ವಿಜಯದಶಮಿ ದಿನ ವಿಶೇಷ ಪೂಜೆ: ಶಮಿ ಶಮಯತೇ ಪಾಪಮ್

 • ಡಾ. ಎಸ್. ಹೇಮಲತಾ
  ನವರಾತ್ರಿ ನಮ್ಮ ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದು. ಒಂಬತ್ತು ದಿನಗಳು ನಡೆಯುವ ಅತಿ ದೀರ್ಘವಾದ ಈ ಪರ್ವ ಸಂದರ್ಭದಲ್ಲಿ ಪ್ರಮುಖವಾಗಿ ದೇವಿಯ ಅನೇಕ ರೂಪಗಳ ಅರ್ಚನೆ ನಡೆಯುತ್ತದೆ. ಪ್ರಮುಖವಾಗಿ ದುರ್ಗಾ ಮತ್ತು ಸರಸ್ವತೀ ರೂಪದಲ್ಲಿ ದುಷ್ಟ ನಿಗ್ರಹ ಮತ್ತು ಶಿಷ್ಟ ರಕ್ಷಣೆಗಳನ್ನು ಬಿಂಬಿಸುವ ಪೂಜಾ ವಿಧಾನಗಳು ಇದರಲ್ಲಿ ಸಂಕಲಿತವಾಗಿವೆ. ಮಹಾ ನವಮಿಯ ದಿನದ ಆಯುಧ ಪೂಜೆಯಲ್ಲಿ ನಮ್ಮ ಜೀವನಾಧಾರವಾದ ಉಪಕರಣಗಳನ್ನು ಪೂಜಿಸುವಂತೆಯೇ, ವಿಜಯದಶಮಿ ದಿನ ವೃಕ್ಷ ಪೂಜೆ ವಿಶೇಷವಾಗಿದೆ.
  ಸಾಕಷ್ಟು ರೀತಿಯ ವೃಕ್ಷಗಳು ಇದ್ದರೂ, ಅರಳಿಯಂತಹ ಪವಿತ್ರವೃಕ್ಷಗಳನ್ನು ಬಿಟ್ಟು ಅಂದು ಶಮೀ ವೃಕ್ಷವನ್ನು ಪೂಜಗೆ ಆರಿಸಿರುವುದರಲ್ಲಿ ವಿಶೇಷವೇನೋ ಇರಲೇಬೇಕಲ್ಲವೇ? ಮುಳ್ಳಿನಿಂದ ಕೂಡಿದ, ಫಲಪುಷ್ಪರಹಿತವಾದ ಈ ವೃಕ್ಷವನ್ನು ವಿಜಯದ ಸಂಕೇತವಾಗಿ ಪೂಜೆಗೆ ಏಕೆ ಆರಿಸಿರಬಹುದೆಂದು ಕುತೂಹಲ ಮೂಡುವುದು ಸಹಜವೇ ಆಗಿದೆ. ನಮ್ಮ ಪೂರ್ವಜರು ಆಲೋಚನಾಪೂರ್ವಕವಾಗಿಯೇ ಇಂತಹ ಆಚರಣೆಯನ್ನು ಪ್ರಾರಂಭಿಸಿರಬೇಕು. ಇದರ ಬಗ್ಗೆ ನಾವೂ ಒಂದಿಷ್ಟು ಚಿಂತನೆ ಮಾಡಿ, ಅದರ ಉದ್ದೇಶವನ್ನು ಗ್ರಹಿಸೋಣ. ‘ವಿದ್ಯೆಯಾ ವೀರ್ಯವತ್ತರಂ ಭವತಿ’ ಅಂದರೆ ಅದರ ವಿಷಯವನ್ನು ತಿಳಿದುಕೊಂಡು ಆಚರಿಸಿದರೆ ಶ್ರದ್ಧೆಯು ಅಕವಾಗುವುದರಿಂದ ಅಕ ಫಲವನ್ನು ಕೊಡುತ್ತದೆ.
  ಯಾವುದೇ ಒಂದು ಮರವು ಫಲಗಳನ್ನು ಕೊಡುವುದಾದರೆ ಅಥವಾ ಮರಮಟ್ಟುಗಳಂತಹ ಧನಲಾಭದ ಪ್ರಯೋಜನ ಇರುವುದಾದರೆ ಜನರು ಅವುಗಳನ್ನು ಹೆಚ್ಚಾಗಿ ಬೆಳೆಸುತ್ತಾರೆ. ಆದ್ದರಿಂದ ಮಾವು, ಹಲಸು ಮುಂತಾದ ಮರಗಳನ್ನು ವ್ಯಾವಹಾರಿಕ ದೃಷ್ಟಿಯಿಂದ ಬೆಳೆಸುವವರು ಸಾಕಷ್ಟು ಇರುವುದರಿಂದ ಅವುಗಳ ಅಸ್ತಿತ್ವಕ್ಕೆ ಧಕ್ಕೆ ಬರುವುದಿಲ್ಲ. ಆದರೆ ಕಣ್ಣಿಗೆ ಕಾಣದ ಸಾಕಷ್ಟು ಪ್ರಯೋಜನ ಇರುವ ಅರಳಿ, ಬಿಲ್ವ, ಶಮೀ ಮುಂತಾದ ವೃಕ್ಷಗಳನ್ನು ಜನರು ಬೆಳೆಸದಿರುವುದಷ್ಟೇ ಅಲ್ಲ, ಕಟ್ಟಿಗೆಗಾಗಿ ಕಡಿಯುವ ಸಾಧ್ಯತೆ ಇದೆ. ಮನುಷ್ಯ ತನ್ನ ಕ್ಷಣಿಕ ಪ್ರಯೋಜನಕ್ಕೆ ಬೆಲೆ ಕೊಡುತ್ತಾನೆಯೇ ಹೊರತು ದೂರಾಲೋಚನೆ ಇರುವುದಿಲ್ಲ ಎಂಬುದು ಈಗಾಗಲೇ ಕಾಡನ್ನು ನಾಶ ಮಾಡುತ್ತಿರುವ ನಮ್ಮ ಅನುಭವಕ್ಕೆ ಬರುತ್ತಲೇ ಇದೆ. ಆದ್ದರಿಂದಲೇ ಅಂತಹ ವೃಕ್ಷಗಳನ್ನು ಪೂಜಾ ವೃಕ್ಷಗಳಾಗಿ ಆರಿಸಿಕೊಂಡು ನಮ್ಮ ಹಿರಿಯರು ಅವುಗಳ ಸಂತತಿಯ ರಕ್ಷಣೆ ಮಾಡಿರುತ್ತಾರೆ.
  ಶಮೀ ಬಹಳ ಎತ್ತರವಾದ ಮರವೇನೂ ಅಲ್ಲ. ಸುಮಾರು ೫ ಮೀಟರ್ ಅಂದರೆ ೧೫-೨೦ ಅಡಿಗಳ ಎತ್ತರವಿರುವ ಈ ವೃಕ್ಷದ ಎಲೆಗಳು ನೆಲ್ಲಿ ಮರದ ಎಲೆಗಳನ್ನು ಹೋಲುತ್ತವೆ. ಮುಳ್ಳಿನಿಂದ ಕೂಡಿದ ಈ ಮರದಲ್ಲಿ ಹಳದಿ ಬಣ್ಣದ ಸಣ್ಣ ಹೂಗಳು ಕಾಲದಲ್ಲಿ ಅರಳುತ್ತವೆ. ಅವು ದ್ವಿದಳ ಧಾನ್ಯದಂತೆ ಕಾಯಿಗಳಾಗಿ ಬೀಜಗಳಾಗುತ್ತವೆ. ಈ ಮರಕ್ಕೆ ಹೆಚ್ಚು ನೀರಿನ ಅವಶ್ಯವಿಲ್ಲ. ಹೀಗಾಗಿ ಮರಳುಗಾಡಿನಲ್ಲೂ ಬೆಳೆಯುತ್ತದೆ. ಹೆಚ್ಚು ಬಿಸಿಲನ್ನು ತಡೆಯಬಲ್ಲ ಈ ಮರ ಭಾರತ, ಮಧ್ಯ ಏಷ್ಯಾದ ದೇಶಗಳು, ಮೈನಮಾರ್, ಇಂಡೋನೇಷಿಯಾಗಳಲ್ಲಿ ಬೆಳೆಯುತ್ತದೆ.
  ಭಾರತದಲ್ಲಿ ಈ ವೃಕ್ಷ ವಿವಿಧ ಹೆಸರುಗಳಿಂದ ವಿವಿಧ ರಾಜ್ಯಗಳಲ್ಲಿ ಪ್ರಸಿದ್ಧವಾಗಿದೆ. ರಾಜಸ್ಥಾನದಲ್ಲಿ ‘ಶೇಜಿ’ ಎಂಬ ಹೆಸರಿನಿಂದ ಆ ರಾಜ್ಯದ ವೃಕ್ಷವಾಗಿದೆ. ಕನ್ನಡದಲ್ಲಿ ‘ಬನ್ನಿಮರ’. ಮೈಸೂರು ಮಹಾರಾಜರು ವಿಜಯದಶಮಿಯ ದಿನ ಜಂಬೂ ಸವಾರಿಯಲ್ಲಿ ಬನ್ನಿಮಂಟಪಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಇಂದಿಗೂ ಕರ್ನಾಟಕದ ದಸರಾ ಮಹೋತ್ಸವದಲ್ಲಿ ಇಲ್ಲಿ ನಡೆಯುವ ಟಾರ್ಚ್ ಬೆಳಕಿನ ಕವಾಯುತು ಜಗತ್ತಿನಲ್ಲೆಲ್ಲ ಪ್ರಸಿದ್ಧವಾಗಿದೆ. ತಮಿಳಿನಲ್ಲಿ ಇದು ‘ವನ್ನಿ’. ತೆಲುಗಿನಲ್ಲಿ ‘ಜಮೀಮಿ’, ಗುಜರಾತಿನಲ್ಲಿ ‘ಸುಮ್ರ’, ಪಂಜಾಬಿಯಲ್ಲಿ ‘ಜುಂಡು’ ಮುಂತಾಗಿ ಪ್ರಸಿದ್ಧವಾಗಿದೆ. ಮರಳುಗಾಡಿನ ದೇಶಗಳಲ್ಲೂ ಈ ಮರ ಪ್ರಸಿದ್ಧ. ಬಲೂಚಿಸ್ಥಾನದಲ್ಲಿ ‘ಶಾಹಿರ್’. ಯು.ಎ.ಇ. ದೇಶದಲ್ಲಿ ಇದೇ ಹೆಸರಿನಲ್ಲಿ ರಾಷ್ಟ್ರೀಯ ವೃಕ್ಷವಾಗಿದೆ. ಮರಳು ಹರಡದಂತೆ ಮತ್ತು ದೇಶದ ವೈಶಿಷ್ಟ್ಯ ತೋರಿಸಲು ಈ ವೃಕ್ಷದ ಅಭಿವೃದ್ಧಿಗೆ ಅಲ್ಲಿ ಪ್ರೋತ್ಸಾಹವಿದೆ.
  ಸಂಸ್ಕೃತದಲ್ಲಿ ಈ ಮರಕ್ಕೆ ‘ಶಮೀ’ ಹೆಸರು. ಸ್ತ್ರೀಲಿಂಗದಲ್ಲಿರುವ ಈ ಪದವು ಮರವು ದುರ್ಗಾದೇವಿಗೆ ಪ್ರಿಯವೆಂಬುದರ ದ್ಯೋತಕ.
  ಅಮಂಗಲಾನಾಂ ಶಮನೀಂ ಶಮನೀಂ ದುಷ್ಕೃತಸ್ಯ ಚ|
  ದುಃಖಪ್ರಣಾಶಿನೀಂ ಧನ್ಯಾಂ ಪ್ರಪದ್ಸೇಹ ಶಮೀಂ ಶುಭಾವತ್|
  ಎಂಬ ಪೌರಾಣಿಕ ಶ್ಲೋಕವು ಶಮೀ ವೃಕ್ಷವು ಅಮಂಗಲ, ಪಾಪ ಮತ್ತು ದುಃಖಗಳನ್ನು ಪರಿಹರಿಸುತ್ತದೆ ಎಂದು ಹೇಳುತ್ತದೆ. ಪ್ರತಿ ಹಳ್ಳಿಯ ಈಶಾನ್ಯ ದಿಕ್ಕಿನಲ್ಲಿ ಹಿಂದೆ ಈ ಮರವನ್ನು ಬೆಳೆಸಲಾಗುತ್ತಿತ್ತು. ವಿಜಯದಶಮಿಯ ದಿನ ಜನರು ಊರ ಹೊರಗೆ ಬಂದು ಈ ವೃಕ್ಷವನ್ನು ಪೂಜಿಸುತ್ತಿದ್ದರು. ಈ ವಿಧಾನವು ಮಹಾರಾಜರಲ್ಲಿ ‘ಸೀಮೋಲ್ಲಂಘನ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿತ್ತು.
  ಶಮೀ ವೃಕ್ಷದ ಪೂಜಾ ಸಮಯದಲ್ಲಿ
  ಶಮೀ ಶಮಯತೇ ಪಾಪಂ ಶಮೀ ಲೋಹಿತ ಕಂಟಕಾ|
  ಧರಿತ್ರೀ ಅರ್ಜುನಬಾಣಾನಾಂ ರಾಮಸ್ಯ ಪ್ರಿಯವಾಹಿನಿ||
  ಕರಿಷ್ಠಮಾಣಾಯಾತ್ರಾಯಾಂ ಯಥಾಶಾಲಾಂ ಸುಖಂ ಮಯಾ|
  ತತ್ರ ನಿರ್ವಿಘ್ನಕರ್ತಿತ್ವಂ ಭವ ಶ್ರೀರಾಮಪೂಜಿತೇ||
  ಎಂಬ ಶ್ಲೋಕವನ್ನು ಹೇಳುತ್ತಾರೆ. ಶಮಿಯಲ್ಲಿರುವ ಕೆಂಪು ಮುಳ್ಳುಗಳು ಪಾಪಗಳನ್ನು ಕತ್ತರಿಸುತ್ತವೆ. ಅರ್ಜುನಾದಿ ಪಾಂಡವರು ಧನುರ್ಬಾಣಗಳನ್ನು ತಮ್ಮ ಅಜ್ಞಾತವಾಸ ಕಾಲದ ಸಂದರ್ಭದಲ್ಲಿ ಈ ವೃಕ್ಷದ ಮೇಲೆ ಇಟ್ಟಿದ್ದರೆಂದೂ, ನಂತರ ವಿರಾಟನ ನಗರದಲ್ಲಿ ಪ್ರವೇಶ ಮಾಡಿದರೆಂದೂ ಮಹಾ ಭಾರತ ಹೇಳುತ್ತದೆ. ಆಗ ಶಮೀ ವೃಕ್ಷವು ಇನ್ನೂ ದೊಡ್ಡದಾಗಿ ಬೆಳೆಯುತ್ತಿದ್ದಿರಬಹುದು. ಯುಷ್ಠಿರನ ಅಪ್ಪಣೆಯಂತೆ ನಕುಲನು ಮರವನ್ನು ಹತ್ತಿ ಎಲ್ಲರ ಆಯುಧಗಳನ್ನು ಜನರಿಗೆ ಕಾಣದಂತೆ ಮುಚ್ಚಿ ಇಟ್ಟನು. ಅನಂತರ ಧರ್ಮರಾಜನು ಶಮೀವೃಕ್ಷದ ಅದೇವತೆಯಾದ ದುರ್ಗೆಯನ್ನು ಪ್ರಾರ್ಥಿಸಿ ಬಹುವರಗಳನ್ನು ಪಡೆದನು.
  ಶ್ರೀರಾಮನೂ ದಿಗ್ವಿಜಯವನ್ನು ಪ್ರಾರಂಭಿಸುವ ಮೊದಲು ಸಮುದ್ರ ತೀರದಲ್ಲಿ ಶಮೀಯನ್ನು ಪೂಜಿಸಿದ್ದನಂತೆ! ಅವರ ವಂಶದ ರಘು ಮಹಾರಾಜನಿಗೆ ಶಮೀ ವೃಕ್ಷದ ಮೂಲದಲ್ಲಿ ದ್ರವ್ಯವರ್ಷವಾಗಿತ್ತೆಂದೂ, ಅಂದಿನಿಂದ ರಾಜರಿಗೆ ಶಮೀ ವೃಕ್ಷವು ಪೂಜ್ಯವಾಯಿತೆಂದೂ ಹೇಳುತ್ತಾರೆ.
  ಶಮೀ ‘ಅಗ್ನಿ ಗರ್ಭಾ’ ಎಂದೂ ಪ್ರಸಿದ್ಧವು. ಹಿಂದೆ ಬೆಂಕಿಯನ್ನು ಉಂಟು ಮಾಡುವ ಅರಣಿಗಳನ್ನು (ಕಡೆಯುವ ಎರಡು ಮರದ ತುಂಡುಗಳು), ಶಮೀ ವೃಕ್ಷದ ಒಣಗಿದ ಕಾಷ್ಠದಿಂದ ತಯಾರಿಸುತ್ತಿದ್ದರು. ಕಾಳಿದಾಸ ತನ್ನ ಅಭಿಜ್ಞಾನ ಶಾಕುಂತಲದಲ್ಲಿ , ಶಾಕುಂತಲೆಯನ್ನು ಅಗ್ನಿಗರ್ಭವಾದ ಶಮೀ ವೃಕ್ಷಕ್ಕೆ ಹೋಲಿಸಿರುತ್ತಾರೆ. ಶಮೀ ಶನೀಗ್ರಹಕ್ಕೂ ಪ್ರಿಯವಾದ ವೃಕ್ಷ. ಈ ಗ್ರಹಕ್ಕೆ ಪ್ರಿಯವಾದ ಹೋಮವನ್ನು ಶಮೀ ವೃಕ್ಷದ ಕೆಳಗೆ ಮಾಡುತ್ತಾರೆ. ಶಮೀವೃಕ್ಷಕ್ಕೆ ವ್ಯಾವಹಾರಿಕದವಾದ ಉಪಯೋಗಗಳೂ ಇವೆ. ಇದರ ಇದ್ದಿಲು ವಿಶೇಷ ಗುಣಗಳನ್ನು ಹೊಂದಿದ್ದು, ಕೆಲವು ರಾಸಾಯನಿಕ ವಸ್ತುಗಳ ಉತ್ಪಾದನೆಯಲ್ಲಿ ಅವಶ್ಯವಾಗಿದೆ. ಆರ್ಗಾನ್, ನಿಯಾನ್ ಮುಂತಾದ ಅನಿಲ ಗಳನ್ನು ಬೇರ್ಪಡಿಸಲು ಈ ಇದ್ದಿಲನ್ನು ಬಳಸುತ್ತಾರೆ. ಈ ಗಿಡದ ಎಲೆಗಳು ಪಶುಗಳಿಗೆ ಉತ್ತಮ ಆಹಾರ. ಇದರ ಬುಡವು ಅಂತರ್ಜಲವನ್ನು ಸಂರಕ್ಷಿಸು ತ್ತದೆ. ಇದರ ಬೇರಿನಬಲ್ಲಿ ದ್ವಿದಳ ಧಾನ್ಯಗಳಲ್ಲಿರುವಂತೆ ಸಾರಜನಕದ ಗಂಟುಗಳಿವೆ. ಇವು ಗಾಳಿಯಲ್ಲಿರುವ ಸಾರಜನಕವನ್ನು ಹೀರಿ, ನೆಲವನ್ನು ಫಲವತ್ತಾಗಿಸುತ್ತವೆ. ಶಮೀ ಬೀಜ ಪ್ರಾಣಿಗಳಿಗೆ ಉತ್ತಮ ಸಸಾರಜನಕಯುಕ್ತ ಆಹಾರ.
  ಸ್ನೇಹದ ಸಂಕೇತವಾಗಿ ವಿಜಯದಶಮಿಯ ದಿನ ಶಮೀಪತ್ರೆಯನ್ನು ಜನರು ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ, ಇತ್ತೀಚೆಗೆ ಶಮೀವೃಕ್ಷಗಳು ವಿರಳವಾಗುತ್ತಿವೆ. ಮರಗಿಡಗಳ ಪ್ರಾಮುಖ್ಯವನ್ನು ಅರ್ಥಮಾಡಿಕೊಂಡು ಈ ವೃಕ್ಷಗಳನ್ನು ಹೆಚ್ಚಾಗಿ ಬೆಳೆಸಿ, ಪೂಜಿಸಿ, ಕೃತಾರ್ಥರಾಗೋಣ. ಹಾಗೆಂದು ಈ ವಿಜಯದಶಮಿಯಂದು ಪ್ರತಿಜ್ಞಾ ಸ್ವೀಕಾರ ಮಾಡೋಣ.

LEAVE A REPLY