ಬಂಟ್ವಾಳ ಪುರಸಭಾ ಜಗಲಿಯಲ್ಲಿ ಹಠಾತ್ ಧರಣಿ ಕುಳಿತ ಬಿಜೆಪಿ ಸದಸ್ಯರು!

ಬಂಟ್ವಾಳ: ಕಸ್ಬಾ ಗ್ರಾಮದ ಪೇಟೆಯಲ್ಲಿರುವ ಕದ ನಂಬರ್ 8-240 ಕಟ್ಟಡದ ವಿರುದ್ಧ ನೀಡಲಾದ ದೂರಿನ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳವ ನಿರ್ಣಯವನ್ನು ಸೆ. 4ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡರೂ ಇನ್ನೂ ಕೂಡ ನಿರ್ಣಯ ಪುಸ್ತಕದಲ್ಲಿ ದಾಖಲಿಸದಿರುವುದನ್ನು ಖಂಡಿಸಿ ವಿಪP ಬಿಜೆಪಿ ಸದಸ್ಯರು ಬುಧವಾರ ಸಂಜೆ ಪುರಸಭಾ ಜಗಲಿಯಲ್ಲಿ ಹಠಾತ್ ಧರಣಿ ನಡೆಸಿದರು.
ದೂರುದಾರ, ಸದಸ್ಯ ದೇವದಾಸ ಶೆಟ್ಟಿ ಧರಣಿ ಕುಳಿತಿದ್ದು, ಸದಸ್ಯರಾದ ಸುಗುಣ ಕಿಣಿ, ಭಾಸ್ಕರ್ ಟೈಲರ್‌ರವರು ಧರಣಿಗೆ ಸಾಥ್‌ನೀಡಿದರು. ಸಭೆಯಲ್ಲಿ ದೂರಿನ ಬಗ್ಗೆ ಸುದೀರ್ಘ ಚರ್ಚೆ ನಡೆದು ಬಳಿಕ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮಕೈಗೊಳ್ಳುವುದು ಮತ್ತು ಕದ ನಂಬರ್ ೮-೨೪೦ನ ಕಟ್ಟಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು.
ಆದರೆ ಸಾಮಾನ್ಯ ಸಭೆ ನಡೆದು 16 ದಿನಗಳಾದರೂ ಇನ್ನು ಕೂಡ ಈ ನಿರ್ಣಯವನ್ನು ಪುಸ್ತಕದಲ್ಲಿ ದಾಖಲಿಸದಿರುವುದು ಹಾಗೂ ತಿರುಚಿರುವುದು ಕಂಡುಬಂದಿದೆ ಎಂದು ಧರಣಿ ಕುಳಿತಿರುವ ಸದಸ್ಯ ದೇವದಾಸ ಶೆಟ್ಟಿ ಆರೋಪಿಸಿದ್ದಾರೆ.
ಸೆ. 4ರ ಸಾಮಾನ್ಯ ಸಭೆಯಲ್ಲಾದ ನಿರ್ಣಯದ ಪ್ರತಿ ಕೋರಿ ಅರ್ಜಿ ಸಲ್ಲಿಸಿದ್ದೆ. ಆದರೆ ನಿರ್ಣಯ ಪುಸ್ತಕದಲ್ಲಿ ಈ ನಿರ್ಣಯ ಸೇರಿದಂತೆ ಕೆಲವು ನಿರ್ಣಯಗಳು ಕೂಡಾ ದಾಖಲಾಗದಿರುವುದು ಕಂಡು ಬಂದಿದೆ. ಈ ಹಿಂದೆಯೂ ನಿರ್ಣಯವನ್ನು ಸಭೆಯದ ನಿರ್ಣಯವನ್ನು ತಿರುಚಿ ದಾಖಲಿಸಿರುವುದು ಸೇರಿದಂತೆ ಪುರಸಭೆಯಲ್ಲಿ ಕಾನೂನು ಬಾಹಿರ ಕೆಲಸಗಳೇ ನಡೆಯುತ್ತಿದೆ ಎಂದು ಅಪಾದಿಸಿದರು.
ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಮತ್ತಡಿ ಹಾಗೂ ಅವರು ಧರಣಿನಿರತ ಸದಸ್ಯರ ಮನವೊಲಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ.
ತಹಶೀಲ್ದಾರ್‌ರಿಂದ ಸಂಧಾನ:
ರಾತ್ರಿ ಸುಮಾರು 7.45 ರ ವೇಳೆಗೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಪುರಸಭೆಗೆ ಆಗಮಿಸಿ ಧರಣಿನಿರತರೊಂದಿಗೆ ಮಾತುಕತೆ ನಡೆಸಿದರು. ಗುರುವಾರ ಬೆಳಗ್ಗೆ ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಅವರ ಸಮ್ಮುಖದಲ್ಲಿ ಪುರಸಭಾ ಅಧ್ಯಕ್ಷರನ್ನೊಳಗೊಂಡಂತೆ ಸಭೆಯನ್ನು ನಡೆಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು. ಆದರೆ ಈ ಸಭೆಗೆ ತಾವು ಭಾಗವಹಿಸುವುದಿಲ್ಲ ಎಂದು ಬಿಜೆಪಿ ಸದಸ್ಯರು ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದ್ದು, ಮಧ್ಯಾಹ್ನದ ವೇಳೆಗೆ ಸೆ. 4ರಂದು ನಡೆದ ಸಾಮಾನ್ಯ ಸಭೆಯಲ್ಲಿ ಆದ ನಿರ್ಣಯ ಪುಸ್ತಕದಲ್ಲಿ ದಾಖಲಾಗಿ ನಮಗೆ ಅದರ ಪ್ರತಿ ದೊರಕಬೇಕು. ತಪ್ಪಿದಲ್ಲಿ ಮತ್ತೆ ಧರಣಿ ಕುಳಿತುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಹಂತದಲ್ಲಿ ವಿವಾದಿತ ಕಟ್ಟಡಕ್ಕೆ ಸಂಬಂಧಿಸಿದ ಸಭೆಯಲ್ಲಿನ ಚರ್ಚೆಯ ವಾಯ್ಸ್ ರೆಕಾರ್ಡ್ ಸೇರಿದಂತೆ ಎಲ್ಲ ದಾಖಲಾತಿಗಳನ್ನು ಸದಸ್ಯರು ತಹಶೀಲ್ದಾರ್‌ರ ಗಮನಕ್ಕೆ ತಂದರು. ಹಿರಿಯ ಸದಸ್ಯ ಗೋವಿಂದ ಪ್ರಭು ಅವರೂ ಕೂಡಾ ಕೊನೇಯ ಹಂತದಲ್ಲಿ ಧರಣಿಯಲ್ಲಿ ಪಾಲ್ಗೊಂಡರು. ಪುರಸಭೆಯ ಕಾನೂನು ಬಾಹಿರ ಕೆಲಸಗಳ ಬಗ್ಗೆ ತಹಶೀಲ್ದಾರ್‌ರ ಗಮನಕ್ಕೆ ತಂದು ತರಾಟೆಗೂ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು ಮುಖ್ಯಾಧಿಕಾರಿಯವರ ಕರೆಯ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ತಿಳಿದುಬಂದಿದೆ.

LEAVE A REPLY