಿಶ್ರಾ ಹೇಳಿದರು. ನ್ಯಾಯಾಧೀಶರುಗಳು ಭಾನುವಾರದಿಂದ ವೀಕ್ಷಕರಾಗಿ ತಮ್ಮ ಕೆಲಸವನ್ನು ಆರಂಭಿಸಲಿದ್ದಾರೆ ಎಂದು ಅವರು ಹೇಳಿದರು. ವಿವಾದಿತ ನಿವೇಶನದಲ್ಲಿ ಎಎಸ್‌ಐಯಿಂದ ಉತ್ಖನದ ನಡೆದ ಸಂದರ್ಭದಲ್ಲಿ 2003 ಮಾರ್ಚ್‌ನಲ್ಲಿ ಹೈಕೋರ್ಟ್ ನೇಮಿಸಿದ್ದ ನ್ಯಾಯಾಧೀಶರಾದ ಟಿ.ಎಂ.ಖಾನ್ ಮತ್ತು ಎಸ್.ಕೆ. ಸಿಂಗ್ ಅವರನ್ನು ಬದಲಿಸಲು ಸೆ. 11ರಂದು ಸರ್ವೋಚ್ಚ ನ್ಯಾಯಾಲಯದ ಮೂವರು ನ್ಯಾಯಾಧೀಶರ ವಿಶೇಷ ಪೀಠವೊಂದು ಆದೇಶಿಸಿತ್ತು.
ವೀಕ್ಷಕರಲ್ಲಿ ಒಬ್ಬರು ನಿವೃತ್ತರಾಗಿದ್ದಾರೆ ಮತ್ತು ಇನ್ನೊಬ್ಬರು ಹೈಕೋರ್ಟ್ ನ್ಯಾಯಾಧೀಶರಾಗಿ ಭಡ್ತಿಗೊಂಡಿದ್ದಾರೆ ಎಂದು ಅಲಹಬಾದ್ ಹೈಕೋರ್ಟ್ ರಿಜಿಸ್ಟ್ರಿ ಪರ ಹಾಜರಾಗಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ತಿಳಿಸಿದ ನಂತರ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠ ಅವರನ್ನು ಬದಲಿಸಲು ಆದೇಶಿಸಿತ್ತು.

LEAVE A REPLY