ಭಾರತ-ಪಾಕಿಸ್ತಾನ ಯುದ್ಧದಲ್ಲಿ ವಾಯುಸೇನೆ ಮುಖ್ಯಸ್ಥರಾಗಿದ್ದ ಮಾರ್ಷಲ್ ಅರ್ಜುನ್ ಸಿಂಗ್ ನಿಧನ

ಹೊಸದಿಲ್ಲಿ : 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ವಾಯುಸೇನೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಮಾರ್ಷಲ್ ಅರ್ಜುನ್ ಸಿಂಗ್ ಅವರು ಶುಕ್ರವಾರ ರಾತ್ರಿ ನಿಧನರಾದರು.
ಅರ್ಜುನ್ ಸಿಂಗ್ ಅವರಿಗೆ ಹೃದಯಸ್ಥಂಭನವಾಗಿದ್ದರಿಂದ ಅವರನ್ನು ಹೊಸದಿಲ್ಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
98 ವರ್ಷ ವಯಸ್ಸಿನ ಅರ್ಜುನ್ ಸಿಂಗ್‌ರನ್ನು ಸೇರಿಸಲಾಗಿದ್ದ ಆಸ್ಪತ್ರೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಾಯುಸೇನೆ ಮುಖ್ಯಸ್ಥ ಬಿ. ಎಸ್. ದಹಾಸ್ ಅವರು ಸಿಂಗ್ ಅವರ ಆರೋಗ್ಯಸ್ಥಿತಿಯ ಕುರಿತು ವಿಚಾರಿಸಿದ್ದರು. ಈ ಕುರಿತು ಪ್ರಧಾನಿ ಮೋದಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.
ಭಾರತೀಯ ವಾಯುಸೇನೆಯಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಸಮನಾದ ಹುದ್ದೆ ಎಂದರೆ ಅದು ಮಾರ್ಷಲ್ ಆಗಿದೆ. ಈ ಶ್ರೇಣಿಯನ್ನು ಪಡೆದಿರುವ ಏಕೈಕ ವ್ಯಕ್ತಿ ಅರ್ಜುನ್ ಸಿಂಗ್. ಕಳೆದ ವರ್ಷ ಪಶ್ಚಿಮ ಬಂಗಾಲದ ಪನ್‌ಗಡ ವಾಯು ನೆಲೆಗೆ ಅರ್ಜುನ್ ಸಿಂಗ್ ಅವರ ಹೆಸರನ್ನು ಇರಿಸಲಾಗಿತ್ತು. ವಾಯುನೆಲೆಯೊಂದಕ್ಕೆ ಜೀವಂತ ವ್ಯಕ್ತಿಗಳ ಹೆಸರನ್ನು ಇರಿಸಿದ್ದು ಅದೇ ಮೊದಲಾಗಿತ್ತು. 2002ರಲ್ಲಿ ಸಿಂಗ್ ಅವರಿಗೆ ಫೈವ್ ಸ್ಟಾರ್ ಶ್ರೇಣಿಗೆ ಭಡ್ತಿ ನೀಡಲಾಗಿತ್ತು.

LEAVE A REPLY