ಯಕ್ಷಗಾನ ಲೋಕದ ಮಹಾನ್ ಪ್ರತಿಭೆ ಕುಬಣೂರು ಶ್ರೀಧರ್ ರಾವ್ ಇನ್ನಿಲ್ಲ

ಮಂಗಳೂರು/ಬೆಂಗಳೂರು: ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತ, ಕಟೀಲು ನಾಲ್ಕನೇ ಮೇಳದ ಪ್ರಧಾನ ಭಾಗವತ ಕುಬಣೂರು ಶ್ರೀಧರ್ ನಿಧನರಾಗಿದ್ದಾರೆ.
ತೀವ್ರ ಜ್ವರದ ಬಾಧೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ರಾತ್ರಿ ಅವರು ವಿಧಿವಶರಾಗಿದ್ದು, ಕುಬಣೂರರ ನಿಧನ ಯಕ್ಷರಂಗಕ್ಕೆ, ಯಕ್ಷಗಾನ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ.
ಸಿಂಗಾಪೂರ್‌ನಲ್ಲಿ ನೆಲೆಸಿರುವ ತಮ್ಮ ಪುತ್ರಿ ಶ್ರೀವಿದ್ಯಾರ ಮನೆಗೆ ಪತ್ನಿಯೊಂದಿಗೆ ತೆರಳಿದ್ದ ಕುಬಣೂರು, ಇದೇ 28ರಂದು ಸ್ವದೇಶಕ್ಕೆ ಮರಳುವರಿದ್ದರು. ಆದರೆ ಅವರಿಗೆ ಜ್ವರ ಬಾಧಿಸಿದ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ಬೆಂಗಳೂರಿಗೆ ಕರೆ ತರಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಂಗೀತ ಶೈಲಿ
ಸಂಗೀತ ಶೈಲಿಯನ್ನು ಭಾಗವತಿಕೆಯಲ್ಲಿ ಬಳಸಿ ಯಶ್ವಿಯಾಗಿದ್ದ ಲುಬಣೂರು, ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ದಾಮೋದರ ಮಂಡೆಚ್ಚರ ನಂತರ ಸಂಗೀತ ಶೈಲಿಯ ಭಾಗವತರೆಂದೇ ಖ್ಯತರಾಗಿದ್ದರು.
ಕುಬಣೂರರ ಬಗ್ಗೆ…
1956ರಲ್ಲಿ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಜನಿಸಿದ ಕುಬಣೂರರು, ಬೆಳೆದದ್ದು ತಮ್ಮ ಅಜ್ಜನ ಮನೆಯಾದ ಕುಬಣೂರಿನಲ್ಲಿ. ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮ ಪದವೀಧರರದ ಅವರ ಒಲವು ಮಾತ್ರ ಸಂಗೀತ ಕ್ಷೇತ್ರದತ್ತ ಇತ್ತು. ಯಕ್ಷಗಾನ ಕ್ಷೇತ್ರದತ್ತ ತೀವ್ರ ಆಸಕ್ತಿ ಹೊಂದಿದ ಅವರು, ಭಾಗವತರಾಗಿ ವೃತ್ತಿ ಬದುಕನ್ನು ಆರಿಸಿಕೊಂಡರು. ಕರ್ಣಾಟಕ ಸಂಗೀತದಲ್ಲಿ ಪ್ರಭುತ್ವ ಸಾಧಿಸಿದ್ದ ಕಾರಣ, ಭಾಗವತಿಕೆಯಲ್ಲಿ ಸಂಗೀತ ಶೈಲಿ ಅಳವಡಿಸಿ ಯಕ್ಷ ರಂಗದಲ್ಲಿ ಯಶಸ್ವಿಯಾಗಿದ್ದರು.
ಐ. ರಘುಮಾಸ್ತರರಿಂದ ಕರ್ನಾಟಕ ಸಂಗೀತ ಅಭ್ಯಾಸವನ್ನೂ, ಅಡ್ಕಸ್ಥಳ ರಾಮಚಂದ್ರ ಭಟ್ಟರಿಂದ ಮದ್ದಳೆವಾದನವನ್ನೂ, ಉಪ್ಪಳ ಕೃಷ್ಣ ಮಾಸ್ತರ್ ಹಾಗೂ ಬೇಕೂರು ಕೇಶವರಿಂದ ನಾಟ್ಯಾಭ್ಯಾಸ, ಟಿ. ಗೋಪಾಲಕೃಷ್ಣ ಮಯ್ಯ ಹಾಗೂ ಮಾಂಬಾಡಿ ನಾರಾಯಣ ಭಟ್ಟರಿಂದ ಯಕ್ಷಗಾನ ಭಾಗವತಿಕೆಯನ್ನೂ ಅವರು ಕಲಿತಿದ್ದರು. ಯಕ್ಷಗಾನದ ರಾಗತಾಳಗಳ ಜ್ಞಾನ, ರಂಗಪ್ರಜ್ಞೆ, ರಂಗದ ನಡೆ, ಪ್ರಸಂಗಗಳ ಕಂಠಪಾಟ, ಪೌರಾಣಿಕ ಜ್ಞಾನ, ಛಂದಸ್ಸಿನ ಅಪಾರ ಜ್ಞಾನ ಎಲ್ಲವೂ ಕುಬಣೂರರಿಗೆ ಕರಗತವಾಗಿತ್ತು.
ನಂದಾವರ, ಅರುವ, ಬಪ್ಪನಾಡು, ಕದ್ರಿ, ಕಾಂತಾವರ ಹೀಗೆ ವಿವಿಧ ಮೇಳಗಳಲ್ಲಿಕೃಷಿ ನಡೆಸಿ, ಮೂವತ್ತ ಮೂರು ವರುಷಗಳ ತಿರುಗಾಟದ ಅನುಭವದೊಂದಿಗೆ ಕಳೆದ ಇಪ್ಪತ್ತೆರಡು ವರ್ಷಗಳಿಂದ ಶ್ರೀ ಕಟೀಲು ನಾಲ್ಕನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದರು.
ಪ್ರಸಂಗ ಕತೃ
ಶ್ರೀನಿವಾಸ ಕಲ್ಯಾಣ, ಮಾನಿಷಾದ, ಕೊಲ್ಲೂರು ಕ್ಷೇತ್ರ ಮಹಾತ್ಮೆ, ಸಾರ್ವಭೌಮ ಸಂಕರ್ಷಣ, ದಾಶರಥಿ ದರ್ಶನ ಮುಂತಾದ ಪ್ರಸಂಗಗಳನ್ನು ಕಟೀಲು ಮೇಳದಲ್ಲಿ ಪ್ರಥಮವಾಗಿ ಪ್ರದರ್ಶಿಸಿದ ಕೀರ್ತಿ ಕುಬಣೂರದ್ದು. ದಾಶರಥಿ ದರ್ಶನ, ಸಾರ್ವಭೌಮ ಸಂಕರ್ಷಣ, ಮನುವಂಶವಾಹಿನಿ, ಮಹಾಸತಿ ಮಂದಾಕಿನಿ, ಕಾಂತಾವರ ಕ್ಷೇತ್ರ ಮಹಾತ್ಮೆ, ಪಟ್ಟಣ ಮಣೆ ಮುಂತಾದ ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಕಲ್ಲಾಡಿ ವಿಠಲ ಶೆಟ್ಟರ ಜೀವನ ಚರಿತ್ರೆಯ ಯಕ್ಷವಿಜಯ ವಿಠಲ ಕೃತಿಯ ಸಂಪಾದಕರಾಗಿ, ಬಯಲಾಟ, ತಾಳಮದ್ದಳೆ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ, ಯಕ್ಷಗಾನ ವಿಚಾರಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಪಾಲ್ಗೊಂಡಿದ್ದರು. ಸ್ವತಃ ಅರ್ಥದಾರಿ. ವೇಷಧಾರಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.

LEAVE A REPLY