ರಾಷ್ಟ್ರೀಯ ತನಿಖಾ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ವೈ.ಸಿ. ಮೋದಿ ನೇಮಕ

ಹೊಸದಿಲ್ಲಿ: 2002ರ ಗುಜರಾತ್ ಗಲಭೆ ಪ್ರಕರಣಗಳ ತನಿಖೆ ನಡೆಸಲು ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡದಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ವೈ.ಸಿ. ಮೋದಿ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಖ್ಯಸ್ಥರನ್ನಾಗಿ ಸೋಮವಾರ ನೇಮಿಸಲಾಗಿದೆ.
ಭಯೋತ್ಪಾದನೆ ಮತ್ತು ಭಯೋತ್ಪದಾನೆ ಕೃತ್ಯಗಳಿಗೆ ಹಣ ಒದಗಿಸಿದಂತಹ ಪ್ರಕರಣಗಳ ತನಿಖೆಯ ಕಾರ್ಯಭಾರವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿದೆ. ಸಂಪುಟದ ನೇಮಕಾತಿಗಳ ಸಮಿತಿ(ಎಸಿಸಿ) ಎನ್‌ಐಎಯ ಮಹಾ ನಿರ್ದೇಶಕರಾಗಿ ಮೋದಿ ಅವರ ನೇಮಕಾತಿಯನ್ನು ಅನುಮತಿಸಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನೇಮಕಾತಿ ಆದೇಶವನ್ನು ಹೊರಡಿಸಿತ್ತು.
ಇನ್ನೋರ್ವ ಹಿರಿಯ ಐಪಿಎಸ್ ಅಧಿಕಾರಿ ರಜನಿಕಾಂತ್ ಮಿಶ್ರಾ ಅವರನ್ನು ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಒ)ದ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. 2021 ಮೇ 31ರಂದು ನಿವೃತ್ತಿಯಾಗುವ ವರೆಗೆ ಮೋದಿ ಆ ಹುದ್ದೆಯಲ್ಲಿ ಇರಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ತಕ್ಷಣದಿಂದಲೇ ಜಾರಿಯಾಗುವಂತೆ ಎನ್‌ಐಎಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್‌ಡಿ)ಯಾಗಿ ಮೋದಿಯವರ ನೇಮಕಾತಿಗೆ ಕೂಡಾ ಎಸಿಸಿ ಅನುಮತಿಸಿದೆ. ಅಸ್ಸಾಂ – ಮೇಘಾಲಯ ಕೇಡರ್‌ನ 1984ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಮೋದಿ ಪ್ರಸಕ್ತ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯಲ್ಲಿ ವಿಶೇಷ ನಿರ್ದೇಶಕರಾಗಿದ್ದಾರೆ.
ಅ. 30ರಂದು ಶರದ್ ಕುಮಾರ್ ಅವರ ಅವಧಿ ಮುಗಿಯಲಿದ್ದು ಅವರಿಂದ ಮೋದಿ ಅಕಾರ ವಹಿಸಿಕೊಳ್ಳಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

LEAVE A REPLY