ಡಿಜಿಟಲ್ ಪಾವತಿಗೆ ಮತ್ತೊಂದು ಆಪ್: ಬಂತು ಗೂಗಲ್ ತೇಜ್ ಬಿಡುಗಡೆ

ಹೊಸದಿಲ್ಲಿ: ಗೂಗಲ್ ತನ್ನ ಯುಪಿಐ ಆಧಾರಿತ ಡಿಜಿಟಲ್ ಪಾವತಿ ಆಪ್ ತೇಜ್ ಅನ್ನು ಸೋಮವಾರ ದೇಶದಲ್ಲಿ ಪರಿಚಯಿಸಿದೆ.
ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಸರಕು ಮತ್ತು ಸೇವೆಗಳಿಗೆ ಪಾವತಿ ಮಾಡಬಹುದು. ಮಾತ್ರವಲ್ಲದೇ, ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ವ್ಯಕ್ತಿಯಿಂದ ವ್ಯಕ್ತಿಗೆ ಹಣ ಪಾವತಿಯನ್ನು ಮಾಡಬಹುದು. ಗೂಗಲ್‌ನ ತೇಜ್, ಹೆಚ್ಚಿನ ಭಾಗ ಎನ್‌ಪಿಸಿಐನ ಭೀಮ್ ಆಪ್‌ನಂತಿದೆ ಎನ್ನಲಾಗಿದೆ. ತೇಜ್ ನಿರ್ಮಿಸಲು ಗೂಗಲ್, ರಾಷ್ಟ್ರೀಯ ಪಾವತಿಗಳ ನಿಗಮದ (ಎನ್‌ಪಿಸಿಐ) ಸಹಾಯವನ್ನು ಪಡೆದಿದೆ.
ಗೆಳೆಯರಿಗೆ ಹಣ ಕಳುಹಿಸಿ, ತಕ್ಷಣವೇ ಪಾವತಿಗಳನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಸ್ವೀಕರಿಸಿ ಮತ್ತು ಹತ್ತಿರದ ಕೆಫೆಗಳಿಗೆ ತೇಜ್ ಜೊತೆ ಪಾವತಿಸಿ, ಭಾರತಕ್ಕಾಗಿ ಗೂಗಲ್‌ನ ಹೊಸ ಡಿಜಿಟಲ್ ಪಾವತಿ ಆಪ್ ಎಂದು ಗೂಗಲ್ ಪ್ಲೇಸ್ಟೋರ್‌ನಲ್ಲಿ ತೇಜ್ ಆಪ್‌ನ ವಿವರಣೆಯಲ್ಲಿ ಬರೆದಿದೆ.
ಎಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್‌ಗಳೊಂದಿಗೆ ಗೂಗಲ್ ಪಾಲುದಾರಿಕೆ ಮಾಡಿದೆ ಮತ್ತು ಎಲ್ಲಾ ಪ್ರಮುಖ ಸ್ಮಾರ್ಟ್‌ಫೋನ್‌ಗಳನ್ನು ತೇಜ್ ಆಪ್ ಸಂಪರ್ಕಿಸುತ್ತದೆ. ಹಾಗಾಗಿ ನೀವು ಯಾರಿಗೆ ಬೇಕಾದರೂ ಹಣ ಪಾವತಿಸಬಹುದು ಮತ್ತು ಸ್ವೀಕರಿಸಬಹುದು. ಇಂಗ್ಲೀಷ್, ಹಿಂದಿ, ಬೆಂಗಾಳಿ, ಗುಜರಾತಿ, ಕನ್ನಡ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ತೇಜ್ ಹೊಂದಿದೆ. ಈ ಆಪ್ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ.
ಗೂಗಲ್ ತೇಜ್ ಬಗ್ಗೆ ತಿಳಿಯಬೇಕಾದ ವೈಶಿಷ್ಟ್ಯಗಳು
1. ಸರಕು ಮತ್ತು ಸೇವೆಗಳಿಗೆ ಪಾವತಿಸುವುದಲ್ಲದೇ, ವ್ಯಕ್ತಿಯಿಂದ ವ್ಯಕ್ತಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕವೂ ಹಣ ಪಾವತಿಸಬಹುದು. ಹಣ ಸ್ವೀಕರಿಸಲೂ ಸಾಧ್ಯ.
2. ಹಣ ಸಂಗ್ರಹ ಮಾಡಿಕೊಳ್ಳಲು ವ್ಯಾಲೆಟ್‌ನಂತೆ ತೇಜ್ ಆಪ್‌ನಲ್ಲಿ ಯಾವುದೇ ಆಯ್ಕೆಗಳಿಲ್ಲ. ಆದರೆ, ನೀವು ತೇಜ್ ಆಪ್ ಹೊಂದಿರದ ವ್ಯಕ್ತಿಗೂ ಹಣ ಪಾವತಿಸಬಹುದು. ತೇಜ್ ಆಪ್ ಇಲ್ಲವಾದರೂ ಆ ವ್ಯಕ್ತಿ ಬಳಿ ಯುಪಿಐ ಇರಬೇಕು.
3. ಎಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್‌ಗಳೊಂದಿಗೆ ಗೂಗಲ್ ಪಾಲುದಾರಿಕೆ ಮಾಡಿದೆ.
4. ಇಂಗ್ಲೀಷ್, ಹಿಂದಿ, ಬೆಂಗಾಳಿ, ಗುಜರಾತಿ, ಕನ್ನಡ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳು ಲಭ್ಯವಿರುತ್ತವೆ.
5. ಟೆಕ್‌ಕ್ರಂಚ್ ಎಂಬ ತಂತ್ರಜ್ಞಾನ ವೆಬ್‌ಸೈಟ್ ಪ್ರಕಾರ, ಪ್ರತೀ ದಿನಕ್ಕೆ ೧ ಲಕ್ಷ ರೂ. ತನಕ ವಹಿವಾಟು ಮಿತಿ ಇರಲಿದೆ ಮತ್ತು ದಿನಕ್ಕೆ ೨೦ ವಹಿವಾಟುಗಳನ್ನು ನಡೆಸಬಹುದು. ವ್ಯವಹಾರ ಬಳಕೆದಾರರಿಗೆ ತೇಜ್‌ನಲ್ಲಿ ತಿಂಗಳಿಗೆ ೫೦,೦೦೦ ರೂ. ತನಕ ಮಿತಿ ಇರುತ್ತದೆ. ಅದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.
6. ಕ್ಯಾಶ್ ಮೋಡ್ ಎಂಬ ಆಯ್ಕೆಯನ್ನು ಬಳಸಿ ತೇಜ್ ಮೂಲಕ ಬ್ಯಾಂಕ್ ಖಾತೆ ಅಥವಾ ಮೊಬೈಲ್ ಸಂಖ್ಯೆ ಮಾಹಿತಿ ಪಡೆಯದೇ ಹಣ ಪಾವತಿಸಬಹುದು.
7. ಆಪ್ ಬಳಕೆದಾರರ ಭದ್ರತೆಗಾಗಿ ೪ ಅಂಕೆಗಳ ಸೆಕ್ಯುರಿಟಿ ಪಿನ್ ಮತ್ತು ಪ್ರತೀ ಬಾರಿ ಆಪ್ ತೆರೆಯಬೇಕಾದರೆ ಸ್ಕ್ರೀನ್ ಅಥವಾ ಪ್ಯಾಟರ್ನ್ ಲಾಕ್ ಇರುತ್ತದೆ.
8. ಒಬ್ಬ ಬಳಕೆದಾರನಿಗೆ ಇನ್ನೊಬ್ಬ ಬಳಕೆದಾರ ಹಣ ಪಾವತಿಸುವ ಮುಂಚೆ ಆಪ್ ಕ್ಯೂಆರ್ ಸ್ಕಾ ನ್ ಬಳಕೆ ಮಾಡುತ್ತದೆ.
ಮುಂಬರುವ ವೈಶಿಷ್ಟ್ಯಗಳು
1. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿ
2. ಡಿಟಿಎಚ್‌ನಂತಹಾ ಸೇವೆಗಳ ಹಣ ಪಾವತಿಗೆ ರಿಮೈಂಡರ್ ಸೆಟ್ ಮಾಡುವುದು
ಗೂಗಲ್ ತೇಜ್ ಹೇಗೆ ಕಾರ್ಯನಿರ್ವಹಿಸುತ್ತದೆ ?
ಅಪ್ಲಿಕೇಶನ್‌ಗೆ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿ ನೋಂದಣಿ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನೀಡಿ ಸೈನ್ ಇನ್ ಮಾಡಬೇಕು. ಬಳಕೆದಾರರು ಎಸ್‌ಎಂಎಸ್ ಮೂಲಕ ಒಟಿಪಿ ಪಡೆಯುತ್ತಾರೆ. ಇ-ಮೇಲ್ ಐಡಿ ನೀಡುವ ಮೂಲಕ ನೋಂದಣಿ ಪ್ರಕ್ರಿಯೆ ಮುಗಿಯುತ್ತದೆ. ತೇಜ್ ಮೂಲಕ ಬಿಲ್‌ಗಳನ್ನು ಪಾವತಿಸಬಹುದು, ಆಪ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡಿದ ಬಳಿಕ ನೇರ ಬ್ಯಾಂಕ್ ಖಾತೆಗೆ ಹಣ ಪಾವತಿ ಮತ್ತು ಸ್ವೀಕರಿಸಬಹುದು. ಇದಲ್ಲದೇ, ಗೂಗಲ್ ತೇಜ್ ಆಪ್ ಮೂಲಕ ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ ಎಸ್‌ಎಂಎಸ್ ಕೂಡ ಕಳುಹಿಸಲು ಆಯ್ಕೆಯಿದೆ. ಆಪ್ ಯುಪಿಐ ಪಿನ್ ಸಂಖ್ಯೆ ಕೇಳುತ್ತದೆ. ಅದನ್ನು ನೀಡಿದ ಬಳಿಕವೇ ಪಾವತಿಗಳನ್ನು ಆರಂಭಿಸಬಹುದು.

LEAVE A REPLY