ಶೀಘ್ರ ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್‌ ಲಿಂಕ್ : ಸಚಿವ ರವಿಶಂಕರ್ ಪ್ರಸಾದ್

ಹೊಸದಿಲ್ಲಿ : ವ್ಯಕ್ತಿಯೊಬ್ಬರ ಡ್ರೈವರ್ ಲೈಸೆನ್ಸ್‌ಗೆ ಆಧಾರ್‌ನ್ನು ಶೀಘ್ರವೆ ಲಿಂಕ್ ಮಾಡಲಾಗುವುದು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಶುಕ್ರವಾರ ಹೇಳಿದರು. ಆದರೆ, ಅದಕ್ಕೆ ಸಮಯದ ಮಿತಿಯನ್ನು ಸಚಿವರು ನೀಡಿಲ್ಲ.
ಆಧಾರ್ ಖಾಸಗಿತನವನ್ನು ಉಲ್ಲಂಘಿಸುತ್ತದೆಯೇ ಎಂಬ ಬಗ್ಗೆ ಸುಪ್ರೀಂಕೋರ್ಟ್ ಇನ್ನಷ್ಟೇ ತೀರ್ಪು ನೀಡಬೇಕಿರುವ ಮಧ್ಯೆಯೇ ಸಚಿವರ ಈ ಹೇಳಿಕೆ ಹೊರಬಿದ್ದಿದೆ. ನವೆಂಬರ್‌ನಲ್ಲಿ ತೀರ್ಪು ನೀಡುವ ಯೋಜನೆ ನ್ಯಾಯಾಲಯದ್ದಾಗಿದೆ.
ಆಧಾರ್ ಮತ್ತು ಖಾಸಗಿತನ ಬಗ್ಗೆ ತೀರ್ಪು ನೀಡುವ ಮೊದಲು ಸರ್ವೋಚ್ಚ ನ್ಯಾಯಾಲಯ, ಖಾಸಗಿತನ ಒಂದು ಮೂಲಭೂತ ಹಕ್ಕೇ ಎಂಬ ವಿಷಯವನ್ನು ಎತ್ತಿಕೊಂಡು ಕಳೆದು ತಿಂಗಳು ಅದು ನಿಜಕ್ಕೂ ಮೂಲಭೂತ ಹಕ್ಕು ಎಂದು ತೀರ್ಪು ನೀಡಿದೆ.
ಆದ್ದರಿಂದ ಡ್ರೈವರ್ ಲೈಸೆನ್ಸ್ ಜೊತೆ ಆಧಾರ್ ಜೋಡಣೆ ಸರಕಾರದ ಕಾರ್ಯಸೂಚಿಯಲ್ಲಿ ಇರಬಹುದಾದರೂ, ಅದು ಕಾರ್ಯಗತವಾಗುವುದು ಸಾಧ್ಯವೇ ಎಂದು ಕಾದು ನೋಡಬೇಕಾಗಿದೆ.
`ನಾವು ಡ್ರೈವಿಂಗ್ ಲೈಸೆನ್ಸ್‌ನ್ನು ಆಧಾರ್‌ಗೆ ಜೋಡಿಸಲು ಯೋಜಿಸುತ್ತಿದ್ದೇವೆ. ಈ ಸಂಬಂಧ ನಾನು ಗಡ್ಕರಿ ಜಿ (ಕೇಂದ್ರ ಸಚಿವ ನಿತಿನ್ ಗಡ್ಕರಿ) ಅವರೊಂದಿಗೆ ಮಾತನಾಡಿದ್ದೆ’ ಎಂದು ಶುಕ್ರವಾರ ಡಿಜಿಟಲ್ ಹರ್ಯಾಣ ಶೃಂಗಸಭೆ ೨೦೧೭ರಲ್ಲಿ ಪ್ರಸಾದ್ ಹೇಳಿದರು.
ಆದ್ದರಿಂದ ಡಿಜಿಟಲ್ ಗುರುತು ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಭೌತಿಕ ಗುರುತನ್ನು ದೃಢಪಡಿಸುತ್ತದೆ ಎಂದು ಸಚಿವರು ವಿವರಿಸಿದರು.
ಹಣದ ಅಕ್ರಮ ವರ್ಗಾವಣೆಯನ್ನು ತಡೆಗಟ್ಟಲು ಪಾನ್‌ನ್ನು ಆಧಾರ್‌ಗೆ ಜೋಡಿಸಲಾಗಿದೆ ಎಂದೂ ಸಚಿವರು ಹೇಳಿದರು.
ಸಾಮಾಜಿಕ ಸವಲತ್ತುಗಳನ್ನು ಪಡೆಯಲು ಆಧಾರ್‌ನ್ನು ಕಡ್ಡಾಯಗೊಳಿಸುವ ಗಡುವನ್ನು ಈ ಹಿಂದಿನ ಸೆ. ೩೦ರಿಂದ ಡಿ. ೩೧ರ ತನಕ ವಿಸ್ತರಿಸುವುದಾಗಿ ಕಳೆದ ತಿಂಗಳು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಹೇಳಿತ್ತು.
ಕೇಂದ್ರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸುಪ್ರೀಂಕೋರ್ಟ್ ಪೀಠವೊಂದರ ಮುಂದೆ ಈ ಹೇಳಿಕೆ ನೀಡಿದ್ದರು.

LEAVE A REPLY