ನಾವು ಕತ್ತಿ ಹರಿತ ಮಾಡುವ ಹೊತ್ತಿಗೆ ಚೀನಾದ ಸೈನಿಕರು ಗಡಿ ದಾಟಿ ಬಂದಿದ್ದರು!

  • ಚಂದ್ರಶೇಖರ ದಾಮ್ಲೆ
ವ್ಯಾಪಾರಕ್ಕಾಗಿ ವಲಸೆ; ವ್ಯಾಪಾರ ಗಟ್ಟಿ ಆದ ಬಳಿಕ ಸ್ವರಕ್ಷಣೆಗಾಗಿ ಸೈನ್ಯ; ಸೈನ್ಯ ಇದ್ದ ಬಳಿಕ ಆಕ್ರಮಣ ಮಾಡುವ ದುರಾಸೆ; ಆಕ್ರಮಣದ ಗೆಲುವಿನಿಂದ ಸಾಮ್ರಾಜ್ಯ   ವಿಸ್ತಾರದ ಆಕಾಂಕ್ಷೆ;
ಅದಕ್ಕಾಗಿ ಕಪಟ, ವಂಚನೆ, ಭೇದೋಪಾಯ ಮುಂತಾದ ಅಡ್ಡ ದಾರಿಗಳು. ಹೀಗೆ ವಸಾಹತುಗಳನ್ನು ಬೆಳೆಸುತ್ತ ಬಂಡವಾಳಶಾಹಿಗಳಾದ ಯುರೋಪಿನ ರಾಷ್ಟ್ರಗಳ ಮಾದರಿ ಈಗ ಇಲ್ಲ. ಇಂದು
ಬಹುರಾಷ್ಟ್ರೀಯ ಕಂಪೆನಿಗಳ ಮೂಲಕ ಯಾವುಯಾವುದೋ ದೇಶಗಳ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸುವ ಹುನ್ನಾರ. ಯುದ್ಧ ಅದರ ಅಡ್ಡ ಪರಿಣಾಮ. ವ್ಯಾಪಾರಕ್ಕೆ ಧಕ್ಕೆ ಆಗುವುದಾದರೆ ಮತ್ತೆ ಯುದ್ಧ ಇಲ್ಲ. ಅಂತಹ ಒಂದು ಸನ್ನಿವೇಶ ಇಂದು ಭಾರತವನ್ನು ಬಚಾವ್ ಮಾಡಿದೆ.
ಚೀನಾಕ್ಕೆ ವಂಚನೆಯೂ ಗೆಲುವಿನ ಪ್ರಯತ್ನದಲ್ಲಿ ಧರ್ಮವೇ. ಹಾಗಾಗಿ ಅದು ಒಂದು ಕೈಯಲ್ಲಿ ಚಾಕಲೇಟ್‌ನ್ನು ತೋರಿಸಿ ಇನ್ನೊಂದು ಕೈಯಲ್ಲಿ ಚಾಕುವಿನಿಂದ ಚುಚ್ಚುತ್ತಿರುತ್ತದೆ. “ಚಾಚಾ ನೆಹರು  ಚೌ ಎನ್ ಲಾಯ್, ಭಾರತ ಚೀನಾ ಭಾಯೀ ಭಾಯ್” ಎಂತ ಹುಡುಗರಾಗಿದ್ದಾಗ ಹಾಡುತ್ತಿದ್ದ ನಮಗೆ ೧೯೬೨ರಲ್ಲಿ ಚೀನಾ ಆಕ್ರಮಣ ಮಾಡಿದ್ದೇ ಗೊತ್ತಿಲ್ಲ. ನಾವು ಕತ್ತಿ ಹರಿತ ಮಾಡುವ ಹೊತ್ತಿಗೆ ಚೀನಾದ ಸೈನಿಕರು ಗಡಿ ದಾಟಿ ಬಂದಿದ್ದರು. ಬಚಾವಾಗಬೇಕಿದ್ದರೆ ಯುದ್ಧ ಮಾಡಲೇಬೇಕಿತ್ತು. ತಾತ್ವಿಕ ವಿರೋಧದ ಕಾರಣದಿಂದಾಗಿ ಕಮ್ಯೂನಿಸ್ಟರನ್ನು ಬಗ್ಗು ಬಡಿಯಲು ಬಂಡವಾಳಶಾಹಿ ಅಮೇರಿಕ ಮುಂದೆ ಬಂದದ್ದು ನಮಗೆ ಅನುಕೂಲವಾಯಿತು. ಆಪದ್ಬಾಂಧವನೆಂಬಂತೆ ಭಾರತದಲ್ಲಿ  ಅಮೇರಿಕಾದ ವರ್ಚಸ್ಸು ಬೆಳೆಯಿತು. ಇಂದಿಗೂ, ಅಂದರೆ ಇಂದಿರಾ ಗಾಂಧಿಯವರು ರಷ್ಯಾ ಪರ ಒಲವು ತೋರಿದ ಬಳಿಕವೂ, ಭಾರತದಲ್ಲಿ ಅಮೇರಿಕಾದ ಬಗ್ಗೆ ಅಭಿಮಾನ ಇದ್ದೆ ಇದೆ. ಅಮೆರಿಕಾದಲ್ಲಿ ಉದ್ಯೋಗ ಹಿಡಿದು ನೆಲೆಸುವುದೆಂದರೆ ಇಂದಿಗೂ ಗೌರವದ ಸಂಗತಿಯೇ.
 ಇಂದು ಅಮೇರಿಕಾದ ಮಾಹಿತಿ ತಂತ್ರಜ್ಞಾನದ ಬಹುರಾಷ್ಟ್ರೀಯ ಕಂಪೆನಿಗಳು  ಆರೋಗ್ಯ ಪೂರ್ಣವಾಗಿ ಉಸಿರಾಡಲು ಭಾರತದ ಇಂಜಿನಿಯರ್‌ಗಳು ಬೇಕು. ಭಾರತದ ಕೆಲಸಗಾರರನ್ನೂ ಗಿರಾಕಿಗಳನ್ನೂ ಕೈ ಬಿಟ್ಟು ನಡೆಯುವುದಕ್ಕಾಗುವುದಿಲ್ಲ. ಅಂದರೆ ಅಮೇರಿಕಾ ದೇಶವೂ ಭಾರತವನ್ನು ಅದರ ವ್ಯಾಪಾರ ಸಾಧ್ಯತೆಗಳಿಗಾಗಿ ಪ್ರೀತಿಸುತ್ತದೆ. ಪರಿಣಾಮವಾಗಿ ರಾಜತಾಂತ್ರಿಕ ನೆಲೆಯಲ್ಲಿ ಸ್ನೇಹ ಸಂವರ್ಧನೆಗೆ ಅಣಿಯಾಗುತ್ತದೆ. ತುಲನಾತ್ಮಕವಾಗಿ ಪಾಕಿಸ್ತಾನಕ್ಕಿಂತ ಭಾರತವು ದೊಡ್ಡ ಮಾರುಕಟ್ಟೆಯಾದುದರಿಂದ ಯುದ್ಧದ ವಿಚಾರಣೆ ಬಂದರೆ ಅಮೇರಿಕಾವೂ ಭಾರತದೊಂದಿಗೆ ಇದೆ. ಇದು ಪಾಕಿಸ್ತಾನಕ್ಕೂ ಚೀನಾಕ್ಕೂ ನುಂಗಲಾಗದ ತುತ್ತಾಗಿದೆ. ಭಾರತದ ಮೇಲೆ ಆಕ್ರಮಣ ಮಾಡುವ ಪಾಕ್-ಚೀನಾದ ಯುದ್ಧೋತ್ಸಾಹ ತಗ್ಗಿಸಲು ಈ ದೇಶದ ಮಾರುಕಟ್ಟೆಯ ವಿಸ್ತಾರ ಪ್ರಮುಖ ಕಾರಣವಾಗಿದೆ.
ಯುದ್ಧವನ್ನು ನಿವಾರಿಸಿಕೊಳ್ಳುವಲ್ಲಿ ಭಾರತವು ಹಿಂದಿನಿಂದಲೂ  ವ್ಯಾಪಾರದ ಅಸ್ತ್ರವನ್ನು ಉಪಯೋಗಿಸುತ್ತ ಬಂದಿದೆ.  ವ್ಯಾಪಾರ ಸಂಬಂಧಗಳನ್ನೂ ಹೆಚ್ಚಿಸಿಕೊಳ್ಳುವ ಮೂಲಕ ಪರಸ್ಪರ ಅಭಿವೃದ್ಧಿಯ ಅವಲಂಬನೆಯನ್ನು ಹೆಚ್ಚಿಸಿ ತನ್ಮೂಲಕ ಹೆಪ್ಪುಗಟ್ಟಿದ ವೈರವನ್ನು ಕರಗಿಸಲು ಸಾಧ್ಯವೇ ಎಂಬುದು ಭಾರತೀಯ ಚಿಂತನೆಯಾಗಿದೆ. ಇಂತಹ ಚಿಂತನೆಗೆ  ಮೂರ್ತರೂಪ ನೀಡಿದವರು ಅಟಲ್ ಬಿಹಾರಿ ವಾಜಪೇಯಿ ಅವರು. ಪಾಕಿಸ್ತಾನದ ಅಧ್ಯಕ್ಷ ಪರ್ವೆಜ್ ಮುಶರಫ್‌ರನ್ನು ಹತ್ತಿರ ಕೂರಿಸಿಕೊಂಡು ಮಾತಾಡಿದರು. ಆದರೆ ಸ್ನೇಹ ಹಸ್ತವನ್ನು ಕೈ ಕುಲುಕುವ ಮಟ್ಟದಲ್ಲಿ ನಿಲ್ಲಿಸಿದ ಪಾಕಿಸ್ತಾನ ಯುದ್ಧದ ದುಸ್ಸಾಹಸಕ್ಕೆ ಕೈ ಹಾಕಿ ಮತ್ತೆ ಕಾರ್ಗಿಲ್ ಕದನದಲ್ಲಿ ಭಾರತಕ್ಕೆ ಮಣಿಯಬೇಕಾಯಿತು. ಬದಲಿಗೆ ಭಾರತದೊಂದಿಗೆ ವ್ಯಾಪಾರ ಸಂಬಂಧಗಳನ್ನು ವೃದ್ಧಿಸಿಕೊಂಡು ಸ್ನೇಹ ಬಾಂಧವ್ಯ ಬೆಳೆಸುತ್ತಿದ್ದರೆ ಇಷ್ಟರೊಳಗೆ ಎರಡೂ ದೇಶಗಳಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿರುತ್ತಿತ್ತು. ಆದರೆ ಇಂದಿಗೂ ಪಾಕಿಸ್ಥಾನದ ನ್ಯಾಯಾಲಯಗಳಿಂದ ವಿಚಾರಣೆ-ಶಿಕ್ಷೆಗೆ ಒಳಗಾಗುತ್ತಿರುವ ಮುಶರಫ್ ಭಾರತದ ಮೇಲೆ ದ್ವೇಷ ಕಾರುತ್ತಲೇ ಇದ್ದಾರೆ. ಅವರಿಂದ ಏನೂ ಆಗದಿದ್ದರೂ ಪಾಕಿಸ್ಥಾನದಲ್ಲಿ ಭಾರತದ ವಿರುದ್ಧ ದ್ವೇಷ ಭಾವನೆಯನ್ನು ಸಾಕಲು ಗೊಬ್ಬರ ಹಾಕುತ್ತಾರೆ.
ಪಾಕಿಸ್ತಾನದ ಈ ಮೂಲಭೂತ ವೈರವನ್ನು ಬಂಡವಾಳವಾಗಿ ಬಳಸಿಕೊಳ್ಳುವ ಯೋಚನೆ ಕಮ್ಯೂನಿಸ್ಟ್ ಚೀನಾದ್ದು. ಅದು ಹೆಸರಿಗೆ ಮಾತ್ರ ಸಮತಾವಾದಿ. ಆದರೆ ಚೀನಾದಲ್ಲಿ ಬಂಡವಾಳಶಾಹಿತ್ವ ವ್ಯಾಪಕವಾಗಿದೆ. ಭಾರತದಲ್ಲೂ ಅಷ್ಟೇ. ಕಮ್ಯೂನಿಸ್ಟ್ ನಾಯಕರೆಲ್ಲರೂ ಸ್ವತಃ ಬಂಡವಾಳಶಾಹಿಗಳೂ ಆಸ್ತಿವಂತರೂ ಆಗಿದ್ದಾರೆ. ಎಂ.ಪಿ ಗಳ ವೇತನ ಹೆಚ್ಚಿಸುವ ಮಸೂದೆಯ ವಿರುದ್ಧ ಅವರು ಚಕಾರ ಎತ್ತುವುದಿಲ್ಲ. ಏಕೆಂದರೆ ಸ್ವಂತಕ್ಕೆ ಶ್ರೀಮಂತಿಕೆ ಅವರಿಗೂ ಬೇಕು.  ಮಂತ್ರ ಮಾತ್ರ ಬಡವರ ಉದ್ಧಾರ. ಅಂತಹ ಮಂತ್ರೋಚ್ಚಾರಣೆಯ ಚೀನಾದೊಂದಿಗೆ ಭಾರತೀಯ ಕಮ್ಯೂನಿಸ್ಟರಿಗೆ ಆಪ್ತ ಸಂಬಂಧ. ಇರಲಿ, ಚೀನಾ ವ್ಯಾಪಾರದ ಕಾರಿಡಾರನ್ನು ಸ್ಥಾಪಿಸುವ ಉದ್ದೇಶದಿಂದ ಪಾಕಿಸ್ಥಾನದ ಮೂಲಕ ಅರೇಬಿಯನ್ ಕಡಲಿಗೆ ಕಾಲಿಡಲು ಬಯಸಿದ್ದು ಸಾಮ್ರಾಜ್ಯಶಾಹಿ ಚಿಂತನೆಯ ಪ್ರಕಟ  ರೂಪವೇ ಆಗಿದೆ. ಅದನ್ನು ತಡೆಯುವಲ್ಲಿ ಭಾರತ ತೋರಿದ ಧೈರ್ಯ ಹಾಗೂ ರಣನೀತಿಯು ಚೀನಾದ ಆಶಯಕ್ಕೆ ಭಂಗ ತಂದಿತು. ಡೋಕ್ಲಾಂ ಗಡಿ ಪ್ರದೇಶದಲ್ಲಿ ರಸ್ತೆ ಮಾಡಲು ತೊಡಗಿ ಭಾರತೀಯ ಸೈನಿಕರಿಂದ ತಡೆಯನ್ನು ಎದುರಿಸಬೇಕಾಯಿತು. “೧೯೬೨ ರ ಯುದ್ಧವನ್ನು ನೆನಪಿಸಿಕೊಳ್ಳಿ” ಎಂಬ ಚೀನಾದ ಉದ್ಧಟತನದ ಎಚ್ಚರಿಕೆಗೆ ಭಾರತವು “ಡೋಂಟ್ ಕೇರ್” ಶೈಲಿಯ ಉತ್ತರ ನೀಡಿದಾಗ ಚೀನಾ ಹೊರಗೆ ತೋರಿಸಿಕೊಳ್ಳದಿದ್ದರೂ ಒಳಗೇ ತತ್ತರಿಸಿತು.
ಯುದ್ಧದಲ್ಲಿ  ಗೆಲ್ಲುವ ಮೊದಲ ಉಪಾಯವೆಂದರೆ ಹೆದರಿಸಿ ನೋಡುವುದು. ಶತ್ರು ಪಾಳೆಯ ಹೆದರಿತೆಂದಾದರೆ ಮತ್ತೆ ಸದೆ ಬಡಿಯುವುದು. ಆದರೆ ಭಾರತ ಎದೆಯುಬ್ಬಿಸಿ ತೊಡೆ ತಟ್ಟಿ ನಿಂತಾಗ ಚೀನಾ ಹಿಂದೆ ಸರಿಯಿತು. ನಮ್ಮ ಸಂಧಾನಕಾರ ಅಜಿತ್ ದೋವಲ್ ಅವರ ಮುಂದೆ ಚೀನಾದ ರಾಜತಾಂತ್ರಿಕ ಆಟವೂ ನಡೆಯಲಿಲ್ಲ. ಏಕೆಂದರೆ ಮತ್ತೆ ಅಲ್ಲಿ ತಲೆ ಎತ್ತಿದ್ದು ವ್ಯಾಪಾರದ ಪ್ರಶ್ನೆ. ಚೀನಾದ ಆರ್ಥಿಕತೆ ನೆಲೆ ನಿಂತಿರುವುದೇ ಅಲ್ಲಿನ ಕಿರು ಉದ್ಯಮಗಳ ಮೇಲೆ. ಅನೇಕ ಇಲೆಕ್ಟ್ರಾನಿಕ್ ಸಾಮಗ್ರಿಗಳ ಉತ್ಪನ್ನವೂ ಅಲ್ಲೇ ಆಗುತ್ತದೆ. ಉಪಭೋಗಿ ಸಾಮಗ್ರಿಗಳ ಉತ್ಪಾದನೆ ವ್ಯಾಪಕವಾಗಿದೆ.  ಅವುಗಳಿಗೆ ಭಾರತವೇ ದೊಡ್ಡ ಮಾರುಕಟ್ಟೆ. ಆದರೆ ಚೀನಾವು ಭಾರತದ ಮೇಲೆ ಆಕ್ರಮಣಕ್ಕೆ ಉದ್ಯುಕ್ತವಾದಾಗ ಭಾರತದಲ್ಲಿ ಚೀನಾ ನಿರ್ಮಿತ ಉತ್ಪನ್ನಗಳಿಗೆ  ಬಹಿಷ್ಕಾರದ ಕಹಳೆ ಮೊಳಗಿತು. ಜನರು ಅಂಗಡಿಗಳಲ್ಲಿ ಕೇಳಿ ಚೀನಾ ನಿರ್ಮಿತ ವಸ್ತುಗಳನ್ನು ತಿರಸ್ಕರಿಸತೊಡಗಿದರು. ಭಾರತದ ವ್ಯಾಪಾರಿಗಳಿಂದ ಆಮದಿಗೆ ಆಹ್ವಾನವಿಲ್ಲದಾಗ ಚೀನಾದ ಉದ್ಯಮಿಗಳು ವಿಹ್ವಲರಾದರು. ಅವರ ವ್ಯಾಪಾರ ಬದುಕಲು ಸರಕಾರವೇ ಮನಸ್ಸು ಮಾಡಬೇಕಾಯಿತು. ತನ್ನ ಜನರ ಅಹವಾಲಿಗೆ ಕಿವಿಗೊಡದೆ ಸರಕಾರಕ್ಕೆ ಉಪಾಯವಿಲ್ಲ. ಪರಿಣಾಮವಾಗಿ ಬ್ರಿಕ್ಸ್ ಶೃಂಗದ ಹೊತ್ತಿಗೆ ಯುದ್ಧದ ಕಾರ್ಮೋಡ ಕರಗಿತು. ವ್ಯಾಪಾರದ ಆಸಕ್ತಿಯ ಮುಂದೆ ಯುದ್ಧಕ್ಕೆ ಅವಕಾಶವೆಲ್ಲಿದೆ?
ನಮ್ಮ ನರೇಂದ್ರ ಮೋದಿಯವರು ಯಾವಾಗಿಂದ ಯೋಚಿ ಸುತ್ತಿದ್ದರೆಂದು ಗೊತ್ತಿಲ್ಲ ಆದರೆ ಪ್ರಧಾನಿಯಾದ ಬಳಿಕ ಕಾರ್ಯ ಪ್ರವೃತ್ತರಾದರು. ಆರಂಭಕ್ಕೆ ಪಾಕಿಸ್ತಾನದ ಮತ್ತು ಚೀನಾದ ಅಧ್ಯಕ್ಷ ರನ್ನು ಆಹ್ವಾನಿಸಿದರು. ಸ್ನೇಹದ ಪ್ರಸ್ತಾಪ ಮುಂದಿಟ್ಟರು. ನಂತರ ವಿವಿಧ ದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿ ನೆಲೆಸಿದ ಭಾರತೀಯರ ಸಂಘಟನೆಗಳೊಂದಿಗೆ ಸಂವಾದ ಮಾಡಿದರು. ವಿವಿಧ ದೇಶಗಳಲ್ಲಿ ಭಾರತದ ಬೌದ್ಧಿಕ ಶಕ್ತಿ ಎಷ್ಟು ಹರಡಿದೆ ಎಂಬುದರ ಚಿತ್ರಣ ನೀಡಿದರು. ಪರಿಣಾಮವಾಗಿ ಭಾರತವನ್ನು ತಣ್ಣಗೆ ನಿವಾರಿಸಬಹುದೆಂದು ಯಾರೂ ಯೋಚಿಸುವಂತಿಲ್ಲವೆಂದು ಮನಗಾಣಿಸಿದರು.
ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ನೋಟು ಅಮಾನ್ಯೀಕರಣ ಮುಂತಾದ ಹೆಜ್ಜೆಗಳನ್ನು ಇರಿಸಿದರು. ಅಂದರೆ ಯುದ್ಧವನ್ನು ನಿವಾರಿಸುವಲ್ಲಿ ಹಣ ಚಲಾವಣೆ ಮತ್ತು ವ್ಯಾಪಾರದ ಪಾತ್ರವನ್ನು ಸಮರ್ಥವಾಗಿ ಬಳಸಿದರು. ಯಾರದೇ ತುಷ್ಟೀಕರಣದ ಅವಶ್ಯಕತೆಯಿಲ್ಲದ ನಾಯಕನೊಬ್ಬನೇ ಗೌರವಯುತವಾಗಿ ಹೀಗೆ ಮಾಡಲು ಸಾಧ್ಯವೆನ್ನುವುದಕ್ಕೆ ‘ಮೋದಿಯುಗ’ ಪುರಾವೆಯಾಗಿದೆ.

LEAVE A REPLY