ಮೋಸ್ಟ್ ವಾಂಟೆಡ್ ಉಗ್ರ ದಾವೂದ್‌ ಇಬ್ರಾಹಿಂನ 42,000 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಲಂಡನ್: ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂಗೆ ಸೇರಿದ 6.7 ಮಿಲಿಯನ್ ಡಾಲರ್ (42 ಸಾವಿರ ಕೋಟಿ ರೂ.) ಮೊತ್ತದ ಬ್ರಿಟನ್‌ನಲ್ಲಿರುವ ಆಸ್ತಿಯನ್ನು ಬ್ರಿಟನ್ ಸರ್ಕಾರ ಬುಧವಾರ ಮುಟ್ಟುಗೋಲು ಹಾಕಿಕೊಂಡಿದೆ.
ಇಂಗ್ಲೆಂಡ್‌ನ ಮಿರರ್ ಪತ್ರಿಕೆಯು ಈ ಕುರಿತಂತೆ ವರದಿ ಮಾಡಿದ್ದು, ದಾವೂದ್ ಇಬ್ರಾಹಿಂ 1993ರಲ್ಲಿ ಮುಂಬೈಯಲ್ಲಿ ನಡೆದ ಸರಣಿ ಬಾಂಬ್ ಸೋಟದ ಮಾಸ್ಟರ್ ಮೈಂಡ್ ಎಂದೇ ಕರೆಸಿಕೊಂಡಿದ್ದ. ಪಾಬ್ಲೋ ಎಸ್ಕೋಬಾರ್‌ನ ನಂತರ ಜಗತ್ತಿನಲ್ಲಿಯೇ ದಾವೂದ್ ಇಬ್ರಾಹಿಂ ಎರಡನೇ ಅತ್ಯಂತ ಶ್ರೀಮಂತ ಪಾತಕಿ ಎಂದು ಕರೆಸಿಕೊಂಡಿದ್ದ. ಈತ ಬ್ರಿಟನ್‌ನಲ್ಲಿ ಹೊಂದಿರುವ ಆಸ್ತಿಯ ಕುರಿತಂತೆ ಖಜಾನೆ ವಿಭಾಗವು ಕಳೆದೊಂದು ತಿಂಗಳಿನಿಂದ ಮಾಹಿತಿ ಸಂಗ್ರಹಿಸಿತ್ತು. ಅಲ್ಲದೇ ಆತನ ಆಸ್ತಿಯನ್ನು ನಿರ್ಭಂಧಿಸುವಂತೆ ಬ್ರಿಟನ್ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಸೂಕ್ತ ಪರವಾನಗಿಯನ್ನು ಹೊಂದಿಲ್ಲದೇ ದಾವೂದ್ ಇಬ್ರಾಹಿಂ ಬ್ರಿಟನ್ನಿನಲ್ಲಿ ಭಾರೀ ಪ್ರಮಾಣದ ಆಸ್ತಿಯನ್ನು ಹೊಂದಿದ್ದ. ಅಲ್ಲದೇ ಬ್ರಿಟನ್ನಿನ ಖಜಾನೆ ಇಲಾಖೆಯಿಂದ ಯಾವುದೇ ಸೂಕ್ತ ದಾಖಲೆಗಳನ್ನು ಪಡೆದುಕೊಂಡಿರಲಿಲ್ಲ.
ಬ್ರಿಟನ್ ಮೂಲದ ಬರ್ಮಿಂಗ್‌ಹ್ಯಾಮ್ ಮೇಲ್ ಎಂಬ ಟ್ಯಾಬ್ಲಾಯ್ಡ್ ವರದಿ ಪ್ರಕಾರ ದಾವೂದ್, ಇಂಗ್ಲೆಂಡಿನ ವಾರ್ವಿಕ್‌ಶೈರ್ ನಲ್ಲಿ ಹೊಟೇಲ್ ಹಾಗೂ ಮಿಡ್‌ಲ್ಯಾಂಡ್ಸ್‌ನಲ್ಲಿ ಮನೆ ಹಾಗೂ ಆಸ್ತಿಯನ್ನು ಹೊಂದಿದ್ದ.
೨೦೧೫ರಲ್ಲಿ ಭಾರತ ದಾವುದ್ ಇಬ್ರಾಹಿಂ ಬ್ರಿಟನ್ನಿನಲ್ಲಿ ಹೊಂದಿರುವ ಆಸ್ತಿಗಳ ದಾಖಲೆಯನ್ನು ಬ್ರಿಟನ್ನಿಗೆ ಸಲ್ಲಿಸಿತ್ತು. ಅಲ್ಲದೇ ಆಸ್ತಿ ಮುಟ್ಟುಗೋಲು ಮಾಡುವಂತೆ ಆಗ್ರಹಿಸಿತ್ತು. ಪ್ರೀ ಪ್ರೆಸ್ ಜರ್ನಲ್ ಪತ್ರಿಕೆಯ ಪ್ರಕಾರ ಈಗ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳನ್ನು ಹೊರತುಪಡಿಸಿ ದಾವೂದ್ ಇಬ್ರಾಹೀಮ್ ಬ್ರಿಟನ್ನಿನಾದ್ಯಂತ ಕನಿಷ್ಟ 12 ಮನೆಗಳು, ಫ್ಲಾಟ್ ಹಾಗೂ ಹೊಟೇಲ್‌ಗಳನ್ನು ಹೊಂದಿದ್ದಾನೆ. ಲಂಡನ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಆಸ್ತಿಗಳಿವೆ.
೨೧ ನಕಲಿ ಹೆಸರುಗಳ ಮೂಲಕ ದಾವೂದ್ ಇಬ್ರಾಹೀಮ್ ಇಂಗ್ಲೆಂಡಿನಲ್ಲಿ ಆಸ್ತಿ ಕೊಂಡಿದ್ದ. ಅಲ್ಲದೇ ಮೂರು ಆಸ್ತಿಗಳನ್ನು ಕೊಳ್ಳಲು ಪಾಕಿಸ್ತಾನದ ವಿಳಾಸವನ್ನು ನೀಡಿದ್ದ ಎಂಬ ಅಂಶಗಳು ಬೆಳಕಿಗೆ ಬಂದಿದೆ.
2017ರ ಜನವರಿಯಲ್ಲಿ ಸಂಯುಕ್ತ ಅರಬ್ ಗಣರಾಜ್ಯವು ತನ್ನ ದೇಶದಲ್ಲಿ ದಾವೂದ್ ಹೊಂದಿದ್ದ 15 ಸಾವಿರ ಕೋಟಿ. ರೂ. ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿತ್ತು. ಇದೀಗ ಬ್ರಿಟನ್‌ ದಾವೂದ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಪ್ರಸ್ತುತ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ದಾವೂದ್ ಇಬ್ರಾಹೀಮ್ ಹುಟ್ಟಿದ್ದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇರ್ ಎಂಬಲ್ಲಿ. ಈತ ಅನೇಕ ದಾಖಲೆಗಳಲ್ಲಿ ಭಾರತೀಯ ಎಂದು ಉಲ್ಲೇಖಗೊಂಡಿದ್ದ. ಅಲ್ಲದೇ ಭಾರತದ ಪಾಸ್‌ಪೋರ್ಟನ್ನೂ ಹೊಂದಿದ್ದ. ಕೇಂದ್ರ ಸರ್ಕಾರ ಆತನ ಪಾಸ್ ಪೋರ್ಟ್ ರದ್ದುಪಡಿಸಿದೆ. ದಾವೂದ್ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಅಂಶವನ್ನು ಪಾಕಿಸ್ತಾನ ಅಲ್ಲಗಳೆಯುತ್ತಲೇ ಬಂದಿದೆ.

LEAVE A REPLY