ವಿಶ್ವಸಂಸ್ಥೆ ಮಹಾಸಭೆ: ನ್ಯೂಯಾರ್ಕ್‌ಗೆ ಭೇಟಿ ನೀಡಿದ ಸುಷ್ಮಾ ಸ್ವರಾಜ್

ನ್ಯೂಯಾರ್ಕ್: ವಿಶ್ವಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಭಾರತವನ್ನು ಪ್ರತಿನಿಧಿಸುವುದಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ಇಲ್ಲಿಗೆ ಆಗಮಿಸಿದ್ದಾರೆ.
ಒಂದು ವಾರದ ಕಾಲ ಅವರು ಇಲ್ಲಿ ಇರಲಿದ್ದು, ಈ ಸಂದರ್ಭದಲ್ಲಿ ಅವರು ವಿಶ್ವ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆ ಇದೆ.
ವಿಶ್ವಸಂಸ್ಥೆಯ ವಾರ್ಷಿಕ ಮಹಾಧಿವೇಶನಕ್ಕೆ ಆಗಮಿಸುವ ಇತರ ದೇಶಗಳ ನಾಯಕರ ಜತೆ ಸುಷ್ಮಾ ಸ್ವರಾಜ್ ೨೦ ದ್ವಿಪಕ್ಷೀಯ ಹಾಗೂ ತ್ರಿಪಕ್ಷೀಯ ಮಾತುಕತೆಗಳನ್ನು ನಡೆಸುವರೆದೆನ್ನಲಾಗಿದೆ.
ಅಮೆರಿಕಕ್ಕೆ ಭಾರತೀಯ ರಾಯಭಾರಿ ಆಗಿರುವ ನವತೇಜ್ ಸರ್ನಾ ಮತ್ತು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿ ಸಯ್ಯದ್ ಅಕ್ಬರುದ್ದೀನ್ ಸುಷ್ಮಾ ಸ್ವರಾಜ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಅಮೆರಿಕನ್ ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್‌ಸನ್ ಹಾಗೂ ಜಪಾನ್ ವಿದೇಶಾಂಗ ಸಚಿವ ತರೊ ಕೊನೊ ಅವರೊಂದಿಗೆ ಸುಷ್ಮಾ ಸೋಮವಾರ ತ್ರಿಪಕ್ಷೀಯ ಸಭೆ ನಡೆಸಿ ವಿವಿಧ ವಿಚಾರಗಳ ಕುರಿತು ಸಮಾಲೋಚಿಸಿದರು. ಭಾರತ – ಅಮೆರಿಕ – ಜಪಾನ್ ನಡುವೆ ತ್ರಿಪಕ್ಷೀಯ ಸಹಕಾರ ವರ್ಧನೆ ಮತ್ತು ಚೀನಾ ಪ್ರಾದೇಶಿಕವಾಗಿ ಬಲ ಪ್ರದರ್ಶಿಸುವ ಬಗ್ಗೆ ಅವರು ಪರ್ಯಾಲೋಚಿಸಿದ್ದಾರೆ.
ವಿಶ್ವಸಂಸ್ಥೆ ಸುಧಾರಣೆ ಕುರಿತು ಅಮೆರಿಕ ಆತಿಥೇಯನಾಗಿ ಕರೆದಿರುವ ಸಭೆಯಲ್ಲಿ ಸುಷ್ಮಾ ಪಾಲ್ಗೊಂಡು ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವಕ್ಕಾಗಿ ಆಗ್ರಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ.
ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬೆಂಬಲಿತ ಸುಧಾರಣಾ ಪ್ರಯತ್ನಗಳನ್ನು ಭಾರತ ಸಹಿತ ೧೨೦ ದೇಶಗಳು ಬೆಂಬಲಿಸಿವೆ. ವಿಶಾಲ ತಳಹದಿಯ ಮತ್ತು ಸರ್ವ ವಿಚಾರವನ್ನೊಳಗೊಂಡ ಸುಧಾರಣೆ ಆಗಲೆಂದು ಭಾರತ ಹೇಳಿದೆ. ವಿಶ್ವಸಂಸ್ಥೆ ಸುಧಾರಣೆ ಬರೇ ಅದರ ಕಾರ್ಯಾಲಯಕ್ಕಷ್ಟೇ ಸೀಮಿತವಾಗದಿರಲೆಂದು ಭಾರತ ಅಭಿಪ್ರಾಯಪಟ್ಟಿದೆ.
ಅಮೆರಿಕದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಂಗುವ ವಾರ ಕಾಲದ ಕಾರ್ಯಕ್ರಮಗಳ ಮುನ್ನೋಟದ ಬಗ್ಗೆ ವಿವರಿಸಿದ ಅಕ್ಬರುದ್ದೀನ್, ಹವಾಮಾನ ಬದಲಾವಣೆ, ಭಯೋತ್ಪಾದನೆ, ಜನರನ್ನು ಕೇಂದ್ರಿತವಾದ ವಲಸೆ ಮತ್ತು ಶಾಂತಿಪಾಲನೆಗಳು ಈ ವರ್ಷ ಭಾರತ ಗಮನಹರಿಸಿರುವ ಪ್ರಮುಖ ವಿಚಾರಗಳೆಂದು ಹೇಳಿದರು.
ಹವಾಮಾನ ಬದಲಾವಣೆ ಬಗ್ಗೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ರಚಿಸಿದ ಆಯ್ದ ದೇಶಗಳ ವಿಶೇಷ ಸಮಿತಿಯನ್ನು ಸುಷ್ಮಾ ಕೂಡ ಒಳಗೊಂಡಿದ್ದಾರೆ. ಸೆ. 23ರಂದು ಅವರು ವಿಶ್ವಸಂಸ್ಥೆ ಮಹಾಸಭೆಯಲ್ಲಿ ಮಾತನಾಡುವರೆಂದು ಅಕ್ಬರುದ್ದೀನ್ ತಿಳಿಸಿದರು.
ಭಾರತ, ಅಮೆರಿಕ, ಜಪಾನ್ ಮಾತುಕತೆ
ವಿಶ್ವಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಗಮಿಸಿದ್ದು, ಸೆ.24ರ ತನಕ ಅವರು ಇಲ್ಲಿರಲಿದ್ದಾರೆ. ಈ ವೇಳೆ 20 ದ್ವಿಪಕ್ಷೀಯ ಹಾಗೂ ತ್ರಿಪಕ್ಷೀಯ ಸಭೆಗಳಲ್ಲಿ ಮಾತುಕತೆ ನಡೆಸುವರು. ಈ ಪ್ರದೇಶದಲ್ಲಿ ಚೀನಾದ ಬಲ ಪ್ರಯೋಗಕ್ಕಾಗಿ ಅದು ನಡೆಸುವ ಮೇಲಾಟ ವಿಚಾರದಲ್ಲಿ ಸುಷ್ಮಾ ನ್ಯೂಯಾರ್ಕ್‌ನಲ್ಲಿ ಅಮೆರಿಕ ಮತ್ತು ಜಪಾನ್ ಜತೆ ತ್ರಿಪಕ್ಷೀಯ ಪರ್ಯಾಲೋಚನೆ ನಡೆಸುತ್ತಾರೆ.
ಸೆ. ೨೩ರಂದು ಸುಷ್ಮಾ ವಿಶ್ವಸಂಸ್ಥೆ ಮಹಾ ಸಭೆಯಲ್ಲಿ ಮಾತನಾಡಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆತಿಥೇಯದಲ್ಲಿ ನಡೆವ ವಿಶ್ವ ಸಂಸ್ಥೆ ಸುಧಾರಣೆ ಕುರಿತ ಉನ್ನತ ಮಟ್ಟದ ಸಭೆಯಲ್ಲೂ ಸುಷ್ಮಾ ಪಾಲ್ಗೊಳುವರು. ಭೂತಾನ್ ಪ್ರಧಾನಿ ಶೆರಿಂಗ್ ತಾಬ್‌ಗೇ, ಟ್ಯುನಿಶಿಯಾ ವಿದೇಶಾಂಗ ಸಚಿವ ಖೇಮೈಸ್ ಝಿನೌ, ಡೇನಿಸ್ ವಿದೇಶಾಂಗ ಸಚಿವ ಆಂಡರ್‍ಸ್ ಸ್ಯಾಮ್ವೆಲ್ ಸೆನ್ಸ್ ಲಾಟ್ಟಿಯ ವಿದೇಶಾಂಗ ಸಚಿವ ಎಡ್ಗರ್‍ಸ್ ಮತ್ತು ಬೊಲಿವಿಯದ ವಿದೇಶಾಂಗ ಸಚಿವ ಫೆರ್ನಾಂಡೊ ಮಮಾನಿ ಅವರನ್ನೂ ಸುಷ್ಮಾ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

 

LEAVE A REPLY