ಮಂಡಿನೋವು ? ಇದು ಬಲು ಮೊಂಡುನೋವು!!

 • ಪ್ರಹ್ಲಾದ್
  ಮಂಡಿನೋವು, ಕೀಲುನೋವು ಇರುವವರಿಗೆ ತರಕಾರಿ ರಸ
  ವಿಧ ವಿಧ ಸಮಸ್ಯೆಗಳಿಗೆ ವಿಭಿನ್ನ ತರಕಾರಿ ರಸ ತಯಾರಿಸಿಕೊಳ್ಳುವುದು ಹೇಗೆ ಎಂಬ ವಿಷಯದ ಬಗ್ಗೆ ಕಳೆದ ಸಂಚಿಕೆಯಿಂದ ತಿಳಿಯಲು ಪ್ರಾರಂಭಿಸಿದ್ದೇವೆ. ಈಗ ನಾವು ಮಂಡಿನೋವು, ಕೀಲುನೋವಿನವರಿಗಾಗಿ ತಯಾರಿ ಹೇಗೆ ಎಂಬುದನ್ನು ತಿಳಿಯೋಣ.
  ಮಂಡಿನೋವು ಮತ್ತು ಕೀಲುನೋವಿನ ಸಮಸ್ಯೆಯಿಂದ ಬಳಲುವವರು ಉಪ್ಪನ್ನು ಜಸ್ತಿ ತಿನ್ನುತ್ತಿದ್ದು ನೀರು ಕಡಿಮೆ ಕುಡಿಯುತ್ತಿರುತ್ತಾರೆ ಅಥವಾ ಭಾರವಾದ ವಸ್ತುಗಳನ್ನು ಹೊರುತ್ತಿರುತ್ತಾರೆ ಅಥವಾ ಮಂಡಿ ಮತ್ತು ಕೀಲುಗಳನ್ನು ಅವಶ್ಯಕ್ಕಿಂತ ಜಸ್ತಿ ಬಳಸುತ್ತಿರುತ್ತಾರೆ. ಉದಾಹರಣೆಗೆ ಫುಟ್‌ಬಾಲ್ ಮತ್ತು ಕ್ರಿಕೆಟ್ ಆಟಗಾರರು. ಇವರಿಗೆ ಈ ರಸ ವರದಾನ.
  ತಯಾರಿ ಹೇಗೆ?
  ಒಬ್ಬರಿಗೆ ಬೇಕಾಗುವ ತರಕಾರಿ: ಸೋರೆಕಾಯಿ-50 ಗ್ರಾಂ; ಸೌತೆಕಾಯಿ-100 ಗ್ರಾಂ; ಕ್ಯಾರಟ್-150 ಗ್ರಾಂ; ಪಾಲಕ್‌ಸೊಪ್ಪು-2 ಹಿಡಿಯಷ್ಟು; ಕೊತ್ತಂಬರಿಸೊಪ್ಪು-2 ಹಿಡಿಯಷ್ಟು; ಕರಿಬೇವು-3 ಹಿಡಿಯಷ್ಟು; ತುಳಸಿ ಎಲೆ-12, ಅಮೃತಬಳ್ಳಿ ಎಲೆ-4, ಲೋಳೇಸರ (ಅಲೊವೆರಾ)-5 ಗ್ರಾಂ; ಬೆಟ್ಟದ ನೆಲ್ಲಿಕಾಯಿ-1.
  ತಯಾರಿಸುವ ವಿಧಾನ: ಲೋಳೆಸರದೊಳಗಿನ ಲೋಳೆಯನ್ನು 5 ಗ್ರಾಂನಷ್ಟು ತೆಗೆದು ಚಿಕ್ಕದಾಗಿ ಕತ್ತರಿಸಿ ಲೋಟಕ್ಕೆ ಸುರಿದುಕೊಳ್ಳಿ. ಬೆಟ್ಟದ ನೆಲ್ಲಿಕಾಯಿಯನ್ನು ತುರಿದು ಕೈಯಿಂದ ಹಿಂಡಿ ರಸವನ್ನು ಈ ಲೋಟಕ್ಕೆ ಬೆರೆಸಿ. ಸೋರೆಕಾಯಿ, ಸೌತೆಕಾಯಿ, ಕ್ಯಾರಟ್, ಸೊಪ್ಪು ಮತ್ತು ಇತರೆ ಎಲೆಗಳನ್ನು ಹುಣಸೆನೀರಿನಲ್ಲಿ 10 ನಿಮಿಷ ತೊಳೆದು ಚಿಕ್ಕದಾಗಿ ಕತ್ತರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಲೋಟಕ್ಕೆ ಸೋಸಬೇಕು. ಈಗ ಎಲ್ಲವನ್ನು ಚಮಚದಿಂದ ಚೆನ್ನಾಗಿ ಕಲೆಸಿ ತುಂಬ ನಿಧಾನವಾಗಿ ಚಪ್ಪರಿಸುತ್ತಾ 10 ನಿಮಿಷ ಕುಳಿತೇ ಕುಡಿಯಿರಿ. ಹೆಚ್ಚಿನ ಲಾಲಾರಸದೊಂದಿಗೆ ಸೇವಿಸಿದರೆ ಹೆಚ್ಚು ಲಾಭ ಇಲ್ಲದಿದ್ದರೆ ಲಾಭ ಅಷ್ಟಕ್ಕಷ್ಟೆ.
  ಈ ರಸವನ್ನು ಬೆಳಿಗ್ಗೆ ತಿಂಡಿಗಿಂತ ಒಂದು ಗಂಟೆ ಮುಂಚೆ ಮತ್ತು ಸಂಜೆ ಊಟಕ್ಕಿಂತ ಒಂದೂವರೆ ಗಂಟೆ ಮುಂಚೆ ಅಂದರೆ 4 ರಿಂದ 5 ಗಂಟೆಯ ಒಳಗೆ ಸೇವಿಸುವುದೊಳಿತು. ಪ್ರತಿಬಾರಿಯೂ ತಾಜ ತಯಾರಿಸಿಕೊಂಡು ತಕ್ಷಣವೇ ಸೇವಿಸಿ.
  ಸೂಚನೆ: ಇದನ್ನು ಸೇವಿಸುತ್ತಿರುವ ದಿನಗಳಲ್ಲಿ ಮಂಡಿಗೆ ಅಥವಾ ಕೀಲಿಗೆ ಎಳ್ಳೆಣ್ಣೆ ಅಥವಾ ತೇಜಸ್ ತೈಲಮ್ (ಪತಂಜಲಿ ಉತ್ಪನ್ನ) ಸವರಿ 10 ನಿಮಿಷ ಮಾಲೀಶ್ ಮಾಡಿಕೊಂಡು ಬಿಸಿನೀರು ಮತ್ತು ತಣ್ಣೀರ್‍ನು ಒಂದಾದ ಮೇಲೊಂದರಂತೆ ನೋವಿರುವ ಜಗದ ಮೇಲೆ 10 ನಿಮಿಷಗಳ ಕಾಲ ಹೊಯ್ಯತ್ತಿರಿ. ಅಥವಾ ಹತ್ತಿಬಟ್ಟೆಯಿಂದಲೂ ಅದ್ದಿ ಶಾಖ ಕೊಡಬಹುದು. ನಂತರ ಅದನ್ನು ಒರೆಸಿ ಬಾಡಿ ಉಬ್ಟನ್ ಪುಡಿ (ಪತಂಜಲಿ ಉತ್ಪನ್ನ) ಸ್ವಲ್ಪ ತೆಗೆದುಕೊಂಡು ದೋಸೆ ಹಿಟ್ಟಿನ ಹದ ಕಲೆಸಿ ಆ ಜಗಕ್ಕೆ ಹಚ್ಚಿ ಒಣಬಟ್ಟೆ ಸುತ್ತಿಬಿಡಿ. ಒಂದು ಗಂಟೆಯ ನಂತರ ಬಿಸಿನೀರಿನಿಂದ ತೊಳೆಯಿರಿ. ಮೇಲಿನ ರಸ ಸೇವನೆಯ ಜೊತೆಗೆ ಇದೂ ಅವಶ್ಯಕ.
  ಆಹಾರ ನಿಯಮ
  ಸಮಯಕ್ಕೆ ಸರಿಯಾಗಿ ಊಟ ಮಾಡಿ. ಆ ಸಮಯಕ್ಕೆ ಹಸಿವಾಗುವಂತೆ ಹಿಂದಿನ ಆಹಾರದ ಪ್ರಮಾಣವಿರಲಿ. ನೀವು 3 ರೊಟ್ಟಿ ತಿನ್ನುವಿರಾದರೆ 2ಕ್ಕೇ ನಿಲ್ಲಿಸಿ. ನಿಮಗೆ ಹೊಟ್ಟೆ ಅರ್ಧ ತುಂಬಿರುವಾಗ ಮೆದುಳಿನಿಂದ ನಿಮಗೆ ಸೂಚನೆ ಬರುತ್ತದೆ. ಆಗ ನೀವು ಮಜ್ಜಿಗೆಯೊಂದಿಗೆ ನಿಮ್ಮ ಊಟ ಮುಗಿಸಿಬಿಡಿ.
  ಏನು ತಿನ್ನಬೇಕು?
  ಮಂಡಿ ಅಥವಾ ಕೀಲುನೋವು ಇರುವವರಿಗೆ ನವಣೆ ಮತ್ತು ಕೊರಲೆ ಅಕ್ಕಿಗಳು ಸಂಪೂರ್ಣ ವಾಸಿಯಾಗಲು ಸಹಕರಿಸುವುದು. ಹಾಗಾಗಿ ಕನಿಷ್ಠ ಒಂದು ಬಾರಿಯಾದರೂ ಇವುಗಳಿಂದ ಆಹಾರ ತಯಾರಿಸಿಕೊಂಡು ತಿನ್ನಿ. ಆದರೆ ಎಚ್ಚರವಿರಲಿ ಸ್ವಲ್ಪವೇ ತಿನ್ನಬೇಕು ಮತ್ತು ಸಮುದ್ರಲವಣವನ್ನು ಅತ್ಯಂತ ಕಡಿಮೆ ಬಳಸಬೇಕು. ನೋವು ಮಾಯವಾಗುವವರೆಗೆ ಉಪ್ಪು ನಿಲ್ಲಿಸಿದರೆ ಉತ್ತಮ. ಎಣ್ಣೆಯನ್ನು ಒಗ್ಗರಣೆ ಕೊಡಲೂ ಬಳಸಬಾರದು. ಆದರೆ ನಮ್ಮ ದೇಹಕ್ಕೆ ಎಣ್ಣೆಯ ಅವಶ್ಯಕತೆಯಿರುವುದರಿಂದ ಪ್ರಾಕೃತಿಕ ರೂಪದಲ್ಲಿ ಉಪಯೋಗಿಸಬೇಕು. ಇದಕ್ಕಾಗಿ ಹಸಿಕೊಬ್ರಿತುರಿ / ಕರಿಎಳ್ಳಿನಪುಡಿ / ಶೇಂಗಾಪುಡಿಯನ್ನು ಉಪಯೋಗಿಸಬಹುದು. ಎರಡನೇ ಬಾರಿ ಆಹಾರ ಸೇವಿಸುವಾಗ ರಾಗಿ ಅಥವಾ ಹಾರಕ ಅಥವಾ ಸಾಮೆ ಅಥವಾ ಊದಲುವಿನಿಂದ ತಯಾರಿಸಿಕೊಳ್ಳಿ.
  ನೀರು ಕುಡಿಯುವ ವಿಧಾನ
  ಬೆಳಿಗ್ಗೆ ಎದ್ದ ತಕ್ಷಣ 3 ಲೋಟ ಉಗುರುಬೆಚ್ಚಗಿನ ನೀರು ಕುಡಿಯಿರಿ. ನಂತರ ಯೋಗ, ಧ್ಯಾನ, ಕಪಾಲಭಾತಿ ಪ್ರಾಣಾಯಾಮ ಅಭ್ಯಸಿಸಿ. ಮಂಡಿ ಬಿಗಿ ಮತ್ತು ಸಡಿಲಗೊಳಿಸುವ ವ್ಯಾಯಾಮ ಮಾಡಿ. ಇದಕ್ಕಾಗಿ ನಮ್ಮ ಸಂಸ್ಥೆ ಪ್ರಕಟಿಸಿದ ‘ಪ್ರಾಣಾಯಾಮ ಹಾಗೂ ಸರಳ ಯೋಗಾಸನಗಳು’ ಎಂಬ ಪುಸ್ತಕವನ್ನು ನೀವು ಆಶ್ರಯಿಸಬಹುದು. ಮೊದಲ ಬಾರಿ ನೀರು ಕುಡಿದು ಸುಮಾರು ಒಂದೂವರೆ ಗಂಟೆ ಆದ ಬಳಿಕ ಪುನಃ 2 ರಿಂದ 3 ಲೋಟ ನೀರು ಕುಡಿಯಿರಿ. ಒಟ್ಟಿನಲ್ಲಿ ದಿನದಲ್ಲಿ 3 ಲೀಟರ್ ನೀರು ಕುಡಿದಿರಬೇಕು. ಊಟ ಮಾಡುವಾಗ ನೀರು ಕುಡಿಯಬೇಡಿ. ಒಂದೂವರೆ ಗಂಟೆಯ ಬಳಿಕ ಕುಡಿಯಿರಿ. ನಿಮ್ಮ ತೂಕ ಜಸ್ತಿಯಿದ್ದ ಪಕ್ಷದಲ್ಲಿ ಒಂದು ಕೇಜಿ ತೂಕಕ್ಕೆ 50 ಮಿ.ಲೀ.ನಂತೆ ನೀರು ಸೇವಿಸಿ.
  ಹೀಗೆ ಅನುಸರಿಸಿದರೆ ನಿಮಗೆ 3 ರಿಂದ 4 ವಾರ ಗಳಲ್ಲಿ ನಿಮ್ಮ ಮಂಡಿ ಅಥವಾ ಕೀಲುನೋವು ಮಾಯವಾಗಲು ತೊಡಗುವುದು. ತುಂಬ ಹಳೆಯ ನೋವಾಗಿದ್ದಲ್ಲಿ ವಾಸಿಯಾಗಲು ಇನ್ನು ಕೆಲವು ವಾರಗಳು ಬೇಕಾಗಬಹುದು. ಖಂಡಿತ ಈ ಚಿಕಿತ್ಸೆಯು ತುಂಬ ಪರಿಣಾಮಕಾರಿಯಾಗಿದೆ. ಎಷ್ಟೋ ಜನರ ಮೇಲೆ ಪ್ರಯೋಗಿಸಲಾಗಿದೆ. ನೀವೂ ಪ್ರಯತ್ನಿಸಿ, ಲಾಭ ಪಡೆಯಿರಿ ಮತ್ತು ನಾಲ್ಕಾರು ಜನರಿಗೆ ತಿಳಿಸುವ ಮಹದುಪಕಾರ ಮಾಡಿ. ಅಧ್ಯಾತ್ಮ ಎಂದರೆ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದು ಮತ್ತು ಇನ್ನೊಬ್ಬರ ಒಳಿತು ಬಯಸುವುದೇ ಆಗಿದೆ.
  ಇಲ್ಲಿ ತರಕಾರಿ ಮತ್ತು ಸೊಪ್ಪುಗಳ ಒಂದು ಅಂದಾಜಿನ ಪ್ರಮಾಣ ಕೊಡಲಾಗಿದೆ ಅಷ್ಟೆ. ನೀವು ಇಲ್ಲಿ ಕೊಟ್ಟಿರುವ ತರಕಾರಿಯನ್ನು ನಿಮ್ಮ ದೇಹದ ಅವಶ್ಯಕತೆಗನುಗುಣವಾಗಿ ವಿಭಿನ್ನ ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಸಾವಯವ ತರಕಾರಿ ಆದರೆ ಒಳ್ಳೆಯದು. ಪ್ರಮಾಣ: ಒಂದು ಬಾರಿಗೆ ಸುಮಾರು 200 ಮಿ.ಲೀ. ರಸ ಸೇವಿಸಿ.

LEAVE A REPLY