ಕರ್ನಾಟಕವಾಗಲಿದೆ ವಿದ್ಯುತ್‌ಚಾಲಿತ ವಾಹನಗಳ ರಾಜಧಾನಿ!

ಬೆಂಗಳೂರು: ಕರ್ನಾಟಕವನ್ನು ಭಾರತ ದೇಶದ ವಿದ್ಯುತ್‌ಚಾಲಿತ ವಾಹನಗಳ ರಾಜಧಾನಿ (ಇವಿ ಕ್ಯಾಪಿಟಲ್)ಯನ್ನಾಗಿ ಮಾಡಲು ರಾಜ್ಯ ಸರ್ಕಾರ ಗುರಿ ಹೊಂದಿದ್ದು, ಈ ಹಿನ್ನೆಲೆಯಲ್ಲಿ ವಿದ್ಯುತ್ ಚಾಲಿತ ವಾಹನ ಮತ್ತು ಇಂಧನ ಶಕ್ತಿ ಉಳಿತಾಯ-2017 ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ವಿದ್ಯುತ್ ಚಾಲಿತ ವಾಹನಗಳ ಉತ್ಪಾದನಾ ವಲಯದಲ್ಲಿ ಹೂಡಿಕೆ ಮಾಡಲು ಕರ್ನಾಟಕವನ್ನು ಪ್ರಶಸ್ತ ಸ್ಥಳವನ್ನಾಗಿ ಮಾಡುವುದೂ ಈ ನೀತಿಯ ಉದ್ದೇಶವಾಗಿದೆ. ಪ್ರಮುಖವಾಗಿ 31 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಣೆಯಾಗುವ ಅಂದಾಜಿದ್ದು, ಇದರಿಂದ ವಿದ್ಯುತ್‌ಚಾಲಿತ ವಾಹನಗಳ ತಯಾರಿಕಾ ಕ್ಷೇತ್ರದಲ್ಲಿ ೫೫ ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
ವಿದ್ಯುತ್‌ಚಾಲಿತ ವಾಹನಗಳ ಕ್ಷೇತ್ರದಲ್ಲಿ ಪುನರ್ವಸತಿ ಮತ್ತು ಪುನರ್ನಿರ್ಮಾಣದ ಅವಕಾಶಗಳನ್ನು ಕಲ್ಪಿಸುವುದು ಹಾಗೂ ಆಂತರಿಕ ಇಂಧನ ದಹನ ಇಂಜಿನ್‌ಗಳನ್ನು ಎಲೆಕ್ಟ್ರಿಕ್ ಇಂಜಿನ್‌ಗಳಾಗಿ ಬದಲಿಸುವ ಕ್ರಾಂತಿಕಾರಿ ಹೆಜ್ಜೆಯನ್ನಿಡಲು ಈ ನೀತಿ ಸಹಕಾರಿಯಾಗಲಿದೆ.
ಎಲ್ಲೆಡೆ ಚಾರ್ಜರ್ ಸೌಕರ್ಯ ಕಲ್ಪಿಸಬೇಕು
ವಿಮಾನ ನಿಲ್ದಾಣ, ಮೆಟ್ರೋ, ರೈಲ್ವೆ ನಿಲ್ದಾಣಗಳೂ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿ ಮೂಲಸೌಕರ್ಯಾಭಿವೃದ್ಧಿ, ವಿದ್ಯುತ್‌ಚಾಲಿತ ವಾಹನಗಳನ್ನು ಚಾರ್ಜ್ ಮಾಡುವ ಕೇಂದ್ರಗಳನ್ನು ಸ್ಥಾಪಿಸುವುದು.
ಮಾಹಿತಿ ತಂತ್ರಜ್ಞಾನ ಉದ್ಯಾನ (ಐಟಿ ಪಾರ್ಕ್), ವಿಶೇಷ ಆರ್ಥಿಕ ವಲಯ (ಎಸ್‌ಇಝಡ್)ಗಳು, ಮಾಲ್‌ಗಳು, ವಸತಿ ಸಮುಚ್ಛಯ(ಅಪಾರ್ಟ್‌ಮೆಂಟ್)ಗಳು ಸೇರಿದಂತೆ ಅತಿ ಎತ್ತರದ ಕಟ್ಟಡಗಳಲ್ಲಿ ಚಾರ್ಜಿಂಗ್ ಸೌಲಭ್ಯಗಳನ್ನು ಕಡ್ಡಾಯಗೊಳಿಸುವುದು ಮತ್ತು ಅದಕ್ಕೆ ಪೂರಕವಾಗಿ ನಿಯಮಗಳು ಬದಲಿಸುವುದು.
ಬೆಂಗಳೂರು ನಗರದಲ್ಲಿ ವಿದ್ಯುತ್‌ಚಾಲಿತ ವಾಹನಗಳನ್ನು ಚಾರ್ಜ್ ಮಾಡಲು ಅಗತ್ಯ ಸೌಲಭ್ಯ ಒದಗಿಸುವ ಸಲುವಾಗಿ ಬಿಬಿಎಂಪಿ, ಬಿಎಂಟಿಸಿ, ಬೆಸ್ಕಾಂ, ಕೆಆರ್‌ಡಿಎಲ್, ಕೆಐಎಡಿಬಿ ಹಾಗೂ ಸಂಬಂಸಿದ ಸಂಸ್ಥೆಗಳನ್ನು ವಾಹಕ ಸಂಸ್ಥೆಗಳಾಗಿ ಬಳಸಿಕೊಳ್ಳುವುದು.
ಇವಿ ತಯಾರಿಕಾ ವಲಯ ಸ್ಥಾಪನೆ
ವಿದ್ಯುತ್‌ಚಾಲಿತ ವಾಹನಗಳ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನಗಳನ್ನು ಪರೀಕ್ಷೆಗೊಳಪಡಿಸುವ ಸಲುವಾಗಿ ನವೋದ್ಯಮ ಮತ್ತು ಸಂಶೋಧನಾ ಸೌಲಭ್ಯ ಒದಗಿಸಿಕೊಡಲು ವಿದ್ಯುತ್‌ಚಾಲಿತ ವಾಹನ ತಯಾರಿಕಾ ವಲಯ ಸ್ಥಾಪಿಸುವುದು. ಭಾರತೀಯ ಗುಣಮಟ್ಟ ದಳದ ಪ್ರಮಾಣಪತ್ರ ಸಿಗುವವರೆಗೆ ಹೂಡಿಕೆ ಮಾಡುವವರಿಗೆ ಸಹಾಯಧನ ನೀಡುವುದು ನೀತಿಯಲ್ಲಿರುವ ಪ್ರಮುಖ ಅಂಶ.
ಇನ್ನು ಪರಿಕಲ್ಪನೆಯಿಂದ ಹಿಡಿದು ಮಾರುಕಟ್ಟೆ ಮಾಡುವವರೆಗಿನ ಪ್ರತಿ ಹಂತದಲ್ಲಿ ಬೇಕಿರುವ ಚಾಲನಾ ತಂತ್ರಜ್ಞಾನ, ಬ್ಯಾಟರಿ ತಂತ್ರಜ್ಞಾನ, ಚಾರ್ಜಿಂಗ್ ತಾಂತ್ರಿಕತೆ, ಪರಿಕರಗಳು ಮತ್ತದರ ಮರುಬಳಕೆ, ಗುಣಮಟ್ಟ ಮತ್ತು ತರಬೇತಿ ಇತ್ಯಾದಿಗಳನ್ನು ಕೊಡಲು ವಿಶೇಷ ನಿ ಮತ್ತು ಶ್ರಮಿಕ ವರ್ಗವನ್ನು ಸ್ಥಾಪಿಸಬೇಕು ಎಂದು ನೀತಿಯಲ್ಲಿ ಉಲ್ಲೇಖಿಸಿದೆ.
ಸಂಶೋಧನೆ, ಆವಿಷ್ಕಾರ ಕೇಂದ್ರ
ಕರ್ನಾಟಕ ಎಲೆಕ್ಟ್ರಿಕ್ ಮೊಬಿಲಿಟಿ ರಿಸರ್ಚ್ ಮತ್ತು ಇನ್ನೋವೇಶನ್ ಕೇಂದ್ರವನ್ನು ಸ್ಥಾಪಿಸಬೇಕು. ಇವಿ ಕೈಗಾರಿಕಾ ವಲಯಕ್ಕೆ ಅಗತ್ಯವಿರುವ ಕೌಶಲ್ಯಯುತ ಮಾನವ ಸಂಪನ್ಮೂಲ ನೀಡುವ ಸಲುವಾಗಿ ಕೈಗಾರಿಕಾ ಇಲಾಖೆಯೊಂದಿಗೆ ಒಡಗೂಡಿ ಇವಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಬೇಕು. 2014-19 ರ ನೀತಿಯಡಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇವಿ ಉತ್ಪಾದಕರು, ಬ್ಯಾಟರಿ ಉತ್ಪಾದಕರು, ಚಾರ್ಜಿಂಗ್ ಪರಿಕರಗಳ ತಯಾರಕ ಉದ್ದಿಮೆಗಳಿಗೆ ಅಗತ್ಯ ಪ್ರೋತ್ಸಾಹಧನ, ವಿನಾಯ್ತಿಗಳನ್ನು ನೀಡಬೇಕು ಎಂಬುದನ್ನು ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಇವಿ ತಯಾರಿಕಾ ಘಟಕ ಸ್ಥಾಪಿಸುವವರಿಗೆ ಮುದ್ರಾಂಕ ಶುಲ್ಕ (ಸ್ಟ್ಯಾಂಪ್ ಡ್ಯೂಟಿ)ದಲ್ಲಿ ಶೇ.50 ರಷ್ಟು ವಿನಾಯ್ತಿ ನೀಡಲೂ ನೀತಿಯಲ್ಲಿ ಉಲ್ಲೇಖವಾಗಿದೆ.

LEAVE A REPLY