ಬಡ ಕುಟುಂಬದ ಆಶಾಕಿರಣ ಈ ವೇಷಧಾರಿ ಕಟಪಾಡಿಯ ರವಿ. ಕೆ

ಕಾಪು: ಕಟಪಾಡಿಯ ರವಿ ಕೆ. ಅವರು ಅನಾರೋಗ್ಯ ಪೀಡಿತ 4 ಬಡ ಕುಟುಂಬಗಳ ಮಕ್ಕಳ ಬಾಳಿಗೆ ಆಶಾ ಕಿರಣ ಮೂಡಿಸುವ ಪ್ರಯತ್ನವಾಗಿ ೪ನೇ ಬಾರಿಗೆ ಕೃಷ್ಣ ಜನ್ಮಾಷ್ಟಮಿಯಂದು ವೇಷಧಾರಿಯಾಗಿ ಉಡುಪಿ, ಮಲ್ಪೆ ಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.
ಇಂಗ್ಲಿಷ್ ಸಿನಿಮಾದ ಕ್ರಾಂಪಸ್ ಮಾದರಿಯ ಆಕರ್ಷಕ ವೇಷವನ್ನು ಧರಿಸಿದ ರವಿ ಕಟಪಾಡಿ ಜನರನ್ನು ತಲುಪುತ್ತಿದ್ದು, ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವಾಗಲು ಧನ ಸಹಾಯವನ್ನು ನೀಡುವ ಉದ್ದೇಶ ಹೊಂದಿದ್ದಾರೆ.
ಮೂಡಬಿದಿರೆ ದರೆಗುಡ್ಡೆ ಪಣಪಿಲ ಪುನಿಕೆಬೆಟ್ಟುವಿನ ಒಂದುವರೆ ವರ್ಷದ ಮಗು, ಶಿವಮೊಗ್ಗದ 10 ವರ್ಷದ ಹೆಣ್ಣು ಮಗು ಮೆಹಕ್, ಉಡುಪಿಯ ದೆಂದೂರುಕಟ್ಟೆಯ ಒಂದುವರೆ ತಿಂಗಳ ಮಗು ಹಾಗೂ ಬನ್ನಂಜೆಯ ಒಂದುವರೆ ವರ್ಷದ ಮಗುವಿನ ಚಿಕಿತ್ಸೆಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಈ ಬಾರಿಯ ಅಷ್ಟಮಿ ವೇಷದಿಂದ ಸುಮಾರು 5 ರಿಂದ 6 ಲಕ್ಷ ಮೊತ್ತ ಸಂಗ್ರಹವಾಗುವ ಅಭಿಲಾಷೆಯನ್ನು ಇರಿಸಿಕೊಂಡಿಕೊಂಡಿದ್ದಾರೆ.
ದಾನಿಗಳು ಸಹೃದಯಿಗಳು ಅವರಿಗೆ ಸ್ಪಂದಿಸಬೇಕಾಗಿದೆ. ಸಂಗ್ರಹಿಸಿದ ಹಣವನ್ನು ಸೆ.19ರಂದು ಕೇಮಾರು ಶ್ರೀಈಶ ವಿಠ್ಠಲದಾಸ ಸ್ವಾಮೀಜಿ ಹಾಗೂ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಎಸ್ಪಿ ಡಾ. ಸಂಜೀವ ಎಂ. ಪಾಟೀಲ್ ಹಾಗೂ ಹಿರಿಯರ ಸಮಕ್ಷಮದಲ್ಲಿ ಅನಾರೋಗ್ಯ ಪೀಡಿತ ಕಂದಮ್ಮಗಳ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತದೆ.
ಧನಸಹಾಯ ಮಾಡಲಿಚ್ಚಿಸುವವರು ಪಾಂಗಾಳ ವಿಜಯಾ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ ೧೧೭೨೦೬೩೩೧೦೦೦೦೧೩ (ಐ.ಎಫ್.ಎಸ್.ಸಿ.- ವಿ.ಐ.ಜೆ.ಬಿ ೦೦೦೧೧೭೨)ಗೆ ಜಮೆ ಮಾಡಬಹುದು ಎಂದು ರವಿಫ್ರೆಂಡ್ಸ್ ಬಳಗ ಕೋರಿದೆ.
ಸತತ ನಾಲ್ಕು ವರ್ಷಗಳಿಂದ
ರವಿ ಅವರು ಮೊದಲನೇ ಬಾರಿ ವೇಷ ಹಾಕಿ ಗಳಿಸಿದ ೧,೦೪,೮೧೦ರೂ ಹಣವನ್ನು ಬಾಲಕಿ ಅನ್ವಿತಾಳ ಶಸ್ತ್ರ ಚಿಕಿತ್ಸೆಗೆ ನೀಡಿದ್ದರು. ನಂತರ ೩.೨೦ಲಕ್ಷ ರೂ. ಸಂಗ್ರಹಿಸಿ ೪ಮಂದಿ ಬಡ ಅಸಹಾಯಕ ಮಕ್ಕಳಿಗೆ ನೀಡಿ ಮಾನವೀಯತೆ ಮೆರೆದಿದ್ದರು. ಕಳೆದ ವರ್ಷ ೪.೬೫ಲಕ್ಷ ರೂ. ಧನ ಸಂಗ್ರಹವಾಗಿ ೪ ಬಡಕುಟುಂಬಕ್ಕೆ ಧನಸಹಾಯ ನೀಡಿದ್ದರು.
ಅನಾರೋಗ್ಯ ಪೀಡಿತರ ಪಾಲಿನ ಬೆಳಕು
ಮೂಲತಃ ಕಟಪಾಡಿಯ ರವಿ ಮತ್ತು ಆತನ ೭೦ ಮಂದಿ ಗೆಳೆಯರು ಸಂಘಟಿತರಾಗಿ ಆರ್ಥಿಕವಾಗಿ ಹಿಂದುಳಿದ, ಜೀವನದಲ್ಲಿ ನೊಂದ ಮತ್ತು ಅಂಗ ವೈಕಲ್ಯದಿಂದ ಬಳಲುತ್ತಿರುವ ಬಡ ಮಕ್ಕಳ ಪಾಲಿಗೆ ಬೆನ್ನೆಲುಬಾಗಿ ನಿಲ್ಲುವ ಉದ್ದೇಶದಿಂದ ಕಾರ್ಯ ಪ್ರವೃತ್ತರಾಗಿದ್ದಾರೆ. ಮೇಕಪ್ ಕಲಾವಿದರಾದ ಸಂತೋಷ್ ಪಿತ್ರೋಡಿ ಮತ್ತು ಗಣೇಶ್ ೩ ತಿಂಗಳ ತಯಾರಿಯ ಬಳಿಕ ಇಂತಹ ಅತ್ಯದ್ಭುತ ಕಲಾತ್ಮಕ ವೇಷದ ಬಣ್ಣಗಾರಿಕೆಯಲ್ಲಿ ಕರಚಮತ್ಕಾರವನ್ನು ಪ್ರದರ್ಶಿಸಿದ್ದಾರೆ.

LEAVE A REPLY