ದೇಶದ ಹಲವು ಬ್ಯಾಂಕ್‌ ಖಾತೆಗಳಲ್ಲಿ ಡೇರಾ ಸಚ್ಚಾ ಸೌದದ 75 ಕೋಟಿ ರೂ. !

ಸಿರ್ಸಾ: ಡೇರಾ ಸಚ್ಚಾ ಸೌದ, ದೇಶದ ಹಲವು ಬ್ಯಾಂಕ್‌ಗಳಲ್ಲಿ 473 ಖಾತೆಗಳಿಂದ 74.96 ಕೋಟಿ ರೂ.ಗಳನ್ನು ಹೊಂದಿದ್ದು, ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಹೆಸರಿನಲ್ಲಿ 12 ಖಾತೆಗಳಿದ್ದು, ಇವುಗಳಲ್ಲಿ 7.72 ಕೋಟಿ ರೂ.ಗಳಿವೆ.
ಹಾಗೆಯೇ ರಾಮ್ ರಹೀಂ ಸಿಂಗ್‌ನ ದತ್ತು ಪುತ್ರಿ ಹನಿಪ್ರೀತ್ ಆರು ಬ್ಯಾಂಕ್ ಖಾತೆಗಳಿಂದ 1 ಕೋಟಿ ರೂ.ಗಳನ್ನು ಹೊಂದಿದ್ದಾಳೆ. ಬಾಬಾನ ಚಿತ್ರ ನಿರ್ಮಾಣ ಘಟಕವಾದ ಹಕೀಕತ್ ಎಂಟರ್‌ಟೈನ್‌ಮೆಂಟ್ ಹೆಸರಿನ 20 ಖಾತೆಗಳಲ್ಲಿ 50 ಕೋಟಿ ರೂ.ಗಳ ಗರಿಷ್ಠ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದೆ.
ಕಳೆದ ಆಗಸ್ಟ್ 25ರಂದು ಬಾಬಾ ರಾಮ್ ರಹೀಂ ಸಿಂಗ್‌ನ ಆರೋಪಗಳು ಸಾಬೀತಾದ ಹಿನ್ನೆಲೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹರ್ಯಾಣ ಮತ್ತು ಪಂಜಾಬ್ ಎರಡೂ ಸರ್ಕಾರಗಳಿಗೆ ಡೇರಾದ ಸ್ಥಿರ ಮತ್ತು ಚರಾಸ್ತಿಗಳ ಮೌಲ್ಯಮಾಪನ ಮಾಡುವಂತೆ ಆದೇಶಿಸಿತ್ತು. ಈ ಸಂಬಂಧ ಹರ್ಯಾಣ ಸರ್ಕಾರ ಕಾರ್ಯಪ್ರವೃತ್ತಗೊಂಡಾಗ, ಡೇರಾ ವಿವಿಧ ಬ್ಯಾಂಕ್‌ಗಳಲ್ಲಿ ಹೊಂದಿರುವ ಬ್ಯಾಲೆನ್ಸ್‌ನ ಮಾಹಿತಿ ತಿಳಿದುಬಂದಿದೆ. ಡೇರಾ ಮತ್ತು ಅದರ ಹಲವು ಸಂಸ್ಥೆಗಳು ಹೊಂದಿರುವ 504 ಬ್ಯಾಂಕ್ ಖಾತೆಗಳ ಬಗ್ಗೆ ಹರ್ಯಾಣ ಸರ್ಕಾರ ಕಾರ್ಯೋನ್ಮುಖವಾದಾಗ ಈ ಮಾಹಿತಿಗಳು ದೊರಕಿವೆ. ಅದರಂತೆ 473 ಖಾತೆಗಳಲ್ಲಿ ಉಳಿತಾಯ ಮತ್ತು ಠೇವಣಿ ಖಾತೆಗಳಾಗಿದ್ದು, ಉಳಿದವು ಸಾಲದ ಖಾತೆಗಳಾಗಿವೆ.

LEAVE A REPLY