ಇಂದು ಮಹಾಲಯ ಅಮಾವಾಸ್ಯೆ: ಗಯಾಪದ ಕ್ಷೇತ್ರ ಉಪ್ಪಿನಂಗಡಿಯಲ್ಲಿ ಪಿತೃತರ್ಪಣ ಕಾರ್ಯ

ಪುತ್ತೂರು: ಮುಕ್ತಿಕ್ಷೇತ್ರವೆಂದು ಕರೆಯಲ್ಪಡುವ ದಕ್ಷಿಣ ಕಾಶಿ ಗಯಾಪದ ಕ್ಷೇತ್ರ ಉಪ್ಪಿನಂಗಡಿಯಲ್ಲಿ ಬುಧವಾರ ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ಊರಪರವೂರ ಭಕ್ತರಿಂದ ತಮ್ಮ ಅಗಲಿದ ಮಾತಾಪಿತರಿಗೆ, ಬಂಧುಗಳಿಗೆ ತರ್ಪಣಕಾರ್ಯ ನಡೆಯಲಿದೆ. ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಬಳಿ ಮತ್ತು ಉಪ್ಪಿನಂಗಡಿ ವನಭೋಜನ ಶ್ರೀ ವೀರಾಂಜನೇಯ ದೇವಾಲಯದ ಬಳಿ ನೇತ್ರಾವತಿ ನದಿಯಲ್ಲಿ ಪಿತೃತರ್ಪಣ ಕಾರ್ಯಗಳು ನಡೆಯುತ್ತವೆ.
ಶ್ರೇಷ್ಠದಿನ
ಮಹಾಲಯದ 15 ದಿನಗಳಲ್ಲಿ ಪಿತೃಪಕ್ಷ ಆಚರಣೆ ನಡೆಯುತ್ತದೆ. ಆದರೆ ಪಿತೃಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆಯು ತಿಲೋದಕ ತರ್ಪಣ, ಪಿಂಡಪ್ರಧಾನ, ತಿಲಹೋಮ ಇತ್ಯಾದಿ ಕರ್ಮಗಳನ್ನು ನಡೆಸಿ ಅಗಲಿದ ಮಾತಾಪಿತರ, ಬಂಧುಗಳ ಆತ್ಮಕ್ಕೆ ಸಂತೃಪ್ತಿಪಡಿಸುವ ಶ್ರೇಷ್ಠದಿನವೆಂದು ಪರಿಗಣಿಸಲ್ಪಟ್ಟಿದೆ. ಮಹಾಲಯ ಅಮಾವಾಸ್ಯೆಯಂದು ಬೆಳಗ್ಗಿನಿಂದಲೇ ಪಿತೃತರ್ಪಣ ಕಾರ್ಯಗಳು ಉಪ್ಪಿನಂಗಡಿಯ 2 ಕ್ಷೇತ್ರಗಳಲ್ಲಿ ನಡೆಯುತ್ತವೆ.
ಭಕ್ತರಿಗೆ ವ್ಯವಸ್ಥೆ
ಮಹಾಲಯ ಅಮಾವಾಸ್ಯೆ ತರ್ಪಣಕಾರ್ಯಗಳನ್ನು ನಡೆಸಲು ಬರುವ ಭಕ್ತರ ಅನುಕೂಲತೆಗಾಗಿ ಅರ್ಚಕರ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ನಡೆಸಲಾಗುತ್ತದೆ. ಅಲ್ಲದೇ ನದಿಗಳ ಬಳಿಯಲ್ಲಿಯೂ ಸುರಕ್ಷತೆಗೆ ಗಮನಹರಿಸಲಾಗುತ್ತದೆ. ಒಂದು ವಾರದಿಂದ ಮಳೆ ಬರುತ್ತಿರುವ ಕಾರಣ ಉಪ್ಪಿನಂಗಡಿಯ ಉಭಯ ನದಿಗಳಲ್ಲಿಯೂ ನೀರಿನ ಮಟ್ಟ ಹೆಚ್ಚಾಗಿದೆ. ನದಿ ನೀರಿನಲ್ಲಿ ತಿಲೋದಕ ಸಮರ್ಪಣೆ, ಪಿಂಡ ವಿಸರ್ಜನೆ ಇತ್ಯಾದಿ ಕಾರ್ಯ ಮಾಡಲು ಅನುಕೂಲ ಮತ್ತು ಹರಿಯುವ ನೀರಿನಲ್ಲಿ ಇಂತಹ ಅಪರ ಕಾರ್ಯಗಳನ್ನು ನಡೆಸಿದರೆ ಅದು ಪುಣ್ಯಪ್ರದ ಎಂಬ ನಂಬಿಕೆ ಜನರಲ್ಲಿದೆ.
ಹೆಚ್ಚುತ್ತಿರುವ ಭಕ್ತರ ಸಂಖ್ಯೆ
ಗಯಾಪದ ಕ್ಷೇತ್ರ ಉಪ್ಪಿನಂಗಡಿಯಲ್ಲಿ ಮಹಾಲಯ ಅಮಾವಾಸ್ಯೆಯಂದು ತಿಲೋದಕ ಸಮರ್ಪಣೆ ಅಥವಾ ತರ್ಪಣ ಕಾರ್ಯಗಳನ್ನು ನಡೆಸಲು ಹೊರ ಜಿಲ್ಲೆಗಳಿಂದಲೂ ಕೂಡ ಭಕ್ತರು ಆಗಮಿಸುತ್ತಾರೆ. ಹಾಸನ, ಮಡಿಕೇರಿ, ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಪ್ರಾತಃಕಾಲ ಉಪ್ಪಿನಂಗಡಿಗೆ ಭಕ್ತರು ಆಗಮಿಸುತ್ತಾರೆ. ಗಯಾಪದ ಕ್ಷೇತ್ರಕ್ಕೆ ಸಂಬಂಧಿಸಿದ 2 ದೇವಾಲಯಗಳ ಪರಿಸರದ ನದಿ ಬದಿಗಳಲ್ಲಿ ಮಹಾಲಯ ಅಮಾವಾಸ್ಯೆಯ ಕಾರ್ಯಗಳು ನಡೆಯುತ್ತವೆ. ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಮತ್ತು ಉಪ್ಪಿನಂಗಡಿ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ವತಿಯಿಂದ ಭಕ್ತರಿಗೆ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

LEAVE A REPLY