ಸಿಹಿ ಗೆಣಸಿಗೆ ಬಂತು ಮರುಜೀವ: ನೆದರ್ಲೆಂಡ್ ನಿಂದ ಸಿಕ್ಕಿದೆ ಬೇಡಿಕೆ!

 • ಮಹಾಂತೇಶ ಕಣವಿ
  ಧಾರವಾಡ: ಪುರಾಣ ಕಾಲದಿಂದಲೂ ಗೆಣಸು ಭಾರತೀಯರ ವಿಶಿಷ್ಟ ಆಹಾರ. ಇಂತಹ ಆಹಾರ ಪದಾರ್ಥ ಸಾರ್ವಜನಿಕರ ಬಳಕೆಯಿಂದಲೂ ದೂರವಾದಾಗ ರೈತರು ಗೆಣಸು ಬಿತ್ತನೆ ಕಡಿಮೆ ಮಾಡಿದ್ದುಂಟು. ಇದೀಗ ವಿದೇಶಿ ಕಂಪನಿಯ ಮೂಲಕ ದೇಸಿಯ ಸಿಹಿ ಗೆಣಸು ಬಿತ್ತನೆಗೆ ಪ್ರೋತ್ಸಾಯಿಸುವ ಮೂಲಕ ರೈತರ ಜೇಬು ತುಂಬಿಸುವ ಕೆಲಸಕ್ಕೆ ಮುಂದಾಗಿದೆ.
  ಹೌದು, ವಿದೇಶಿ ಕಂಪನಿಯ ಮೂಲಕ ಮರುಜೀವ ಪಡೆದುಕೊಳ್ಳುತ್ತಿರುವ ದೇಸಿ ಸಿಹಿ ಗೆಣಸು ರೈತರ ಪಾಲಿಗೆ ಇದೀಗ ವರದಾನವಾಗಿದೆ. ಹಿತ್ತಲ ಗಿಡ ಮದ್ದಲ್ಲ ಎನ್ನುವ ಹಾಗೆ ನಮ್ಮ ಅಮೂಲ್ಯ ಸಂಪತ್ತಿನ ಕುರಿತು ನಮಗೆ ಅರಿವು ಇರುವುದಿಲ್ಲ. ಹೀಗಾಗಿಯೇ ಗೆಣಸು ನಿರ್ಲಕ್ಷ್ಯಕ್ಕೆ ಒಳಪಟ್ಟಿತ್ತು. ಇದೀಗ ಮಹತ್ವ ತಿಳಿದ ಮೇಲೆ ಬೆಲೆಯೂ ಗೊತ್ತಾಗಿದೆ.
  ನರೀಷ್ ಕಂಪನಿ ಪ್ರೋತ್ಸಾಹ
  ಉತ್ತರ ಕರ್ನಾಟಕ ಭಾಗದಲ್ಲಿ ಸತತ ಬರ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆಯಂತೂ ಇಲ್ಲವೇ ಇಲ್ಲ. ಆದರೆ, ಉತ್ತರ ಕರ್ನಾಟಕದ ಸಂಪ್ರದಾಯಿಕ ಗೆಣಸು ಬೆಳೆಗೆ ತೋಟಗಾರಿಕೆ ವಿಶ್ವವಿದ್ಯಾಲಯ, ಧಾರವಾಡ ಕೃಷಿ ವಿವಿಯು ಹಾಗೂ ತೋಟಗಾರಿಕೆ ಇಲಾಖೆ ನೆದರ್ಲೆಂಡ್‌ನ ನರೀಷ್ ಇಂಕ್ ಕಂಪನಿಯ ಮೂಲಕ ಮರುಜೀವ ತುಂಬಿಸುವ ಕೆಲಸ ನಡೆಸಿದೆ.
  ಯೂರೋಪ ರಾಷ್ಟ್ರಗಳಲ್ಲಿ ಬೇಡಿಕೆ
  ಗೆಣಸು ಆರೋಗ್ಯಕರ ತಿನಿಸು ಎಂಬುದನ್ನು ಅರಿತ ಅಮೆರಿಕ ಹಾಗೂ ಯೂರೋಪ ರಾಷ್ಟ್ರಗಳಲ್ಲಿ ಭಾರತೀಯರ ಗೆಣಸಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ನರೀಷ್ ಇಂಕ್ ಕಂಪನಿಯೂ ಧಾರವಾಡ ನಗರದಲ್ಲಿಯೇ ಸಂಸ್ಕರಣಾ ಘಟಕ ತೆರೆಯಲು ಮುಂದಾಗಿದೆ. ಗೆಣಸು ರೈತರ ಜೇಬು ತುಂಬಿಸಿ, ಮುಖದಲ್ಲಿ ನಗು ತರಿಸಲಿದೆಯೇ ಎಂಬುದು ನೋಡಬೇಕಿದೆ.
  ರೈತರಿಗೆ ತರಬೇತಿ
  ಇದಕ್ಕೆ ತೋಟಗಾರಿಕೆ ವಿಶ್ವವಿದ್ಯಾಲಯ ಧಾರವಾಡದಲ್ಲಿರುವ ಅಖಿಲ ಭಾರತ ಗೆಣಸು ಸಂಶೋಧನಾ ಘಟಕದಲ್ಲಿ 120 ವಿವಿಧ ಗೆಣಸು ತಳಿಗಳ ಅಭಿವೃದ್ಧಿ ಮಾಡಿದೆ. ಒಟ್ಟು ನಾಲ್ಕು ತಿಂಗಳ ಅವ ಬೆಳೆ ಇದಾಗಿದ್ದು, ಜತೆಗೆ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆಗಳ ಸಹಯೋಗದಲ್ಲಿ ರೈತರಿಗೆ ಗೆಣಸು ಬೆಳೆಯುವ ತರಬೇತಿ ನೀಡಲಾಗಿದೆ.
  ಹಂತ-ಹಂತವಾಗಿ ಬಿತ್ತನೆ
  ಧಾರವಾಡ ಜಿಲ್ಲೆಯ ಸುತ್ತಮುತ್ತ ಯಾವ ಬಗೆಯ ಗೆಣಸು ಬಿತ್ತನೆಗೆ ಯೋಗ್ಯ ಎಂಬುದು ಮಣ್ಣು ಪರೀಕ್ಷಿಸಿದೆ.  ಆರಂಭದಲ್ಲಿ 500 ಎಕರೆ, 2ನೇ ಹಂತ-ಸಾವಿರ, 3ನೇ ಹಂತ-ಎರಡು ಸಾವಿರ ಎಕರೆ ಪ್ರದೇಶದಲ್ಲಿ ಗೆಣಸು ಬೆಳೆಯುವ ಯೋಜನೆ ಇದೆ. ಹೀಗೆ ಬೆಳೆದ ಗೆಣಸನ್ನು ನರೀಷ್ ಕಂಪನಿ ರೈತರಿಗೆ ಹೊಲಗಳಿಗೆ ನೇರವಾಗಿ ಭೇಟಿನೀಡಿ ಖರೀದಿಸಲಿದೆ.
  ಒಟ್ಟಾರೆ ನಮ್ಮ ಸಾಂಪ್ರದಾಯಿಕ ಬೆಳೆಯಾದ ಗೆಣಸು ಉತ್ತರ ಕರ್ನಾಟಕ ಭಾಗದ ರೈತರಿಗೆ ವರದಾನವಾಗಿದ್ದು, ಇದೀಗ ರೈತರಿಗೆ ಉತ್ತಮ ಆದಾಯ ತರಬಲ್ಲ ಬೆಳೆ ಎಂಬುದು ಸಾಬೀತಾಗಿದೆ. ಧಾರವಾಡ ಭಾಗದಿಂದ ಪುಟ್ಟ ಹೆಜ್ಜೆ ಇಡುತ್ತಿರುವ ‘ಗೆಣಸು ಕ್ರಾಂತಿ’ ಇತರ ಭಾಗಗಳಲ್ಲಿ ಸದ್ದು ಮಾಡಲಿದೆಯೇ ಎಂಬುದು ಕಾದು ನೋಡಬೇಕಿದೆ.

LEAVE A REPLY