ಅಸ್ಸಾಂ ಕುವರನಿಗೆ ಜೋಡಿಯಾದ ಪಡುಕರೆಯ ರಾಜಕುಮಾರಿ!

ಕೋಟ: ಕೋಟ ಪಡುಕರೆಯ ನಿವಾಸಿ ದಿ.ಕಾಳ ಬತ್ತಾಡ ಮತ್ತು ರಾಧ ಅವರ ಎರಡನೇ ಮಗಳು ದೀಪಾ (21) ಉಪೆನ್ ಡೈಮಾರ (23) ಅವರನ್ನು ವರಿಸಿದ್ದಾರೆ. 
ಇದೇನು ವಿಶೇಷ ಅಂತೀರಾ? ಈ ಮದುವೆಯಲ್ಲಿ ವಧು ದೀಪಾ ಕೋಟ ಪರಿಸರದವರಾಗಿದ್ದರೆ, ವರ ಮಾತ್ರ ಬೇರೆ ರಾಜ್ಯದವರು. ಉಪೆನ್ ದೂರದ ಅಸ್ಸಾಂ ಮೂಲದವರಾಗಿದ್ದಾರೆ.
ದಲಿತ ಬಡ ಸಮುದಾಯದ ಯುವತಿ ದೀಪಾ ಇಲ್ಲಿನ ಖಾಸಗಿ ಮೀನು ಸಂಸ್ಕರಣಾ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಸ್ಸಾಂ ರಾಜ್ಯದ ಯುವಕ ಉಪೆನ್ ಡೈಮಾರ ಕೂಡ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಮದುವೆಯಾಗಬೇಕು ಎನ್ನುವ ಉದ್ದೇಶವಿದ್ದರೂ ಅದಕ್ಕೆ ಯಾರ ಸಹಕಾರ ಸಿಕ್ಕಿರಲಿಲ್ಲ. ಹಲವು ವರ್ಷಗಳಿಂದ ಪ್ರೀತಿ ಹಾಗೆ ಉಳಿದುಕೊಂಡಿದ್ದನ್ನು ಗಮನಿಸಿದ ವೃತ್ತಿಯಲ್ಲಿ ಶಿಕ್ಷಕರಾಗಿರುವ ಸಾಲಿಗ್ರಾಮ ಪಾರಂಪಳ್ಳಿ ಮೂಲದ ಪಿ.ವಿ. ಆನಂದ್ ನೇತೃತ್ವದಲ್ಲಿ ಕೋಟ ಮಣೂರು ರಾಜಲಕ್ಷ್ಮಿ ಸಭಾಭವನದಲ್ಲಿ ಗುರುವಾರ ಮದುವೆ ನಡೆಯಿತು.
ಕಳೆತಂದ ಸ್ನೇಹಿತ ದಂಡು
ಕರ್ನಾಟಕ ಕರಾವಳಿಯ ಜಿಲ್ಲೆಗೆ ಉದ್ಯೋಗ ಅರಸಿ ಒಂದಿಷ್ಟು ವರ್ಷ ಕೆಲಸ ನಿರ್ವಹಿಸಿ ಅಲ್ಪ ಸ್ವಲ್ಪ ಕನ್ನಡ ಕಲಿತು ಇದೀಗ ಇಲ್ಲಿನ ಯುವತಿಯನ್ನು ಮದುವೆಯಾಗುವ ಮನ್ಸೂಚನೆ ದೊರೆತ ಕೂಡಲೇ ಉಪೆನ್ ಸ್ನೇಹಿತರಾದ ಅಸ್ಸಾಂ ಮೂಲದವರು ಈ ಶುಭ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಇದರಿಂದ ಉಪೆನ್ ಮುಖದಲ್ಲಿ ಸಂತೋಷ ಮನೆಮಾಡುವಂತ್ತಿತ್ತು, ಯಾಕೆಂದರೆ ತನ್ನ ತಂದೆ-ತಾಯಿ  ಅಗಲಿಯುವಿಕೆಯನ್ನು ಮರೆಮಾಚುವಂತಹ ಸ್ನೇಹಿತರ ದಂಡು ಮದುವೆಗೆ ಕಳೆತಂದಂತಿತ್ತು.

LEAVE A REPLY