ಗೌರಿ ಹತ್ಯೆ ಪ್ರಕರಣ ನೆಪದಲ್ಲಿ ಆರೆಸ್ಸೆಸ್‌ಗೆ ಕಳಂಕ ಹಚ್ಚುವ ಯತ್ನ : ರಾಹುಲ್, ಸೋನಿಯಾ, ಯೆಚೂರಿ  ವಿರುದ್ಧ ಕ್ರಿಮಿನಲ್ ಮಾನನಷ್ಟ ದಾವೆ

ಮುಂಬೈ: ಪತ್ರಕರ್ತೆ, ಎಡವಾದಿ ಗೌರಿ ಲಂಕೇಶ್ ಕೊಲೆ ಕೃತ್ಯವನ್ನು ನೆವವಾಗಿಟ್ಟುಕೊಂಡು  ಬಿಜೆಪಿ, ಆರೆಸ್ಸೆಸ್‌ಗೆ ಕಳಂಕ ಹಚ್ಚಲು ಯತ್ನಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯೊಂದನ್ನು ಹೂಡಲಾಗಿದೆ.
ಮಹಾರಾಷ್ಟ್ರ ರಾಜಧಾನಿ ಮುಂಬೈಯ ದಾದರ್‌ನ ವಕೀಲರೂ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರೂ ಆಗಿರುವ ಧುತಿಮಾನ್ ಜೋಷಿ  (27)ಎಂಬ ತರುಣ ಅಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯಡಿ ರಾಹುಲ್, ಸೋನಿಯಾ, ಯೆಚೂರಿ ವಿರುದ್ಧ ದೂರು ದಾಖಲಿಸಿ ಅವರಿಗೆ ಸಮನ್ಸ್ ನೀಡುವಂತೆ ಕೋರಲಾಗಿದೆ. ಈ ಮೂವರು ಯಾವುದೇ ಆಧಾರ ನೀಡದೆ ಗೌರಿ ಲಂಕೇಶ್ ಹತ್ಯೆ ಆರೆಸ್ಸೆಸ್ ಕೃತ್ಯ ಎಂದು ಆರೋಪಿಸಿದ್ದರು.
ಗೌರಿ ಹತ್ಯೆಯ ಹಿಂದೆ ಆರೆಸ್ಸೆಸ್ ಹೆಸರನ್ನು ಎಳೆದು ತಂದ ರಾಹುಲ್, ಯೆಚೂರಿ ಈ ಬಗ್ಗೆ ಆರೋಪಿಸಿ ಹೇಳಿಕೆಗಳನ್ನು ನೀಡಿದ ಬಳಿಕ ನನ್ನ ಅನೇಕ ಮಿತ್ರರು , ಆಕೆಯ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರ ಇದೆಯೇ ಎಂದು ನನ್ನನ್ನು ಕೇಳುತ್ತಿದ್ದಾರೆ. ಅಮೆರಿಕದಿಂದ ನನ್ನ ಮಿತ್ರರ ಪೈಕಿ ಒಬ್ಬರು ಮತ್ತು ಕೆಲವು ವಕೀಲ ಮಿತ್ರರು ಅವರ ಮಾತನ್ನು ನಂಬಿ ಆರೆಸ್ಸೆಸ್ಸನ್ನು ದೂಷಿಸಿದ್ದಾರೆ. ಇದರಿಂದ ನನಗೆ ತೀವ್ರ ನೋವಾಗಿದೆ.ಇವರ ಹೇಳಿಕೆಯಿಂದ ನಾನು ಭಾಗವಾಗಿರುವ ಸಂಘಟನೆಯ ಬಗ್ಗೆ ಸಾರ್ವಜನಿಕರ ದೃಷ್ಟಿಯಲ್ಲಿ ತಪ್ಪು ಭಾವನೆ ನಿವಾರಣೆಯಾಗಬೇಕಾಗಿದೆ.ಅವರು ಇಂತಹ ಹೇಳಿಕೆಗಳನ್ನು ನೀಡದಂತೆ ಮಾಡಬೇಕಾಗಿದೆ . ಇದಕ್ಕಾಗಿ ನಾನು ದಾವೆ ಹೂಡಿದ್ದೇನೆ ಎಂದು ಜೋಷಿ ಹೇಳಿದರು.
ಅವರ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ. ಯಾವುದೇ ತನಿಖಾ ಅಂಶಗಳು ಹತ್ಯೆಯ ಹಿಂದೆ ಆರೆಸ್ಸೆಸ್ ಇರುವ ಬಗ್ಗೆ ಹೇಳಿಲ್ಲ. ಆದ್ದರಿಂದ ನನ್ನ ದೂರನ್ನು ಸ್ವೀಕರಿಸಬೇಕೆಂದು ನ್ಯಾಯಾಲಯವನ್ನು ಅವರು ಕೋರಿದ್ದಾರೆ.
ಭೀವಂಡಿಯಲ್ಲಿ ಆರೆಸ್ಸೆಸ್ ಸ್ವಯಂಸೇವಕರೊಬ್ಬರು ದಾಖಲಿಸಿದ ಮಾನನಷ್ಟ  ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯನ್ನು ಪ್ರತಿನಿಧಿಸುತ್ತಿರುವ ವಕೀಲ ನಾರಾಯಣ್ ಅಯ್ಯರ್, ವಿಷಯವೀಗ ಆರಂಭಿಕ ಹಂತದಲ್ಲಷ್ಟೇ ಇದೆ.ಅವರು ದೂರನ್ನು ಸಲ್ಲಿಸಿದ್ದಾರಷ್ಟೇ.  ಈ ಬಗ್ಗೆ ನ್ಯಾಯಾಲಯದಿಂದ  ಯಾವುದೇ  ಮಾಹಿತಿ ಬಂದಿಲ್ಲ.ಸಾಮಾನ್ಯವಾಗಿ ಕೇಸು ದಾಖಲಿಸಿದ ಸಂದರ್ಭ ಕೆಲವು ವಿ ವಿಧಾನಗಳು ನಡೆದು ಬಳಿಕ ಸಮನ್ಸ್ ನೀಡಲಾಗುತ್ತದೆ. ನಮಗೆ ಯಾವುದೇ ಸಮನ್ಸ್ ಬಂದಿಲ್ಲ. ಈಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಯಾವುದೇ ಆರೋಪಗಳನ್ನು  ಆಧಾರವಿಲ್ಲದೆ ಅಥವಾ ತನಿಖಾ ಮಾಹಿತಿ ಇಲ್ಲದೆ ಮಾಡುವಂತಿಲ್ಲ. ಇಂತಹ ಆರೋಪ ಮಾಡುವುದು ಮಾನನಷ್ಟ ದಾವೆಗೆ ಆಧಾರವಾಗುತ್ತದೆ ಎಂದು ಜೋಷಿ ಬೊಟ್ಟು ಮಾಡಿದರು. ಆರೆಸ್ಸೆಸ್ ವಿರುದ್ಧ ಯಾರು ಮಾತನಾಡುತ್ತಾರೆಯೋ ಅಂತಹವರನ್ನು ಬಡಿಯಲಾಗುತ್ತದೆ, ದಾಳಿ ಮಾಡಲಾಗುತ್ತದೆ ಹಾಗೂ ಕೊಲ್ಲಲಾಗುತ್ತದೆ ಎಂದು ರಾಹುಲ್ ಗಾಂ ಹೇಳಿದ್ದರು. ಆದರೆ ಅನಂತರ ಕೆಲವು ಹಿರಿಯ  ಕಾಂಗ್ರೆಸ್ ನಾಯಕರು ಈ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರ ಇದೆ ಎಂದು ಹೇಳುವುದು ಸರಿಯಲ್ಲ ಎಂದೂ ಹೇಳಿದ್ದನ್ನೂ ಇಲ್ಲಿ ಸ್ಮರಿಸಬಹುದು.
ಆದಾಗ್ಯೂ ಅವರು ನೋಟಿಸ್ ನೀಡಲಿ.ಇದನ್ನು ರಾಜಕೀಯವಾಗಿ ಮತ್ತು ಕಾನೂನಿನ ನೆಲೆಯಲ್ಲಿ ಎದುರಿಸಲಾಗುವುದು ಎಂದು ಯೆಚೂರಿ ಏಶ್ಯನ್ ಏಜ್‌ಗೆ ತಿಳಿಸಿದ್ದಾರೆ. ರಾಹುಲ್ ಗಾಂಧಿ ಹಾಗೂ ಕಮ್ಯುನಿಸ್ಟ್ ನಾಯಕರು ಯಾವುದೇ ಆಧಾರವಿಲ್ಲದೆ ಆರೆಸ್ಸೆಸ್ ವಿರುದ್ಧ ನಿರಂತರ ಬೇಜವಾಬ್ದಾರಿಯುತ ಆರೋಪಗಳನ್ನು ಮಾಡುವುದು ಸಾಮಾನ್ಯವಾಗಿದೆ. ಆದರೆ ಈ ಕಾಂಗ್ರೆಸ್-ಕಮ್ಯುನಿಸ್ಟ್ ನಾಯಕರು ತಮ್ಮ ವಿರುದ್ಧ ಇಂತಹ  ಆರೋಪಗಳನ್ನು ಸಹಿಸುವುದಿಲ್ಲ . ಈಗಾಗಲೇ ಈ ಇಬ್ಬರು ನಾಯಕರ ವಿರುದ್ಧ ಆರೋಪ ಮಾಡಿದ ಪಕ್ಷೀಯರ ವಿರುದ್ಧ ಅಮಾನತು, ವಜಾದಂತಹ ಕಠಿನ ಕ್ರಮ ಕೈಗೊಳ್ಳಲಾಗಿರುವುದನ್ನು ವಿಶ್ಲೇಷಕರು ಬೊಟ್ಟು ಮಾಡುತ್ತಾರೆ.

LEAVE A REPLY