ಅಮೆರಿಕ ಅಧ್ಯಕ್ಷನ ಭಾಷಣ ನಾಯಿ ಬೊಗಳಿದ ಧ್ವನಿಯಂತಿತ್ತು  : ಉತ್ತರ ಕೊರಿಯಾ ಪ್ರತಿಕ್ರಿಯೆ

ಪ್ಯೋಂಗ್ಯಾಂಗ್: ಎಲ್ಲೆ ಮೀರುತ್ತಿರುವ ಉತ್ತರ ಕೊರಿಯಾ ಇದೇ ಹಾದಿಯಲ್ಲಿ ಮುಂದುವರಿದರೆ ಅದರ ಸರ್ವನಾಶ ಅನಿವಾರ್ಯವಾಗಲಿದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ ಬೆನ್ನಲ್ಲೇ,  ಅಮೆರಿಕಕ್ಕೆ ಪ್ರತಿಬೆದರಿಕೆ ಒಡ್ಡಿರುವ ಉತ್ತರ ಕೊರಿಯಾ ನಮ್ಮ ಅಣ್ವಸ್ತ್ರಗಳ ಮೂಲಕ ಭೀಕರ ದಾಳಿ ಮಾಡಿ ಇಡೀ ಅಮೆರಿಕವನ್ನೇ ನಾವು ನಿರ್ನಾಮ ಮಾಡಿ ಬಿಡುತ್ತೇವೆ ಎಂದಿದೆ. ವಿಶ್ವಸಂಸ್ಥೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆಯನ್ನು ನಾಯಿ ಬೊಗಳಿದ ಸದ್ದು ಮತ್ತು ಇದು ಶ್ವಾನ ಕನಸಿನಂತೆ ಎಂದು ಉತ್ತರ ಕೊರಿಯಾ ಹೀಯಾಳಿಸಿದೆ.
ಉತ್ತರ ಕೊರಿಯಾದ ವಿದೇಶಾಂಗ ಸಚಿವ ರೀ ಯಾಂಗ್-ಹೊ ಟ್ರಂಪ್‌ಗೆ ತಿರುಗೇಟು ನೀಡಿ, ಉತ್ತರ ಕೊರಿಯಾವನ್ನು ನಾಶಗೊಳಿಸುವ ಟ್ರಂಪ್ ಬೆದರಿಕೆ ನಾಯಿ ಬೊಗಳುವ ಸದ್ದಿಗೆ ಸಮ ಎಂದು ಅಪಹಾಸ್ಯಗೈದಿದ್ದಾರೆ. ಅಲ್ಲದೆ, ಅಮೆರಿಕದ ಅಧ್ಯಕ್ಷರ ಸಲಹೆಗಾರರು ಮಹಾಪ್ರಮಾದವೆಸಗಿದ್ದಾರೆ ಎಂದರು.
ಉತ್ತರ ಕೊರಿಯಾ ತನ್ನ ಹಾಗೂ ತನ್ನ ಮಿತ್ರರ ವಿರುದ್ಧ ಕ್ಷಿಪಣಿ ಬೆದರಿಕೆ ಒಡ್ಡಿದರೆ, ಇದರಿಂದ ರಕ್ಷಿಸಿಕೊಳ್ಳಲು ಇಡಿ ಉತ್ತರ ಕೊರಿಯಾವನ್ನೇ ನಾಶಮಾಡುವಂತಹ ಬಲವಂತಕ್ಕೆ ಅಮೆರಿಕ ಸಿಲುಕಬೇಕಾದೀತು ಎಂದು ಟ್ರಂಪ್ ಎಚ್ಚರಿಸಿದ್ದರು. ರಾಕೆಟ್ ಮ್ಯಾನ್ ಎಂದು ತನ್ನನ್ನು ಭಾವಿಸಿಕೊಂಡಿರುವ ಕಿಮ್ ಜಾಂಗ್-ಉನ್ ಸ್ವಂತಕ್ಕೆ ಮತ್ತು ತನ್ನ ಆಡಳಿತದ ಪಾಲಿಗೆ ಸುಸೈಡ್ ಮಿಷನ್ ಆಗಿ ಮಾರ್ಪಟ್ಟಿರುವುದಾಗಿ ಟ್ರಂಪ್ ವಿಶ್ವಸಂಸ್ಥೆ ಅವೇಶನದಲ್ಲಿ ಹೇಳಿದ್ದರು.
ಇತ್ತ, ಉತ್ತರ ಕೊರಿಯಾ ಸರ್ಕಾರದ ಮುಖವಾಣಿ ಕೆಸಿಎನ್‌ಎ ಸುದ್ದಿವಾಹಿನಿಯೂ ಈ ಬಗ್ಗೆ ಪ್ರತಿಕ್ರಿಯಿಸಿದ್ದು,  ಶತ್ರುಗಳು ಪ್ರಚೋದನೆಯ ತುಸು ಲಕ್ಷಣ ತೋರಿಸಿದರೂ ಅವರ ನೆಲೆಗಳ ಮೇಲೆ ಮುಂಚಿತ ದಾಳಿ ನಡೆಸಿ ಅವರನ್ನು ಮುಗಿಸಿ  ಬಿಡಲು ಉತ್ತರ ಕೊರಿಯಾ ಸಿದ್ಧವಾಗಿದೆ ಎಂದಿದೆ. ಅತ್ಯಂತ ಕ್ಲಿಷ್ಟ ಸಮಸ್ಯೆಗಳು ಮತ್ತು ವಿಶ್ವ ಸಮುದಾಯದ ಕಿರುಕುಳಗಳ ಹೊರತಾಗಿಯೂ ಡಿಪಿಆರ್‌ಕೆ (ಉತ್ತರ ಕೊರಿಯ) ಅತ್ಯಂತ ಶಕ್ತಿಶಾಲಿ ಪರಮಾಣು ಶಕ್ತಿ ದೇಶವಾಗಿ ಹೊರಹೊಮ್ಮಿದೆ.  ದಿಗ್ಬಂಧನ, ಒತ್ತಡ ಮತ್ತು ಯುದ್ಧಕ್ಕೆ ನಾವು ಅಂಜುವುದಿಲ್ಲಎಂದು ಉತ್ತರ ಕೊರಿಯಾ ಸರ್ಕಾರವನ್ನು ಉಲ್ಲೇಖಿಸಿ ವರದಿ ಮಾಡಿದೆ.
ಅಮೆರಿಕ ಸಂಘರ್ಷ ಮತ್ತು ಯುದ್ಧವನ್ನು ಬಯಸಿದರೆ. ಅದು ಭಯಾನಕ ಪರಮಾಣು ದಾಳಿಯನ್ನು ಎದುರು ನೋಡಬೇಕಾಗುತ್ತದೆ ಹಾಗೂ ತನ್ನ ರಣೋತ್ಸಾಹ ತನದಿಂದಲೇ ಅದು ಸರ್ವನಾಶವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.  ಅಂತೆಯೇ ತನ್ನ ಮೇಲೆ ಹೊಸದಾಗಿ ಅಮೆರಿಕ ವಿಸಬೇಕು ಎಂದು ಹೇಳಿರುವ ದಿಗ್ಬಂಧನಗಳ ಕುರಿತು ಪ್ರತಿಕ್ರಿಯೆ ನೀಡಿರುವ ಕಿಸಿಎನ್ ಈ ದಿಗ್ಭಂಧನಗಳು ಹಾಸ್ಯಾಸ್ಪದ ಮತ್ತು ತನಗದು ಲೆಕ್ಕಕ್ಕಿಲ್ಲ ಎಂದಿದೆ.

LEAVE A REPLY