ಬಂಟ್ವಾಳ ವ್ಯಾಪ್ತಿಯ ನಾಲ್ಕು ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಅನುಮೋದನೆ : ಸಂಸದ ನಳಿನ್

ಬಂಟ್ವಾಳ, ಸೆ. ೨೦: ಬಹುದಿನದ ಬೇಡಿಕೆಯಾದ ಬಂಟ್ವಾಳ ವ್ಯಾಪ್ತಿಯ ನಾಲ್ಕು ಪ್ರಮುಖ ರಸ್ತೆಗಳ ಅಭಿವೃದ್ಧಿ ಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಬುಧವಾರ ಬಿ.ಸಿ.ರೋಡ್‌ನ ಸರ್ವೀಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿಯ ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬೇಡಿಕೆಗೆ ಸ್ಪಂದಿಸಿ, ಅನುಮೋದನೆ ನೀಡಿದ ಕೇಂದ್ರದ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಸರಕಾರವನ್ನು ಅಭಿನಂದಿಸಿದರು.
ಬಿ.ಸಿ.ರೋಡಿನಿಂದ ಪೊಳಲಿ-ಕಟೀಲು ಮಾರ್ಗವಾಗಿ ಮುಲ್ಕಿ, ಮೆಲ್ಕಾರ್ ಜಂಕ್ಷನ್‌ನಿಂದ ಕೊಣಾಜೆ-ತೊಕ್ಕೊಟ್ಟು, ಸಿದ್ದಕಟ್ಟೆ-ಮೂಡುಬಿದಿರೆ, ಕಲ್ಲಡ್ಕ-ಚೆರ್ಕಳ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಸಲ್ಲಿಸುರವ ಪ್ರಸ್ತಾವನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಇದರಲ್ಲಿ ಎರಡು ರಸ್ತೆಯನ್ನು ರಾ.ಹೆ.ಪ್ರಾ. ಹಾಗೂ ಇನ್ನೆರಡು ರಸ್ತೆಯ ಕಾಮಗಾರಿಗಳನ್ನು ಪಿಡಬ್ಲ್ಯೂಡಿ ಇಲಾಖೆ ನಿರ್ವಹಿಸಲಿದೆ.
ಬಿ.ಸಿ.ರೋಡಿನಿಂದ ಪೊಳಲಿ-ಕಟೀಲು ಮಾರ್ಗವಾಗಿ ಮುಲ್ಕಿ, ಮೆಲ್ಕಾರ್ ಜಂಕ್ಷನ್‌ನಿಂದ ಕೊಣಾಜೆ-ತೊಕ್ಕೊಟ್ಟು ರಸ್ತೆಗೆ ಸಂಬಂಧಿಸಿ ಈಗಾಗಲೇ ಡಿಪಿಆರ್ ಆಗಿದ್ದು, ಮುಂದಿನ ಒಂದು ವಾರದೊಳಗೆ ಸರ್ವೇ ಕಾರ್ಯ ಆರಂಭವಾಗಿಲಿದೆ ಎಂದ ಸಂಸದರು, ಸಿದ್ದಕಟ್ಟೆ-ಮೂಡುಬಿದಿರೆ, ಕಲ್ಲಡ್ಕ-ಚೆರ್ಕಳ ರಸ್ತೆಯನ್ನು ಈಗಾಗಲೇ ಪಿಡಬ್ಲ್ಯೂಡಿ ಇಲಾಖೆಗೆ ಹಸ್ತಾಂತರಿಸಿದೆ. ಕೇಂದ್ರ ಸರಕಾರ ಪಿಡಬ್ಲ್ಯೂಡಿಗೆ ಅನುದಾನ ಒದಗಿಸಲಿದೆ. ಈ ವರ್ಷದಲ್ಲಿಯೇ ಇದರ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಮೆಲ್ಕಾರ್‌ನಲ್ಲಿ ಈಗಾಗಲೇ ನಿರ್ಮಾಣವಾಗಿರುವ ದ್ವಿಪಥ ರಸ್ತೆಯನ್ನು ೪೦ ಮೀ.ಗೆ ಅಗಲೀಕರಣಗೊಳಿಸಿ ಅಭಿವೃದ್ಧಿ ಗೊಳಿಸಲಾಗುವುದು. ಹದಗೆಟ್ಟಿರುವ ರಾ.ಹೆ.ಯ ಪಾಣೆಮಂಗಳೂರು, ಮೆಲ್ಕಾರ್ ಮೊದಲಾದ ರಸ್ತೆಗಳನ್ನು ಮಳೆಬಿಟ್ಟ ಕೂಡಲೇ ಸುಸ್ಥಿತಿಗೆ ತರುವ ಭರವಸೆಯನ್ನು ಕಾಮಗಾರಿ ನಿರ್ವಹಿಸುತ್ತಿರುವ ಎಲ್‌ಆಂಡ್‌ಟಿ ಸಂಸ್ಥೆಗೆ ನೀಡಿದ್ದು, ಈ ಸಂಬಂಧ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಸಂಸದರು ತಿಳಿಸಿದರು.
ಅಕ್ಟೋಬರ್‌ನಲ್ಲಿ ಆರಂಭ:
ಬಿ.ಸಿ.ರೋಡಿನಿಂದ ಅಡ್ಡಹೊಳೆಯವರೆಗಿನ ಚತುಷ್ಪಥ ರಸ್ತೆ ಕಾಮಗಾರಿಯನ್ನು ಅಕ್ಟೋಬರ್ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ಮುಂದಿನ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಉಪ್ಪಿನಂಗಡಿಯಿಂದ ಅಡ್ಡಹೊಳೆಯವರೆಗಿನ ಕಂದಾಯ ಜಮೀನನ್ನು ಈಗಾಗಲೇ ಬಿಟ್ಟುಕೊಡಲಾಗಿದೆ. ಕಲ್ಲಡ್ಕ ಮೇಲ್ಸೆತುವೆಯ ಸರ್ವೇ ಕಾರ್ಯ ಪೂರ್ಣಗೊಂಡ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು. ಅದೇ ರೀತಿ ಬಿ.ಸಿ.ರೋಡ್‌ನಿಂದ ಚಾರ್ಮಡಿವರೆಗಿನ ರಸ್ತೆಯ ಪ್ರಥಮ ಹಂತದ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಇದನ್ನು ೩ ಮೀಟರ್‌ನಷ್ಟು ಅಗಲೀಕರಣ ಮಾಡಲಾಗುವುದು ಎಂದು ಹೇಳಿದರು.
ಬಿ.ಸಿ.ರೋಡ್‌ನಲ್ಲಿ ಹೈಟೆಕ್ ಶೌಚಾಲಯ
ಮಣ್ಣಿನ ಪರೀಕ್ಷಾ ಕೇಂದ್ರ ಹಾಗೂ ವಿಶ್ರಾಂತಿ ಕೊಠಡಿಯನ್ನೊಳಗೊಂಡಂತೆ ಹೈಟೆಕ್ ಮಾದರಿಯ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಎಂಆರ್‌ಪಿಎಲ್ ಸಂಸ್ಥೆಯು ೩ ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದು. ಇದಕ್ಕೆ ಬಿ.ಸಿರೋಡ್ ಪರಿಸರವನ್ನು ಗುರುತಿಸಲಾಗಿದೆ. ಬಂಟ್ವಾಳ ಪುರಸಭೆಯಲ್ಲಿ ಜಮೀನು ಕೇಳಲಾಗಿದ್ದು, ಆದರೆ ಇದಕ್ಕೆ ಪುರಸಭೆಯಿಂದ ಜಮೀನಿನ ಲಭ್ಯತೆಯ ಬಗ್ಗೆ ಇದೂವರೆಗೂ ಮಾಹಿತಿ ನೀಡಿಲ್ಲ. ಹಾಗಾಗಿ ರಾ.ಹೆ. ಗುರುತಿಸಿದ ಸ್ಥಳದಲ್ಲಿ ಈ ಶೌಚಾಲಯವನ್ನು ನಿರ್ಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಬಿಜೆಪಿ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ದೇವದಾಸ್ ಶೆಟ್ಟಿ, ಗೋವಿಂದ ಪ್ರಭು, ಸುಲೋಚನಾ ಜಿ.ಕೆ. ಭಟ್, ಜಿ.ಆನಂದ, ಚೆನ್ನಪ್ಪ ಕೋಟ್ಯಾನ್, ರಾಮ್‌ದಾಸ್ ಬಂಟ್ವಾಳ, ಸುಗುಣ ಕಿಣಿ, ರವೀಂದ್ರ ಕಂಬಳಿ, ಮಹಾಬಲ ಶೆಟ್ಟಿ, ಮೋನಪ್ಪ ದೇವಸ್ಯ, ರಮಾನಾಥ ರಾಯಿ, ಸಂತೋಷ್ ರಾಯಿಬೆಟ್ಟು, ಗಣೇಶ್ ರೈ ಮಾಣಿ, ಸೀತಾರಾಮ್ ಪೂಜಾರಿ, ವಸಂತ ಕುಮಾರ್ ಅಣ್ಣಳಿಕೆ ರಾ.ಹೆ.ಪ್ರಾ. ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY