ಪೊಡವಿಗೊಡೆಯನ ನಾಡಿನಲ್ಲಿ ವೈಭವ, ಸಂಭ್ರಮದ ವಿಟ್ಲಪಿಂಡಿ ಉತ್ಸವ ಸಂಪನ್ನ

ಉಡುಪಿ: ರಥ ಬೀದಿಯ ತುಂಬಾ ಜನ ಸಾಗರ, ವಿವಿಧ ವೇಷಗಳ ಕುಣಿತದ ಸಂಭ್ರಮ, ಕಟ್ಟಡವೇರಿ ಕೃಷ್ಣನನ್ನು ಕಣ್ತುಂಬಿಕೊಂಡ ಭಕ್ತಾದಿಗಳು, ಮೊಸರು ಕುಡಿಕೆ ಒಡೆಯಲು ಸ್ಪರ್ಧೆ ನಡೆಸಿದ ಗೊಲ್ಲರ ವೇಷಧಾರಿಗಳು, ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ… ಇವು ಗುರುವಾರ ವಿಟ್ಲಪಿಂಡಿ ಸಂಭ್ರಮದಲ್ಲಿ ಉಡುಪಿಯ ರಥಬೀದಿಯಲ್ಲಿ ಕಂಡುಬಂದ ಚಿತ್ರಗಳು.
ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವವು ಉಡುಪಿ ಶ್ರೀಕೃಷ್ಣ ಮಠದಲ್ಲಿ ವೈಭವ ಹಾಗೂ ಸಂಭ್ರಮದಿಂದ ಸಂಪನ್ನಗೊಂಡಿತು. ದ್ವಾದಶಿಯಂತೆ ಗುರುವಾರ ಮುಂಜಾನೆ ಶ್ರೀಕೃಷ್ಣ- ಮುಖ್ಯಪ್ರಾಣರಿಗೆ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ಮೃತ್ತಿಕಾ ಮೂರ್ತಿ ರಥೋತ್ಸವ 
ಮಧ್ಯಾಹ್ನದ ವೇಳೆಗೆ ರಥ ಬೀದಿಯ ಎ ಅಂಗಡಿ ಮುಂಗಟ್ಟುಗಳು ಮುಚ್ಚಿದ ನಂತರ ಸಂಭ್ರಮದಿಂದ ವಿಟ್ಲಪಿಂಡಿ ಉತ್ಸವ ಆರಂಭವಾಯಿತು. ಮಧ್ಯಾಹ್ನ ೩ಗಂಟೆಗೆ ಮೃತ್ತಿಕಾ ಮೂರ್ತಿಯನ್ನು ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಚಿನ್ನದ ರಥದಲ್ಲಿರಿಸಿದರು. ನವರತ್ನರಥದಲ್ಲಿ ಶ್ರೀಅನಂತೇಶ್ವರ ಮತ್ತು ಶ್ರೀಚಂದ್ರಮಳೀಶ್ವರ ದೇವರ ಉತ್ಸವ ಮೂರ್ತಿಗಳನ್ನಿಟ್ಟು ಉತ್ಸವ ನಡೆಯಿತು. ಉತ್ಸವದಲ್ಲಿ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ, ಸೋದೆ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಪಾಲ್ಗೊಂಡಿದ್ದರು. ರಥವೇರಿದ ವಿವಿಧ ಮಠಾಧೀಶರು ಸಂಪ್ರದಾಯದಂತೆ ತೇರಿನಿಂದ ಶ್ರೀಕೃಷ್ಣನಿಗೆ ಅರ್ಪಿಸಿದ ನೈವೇದ್ಯದ ಚಕ್ಕುಲಿ-ಉಂಡೆ ಮತ್ತು ಹಣ್ಣುಗಳನ್ನು ಭಕ್ತರ ಮೇಲೆ ಎರಚಿದರು. ಪ್ರಸಾದವನ್ನು ಪಡೆಯಲು ಭಕ್ತರು ಮುಗಿಬೀಳುತ್ತಿದ್ದರು.
ಮೊಸರು ಕುಡಿಕೆ ಒಡೆದ ಗೊಲ್ಲರು 
ಮೊಸರು ತುಂಬಿದ ಮಡಕೆಗಳನ್ನು ಗೊಲ್ಲ ವೇಷಧಾರಿಗಳು ಒಡೆಯುವುದು ವಿಟ್ಲಪಿಂಡಿ ಉತ್ಸವದ ಪ್ರಮುಖ ಆಕರ್ಷಣೆ. ರಥಬೀದಿಯ ಎಂಟು ಕಡೆಗಳಲ್ಲಿ ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಒಂದೊಂದೇ ಮಡಕೆಗಳನ್ನು ಸಾಂಪ್ರದಾಯಿಕ ಗೊಲ್ಲರ ವೇಷ ಧರಿಸಿದವರು ಒಡೆಯುತ್ತ ಮುಂದೆ ಸಾಗಿದಂತೆ ಮೆರವಣಿಗೆ ಮುಂದೆ ಸಾಗಿತು. ಕೊನೆಯಲ್ಲಿ ಶ್ರೀಕೃಷ್ಣನ ಮೃತ್ತಿಕಾ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಲಾಯಿತು.
ವಿವಿಧ ವೇಷಗಳ ಆಕರ್ಷಣೆ
ನಗರದ ವಿವಿಧೆಡೆ ನೂರಾರು ಹುಲಿವೇಷಧಾರಿಗಳು ಕಂಡುಬಂದರು. ದಿನವಿಡೀ ವಾದ್ಯಗಳ ಸದ್ದು ಮನೆಮಾಡಿತ್ತು. ವಿಟ್ಲಪಿಂಡಿ ಉತ್ಸವದಲ್ಲಿ ಕೆಲವು ಹುಲಿವೇಷಧಾರಿಗಳು, ಸಾಂಪ್ರದಾಯಿಕ ವೇಷಧಾರಿಗಳು ಕಂಡು ಬಂದರೆ ಉತ್ಸವದ ನಂತರ ರಾಜಾಂಗಣದಲ್ಲಿ ಜಾನಪದದ ವಿವಿಧ ಪ್ರಕಾರಗಳ ಕಲಾವಿದರು ವೇಷಧರಿಸಿ ಕುಣಿದರು. ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿಯವರ ಪ್ರೋತ್ಸಾಹದಲ್ಲಿ ವಿವಿಧ ವೇಷಗಳ ಪ್ರದರ್ಶನ ನಡೆಯಿತು.
ಶ್ರೀಕೃಷ್ಣನ ಜನನಕ್ಕೆ ಒದಗಿದ ಮಳೆ 
ಶ್ರೀಕೃಷ್ಣನ ಜನನದ ಸಮಯ ಅಷ್ಟಮಿಯ ಮಧ್ಯರಾತ್ರಿ ಚಂದ್ರೋದಯದ ಹೊತ್ತಿಗೆ. ಆಗ ಮಳೆ ಬರುತ್ತಿತ್ತು. ಮಥುರಾದಲ್ಲಿ ಜನಿಸಿದ ಬಾಲಕೃಷ್ಣನನ್ನು ತಂದೆ ವಸುದೇವ ಬುಟ್ಟಿಯಲ್ಲಿರಿಸಿಕೊಂಡು ಯಮುನಾ ನದಿ ದಾಟಿ ನಂದಗೋಕುಲಕ್ಕೆ ಹೋಗುವಾಗ ಶೇಷದೇವರು ಹೆಡೆ ಎತ್ತಿ ಮಳೆಯಿಂದ ರಕ್ಷಣೆ ಒದಗಿಸಿದ್ದರು. ತುಂಬಿ ಹರಿಯುತ್ತಿದ್ದ ಯಮುನೆಯೂ ದಾರಿ ಮಾಡಿಕೊಟ್ಟಳು ಎಂಬುದನ್ನು ಭಾಗವತಾದಿ ಗ್ರಂಥಗಳು ಸಾರುತ್ತಿವೆ. ಬುಧವಾರ ಮಧ್ಯರಾತ್ರಿ ಮಿಂಚು ಗುಡುಗಿನೊಂದಿಗೆ ವ್ಯಾಪಕ ಮಳೆ ಸುರಿಯಿತು. ಮುಂಜಾವದ ನಂತರ ಮಳೆ ಕಡಿಮೆಯಾಯಿತು. ಗುರುವಾರ ಉತ್ಸವದ ವೇಳೆ ಕಾರ್ಮೋಡ ಕವಿದು ಒಂದೆರಡು ಹನಿ ಮಳೆ ಸುರಿದರೂ ಉತ್ಸವಕ್ಕೆ ಯಾವುದೇ ಅಡ್ಡಿ ಮಾಡಿಲ್ಲ. ತಡರಾತ್ರಿ ಮಳೆ ಸುರಿದಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ವಿಟ್ಲಪಿಂಡಿ ಉತ್ಸವ ಶಾಂತಿ ಸುವ್ಯವಸ್ಥಿತವಾಗಿ ನಡೆಯುವ ಉದ್ದೇಶದಿಂದ ಉಡುಪಿ ಜಿಲ್ಲಾ ಎಸ್ಪಿ ಡಾ. ಸಂಜೀವ ಎಂ. ಪಾಟೀಲ್ ಅವರು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿತ್ತು. ರಥಬೀದಿಯ ಸುತ್ತ ಅಷ್ಟ ಮಠಗಳ ಸಹಿತ ವಿವಿಧ ಕಟ್ಟಡಗಳಲ್ಲಿ ಪೊಲೀಸ್ ಕಣ್ಗಾವಲು ರಥಬೀದಿಯಲ್ಲಿ ಕೃಷ್ಣಮಠದ ಸುತ್ತಮುತ್ತ ಪೊಲೀಸರ ದಂಡೇ ಬಂದೋಬಸ್ತ್‌ನಲ್ಲಿ ಪಾಲ್ಗೊಂಡಿತ್ತು.
ಮೊಳಗಿದ ಸೇವ್ ರಿವರ್ ರ್‍ಯಾಲಿ 
ದೇಶದ ನದಿಗಳ ರಕ್ಷಣೆಗಾಗಿ ನಡೆಯುತ್ತಿರುವ ಸೇವ್ ರಿವರ್ ರ್‍ಯಾಲಿಯು ಉಡುಪಿ ವಿಟ್ಲಪಿಂಡಿ ಉತ್ಸವದಲ್ಲಿಯೂ ಮೊಳಗಿತು. ಮಾರ್ಪಳ್ಳಿ ಚಂಡೆ ಬಳಗದ ಹುಲಿವೇಷಧಾರಿಗಳು ಸೇವ್ ರಿವರ್ ರ್‍ಯಾಲಿಯ ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಹಿಡಿದು ಉತ್ಸವದಲ್ಲಿ ಪಾಲ್ಗೊಂಡು ಜನರಲ್ಲಿ ಜಾಗೃತಿ ಮೂಡಿಸಿದರು. ಸಾರ್ವಜನಿಕರು ಕೂಡ ರ್‍ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.

LEAVE A REPLY