ಎತ್ತಿನಹೊಳೆ ಯೋಜನೆ ಪ್ರದೇಶದಲ್ಲಿ ಅನಧಿಕೃತವಾಗಿ ಮರಗಳ ಹನನ: ವಿಚಾರಣೆ ಸೆ. 18ಕ್ಕೆ ಮುಂದೂಡಿಕೆ

ಉಡುಪಿ: ಹೊಸದಿಲ್ಲಿಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿರುವ ಎತ್ತಿನಹೊಳೆ ಯೋಜನೆ ಪ್ರದೇಶದಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿದಿರುವ ಕುರಿತ ವ್ಯಾಜ್ಯದ ವಿಚಾರಣೆಯನ್ನು ನ್ಯಾಯಪೀಠ ಸೆ. 18ಕ್ಕೆ ಮುಂದೂಡಿ ಆದೇಶಿಸಿದೆ.
ನ್ಯಾ. ಜಾವೇದ್ ರಹೀಂ ಅವರ ನೇತೃತ್ವದ ನ್ಯಾಯಪೀಠವು ವ್ಯಾಜ್ಯದ ವಿಚಾರಣೆಯನ್ನು ನಡೆಸುತ್ತಿದ್ದು, ಪ್ರತಿವಾದಿಗಳ ಪರ ವಕೀಲರು ನ್ಯಾಯಪೀಠದ ಮುಂದೆ ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ. ಧವಾರ ಕರ್ನಾಟಕ ಸರಕಾರ ಪರ ವಕೀಲರು ವಾದವನ್ನು ಮಂಡಿಸಿದ್ದು, ಗುರುವಾರವೂ ಅವಕಾಶ ನೀಡಲಾಗಿತ್ತು. ಆದರೆ ಗುರುವಾರ ಕರ್ನಾಟಕ ಸರಕಾರ ಮತ್ತು ವಿಶ್ವೇಶರಯ್ಯ ಜಲ ನಿಗಮದ ಪರ ವಕೀಲರು ಹಾಜರಾಗಲಿಲ್ಲ. ಕೊನೆಗೆ ತಮ್ಮ ವಕೀಲರು ಬೇರೊಂದು ವ್ಯಾಜ್ಯದಲ್ಲಿ ನಿರತರಾಗಿದ್ದಾರೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದು, ಈ ವೇಳೆ ಅರ್ಜಿದಾರ ಕೆ.ಎನ್. ಸೋಮಶೇಖರ್ ಪರ ವಕೀಲರು ವಿನಾಕರಣ ಪ್ರಕರಣದ ಇತ್ಯರ್ಥವನ್ನು ವಿಳಂಬ ಮಾಡುವ ನಿಟ್ಟಿನಲ್ಲಿ ಈ ರೀತಿ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿವಾದಿಗಳಾದ ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯದ ವಕೀಲರು ವಾದ ಮಂಡನೆಗೆ ಅವಕಾಶ ನೀಡಬೇಕು ಎಂದು ವಿಜ್ಞಾಪಿಸಿದ್ದಾರೆ.
ವಾದ ಮಂಡನೆಗೆ ನ್ಯಾಯಪೀಠ ಅನುಮತಿಸಿದಾಗ ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯದ ಪರ ವಕೀಲರು ತಾವು ಸಿದ್ಧತೆ ನಡೆಸಿಲ್ಲ ಎನ್ನುವ ನೆಪ ಹೇಳಿ ನುಣುಚಿಕೊಳ್ಳಲು ಯತ್ನಿಸಿದ್ದಾರೆ. ಈ ಬಗ್ಗೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ವಕೀಲರು ಕೇವಲ ೫ ನಿಮಿಷಗಳ ಕಾಲ ತಮ್ಮ ವಾದವನ್ನು ಮಂಡಿಸಿ, ವಾದ ಪೂರ್ಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ನ್ಯಾಯಪೀಠವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಪರ ವಕೀಲರು ವಿಫಲರಾಗಿದ್ದಾರೆ. ಅಂತಿಮವಾಗಿ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಸೆ. 18ರಂದು ನಿಗದಿಪಡಿಸಿ ಆದೇಶಿಸಿದೆ.

LEAVE A REPLY