ಸೈನೈಡ್ ಕಿಲ್ಲರ್ ಮೋಹನ್ ಸರಣಿ ಸ್ತ್ರೀ ಹತ್ಯೆ: ನಾಲ್ಕನೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ

ಮಂಗಳೂರು: ಸರಣಿ ಸ್ತ್ರೀ ಹಂತಕ, ಸೈನೈಡ್ ಕಿಲ್ಲರ್ ಮೋಹನ್ ಕುಮಾರ್ (54) ವಿರುದ್ಧದ ನಾಲ್ಕನೇ ಪ್ರಕರಣ ಕೂಡ ಸಾಬೀತಾಗಿದೆ. ಶುಕ್ರವಾರ ಶಿಕ್ಷೆಯ ತೀರ್ಪು ಪ್ರಕಟಗೊಂಡಿದ್ದು, ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮಂಗಳೂರುನ ೬ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ತೀರ್ಪು ನೀಡಿದೆ.
ಈಗಾಗಲೇ ಮೂರು ಪ್ರಕರಣ ಸಾಬೀತಾಗಿದ್ದು, ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿ ಮರಣದಂಡನೆ ವಿಧಿಸಿದೆ. ೨೦೦೪ರಿಂದ ೨೦೦೯ರ ಅವಧಿಯಲ್ಲಿ ಒಟ್ಟು ೨೦ ಸ್ತ್ರೀಯರ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪ ಮೋಹನ್ ಕುಮಾರ್ ಮೇಲಿದೆ.
ನಾಲ್ಕನೇ ಪ್ರಕರಣದಲ್ಲಿ ಪುತ್ತೂರು ತಾಲೂಕಿನ ಪಟ್ಟೆಮಜಲು ನಿವಾಸಿ 22 ವರ್ಷದ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಮೋಹನ್ ಕುಮಾರ್‌ನನ್ನು ದೋಷಿಯೆಂದು ಬುಧವಾರ ತೀರ್ಪು ನೀಡಿತ್ತು. ಇದೀಗ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಯುವತಿಯ ಕೊಲೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಡಿ.ಟಿ.ಪುಟ್ಟರಂಗ ಸ್ವಾಮಿ ಬುಧವಾರ ಆರೋಪ ಸಾಬೀತುಪಡಿಸಿ ತೀರ್ಪು ಪ್ರಕಟಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೀವಾವಧಿ 5 ಸಾವಿರ ರೂ. ದಂಡ, ಅತ್ಯಾಚಾರ ಪ್ರಕರಣದಲ್ಲಿ 7 ವರ್ಷ ಕಠಿಣ ಸಜೆ 5 ಸಾವಿರ ರೂ. ದಂಡ, ಅಪಹರಣ ಪ್ರಕರಣದಲ್ಲಿ 6 ವರ್ಷ ಕಠಿಣ ಶಿಕ್ಷೆ 4 ಸಾವಿರ ರೂ. ದಂಡ, ವಿಷ ಉಣಿಸಿದ ಪ್ರಕರಣದಲ್ಲಿ ೭ವರ್ಷ ಕಠಿಣ ಸಜೆ 5 ಸಾವಿರ ರೂ. ದಂಡ, ಸಾಕ್ಷಿ ನಾಶ ಆರೋಪದಲ್ಲಿ 5 ವರ್ಷ ಶಿಕ್ಷೆ 3 ಸಾವಿರ ರೂ. ದಂಡ, ಆಭರಣ ದೋಚಿದ ಪ್ರಕರಣದಲ್ಲಿ ೫ವರ್ಷ ಕಠಿಣ ಸಜೆ 4 ಸಾವಿರ ದಂಡ ರೂ. ವಿಧಿಸಿದೆ. ಈ ಎಲ್ಲಾ ಪ್ರಕರಣದಲ್ಲೂ ದಂಡ ತೆರಲು ತಪ್ಪಿದಲ್ಲಿ ತಲಾ 2 ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗಿದೆ. ಮೋಸ ಪ್ರಕರಣದಲ್ಲಿ 6 ತಿಂಗಳು ಸಜೆ ವಿಧಿಸಿದೆ. ಅಪರಾಧಿ ಈ ಎಲ್ಲ ಪ್ರಕರಣಗಳನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿದೆ.

LEAVE A REPLY