ಬೆನ್ನು ಹುರಿಯ ಕೊನೆಯ ಭಾಗ ಕಂಗೆಡಿಸುವ ಕಾಕ್ಸಿಡಿನಿಯಾ

 • ಡಾ. ಕರವೀರಪ್ರಭು ಕ್ಯಾಲಕೊಂಡ
  ಬದುಕಿನಲ್ಲಿ ಬೆನ್ನು ನೋವನ್ನು ಒಂದಲ್ಲ ಒಂದು ಸಾರೆ ಅನುಭವಿಸಲೇಬೇಕು. ಬೆನ್ನು ಹುರಿಯ ಕೊನೆಯ ಭಾಗವೇ ಕಾಕ್ಸಿಕ್ಸ್. ಇಲ್ಲಿ ನೋವು ಕಾಣಿಸಿಕೊಂಡರೆ- ಕೂಡಲೂ ಆಗುವುದಿಲ್ಲ. ನಿಲ್ಲಲೂ ಆಗುವುದಿಲ್ಲ. ಬಹಳ ಹೊತ್ತು ನಿಂತಾಗ, ಕಾಲುಗಲು ಶಕ್ತಿ ಉಡುಗಿ ನಡಗುತ್ತವೆ. ಕುಳಿತು ಕೊಳ್ಳಲು ಜಾಗ ಸಿಕ್ಕರೆ ಸ್ವರ್ಗವೇ ಸಿಕ್ಕಷ್ಟು ಖುಷಿ. ಆದರೆ, ಈ ಖುಷಿ ಬಹಳ ಹೊತ್ತು ಇರುವುದಿಲ್ಲ. ಕುಳಿತ ಭಂಗಿಯಿಂದ ಏಳುವುದೆಮದರೆ 70&80 ವಯಸ್ಸಿನ ಮುದುಕರು ಏಳಲು ಮಾಡುವ ಎಲ್ಲ ಕಸರತ್ತುಗಳನ್ನು ಮಾಡಬೇಕಾಗುತ್ತದೆ. ನೋವು ವರ್ಣಿಸಲಸದಳ. ಕುಳಿತರೂ ಕಾಡುವ, ನಿಂತರೂ ಕಾಡುವ ವಿಚಿತ್ರ ಕಾಯಿಲೆಯೇ ‘ಕಾಕ್ಸಿಡಿನಿಯಾ’.
  ಇದಕ್ಕೆ ಲಿಂಗ ತಾರತಮ್ಯವಿಲ್ಲ. ಬಡವ-ಬಲ್ಲಿದರೆಂಬ ಭೇದ ಭಾವವಿಲ್ಲ. ವಯಸ್ಸಿನ ನಿರ್ಬಂಧವಿಲ್ಲ. ಬಣ್ಣ ಬೆಡಗುಗಳ ಬಿನ್ನಾಣವಿಲ್ಲ. ಋತುಗಳಿಗೆ, ಸೀಮೆಗಳಿಗೆ ಸೀಮಿತವಾದುದೂ ಅಲ್ಲ. ಈ ಕಾಯಿಲೆಗೆ ಇಂಗ್ಲಿಷಿನಲ್ಲಿ ‘ಟೇಲ್ ಬೋನ್ ಪೇನ್’ ಎಂದೂ, ವೈದ್ಯಕೀಯ ಪರಿಭಾಷೆಯಲ್ಲಿ ‘ಕಾಕ್ಸಿಡಿನಿಯಾ’ ಅಥವಾ ‘ಕಾಕ್ಸಿಗೊಡಿನಿಯಾ’ ಎನ್ನುತ್ತಾರೆ. ಬೆನ್ನು ಮೂಳೆಯ ಕೊನೆಯ ಭಾಗದ ನೋವಿದು. ಕಾಕ್ಸಿಕ್ಸ್ ಬೆನ್ನು ಮೂಳೆಯ ಕೊನೆಯ ಭಾಗ. ಇಲ್ಲಿ ಕಾಣಿಸಿಕೊಳ್ಳುವ ನೋವೇ ಕಾಕ್ಸಿಡಿನಿಯಾ. ಇದು ಅಸೌಖ್ಯದಿಂದ ಹಿಡಿದು ತೀವ್ರತರ ನೋವಿನ ವಿವಿಧ ಸ್ಥರಗಳಲ್ಲಿ ಬೇರೆ ಬೇರೆ ಜನರನ್ನು ಬೇರೆ ಬೇರೆ ಹಂತಗಳಲ್ಲಿ ಕಾಣಿಸಿಕೊಂಡು ಕಾಡಿಸುವುದು. ಒಂದೇ ವ್ಯಕ್ತಿಯಲ್ಲೂ, ನೋವು ದಿನದ ಬೇರೆ ಬೇರೆ ವೇಳೆಗಳಲ್ಲಿ ಬೇರೆ ಬೇರೆಯಾಗಿರುವುದು ಇದರ ವೈಶಿಷ್ಟ್ಯ.
  ಕಾಕ್ಸಿಡಿನಿಯಾ ನೋವಿನ ಪೇಚಾಟದ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಹಲವಾರು ತಂತ್ರ, ಉಪಾಯಗಳಿಗೆ ಮೊರೆ ಹೋಗುವರು. ಎಲ್ಲರೂ ನಿಂತಾಗ ಕುಳಿತುಕೊಳ್ಳುವರು, ಎಲ್ಲರೂ ಕುಳಿತಾಗ ಎದ್ದು ನಿಲ್ಲುವರು. ಎಲ್ಲರ ದೃಷ್ಟಿ ಇರುವುದೆಂಬ ಮನೋಭಾವದಿಂದ ಇವರು ಹೊರಬರಬೇಕು. ಕೀಳರಿಮೆ ಕಳಚಿಕೊಳ್ಳಬೇಕು. ಇದೊಂದು ಸಹಜ, ಸಾಮಾನ್ಯ ನೋವು ಎಂದು ನಿರ್ಲಕ್ಷಿಸಿ. ಕಾಕ್ಸಿಡಿನಿಯಾ ನೋವು ಅನುಭವಿಸುವುದನ್ನು ಬಿಡಲು ‘ಕಾಕ್ಸಿಕ್ಸ್ ಕುಶನ್’ಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು.
  ಕಾರಣಗಳು: ಕಾಕ್ಸಿಡಿನಿಯಾದಿಂದ ಬಳಲುವವರಲ್ಲಿ ೧/೩ ಜನರಲ್ಲಿ ಕಾರಣ ಗೌಪ್ಯ. ಹೆಂಗಸರಲ್ಲಿ ಇದರ ಕಾಟ ಗಂಡಸರಿಗಿಂತ ಐದು ಪಟ್ಟು ಹೆಚ್ಚು.
  ಲಕ್ಷಣಗಳು:
  ಕುಳಿತುಕೊಳ್ಳುವಾಗ ಅಥವಾ ಕುಳಿತಾಗ ನೋವು ಉಂಟಾಗುವುದು.
  ಬಿರುಸಾದ ಮೇಲ್ಮೆ ಮೇಲೆ ಕುಳಿತಾಗ ಶರೀರದ ಭಾರ ‘ಕೂಡು ಮೂಳೆ’ಗಳ ಮೇಲೆ ಬೀಳುವುದರಿಂದ ಕಾಕ್ಸಿಕ್ಸ್‌ಗೆ ತೊಂದರೆಯಾಗುವುದಿಲ್ಲ. ಅಷ್ಟೇನೂ ನೋವೆನಿಸುವುದಿಲ್ಲ. ಆದರೆ, ಮೆತ್ತನೆಯ ತಳದ ಮೇಲೆ ಕುಳಿತಾಗ ಎಲುಬಿನ ತುದಿಗಳು ಆಚೀಚೆ ಮೆದು ಹಾಸಿಗೆಯನ್ನು ತಳ್ಳುವುದರಿಂದ ಭಾರ ನೇರವಾಗಿ ಕಾಕ್ಸಿಕ್ಸ್ ಮೇಲೆ ಬೀಳುವುದು. ನೋವು ಉಂಟಾಗುವುದು.
  ಕಾಲಿನ ಗುಂಟ ಸೆಳೆಯುವಂತಹ ನೋವು.
  ಚಾಕುವಿನ ಮೇಲೆ ಗೊತ್ತಿಲ್ಲದೆ ಕುಳಿತಾಗ ಉಂಟಾಗುವ ನೋವಿನಂತಹ ತೀವ್ರ ನೋವು ಕಾಣುವುದು. ಗಾಯದ ಮೇಲೆ ಮೆಣಸಿನ ಪುಡಿ ಹಚ್ಚಿದಷ್ಟು ಉರಿ.
  ಕಷ್ಟ ಪಟ್ಟು ಕುಳಿತರೆ ತಕ್ಷಣ ಎದ್ದು ನಿಲ್ಲುವುದು ಇನ್ನೂ ಕಷ್ಟ.
  ಮುಟ್ಟಿನ ಸಮಯದಲ್ಲಿ ನೋವು ಹೆಚ್ಚಾಗುವುದು. ಈಸ್ಟ್ರೋಜನ್ ಹಾರ್ಮೋನುಗಳ ಏರಿಳಿತಗಳೇ ಇದಕ್ಕೆ ಕಾರಣ.
  ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ದುಸ್ಸಾಧ್ಯ.
  ದ್ವಿತೀಯ ಲಕ್ಷಣಗಳು: ಅಕಸ್ಮಾತ್ ಕಾಕ್ಸಿಡಿನಿಯಾ ದೀರ್ಘ ಕಾಲಿಕವಾದರೆ, ದ್ವಿತೀಯ ಲಕ್ಷಣಗಳು ಪ್ರಕಟಗೊಳ್ಳುವವು.
  ನೋವಿನ ಪಾದಗಳು: ಇದು ೪೦ರ ವಯೋಮಾನದ ಅಥವಾ ಸ್ಥೂಲಕಾಯದ ನಿಂತು ಕೆಲಸ ಮಾಡುವ ವ್ಯಕ್ತಿಗಳಲ್ಲಿ ಸರ್ವೇ ಸಾಮಾನ್ಯ.
  ನೋವಿನ ನರಳಿಕೆಯಿಂದಾಗಿ ನಿದ್ರಾಹೀನತೆ, ಡಿಪ್ರೆಶನ್, ದಣಿವಾಗುವುದು ಸಾಮಾನ್ಯ.
  ಕಾಕ್ಸಿಡಿನಿಯಾ ಕಾಟದಿಂದ ಪಾರಾಗಲು ಅಡ್ಡಾದಿಡ್ಡಿ ಕುಳಿತುಕೊಳ್ಳುವುದರಿಂದ ಬೆನ್ನುನೋವು ಬೆಂಬಿಡದೇ ಕಾಡುವುದು.
  ರೋಗ ಸಂಕೇತ
  ಅಪಘಾತ ನಂತರ ಆರಂಭವಾಯ್ತು. ಗರ್ಭಿಣಿಯಾದಾಗ ಶುರು ಆಯ್ತು. ಹೆರಿಗೆ ನಂತರ ನೋವಿಗೆ ನಾಂದಿ ಹಾಡಿತು ಎಂದು ರೋಗಿಗಳು ಹೇಳಿದಾಗ ಅದನ್ನು ನಿರ್ಲಕ್ಷಿಸುವಂತಿಲ್ಲ. ರೋಗಿ ಕುಳಿತಿದ್ದಾಗ ಮತ್ತು ಎದ್ದು ನಿಂತಾಗ ತೆಗೆದ ಎಕ್ಸ್‌ರೇಗಳ ತುಲನಾತ್ಮಕ ಪರೀಕ್ಷೆ ಕಾಕ್ಸಿಡಿನಿಯಾವನ್ನು ಖಚಿತಗೊಳಿಸುವುದು. ಇದು ಎಲ್ಲ ಪ್ರಕರಣಗಳಲ್ಲಿ ಕಂಡು ಬಾರದು. ಹೀಗಾಗಿ ಎಕ್ಸ್‌ರೇ ನಕಾರಾತ್ಮಕವಾಗಿ ಕಾಕ್ಸಿಡಿನಿಯಾ ಸಾಧ್ಯತೆಯನ್ನು ತಳ್ಳಿ ಹಾಕಲು ಬರುವುದಿಲ್ಲ.
  ಪರಿಹಾರ
  ನೋವು ಕಡಿಮೆಯಾಗಬಹುದೆಂದು ನೋವು ನಿವಾರಕ ಗುಳಿಗೆಗಳನ್ನು ನುಂಗುತ್ತ ಹೋಗುವುದು ಸರಿಯಲ್ಲ. ಸ್ವಯಂ ವೈದ್ಯ ಖಂಡಿತ ಬೇಡ. ಬೊಗಳೆ ವೈದ್ಯರ ಬೆಲ್ಲದ ಮಾತಿಗೆ ಮರಳಾಗಬೇಡಿ. ಮಾಟ, ಮಂತ್ರ, ದೇವರ ದಿಂಡ ಕಾಟ ಎಂದು ಕಾಲ ಕಳೆಯಬೇಡಿ. ಮೂಳೆ ತಜ್ಞರು ಮತ್ತು ನರರೋಗ ತಜ್ಞರನ್ನು ಕಂಡು ಸೂಕ್ತ ಸಲಹೆ, ಸೂಚನೆಗಳನ್ನು ಪಡೆದು ಅದರಂತೆ ನಡೆಯಬೆಕು. ಸ್ಥೂಲಕಾಯದವರಾಗಿದ್ದಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು.

LEAVE A REPLY