ನೀವು ಬೇಕಾದ್ರೆ ಮದ್ಯ ಮಾರಾಟ ಮಾಡಿ, ನಮಗೆ ವಿಷ ನೀಡಿ ಎಂದ ಮಹಿಳೆಯರು!!

ಕಡಬ: ಗ್ರಾಮೀಣ ಭಾಗವಾದ ನೂಜಿಬಾಳ್ತಿಲದ ಕಲ್ಲುಗುಡ್ಡೆಯಲ್ಲಿ ತೆರೆಯಲಾಗಿರುವ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರ ಧರಣಿ ಕಾವು ಪಡೆದಿದೆ. ಇದೀಗ ನೂಜಿಬಾಳ್ತಿಲ ಬಂದ್‌ಗೆ ಕರೆ ನೀಡಲಾಗಿದೆ. ಈಗ ಸರಕಾರದ ಮುಂದೆ ಪ್ರಶ್ನೆ ಇದೆ, ಮದ್ಯದ ಮಾರಾಟದ ಆದಾಯ ಬೇಕೋ? ಜನರ ಬದುಕು ಬೇಕೋ?
ಜನರ ತೀವ್ರ ವಿರೋಧದ ನಡುವೆಯೂ ನೂಜಿಬಾಳ್ತಿಲದ ಕಲ್ಲುಗುಡ್ಡೆಯಲ್ಲಿ ತೆರೆಯಲಾಗಿರುವ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಭಾನುವಾರ ಆರಂಭಿಸಿರುವ ಅನಿರ್ಧಿಷ್ಠಾವಧಿ ಧರಣಿ ಪ್ರತಿಭಟನೆ ಮಂಗಳವಾರವೂ ಮುಂದುವರಿದಿದೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಮಂಗಳವಾರ ಮಹಾಲಯ ಅಮವಾಸ್ಯೆಯ ರಜೆ ಇದ್ದ ಕಾರಣದಿಂದಾಗಿ ಪರಿಸರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕೂಡ ಭಾಗವಹಿಸಿ ಮದ್ಯದಂಗಡಿಯ ವಿರುದ್ಧ ಘೋಷಣೆ ಕೂಗಿದರು.
ಮದ್ಯದಂಗಡಿಯತ್ತ ಮುನ್ನುಗ್ಗಿದ ಮಹಿಳೆಯರು
ಕಳೆದ ಹಲವು ದಿನಗಳಿಂದ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿದ ಮದ್ಯದಂಗಡಿಯಲ್ಲಿ ಪೊಲೀಸರ ರಕ್ಷಣೆಯಲ್ಲಿ ವ್ಯಾಪಾರ ನಡೆಸಲಾಗುತ್ತಿದೆ. ಜನರ ಭಾವನೆಗಳಿಗೆ ಕಾನೂನಿನಲ್ಲಿ ಯಾವುದೇ ಬೆಲೆ ಇಲ್ಲವೇ ಎಂದು ಆಕ್ರೋಶವ್ಯಕ್ತಪಡಿಸುತ್ತಾ ಪ್ರತಿಭಟನೆ ನಡೆಯುತ್ತಿದ್ದ ಚಪ್ಪರದಡಿಯಿಂದ ಮದ್ಯದಂಗಡಿಯತ್ತ ಹೊರಟ ಮಹಿಳೆಯವರನ್ನು ಪೊಲೀಸರು ತಡೆದರು. ಆ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾನಿರತ ಮಹಿಳೆಯರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಅದೇ ವೇಳೆ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಿರುವುದರಿಂದ ಚಪ್ಪರದಲ್ಲಿ ಸ್ಥಳಾವಕಾಶ ಕಡಿಮೆಯಾಗುತ್ತಿದೆ ಎಂದು ಮದ್ಯದಂಗಡಿಯ ಮುಂದೆಯೇ ಚಪ್ಪರ ಹಾಕಲು ಮುಂದಾದ ಯುವಕರನ್ನು ಪೊಲೀಸರು ತಡೆದದ್ದು ಗೊಂದಲಕ್ಕೆ ಕಾರಣವಾಯಿತು. ಬಳಿಕ ಪ್ರತಿಭಟನಕಾರರನ್ನು ಪ್ರಮುಖರು ಸಮಾಧನಾಪಡಿಸಿದರು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮದ್ಯಮುಕ್ತ ಜೀವನ ನಡೆಸುತ್ತಿರುವ ಎಡಮಂಗಲದ ದಾಮೋದರ ಮಾಲೆಂಗಿರಿ ಅವರು ಯಾವುದೇ ಸವಾಲುಗಳನ್ನು ಎದುರಿಸಿಯಾದರೂ ಗ್ರಾಮಕ್ಕೆ ಮಾರಿಯಾಗಿ ಬಂದಿರುವ ಮದ್ಯದಂಗಡಿಯನ್ನು ಹೊಡೆದೂಡಿಸಬೇಕು ಎಂದರು.
ನಮಗೆ ವಿಷ ಕೊಡಿ… ಜಿ.ಪಂ.ಅಧ್ಯಕ್ಷರ ಮುಂದೆ ಆಕ್ರೋಶ  
ಮಧ್ಯಾಹ್ನದ ವೇಳೆಗೆ ಪ್ರತಿಭಟನ ಸ್ಥಳಕ್ಕೆ ಆಗಮಿಸಿದ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಪ್ರತಿಭಟನ ನಿರತರಿಗೆ ಬೆಂಬಲ ವ್ಯಕ್ತಪಡಿಸಿದರು. ಬಿಸಿಲು ಮಳೆಯೆನ್ನದೆ ಮದ್ಯದಂಗಡಿ ತೆರವಿಗಾಗಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎಲ್ಲಾ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ನಮಗೆ ಬೆಂಬಲ ಸೂಚಿಸುವುದು ಬಿಟ್ಟರೆ ಮದ್ಯದಂಗಡಿಯನ್ನು ತೆರವುಗೊಳಿಸುವ ಬಗ್ಗೆ ಯಾವುದೇ ಸೂಚನೆ ಸಿಗುತ್ತಿಲ್ಲ. ಆದುದರಿಂದ ಜಿ.ಪಂ.ಅಧ್ಯಕ್ಷರು ನಮಗೆ ನ್ಯಾಯ ಒದಗಿಸಬೇಕು. ಇಲ್ಲದೇ ಹೋದರೆ ನಮಗೆ ವಿಷ ತರಿಸಿ ಕೊಡಿ. ಅದನ್ನು ಕುಡಿದು ನಾವು ಸಾಯುತ್ತೇವೆ ಎಂದು ದಲಿತ ನಾಯಕಿ ಸುಂದರಿ ಕಲ್ಲುಗುಡ್ಡೆ ಅವರು ಜಿ.ಪಂ.ಅಧ್ಯಕ್ಷರ ಮುಂದೆ ಆಕ್ರೋಶದಿಂದ ಮಾತನಾಡಿದರು.
ಮದ್ಯದಂಗಡಿಗೆ ಜಿಲ್ಲಾಧಿಕಾರಿಯವರು ಪರವಾನಿಗೆ ನೀಡಿರುವುದು. ಆದುದರಿಂದ ಅವರೇ ಅದನ್ನು ತೆರವುಗೊಳಿಸುವ ಬಗ್ಗೆಯೂ ಕ್ರಮ ಕೈಗೊಳ್ಳಬೇಕಿದೆ ಎಂದು ಜಿ.ಪಂ.ಅಧ್ಯಕ್ಷರು ಹೇಳಿದಾಗ ಜಿಲ್ಲಾಧಿಕಾರಿಯರನ್ನು ಸಂಪರ್ಕಿಸಿ ಮಾತನಾಡಿ ಎಂದು ಮಹಿಳೆಯರು ಜಿ.ಪಂ.ಅಧ್ಯಕ್ಷರನ್ನು ಒತ್ತಾಯಿಸಿದರು. ಆಗ ಜಿ.ಪಂ.ಅಧ್ಯಕ್ಷರು ಜಿಲ್ಲಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಬಳಿಕ ಜಿಲ್ಲಾಧಿಕಾರಿಯರ ಜೊತೆ ಈ ಬಗ್ಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ ಜಿ.ಪಂ.ಅಧ್ಯಕ್ಷರು ಸ್ಥಳದಿಂದ ತೆರಳಿದರು.
ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ, ಹೋರಾಟಗಾರ ಪ್ರಮುಖರಾದ ಬಿಜೆಪಿ ಮುಖಂಡ ಚಂದ್ರಶೇಖರ ಗೌಡ ಹಳೆನೂಜಿ, ನೂಜಿಬಾಳ್ತಿಲ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ವಸಂತ ಪೂಜಾರಿ ಬದಿಬಾಗಿಲು, ಯುವ ಬಿಜೆಪಿ ಮುಖಂಡ ಸುರೇಶ್ ದೇಂತಾರು, ಎಸ್‌ಡಿಎಂಸಿ ಅಧ್ಯಕ್ಷ ಮೋನಪ್ಪ ಗೌಡ ಅರಿಮಜಲು, ತೆಗ್‌ರ್ ತುಳುಕೂಟದ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಂ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಲಯ ಮೇಲ್ವಿಚಾರಕ ರಾಜು ಗೌಡ, ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಉಳಿಪ್ಪು, ದುರ್ಗಾಪ್ರಸಾದ್ ಕೆ.ಪಿ., ಕಡಬ ವಲಯ ಮುಗೇರ ಯುವ ವೇದಿಕೆ ಅಧ್ಯಕ್ಷ ವಸಂತ ಕುಬಲಾಡಿ, ನೂಜಿಬಾಳ್ತಿಲ ಮುಗೇರ ಯುವ ವೇದಿಕೆ ಅಧ್ಯಕ್ಷ ರಾಜೇಶ್ ನಿಡ್ಡೋ, ಅಡೆಂಜ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೇಶವ ಗೌಡ ಬಳ್ಳೇರಿ, ನೂಜಿಬಾಳ್ತಿಲ ಗ್ರಾ.ಪಂ. ಸದಸ್ಯರಾದ ರಜಿತ ಪದ್ಮನಾಭ, ವಲ್ಸ ಕೆ.ಜೆ., ಅಮ್ಮಣಿ ಜೋಸೆಫ್, ರಾಮಚಂದ್ರ ಗೌಡ, ಹರೀಶ್ ಎನ್., ಹೊನ್ನಮ್ಮ, ಜಾನಕಿ, ಸೇರಿದಂತೆ ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳೆಯರು, ಸ್ತ್ರೀ ಶಕ್ತಿ ಸಂಘದ ಮಹಿಳೆಯರು, ದಲಿತ ಮುಖಂಡರು ವಿವಿಧ ಸಂಘ ಸಂಸ್ಥೆಯವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಹೆಚ್ಚುವರಿ ಪೊಲೀಸರ ಆಗಮನ
ಪ್ರತಿಭಟನೆಯ ಕಾವು ಏರುತ್ತಿರುವಂತೆಯೇ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು. ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತನಿರೀಕ್ಷಕ ಅನಿಲ್ ಕುಲಕರ್ಣಿ ಹಾಗೂ ಕಡಬ ಎಸ್‌ಐ ಪ್ರಕಾಶ್ ದೇವಾಡಿಗ ಅವರು ಬಂದೋಬಸ್ತ್‌ನ ನೇತೃತ್ವ ವಹಿಸಿದ್ದರು.
ಇಂದು ನೂಜಿಬಾಳ್ತಿಲ ಬಂದ್‌ಗೆ ಕರೆ
ಮದ್ಯದಂಗಡಿಯ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರತಿಭಟನಕಾರರು ಬುಧವಾರ ನೂಜಿಬಾಳ್ತಿಲ ಪೇಟೆ ಬಂದ್‌ಗೆ ಕರೆ ನೀಡಿದ್ದಾರೆ. ಮಾತ್ರವಲ್ಲದೇ ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಗ್ರಾಮದ ಗ್ರಾಮಸ್ಥರು ಬುಧವಾರ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದಿರಲು ನಿರ್ಧರಿಸಿದ್ದಾರೆ. ಮಕ್ಕಳು ಕೂಡ ಹೆತ್ತವರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಿಸಿರುವ ಪ್ರತಿಭಟನಕಾರರು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

LEAVE A REPLY