ಶರನ್ನವರಾತ್ರಿ: ಇದು ತಾಮಸದಿಂದ ಸಾತ್ವಿಕದೆಡೆಗೆ ಸಾಗುವ ಸಂದೇಶ

 • ವನರಾಗ ಶರ್ಮಾ
  ಯಾದೇವೀ ಸರ್ವ ಭೂತೇಷು ಶಕ್ತಿರೂಪೇಣ ಸಂಸ್ಥಿತಾ | ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ ||
  ಯಾದೇವೀ ಸರ್ವಭೂತೇಷು ವಿಷ್ಣುಮಾಯೇತಿ ಸಂಸ್ತುತಾ | ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ ||
  -ದುರ್ಗಾಸಪ್ತಶತೀ.
  ‘ನಾಡಿನೆಲ್ಲೆಡೆ ಮಳೆಗಾಲ ಮುಗಿದು, ಭೂಮಿ ತಾಯಿ ಹಸಿರುಟ್ಟು ಕಾಳು ಕಟ್ಟುವ ಸಂಭ್ರಮದ ಕಾಲ. ರೈತರೂ ಉತ್ತು ಬಿತ್ತಿ ಪಸಲಿನ ನಿರೀಕ್ಷೆ ಮಾಡುತ್ತ, ಎತ್ತುಗಳಿಗೂ, ಕೃಷಿಕ-ಕಾರ್ಮಿಕರಿಗೂ ವಿಶ್ರಾಂತಿ ಪಡೆಯುವ ಮತ್ತು ಸಂತೋಷದಿಂದ ಹಬ್ಬವನ್ನು ಆಚರಿಸುವುದಕ್ಕೆ ಅವಕಾಶವಿರುವ, ಸಕಾಲವಾದ್ದರಿಂದ, ಜನಪದ ಸಂಸ್ಕೃತಿಯ ಹಿನ್ನೆಲೆಯಿಂದಲೂ ಇದೇ ನಾಡಹಬ್ಬವೆಂದು ಕರೆಯಲು ಸೂಕ್ತವಾಗಿದೆ. ಜಗತ್ ಪ್ರಸಿದ್ಧ ಮೈಸೂರು ದಸರಾ ಉತ್ಸವವೂ ಅದರ ದ್ಯೋತಕವಾಗಿದೆ’ ಎಂದು ಬೆಟಗೇರಿ ಕೃಷ್ಣ ಶರ್ಮರು ಅಭಿಪ್ರಾಯ ಪಡುತ್ತಾರೆ. ಕಾರ್ಮೋಡ ಹರಿದು, ಶರತ್ಕಾಲದ ಆಗಸ ಕಂಗೊಳಿಸುತ್ತಿರುತ್ತದೆ. ಭೂಸುಂದರಿ ಸುಜಲೆಯೂ, ಸುಫಲೆಯೂ, ಸಸ್ಯಶ್ಯಾಮಲೆಯೂ ಆಗಿ ನಳನಳಿಸುತ್ತಿರುತ್ತಾಳೆ. ರೈತರಿಗೂ ಬಿಡುವು. ಶಾಲೆಗಳಿಗೂ ಬಿಡುವು!! ಉತ್ಸವವನ್ನು ಆಚರಿಸಲು ಸುಸಮಯ. ‘ದುಷ್ಟ ಶಕ್ತಿಯನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಿಸುವ ಸಂಕೇತವಾದ, ಮಳೆ ಬೆಳೆ ಚೆನ್ನಾಗಿ ಆಗಿ, ನಾಡಿನೆಲ್ಲೆಡೆ ಸುಖ ಸಮೃದ್ಧಿ ಉಂಟಾಗಲಿ ಎಂದು ಪ್ರಾರ್ಥಿಸುವ, ಹತ್ತು ದಿನಗಳ ಕಾಲ ನಡೆಯುವ ಹಬ್ಬ’ ದಸರಾ.
  ಮಹಾಲಯ ಅಮವಾಸ್ಯೆ
  ಇದು ಪಿತೃಪಕ್ಷದ (ಭಾದ್ರಪದ ಕೃಷ್ಣ) ಕೊನೆಯದಿನ. ಸಕಲ ಪಿತೃವರ್ಗಕ್ಕೂ ಪಿಂಡಪ್ರದಾನವೊ, ತಿಲತರ್ಪಣವೋ, ಶ್ರದ್ಧಾಂಜಲಿಯನ್ನೊ ಅರ್ಪಿಸುವ ಮೂಲಕ ಪಿತೃಕರ್ಮವನ್ನು ಆಚರಿಸುವ ವಿಶೇಷ ದಿನ. ಪಿತೃಸ್ಮತಿಯ, ಕೃತಜ್ಞತೆ ಅರ್ಪಣೆಯ ಪವಿತ್ರ ದಿನ. ಪಿತೃಗಳು ತಮ್ಮ ಸಂತಾನರನ್ನು ಆಶೀರ್ವದಿಸಲು ಭೂಮಿಗೆ ಬರುತ್ತಾರೆ ಎಂಬ ನಂಬಿಗೆಯೂ ಇದೆ. ಇದರ ಮರುದಿನವೇ ನವರಾತ್ರಿ ಪ್ರಾರಂಭವಾಗುತ್ತದೆ.
  ಶರನ್ನವರಾತ್ರಿ ದುರ್ಗಾಪೂಜ- ದಸರಾ (ದಶಹರಾ)
  ಪ್ರತಿವರ್ಷವೂ ಆಶ್ವಯುಜಮಾಸ ಪ್ರತಿಪದೆಯಿಂದ ಮಹಾನವಮಿವರೆಗೆ ನವರಾತ್ರಿ. ಹಾಗೂ ಹತ್ತನೆಯ ದಿನ ವಿಜಯದಶಮಿ. ಹಿಗೆ ದಶದಿನಗಳ ಕಾಲ ನಡೆಯುವ, ನವರಾತ್ರಿ ಅಥವಾ ದಸರಾ ಹಬ್ಬ, ಸುದೀರ್ಘವಾಗಿ, ಭಕ್ತಿ, ಉತ್ಸಾಹ ಶ್ರದ್ಧೆಗಳಿಂದ ಆಚರಿಸಲಾಗುವ ಹಬ್ಬ. ಶಾಕ್ತ ಮತ್ತು ವೈಷ್ಣವ ಪುರಾಣಾನುಸಾರ ವರ್ಷದಲ್ಲಿ ನಾಲ್ಕು ನವರಾತ್ರಿ ಉತ್ಸವ ಹೇಳಲಾಗಿದೆ. ೧. ವಸಂತ ನವರಾತ್ರಿ (ಮಾರ್ಚ-ಎಪ್ರಿಲ್) ೨. ಆಷಾಢ ನವರಾತ್ರಿ (ಮಾನ್ಸುನ್ ಪ್ರಾರಂಭೋತ್ಸವ- ಜೂನ್-ಜುಲೈ-) ೩.ಶರದ ನವರಾತ್ರಿ (ಸಪ್ಟೆಂಬರ್-ಅಕ್ಟೋಬರ್) ೪.ಮಾಘ ನವರಾತ್ರಿ (ಬಸಂತ ಪಂಚಮಿ ವಿಶೇಷ- ಜನವರಿ-ಪೆಬ್ರುವರಿ)
  ಇವುಗಳಲ್ಲಿ ಶರನ್ನಾವರಾತ್ರಿಯನ್ನೇ ಅತ್ಯಂತ ವಿಜೃಂಭಣೆಯಿಂದ ದೇಶಾದ್ಯಂತ ಆಚರಿಸಲಾಗುತ್ತದೆ. (ವಸಂತ ನವರಾತ್ರಿಯೂ ಸಾಧಾರಣ ಮಟ್ಟದಲ್ಲಿ ಆಚರಿಸಲಾಗುತ್ತದೆ. ಉಳಿದ ಎರಡು ಲಘು ಹಬ್ಬಗಳಾಗಿವೆ.) ಉತ್ತರಭಾರತದಲ್ಲಿ ರಾಮಲೀಲಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದರೆ ಪಶ್ಚಿಮಬಂಗಾಳದಲ್ಲಿ ದುರ್ಗಾಪೂಜೆ ಅತ್ಯಂತ ವೈಭವಯುತವಾಗಿ ಜರುಗುತ್ತದೆ.
  ಪೂಜಾ- ಉಪಾಸನೆ
  ವಿಗ್ರಹ, ದೇವಿಯ ಮಣ್ಣಿನ, ಲೋಹದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ನಕ್ತ ಭೋಜನ (ಪೂಜೆ ಮಹಾಮಂಗಳಾರತಿ ಮುಗಿಸಿ ರಾತ್ರಿ ಮಾತ್ರ ಊಟ.) ಇದರ ವಿಶೇಷತೆ. ಸಪ್ತಶತೀ, ರಾಮಾಯಣ, ಚತುರ್ವೇದ, ಮಹಾಭಾರತ ಮೊದಲಾದ ಪಾರಾಯಣಗಳು ಜರುಗುತ್ತವೆ. ಮುಖ್ಯವಾಗಿ ಚಂಡೀ ಸಪ್ತಶತೀ (ದೇವೀ ಮಹಾತ್ಮೆ) ಪಾರಾಯಣವನ್ನು ಡಾಮರೀ ತಂತ್ರದಿಂದಲೂ, ಕಾತ್ಯಾಯನೀ ತಂತ್ರದಿಂದಲೂ ಮಾಡಲಾಗುತ್ತದೆ. ಮಹಾಕಾಳೀ, (೧,೨,೩) ಮಹಾಲಕ್ಷ್ಮೀ, (೪,೫,೬) ಮಹಾಸರಸ್ವತೀ,(೭,೮,೯) ತ್ರಿಗುಣಾತ್ಮಿಕಾ ದುರ್ಗಾ ಎಂದು ಕರೆಸಿಕೊಳ್ಳಲ್ಪಡುವ ದುರ್ಗೆ ಮೂರು ಮೂರು ದಿನಗಳಂತೆ ಆರಾಸಿಕೊಳ್ಳಲ್ಪಡುತ್ತಾಳೆ. ಮಹಾಕಾಳಿ ತಮೋಗುಣಕ್ಕೂ, ಮಹಾಲಕ್ಷ್ಮಿ ರಜೋಗುಣಕ್ಕೂ, ಮಹಾಸರಸ್ವತೀ ಸತ್ವಗುಣಕ್ಕೂ ಸಂಕೇತವಾಗಿದೆ. ತಾಮಸದಿಂದ ಸಾತ್ವಿಕದೆಡೆಗೆ ನಾವು ಸಾಗಬೇಕು. ಅಂತಹ ಸಂಸ್ಕೃತಿಯ ನಿರ್ಮಾಣವಾಗುವಂತೆ ಹಬ್ಬವನ್ನು ಆಚರಿಸಬೇಕು ಎಂಬ ಸಂದೇಶವನ್ನು ಇದು ರವಾನಿಸುತ್ತದೆ. ‘ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಕೇ || ಶರಣ್ಯೇ ತ್ರ್ಯಂಬಕೇ ದೇವಿ ( ಗೌರಿ) ನಾರಾಯಣಿ ನಮೋಸ್ತುತೇ’ ಎಂಬ ಸ್ತುತಿ ಸರ್ವಮಂಗಳೆ, ಲೋಕಮಾತೆಯ ಮಹಿಮೆಯನ್ನು ಸಾರುತ್ತದೆ.
  ಇದನ್ನು ದಿನಾಲೂ ಪಠಿಸುವುದರಿಂದ ಸಕಲ ಸುಖ ಶಾಂತಿ ಪ್ರಾಪ್ತವಾಗುತ್ತದೆ. ಶಕ್ತಿಯ ಆರಾಧನೆ ವೇದಕಾಲದಿಂದಲೂ ನಡೆದು ಬಂದಿದೆ. ಋಗ್ವೇದದ ೧೦ ನೇ ಮಂಡಲದಲ್ಲಿ ದೇವೀ ಸೂಕ್ತ, ರಾತ್ರಿ ಸೂಕ್ತಗಳು ದೇವೀಮಹಾತ್ಮೆಯನ್ನು ಸಾರುತ್ತವೆ.
  ಮಾರ್ಕಾಂಡೇಯ ಪುರಾಣದಲ್ಲಿ ಉಕ್ತವಾದ ದೇವೀ ಮಹಾತ್ಮೆಯ ಕಥೆಯಂತೆ, ಹರಿಹರವಿರಿಂಚಿ, ಇಂದ್ರಾದಿ ದೇವತೆಗಳಿಗೆ ಮಾತುಕೊಟ್ಟಂತೆ, ದುಷ್ಟ ಸಂಹಾರಕ್ಕೆ ದೇವಿ ಅವತರಿಸುತ್ತಾಳೆ. ಶುಂಭ, ನಿಶುಂಭರೆಂಬ ರಾಕ್ಷಸ ಸೋದರರು ಮೂರುಲೋಕವನ್ನು ಆಳುತ್ತಿದ್ದು, ದೇವಾದ್ಯರಿಗೂ ಇತರರಿಗೂ ಕಂಟಕರಾಗಿದ್ದರು. ಚಂಡ ಮುಂಡಾಸುರರು, ಧೂಮ್ರಲೋಚನ, ಮಹಿಷಾಸುರ, ರಕ್ತಬೀಜಸುರ ಮೊದಲಾದ ದೈತ್ಯ ಸಮೂಹದೊಂದಿಗೆ ಶುಂಭ ನಿಶುಂಭರನ್ನು ಸಂಹಾರ ಮಾಡಿ, ಜಗತ್ತಿಗೆ ಮಂಗಲವನ್ನು ಉಂಟು ಮಾಡಿದ ದೇವಿ ಸರ್ವಮಂಗಳೆಯೆನಿಸಿಕೊಂಡಿದ್ದಾಳೆ. ದೇವೀ ಭಾಗವತದಲ್ಲಿಯೂ ದೇವಿಯ ಮಹಾತ್ಮೆಯನ್ನು ತುಂಬ ಸುಂದರವಾಗಿ ವೈವಿಧ್ಯಮಯವಾಗಿ ವರ್ಣಿಸಲಾಗಿದೆ.
  ದುರ್ಗಿಯರ, ಮುತ್ತೈದೆಯರ ಪೂಜೆ, ದಂಪತಿ ಊಟ: ರಜಸ್ವಲೆಯಾಗದ ಕುಮಾರಿಯರನ್ನು ದುರ್ಗೆ ಎಂದೂ, ವಿವಾಹಿತರಾದ ಸುವಾಸಿನಿಯರನ್ನೂ, ದಂಪತಿಗಳನ್ನೂ ದಶದಿನಗಳಲ್ಲಿಯೂ ಪೂಜೆ ಮಾಡಿ, ಸೀರೆ ಕುಪ್ಪುಸ ವಸ್ತ್ರ, ಕಂಕಣ, ಫಲ ತಾಂಬೂಲ, ದಕ್ಷಿಣೆ ನೀಡಿ ಸತ್ಕರಿಸಲಾಗುತ್ತದೆ. ದುರ್ಗೆ ಕನ್ನಿಕೆಯಾಗಿ ಅವತಾರ ತಾಳಿ ದುಷ್ಟ ಸಂಹಾರ ಮಾಡಿ, ಜಗತ್ತನ್ನು ರಕ್ಷಿಸುವ ಕಾರಣದಿಂದ, ಕನ್ನಿಕೆಯರನ್ನು (ದುರ್ಗೆಯರು) ಪೂಜೆಮಾಡುವುದಕ್ಕೆ ನವರಾತ್ರಿಯಲ್ಲಿ ಬಹಳ ಮಹತ್ವ ಕೊಟ್ಟಿದ್ದಾರೆ.
  ಯಾಕೆಂದರೆ ದುರ್ಗಮ ಎಂಬ ರಾಕ್ಷಸನನ್ನು ಸಂಹರಿಸಿ, ಸಕಲಲೋಗರಿಗೆ ಸೌಖ್ಯ ಆನಂದ ಮತ್ತು ಮುಕ್ತಿಯನ್ನು ಕರುಣಿಸಲು, ದುರ್ಗಾ ಒಂಬತ್ತು ವರ್ಷದ ಕನ್ನಿಕೆಯಾಗಿ ಅವತರಿಸುತ್ತಾಳೆ. ೨ ರಿಂದ ೧೦ ವರ್ಷದ ಒಳಗಿನ ಕನ್ಯೆಯರನ್ನು ಕುಮಾರೀ, ತ್ರಿಮೂರ್ತೀ, ಕಲ್ಯಾಣೀ, ರೋಹಿಣೀ, ಕಾಳಿ, ಚಂಡಿಕೆ, ಶಾಂಭವೀ, ದುರ್ಗಾ ಹಾಗೂ ನವಮಿಯಂದು ಸುಭದ್ರಾ ಎಂದೂ ಪೂಜಿಸಲಾಗುತ್ತದೆ.
  ದಸರಾ ಹಬ್ಬ ತಾಯಿ ದುರ್ಗೆ ತವರುಮನೆಗೆ ಮರಳುವುದರ ಸೂಚಕವೂ ಹೌದು. ಹಿಮವಂತ ತನ್ನ ಮಗಳು ಉಮೆಯನ್ನು ಶಿವನಿಗೆ ಮದುವೆ ಮಾಡಿಕೊಟ್ಟ. ಉಮೆ (ಗೌರೀ) ದಸರೆಯಲ್ಲಿ ಹತ್ತು ದಿನ ತವರಿಗೆ ಬಂದಿರುತ್ತಾಳೆ. ಅದರ ನೆನಪಾಗಿ ಮದುವೆಯಾದ ಹೆಣ್ಣುಮಕ್ಕಳನ್ನು ತವರಿಗೆ ಆಮಂತ್ರಿಸಿ, ಮುತ್ತೈದೆಯಾಗಿ ಪೂಜಿಸಿ, ಬಾಗಿನ ನೀಡಿ ಸತ್ಕರಿಸುತ್ತಾರೆ.
  ಪ್ರಥಮ ದಿನ: ಯೋಗ ನಿದ್ರಾ : ಪಾಡ್ಯ; ಪ್ರತಿಮೆ, ಕಲಶ ಸ್ಥಾಪನೆ, ಬ್ರಾಹ್ಮಣ ವರ್ಣನೆ, ಪೂಜ-ಪಾರಾಯಣ ಪ್ರಾರಂಭ.
  ಸ್ವರೂಪ : ಯೋಗನಿದ್ರಾ ದೇವಿ ಉಪಾಸನೆ. ವಿದ್ಯುತ್ ಸಮೂಹಪ್ರಭೆ, ಕನ್ಯೆಯರಿಂದ ಆಸೇವಿತೆ, ಚಕ್ರ, ಗದೆ, ಖಡ್ಗ, ಖೇಟ, ಬಾಣ, ಚಾಪಧಾರಿಣಿ, ತ್ರಿಣೇತ್ರೆ, ಅಗ್ನಿಕಾಂತಿದುರ್ಗೆ, ಶಶಿಧರೆ. ಮಹಾಕಾಳಿ ಮಧು ಕೈಟಭ ನಾಶಿನಿಯೆಂದೂ ವರ್ಣಿಸಲಾಗಿದೆ.
  ಮಹಾಕಾಳಿಯೆ ವಿಷ್ಣುವಾಗಿದ್ದಳು. ಅವಳು ಪುರುಷರೂಪಿಯೂ ಆಗಿದ್ದಳು. ಸಹಸ್ರವರ್ಷ ಯುದ್ಧ ಮಾಡಿದ ಸಾವಿಲ್ಲದ ಮಹಾಶೂರರಾದ ಮಧು ಕೈಟಭ ಎಂಬ ರಕ್ಕಸರನ್ನು ಮಹಾಕಾಳಿಯ ಅವತಾರವಾದ ವಿಷ್ಣುವು ಸುದರ್ಶನ ಚಕ್ರದಿಂದ ಅವರ ತಲೆಗಳನ್ನು ಸಹಸ್ರ ಚೂರಾಗುವಂತೆ ಕತ್ತರಿಸಿದನು ಎಂದು ದೇವೀ ಮಹಾತ್ಮೆ ಹೇಳುತ್ತದೆ. ಮಧು-ಕೈಟಭರೇ ವರ ಕೊಡುವಂತೆ ಉಪಾಯ ಮಾಡಿ ಅವರನ್ನು ಕೊಲ್ಲುತ್ತಾನೆ. ದುಷ್ಟರಿಗೆ ಅಹಂಕಾರ ಜಸ್ತಿ. ವಿವೇಕ ಕಮ್ಮಿ. ತಮ್ಮಷ್ಟಕ್ಕೆ ತಾವೇ ಸಿಕ್ಕು ಬೀಳುವಂತೆ ಮಾಡುವುದು ದೇವರ ಸುತಂತ್ರಗಾರಿಕೆ!
  ದ್ವಿತೀಯದಿನ: ದೇವಜತಾ: ಹಂಸಾರೂಢೆ, ಶುಕ್ಲವರ್ಣೆ, ಶ್ವೇತ ಮಾಲ್ಯಾದಿಗಳಿಂದ ಅಲಂಕೃತೆ, ಚತುರ್ಭುಜೆ, ಸೃಕ್, ಸ್ರುವೆ, ಕಮಂಡಲು, ವೃಕ್ಷಮಾಲಿಕೆಯಿಂದ ಸುಶೋಭಿತೆ. ಮಹಿಷಾಸುರಾದಿ ರಕ್ಕಸರ ಸೇನಾಗಣ ಸಂಹಾರ.
  ತೃತೀಯಾ: ಮಹಿಷಮರ್ದಿನೀ: ಗೌರವರ್ಣ, ದ್ವಿಭುಜೆ, ಗೌರವಸ್ತ್ರಧಾರಿಣೀ, ಸುವಾಸಿತ ಕೆಂದಾವರೆ ಎರಡನ್ನು ಕೈಯ್ಯಲ್ಲಿ ಹಿಡಿದವಳು, ಸಿಂಹಾರೂಢೆ. ಶುಂಭ ನಿಶುಂಭ ಅಸುರರ ರಾಜ್ಯದಲ್ಲಿ ಅಗ್ರನಾಯಕನೆನಿಸಿದ, ಕೋಣನಕೋಡಿನ, ಮಹಿಯಲ್ಲಿ ಶೂರನಾದ, ಮಹಿಷಾಸುರನೆಂಬ ಲೋಕಕಂಟಕ ರಾಕ್ಷಸನನ್ನು ಸಂಹಾರ ಮಾಡಿದಳು. ಕಾರಣ ಮಹಿಷಮರ್ದಿನೀ ಎಂದು ಕರೆಸಿಕೊಂಡಳು.
  ಚತುರ್ಥದಿವಸ: ಶೈಲಜಾ ಪೂಜ: ರಕ್ತವರ್ಣೆ, ಚತುರ್ಬಾಹು, ಕೆಂಪುವಸ್ತ್ರಾದಿಗಳನ್ನು ಧರಿಸಿದವಳು, ಪಾಶ, ಅಂಕುಶ, ಮಾತುಲಿಂಗ ಆಯುಧಧರೆ, ಮೂಷಿಕ ವಾಹಿನೀ, ಶೈಲದಲ್ಲಿ ಜನ್ಮತಾಳಿದಳಾದ ಕಾರಣ ಶೈಲಜ. ರಾಕ್ಷಸ ಸೈನಿಕರ ವಧೆ.
  ಲಲಿತಾಪಂಚಮಿ ತ್ರಿಪುರಸುಂದರೀ =ಧೂಮ್ರಹಾಪೂಜ : ಬಂಗಾರದ ಮೈಕಾಂತಿ, ಚತುರ್ಭುಜೆ, ಶಂಖ-ಚಕ್ರ =ಗದೆ- ಕಮಲ ಧಾರಿಣಿ, ಮಕರವಾಹಿನಿಯಾದ ದೇವಿ.
  ತ್ರಿಪುರಸುಂದರಿಯಾಗಿ ಕಾಣಿಸಿಕೊಂಡು ವನವಿಹಾರ ಮಾಡುತ್ತಿರುತ್ತಾಳೆ. ಈಗಾಗಲೇ ಲೋಕಕಂಟಕರಾಗಿ ಮೂರುಲೋಕವನ್ನೂ ವಶಪಡಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದ ಶುಂಭ ಮತ್ತು ನಿಶುಂಭ ಎಂಬ ದೈತ್ಯಸೋದರರು ತ್ರಿಪುರ ಸುಂದರಿಗೆ ಮರುಳಾಗುತ್ತಾರೆ. ಅವಳನ್ನು ಮದುವೆಯಾಗಲು ಬಯಸುತ್ತಾರೆ. ತ್ರಿಪುರಸುಂದರಿ ತನ್ನನ್ನು ಯುದ್ಧದಲ್ಲಿ ಜಯಿಸಿದರೆ ಮದುವೆಯಾಗುತ್ತೇನೆ ಎಂದು ಪಂಥಾಹ್ವಾನವೀಯುತ್ತಾಳೆ.
  ಅವಳನ್ನು ಕರೆತರಲು ಶುಂಭ-ನಿಶುಂಭರು ಧೂಮ್ರಲೋಚನನೆಂಬ ಮಂತ್ರಿಯನ್ನು ಕಳುಹಿಸುತ್ತಾರೆ. ಮಾತಿನಿಂದ ಮರುಳುಮಾಡುತ್ತ, ಶುಂಭನನ್ನು ಮದುವೆಯಾಗೆಂದು ಬಲವಂತಮಾಡಿದಾಗ ಆತನನ್ನು ದೇವಿ ಸುಟ್ಟು ಭಸ್ಮಮಾಡುತ್ತಾಳೆ. ಧೂಮ್ರಲೊಚನನನ್ನು ಕೊಂದು ಱಧೂಮ್ರಹಾಱ ಎಂಬ ಹೆಸರು ಪಡೆಯುತ್ತಾಳೆ. ಹಾ- ಸಂಹಾರ (ಹೃಞ ಹರಣೇ ).
  ಈ ಐದನೇದಿನವನ್ನು ಲಲಿತಾಪಂಚಮಿ ಎಂದು ಕರೆದಿದ್ದಾರೆ. ತ್ರಿಪುರಸುಂದರೀ ಲಲಿತೆ ಪ್ರಾಯಕ್ಕೆ ಬಂದ ಕನ್ನೆಯರಿಗೆ ಒಳ್ಳೆಯ ಗಂಡನನನ್ನು ಕರುಣಿಸುತ್ತಾಳೆ. ಹೆಣ್ಣುಮಕ್ಕಳೇ ವಿಶೇಷವಾಗಿ ಆಚರಿಸುವ ಲಲಿತಾಸಹಸ್ರನಾಮ ಸ್ತೋತ್ರ ಈ ದಿನದ ವಿಶೇಷ ಮಹತ್ವ.
  ಷಷ್ಠ ದಿವಸ: ಚಂಡಮುಂಡಹಾ ಪೂಜ : ಸುವರ್ಣ ವಸ್ತ್ರಾದ್ಯಲಂಕಾರ. ಸಟಿಕಮಾಲೆ ಮತ್ತು ಸಟಿಕ ಕಾಂತಿಯಿಂದ ಕೂಡಿದವಳು. ಕೈಗಳಲ್ಲಿ ಬಾಣ, ಕೋದಂಡ, ಖೇಟ, ಶಕ್ತಿ, ಆಯುಧಗಳನ್ನು ಹಿಡಿದವಳು. ಮಯೂರವಾಹಿನಿಯಾದ ದೇವಿ.
  ಚಂಡಾಸುರ ಮುಂಡಾಸುರನೆಂಬವನ ಅಣ್ಣ. ಇವರಿಬ್ಬರೂ ಶುಂಭ-ನಿಶುಂಭರ ಸೇನಾಪತಿಗಳು. ತ್ರಿಪುರಸುಂದರಿಯನ್ನು ಕರೆತರಲು ಸೇನಾಸಮೇತ ಹೋಗಿ ಇವರು ದೇವಿಯಿಂದ ಹತರಾಗುತ್ತಾರೆ. ಚಾಮುಂಡಿ ಎಂದು ಸ್ತುತಿಸಲ್ಪಡುತ್ತಾಳೆ.
  ಸಪ್ತಮದಿವಸ: ರಕ್ತಬೀಜಹಾ ಪೂಜ -ಶಾರದಾ ಸ್ಥಾಪನೆ :
  ರಕ್ತವರ್ಣ, ಅಲಂಕೃತೆ, ದ್ವಿಭುಜ, ಅಂಬುಜ (ಕಮಲ) ಧಾರಿಣಿ. ರಥಾರೂಢೆ,
  ರಕ್ತಬಿಜಸುರ ಸಂಹಾರ: ರಕ್ತಬೀಜ ಎಂಬ ರಾಕ್ಷಸ ಶುಂಭ ನಿಶುಂಭರ ಸೋದರಳಿಯ. ಇವನು ಪರಮೇಶ್ವರನನ್ನು ಕುರಿತು ಘೋರ ತಪಸ್ಸುಮಾಡಿ, ಒಲಿಸಿಕೊಂಡು ಭೂಮಿಗೆ ಬಿದ್ದ ತನ್ನ ದೇಹದ ಒಂದೊಂದು ಹನಿ ರಕ್ತದಿಂದಲೂ ಒಬ್ಬೊಬ್ಬ ತನ್ನದೇ ಪ್ರತಿಸ್ವರೂಪನಾದ ವೀರರಕ್ಕಸ ಜನಿಸಬೇಕು ಎಂಬ ವರವನ್ನು ಪಡೆದುಕೊಳ್ಳುತ್ತಾನೆ. ತ್ರಿಪುರಸುಂದರಿಯನ್ನು ಕರೆತರಲು ಹೋದಾಗ ಆಕೆ ಮಹಾಕಾಳಿಯಾಗಿ, ನಡೆದ ಘೋರಕಾಳಗದಲ್ಲಿ ರಕ್ತಬೀಜನ ದೇಹದಿಂದ ರಕ್ತಬಿದ್ದಂತೆ ಅಸಂಖ್ಯ ರಕ್ತಬೀಜಸುರರು ಹುಟ್ಟಿಬರಲು, ದೇವಿ ಚಾಮುಂಡಿಯನ್ನು ‘ನಾಲಿಗೆಯನ್ನು ನೆಲಕ್ಕೆ ಹಾಸಿ ಅವನ ರಕ್ತವನ್ನು ಹೀರು’ಎಂದು ಕೋರುತ್ತಾಳೆ. ಚಾಮುಂಡಿ ಅಸುರನ ರಕ್ತ ನೆಲಕ್ಕೆ ಬೀಳದಂತೆ ಹೀರಿಬಿಡುತ್ತಾಳೆ. ಆಗ ಬಲಗುಂದಿದ ರಕ್ತಬೀಜಸುರನನ್ನು ದೇವಿ ಸಂಹರಿಸಿ, ‘ರಕ್ತಬೀಜಹಾ’ಎಂದು ನಾಮಾಂಕಿತಳಾಗುತ್ತಾಳೆ. (ರಕ್ತಬಿಜಸುರ ಸಂತತಿ, ವಂಶ ಎಂಬ ಪ್ರತೀತಿ ಗಮನಿಸಿ)
  ಏಳನೆಯ ದಿನದಿಂದ ಮೂರುದಿನಗಳ ಕಾಲ ಮಹಾಸರಸ್ವತೀ ರೂಪದಲ್ಲಿ ದೇವಿಯನ್ನು ಅರಾಸಲಾಗುತ್ತದೆ. ಪುಸ್ತಕಗಳನ್ನು ಪೂಜೆಗಿಟ್ಟು ಮೂರು ದಿನ ಪೂಜೆ ಮಾಡಿ ವಿಜಯ ದಶಮಿಯಂದು ಪ್ರಸಾದ ರೂಪದಲ್ಲಿ ಪುಸ್ತಕ ಪಡೆದು ವಾಚನ ಮಾಡಲಾಗುತ್ತದೆ.
  ಅಷ್ಟಮದಿನ: ನಿಶುಂಭಹಾ ಪೂಜ :
  ಶ್ವೇತವಸ್ತ್ರಾದಿಗಳಿಂದ ಅಲಂಕೃತೆ. ಚತುರ್ಭುಜೆ. ತ್ರಿಶೂಲ, ಢಮರು, ರಥಾಂಗ, ಕುಲಿಶ, ಕುಠಾರ, ಶಂಖ, ಅಭಯಪಾಶ, ಶಕ್ತಿ, ಚಕ್ರ, ಕಮಂಡಲು ಧಾರಿಣಿ. ಶರಾಸನೆ.
  ತ್ರಿಪುರಸುಂದರಿಯನ್ನು ಪಡೆಯಲು ನಿಶುಂಭ ಅಸುರ ಯುದ್ಧಕ್ಕೆ ಬರುತ್ತಾನೆ. (ಶುಂಭ ನಿಶುಂಭ ಅಣ್ಣ ತಮ್ಮಂದಿರಲ್ಲೂ ತ್ರಿಪುರ ಸುಂದರಿಯನ್ನು ತಾನು ಪಡೆಯಬೇಕು ತಾನು ಪಡೆಯಬೇಕು ಎಂಬ ಪೈಪೋಟಿಯಿರುವುದು ಧ್ವನಿಪೂರ್ಣವಾಗಿದೆ. ಇದು ವಿಶಿಷ್ಟ ಸಂದೇಶವನ್ನು ರವಾನಿಸುವುದನ್ನೂ ಕಾಣಬಹುದು : ಒಬ್ಬ ಹೆಣ್ಣಿಗಾಗಿಯೇ ಸುಂದೋಪಸುಂದರ ಕಾಳಗ ಈಗಲೂ ಎಲ್ಲೆಂದರಲ್ಲಿ ನಡೆಯುತ್ತಿದೆಯಲ್ಲವೆ? ಹೆಣ್ಣು, ಹೊನ್ನು, ಮಣ್ಣು ಇವುಗಳಲ್ಲಿ ಹೆಣ್ಣಿಗೇ ಅಗ್ರಸ್ಥಾನ) ನಿಶುಂಭ ದೇವಿಯಿಂದ ಹತನಾಗುತ್ತಾನೆ. ಆಕೆ ‘ನಿಶುಂಭಹಾ’ಬಿರುದು ಪಡೆಯುತ್ತಾಳೆ.
  (ಅಷ್ಟಾದಶ ಭುಜೇ, ಸಹಸ್ರಭುಜೆ ಮುಂತಾದ ವರ್ಣನೆಗಳೂ ಇದ್ದು ದೇವಿಯು ಯಾವುದೇ ರೂಪಗಳನ್ನು ತಾಳಿ ದುಷ್ಟ ಸಂಹಾರ ಶಿಷ್ಟ ರಕ್ಷಣೆಯನ್ನು ಮಾಡುವಳು ಎಂಬುದು ಇದರ ಸಂಕೇತವಾಗಿದೆ)
  ಮಹಾನವಮಿ (ಮಾನೌಮಿ) ಶುಂಭಹಾ ಪೂಜ
  ತ್ರಿನೇತ್ರಳೂ, ಚಂದ್ರಚೂಡಳೂ, ಮುಕುಟಶೋಭಿತೆಯೂ, ಸೂರ್ಯಕೋಟಿಪ್ರತೀಕಾಶಳೂ, ಶುಂಭಾಸುರ ಮರ್ದಿನಿಯೂ, ತ್ರಿದಶಪೂಜಿತಳೂ, ಸಿಂಹಾರೂಢೆಯೂ ಆದ ಮಹಾದುರ್ಗೆ ಎಂದು ವರ್ಣಿಸಲಾಗಿದೆ. ಕೊನೆಯದಾಗಿ ಬಂದ ಮಹಾಶೂರ ಶುಂಭಾಸುರನನ್ನು ತ್ರಿಪುರ ಸುಂದರಿ ದುರ್ಗೆಯಾಗಿ ಸಂಹಾರ ಮಾಡುತ್ತಾಳೆ.
  ದುರ್ಗೆ ಅರುಣನೆಂಬ ರಾಕ್ಷಸನನ್ನು ಕೊಂದು ಭ್ರಾಮರೀ ದುರ್ಗೆಯೆಂದು ಆರಾಸಲ್ಪಡುತ್ತಾಳೆ.
  ಮರಣವೇ ಮಾಹಾ ನವಮಿ ಎಂಬ ವೀರ ಪರಂಪರೆ ನಮ್ಮದು. ಭಾರತ ದೇಶದ ಇತಿಹಾಸ ವಿಜಯದ ಇತಿಹಾಸ. ಯೋಧರಾದವರು ತಮ್ಮ ಶಸ್ತ್ರಾಸ್ತ್ರಗಳನ್ನು ಪೂಜಿಸುವ, ಕೃಷಿಕರು ಕೃಷಿಸಲಕರಣೆಗಳನ್ನು ಪೂಜಿಸುವ, ಇತರರು ತಮ್ಮ ತಮ್ಮ ಯಂತ್ರೋಪಕರಣಗಳನ್ನು ಪೂಜಿಸುವ ಆಯುಧ ಪೂಜಾದಿವಸವನ್ನಾಗಿ ಇದನ್ನು ಬಹುಮುಖ್ಯವಾಗಿ ಆಚರಿಸುತ್ತಾರೆ.
  ಶ್ರೀರಾಮಚಂದ್ರ ರಾವಣನ ತಲೆಯನ್ನು ಕಡಿದಂತೆ ಅದು ಮತ್ತೆ ಮೊಳೆತು ಬರುತ್ತಿರುವಾಗ, ಆತ ನವದುರ್ಗೆಯನ್ನು ಪೂಜೆಮಾಡಿ, ಆರಾಸಿ, ಒಲಿಸಿಕೊಂಡು ಪ್ರಾರ್ಥಿಸಿದ. ದೇವಿ ತಲೆಮೊಳೆಯದಂತೆ ಅನುಗ್ರಹಿಸಿದಳು. ರಾಮ ದಶಕಂಠನನ್ನು ಸಂಹಾರ ಮಾಡುವಲ್ಲಿ ಯಶಸ್ವಿಯಾದ. ಮರುದಿವಸ ನವಮಿಯಂದು ದೇವತೆಗಳೆಲ್ಲ ದೇವಿಯನ್ನು ಪೂಜಿಸಿದರು. ರಾಮ ವಿಜಯದಶಮಿಯಂದು ಶಮೀವೃಕ್ಷವನ್ನು ಪೂಜೆಮಾಡಿ, ಪುಷ್ಪಕ ವಿಮಾನವೇರಿ ಅಯೋಧ್ಯೆಗೆ ತೆರಳಿದ.
  ಪಾಂಡವರು ಮಹಾನವಮಿಯಂದು ಶಮೀವೃಕ್ಷದ ಪೊಟರೆಯಲ್ಲಿಟ್ಟಿದ್ದ ಆಯುಧಗಳನ್ನು ಹೊರತೆಗೆದು ಪೂಜಿಸಿ, ವಿಜಯದಶಮಿಯಂದು ಪ್ರಕಟರಾದರು.
  ಱಮರಣವೇ ಮಹಾನವಮಿಯೆಂದಂದು ಭಾವಿಸಿದ | ಭರತ ಭೂ ವೀರಜನ ಮುಡುಪಿಟ್ಟು ತಮ್ಮ || ಪರಮಶೌರ್ಯವ ಮೆರೆದು ಜೀವನಹವಿಸ್ಸನ್ನು | ಮರಣಜನಕಿಟ್ಟರು ಮಂದಾರ ಮಧುರ || ಭಾರತದ ಶುಭಚರಿತೆ ಹೊಳೆಹೊಳೆವ ವಿಜಯಕತೆ | ರತೆಯ ಶೂರತೆಯ ಸಂಮಾನಗೀತೆ || ಕೀರುತಿಯ ಗರುವದಲಿ ನೆನೆಯುತ್ತಲಿತಿಹಾಸ | ಸಾರವನು ಮನಗಾಣು ಮಂದಾರ ಮಧುರ ||ಱ ಎಂಬ ಕಗ್ಗದಲ್ಲಿ ಮಾನೌಮಿಯ ಮಹತ್ವ ಅಡಗಿದೆ.

ಮೈಸೂರು ದಸರಾ
ವಿಶ್ವಮಾನ್ಯ ಕರುನಾಡಿನ ದಸರಾ ಹಬ್ಬಕ್ಕೆ ನಾಲ್ಕು ಶತಮಾನಗಳಿಗೂ ಅಕ ಇತಿಹಾಸವಿದೆ. ಸುವರ್ಣ ಯುಗವೆನಿಸಿದ ವಿಜಯನಗರದ ಅರಸರ ಕಾಲದಲ್ಲಿ ದಸರಾ ಮಹೋತ್ಸವ ಆರಂಭವಾಯಿತು. ಸುಪ್ರಸಿದ್ಧ ದೊರೆ ಶ್ರೀಕೃಷ್ಣ ದೇವರಾಯರು, ಇನ್ನೂ ಹೆಚ್ಚಿನ ವಿಜೃಂಭಣೆಯ ವರ್ಣಮಯ ಕಳೆಯನ್ನು ತಂದುಕೊಟ್ಟರು. ಅವರ ನಂತರ ಯದುವಂಶೀಯ ಮೈಸೂರು ಅರಸರು ನಡೆಸಿಕೊಂಡು ಬಂದರು. ಚಾಮುಂಡೇಶ್ವರೀ ಆರಾಧನೆಯೊಂದಿಗೆ ಆರಂಭವಾಗುವ ದಸರಾ ಮಹೋತ್ಸವ, ವಿಜಯದಶಮಿಯಂದು ಅಂಬಾರಿ ಮೆರವಣಿಗೆಯೊಂದಿಗೆ, ಬನ್ನಿಮಂಟಪದಲ್ಲಿ ಸ್ನೇಹದ ಕುರುಹಾಗಿ ಬನ್ನಿಪತ್ರೆ ಹಂಚುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ. ಮೈಸೂರು ದಸರಾ ವಿಶ್ವವಿಖ್ಯಾತವಾಗಿದೆ. ಮೊದಲು ಶ್ರೀರಂಗ ಪಟ್ಟಣದಲ್ಲಿ ರಾಜ ಒಡೆಯರ್ (೧೫೭೮-೧೬೧೭) ದಸರಾ ಹಬ್ಬವನ್ನು ಪ್ರಾರಂಭಿಸಿದರು. ಹೈದರಾಲಿ, ಟಿಪ್ಪು ನಂತರ ಮತ್ತೆ ಅಕಾರಕ್ಕೆ ಬಂದ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (೧೭೯೯-೧೮೬೮) ಮೈಸೂರಿಗೆ ವರ್ಗಾವಣೆ ಆಯಿತು.
ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಇಲ್ಲಿ ವಾಸವಾಗಿದ್ದ. ಅವನನ್ನು ಕೊಂದು ಮಹಿಷಮರ್ದಿನಿಯೆನಿಸಿದ ಚಾಮುಂಡೇಶ್ವರಿಯನ್ನು ಭಕ್ತಿ ಭಾವದಿಂದ ಅರ್ಚಿಸಲಾಗುತ್ತದೆ. ಮಹಿಶೂರನಾದ ಮಹಿಷಾಸುರನನ್ನು ಮರ್ದಿಸಿದ ಚಾಮುಂಡೇಶ್ವರಿಯ ನೆಲೆಯಾದ ಕಾರಣ ಮೈಸೂರು ಎಂಬ ಹೆಸರು ಪಡೆದಿದೆ ಎಂದೂ ಹೇಳಲಾಗುತ್ತದೆ. ಹತ್ತುದಿನಗಳ ಕಾಲ ವಿಜೃಂಭಣೆಯಿಂದ ದಸರಾ ಉತ್ಸವ ಜರುಗುತ್ತದೆ. ದೇಶ ವಿದೇಶಗಳಿಂದ ಜನಪ್ರವಾಹ ಹರಿದು ಬರುತ್ತದೆ. (ಹೆಚ್ಚಿನ ವಿವರಗಳಿಗೆ ಕನ್ನಡ ವಿಶ್ವಕೋಶ ಹಾಗೂ ವಿಕಿಪಿಡಿಯಾ ವೀಕ್ಷಿಸಿ )
ಬೊಮ್ಮೈ ಕೋಲು ತಮಿಳುನಾಡಿನಲ್ಲಿ ಸಂಪತ್ತಿನ ಅಶ್ವರಿ ಲಕ್ಷ್ಮೀ, ವಿದ್ಯೆಯ ಅಶ್ವರಿ ಸರಸ್ವತೀ, ಶಕ್ತಿದೇವತೆ ದುರ್ಗೆಯನ್ನು ಆರಾಸಲಾಗುತ್ತದೆ. ಬೊಮ್ಮೆ ಕೋಲು ಎಂಬ ವಿಶಿಷ್ಟ ಡೋಲು ಕುಣಿತ ಈ ಹಬ್ಬದ ವಿಶೇಷವಾಗಿದೆ. ಭಾರತದ ಎಲ್ಲ ರಾಜ್ಯಗಳಲ್ಲೂ ಒಂದಿಲ್ಲೊಂದು ವೈಶಿಷ್ಟ್ಯದಿಂದ ಕೂಡಿದ ಹಬ್ಬದ ಆಚರಣೆಯನ್ನು, ನವದುರ್ಗೆಯ ಆರಾಧನೆಯನ್ನೂ ಆಚರಿಸುವುದನ್ನು ಕಾಣುತ್ತೇವೆ.
ಕುಲು- ದಸರಾ ಹಿಮಾಚಲ ಪ್ರದೇಶದ ಚಿಕ್ಕದಾದರೂ ತುಂಬ ಸುಂದರ ಹಿಲ್ ಪ್ರದೇಶವಾದ ಕುಲುವಿನಲ್ಲಿ ಎರಡುಶತಮಾನಗಳ ಹಿಂದಿನಿಂದಲೂ ವಿಶ್ವಪ್ರಸಿದ್ಧವಾದ ದಸರಾ ಉತ್ಸವವನ್ನು ವಿಜೃಂಬಣೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ ಮತ್ತು ಪಂಜಾಬನ್ನು ಆಳುತ್ತಿದ್ದ ಜಗತ್ಪ್ರಸಿದ್ಧ ದೊರೆ ರಣಜೀತ್ ಸಿಂಗ್ ಇದನ್ನು ಪ್ರಾರಂಭಿಸಿದನು ಎಂದು ಇತಿಹಾಸ ಹೇಳುತ್ತದೆ.
ರಾಮಲೀಲಾ: ದೇವಾದ್ಯರಿಗೂ, ಋಷಿ ಮುನಿಗಳಿಗು, ಸಾಧು ಸಂತರಿಗೂ ಕಂಟಕರಾದ ರಾಕ್ಷಸರ ಅಪನಾಗಿ ಮೆರೆಯುತ್ತಿರುವ, ಸುಂದರಿ ಮಂಡೊದರಿಯ ಗಂಡ, (ಅಸಂಖ್ಯಜನ ಹೆಣ್ಣುಮಕ್ಕಳನ್ನು ಇಟ್ಟುಕೊಂಡಿರುವ ) ಶೂರ್ಪನಖಿ, ಕುಂಭಕರ್ಣ, ವಿಭೀಷಣರ ಅಣ್ಣ, ಮೇಘನಾದ, ಅಕ್ಷಯಕುಮಾರರ ತಂದೆ, ಲಂಕಾಪತಿ ದಶಕಂಠ ರಾವಣ ಶ್ರೀರಾಮನ ಪತ್ನಿ ಜನಕನಂದಿನಿ ಸೀತೆಯನ್ನು ಅಪಹರಿಸುತ್ತಾನೆ. ಹನುಮಂತ, ಸುಗ್ರೀವ ಹಾಗೂ ಕಪಿಸೈನ್ಯದ ಜೊತೆ ಲಂಕೆಗೆ ಹೋಗಿ ರಾವಣನ ಸಂಹಾರ ಮಾಡಿ, ವಿಭೀಷಣನಿಗೆ ಪಟ್ಟಗಟ್ಟಿ ಶ್ರೀರಾಮಚಂದ್ರ ಅಯೋಧ್ಯೆಗೆ ಹಿಂದಿರುಗುತ್ತಾನೆ. ೧೦೦ ಪೂಟ ಎತ್ತರದ ಹತ್ತು ತಲೆಯ ರಾವಣನನ್ನು ಕಟ್ಟಿಗೆ, ಕಾಗದ ಮುಂತಾದವುಗಳಿಂದ ನಿರ್ಮಾಣ ಮಾಡಿ, ಅದರಲ್ಲಿ ಪಟಾಕ್ಷಿ, ಸಿಡಿಮದ್ದುಗಳನ್ನು ಇಟ್ಟು ದಶಮಿದಿನ ಅದಕ್ಕೆ ಶ್ರೀರಾಮ ಪಾತ್ರಧಾರಿ ಬಾಣಬಿಟ್ಟು ಬೆಂಕಿ ಹಚ್ಚುತ್ತಾನೆ.. ನಿಧಾನವಾಗಿ ಮಹಾರಾವಣ ಸಿಡಿ,ಸಿಡಿದು ಸುಟ್ಟುಭಸ್ಮವಾಗುತ್ತಾನೆ. ದಸರೆಯಲ್ಲಿ ರಾಮಾಯಣದ ಕಥೆಯ ಮೇಲೆ ರಾಮಲೀಲಾ ನಾಟಕ, ರಾಮಲೀಲಾನೃತ್ಯ, ಜನಪದಕಲಾಮೇಳ, ವಿವಿಧ ಮನರಂಜನಾ ಕಾರ್ಯಕ್ರಮಗಳು ಮುಂತಾಗಿ ಜರುಗುತ್ತವೆ. ಇಡೀ ಭಾರತವೇ ಉತ್ಸಾಹ, ಉತ್ಸವದ ಮಹಾನದಿಯಲ್ಲ್ಲಿ ತೇಲುತ್ತಿರುತ್ತದೆ.

 

LEAVE A REPLY