ಐಫೋನ್-ಎಕ್ಸ್, ಐಫೋನ್ 8, ಐಫೋನ್ 8 ಪ್ಲಸ್: ಐಫೋನ್ ಪ್ರಿಯರಿಗೆ 3 ವಿಧದ ಸ್ಮಾರ್ಟ್‌ಫೋನ್

ಕ್ಯಾಲಿಫೋರ್ನಿಯಾ: ಸ್ಮಾರ್ಟ್‌ಫೋನ್ ತಂತ್ರಜ್ಞಾನದ ದಿಗ್ಗಜ ಸಂಸ್ಥೆ ಆಪಲ್ ತನ್ನ ಹೊಸ ಐಫೋನ್-ಎಕ್ಸ್, ಐಫೋನ್ 8 ಮತ್ತು 8 ಪ್ಲಸ್ ಮಾದರಿಗಳನ್ನು ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 10.30ಕ್ಕೆ ಸರಿಯಾಗಿ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ಏರ್ಪಡಿಸಿದ ಮೆಗಾ ಕಾರ್ಯಕ್ರಮದಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ.
ನಾವೀನ್ಯತೆಯ ನಾಯಕ ಎಂಬ ಸಂಸ್ಥೆಯ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಮತ್ತು ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಎದುರಾಳಿಗಳಿಗೆ ಕಠಿಣ ಪ್ರತಿಸ್ಪರ್ಧೆ ನೀಡಲು ಭಾರೀ ತಯಾರಿಯೊಂದಿಗೆ ಆನ್‌ಲೈನ್ ನೇರಪ್ರಸಾರದ ಮೂಲಕ ಆಪಲ್ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಐಫೋನ್‌ಗಳಿಗೆ 10 ವರ್ಷದ ಸಂಭ್ರಮ
ಐಫೋನ್ ಸ್ಮಾರ್ಟ್‌ಫೋನ್‌ನ 10ನೇ ವರ್ಷಾಚರಣೆಯನ್ನೂ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಐಫೋನ್-ಎಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಮಾತ್ರವಲ್ಲದೇ, ಇದರೊಂದಿಗೆ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಐಫೋನ್-ಎಕ್ಸ್, ಐಫೋನ್ ಮಾದರಿಯ 10ನೇ ವರ್ಷದ ವಿಶೇಷ ಆವೃತ್ತಿಯಾಗಿದೆ. ಐಫೋನ್ 8 ಮತ್ತು 8 ಪ್ಲಸ್ ಮಾದರಿಗಳು ಕಳೆದ ವರ್ಷ ಮಾರುಕಟ್ಟೆಗೆ ಬಂದಿದ್ದ ಐಫೋನ್ 7 ಹಾಗೂ 7 ಪ್ಲಸ್‌ನ ಮುಂದುವರಿದ ಆವೃತ್ತಿಗಳಾಗಿವೆ. ಸೆ.15ರಿಂದ ಐಫೋನ್ 8, 8 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಕಾಯ್ದಿರಿಸಬಹುದು. ಸೆ.22ರಿಂದ ಮಾರಾಟ ಮಳಿಗೆಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಲಭ್ಯವಿರಲಿದೆ.
ಐಫೋನ್ ೮ ಮತ್ತು ೮ ಪ್ಲಸ್ ವಿಶೇಷತೆಗಳು
ಐಫೋನ್ ೮ರಲ್ಲಿ 4.7 ಇಂಚ್ ಡಿಸ್‌ಪ್ಲೇ ಇರುತ್ತದೆ. 12 ಎಂಪಿ ಕ್ಯಾಮೆರ ಇದೆ. ಐಫೋನ್ ೮ರ ಬೆಲೆ 64,000 ರೂ.ನಿಂದ ಆರಂಭವಾಗುತ್ತದೆ. ಐಫೋನ್ 8 ಪ್ಲಸ್ 5.5 ಇಂಚ್ ಡಿಸ್‌ಪ್ಲೇ ಹೊಂದಿದೆ. 12 ಎಂಪಿ ಡ್ಯುಯಲ್ ಕ್ಯಾಮೆರ ಹೊಂದಿದ್ದು, ಇದರ ಬೆಲೆ 73,000 ರೂ.ನಿಂದ ಆರಂಭವಾಗುತ್ತದೆ.
ಐಫೋನ್-ಎಕ್ಸ್ : ಬಲಿಷ್ಠ ಸ್ಮಾರ್ಟ್‌ಫೋನ್ !
ಐಫೋನ್‌ನ 10ನೇ ವರ್ಷಾಚರಣೆಯ ವಿಶೇಷ ಆವೃತ್ತಿ ಐಫೋನ್-ಎಕ್ಸ್ ಅತ್ಯಂತ ದುಬಾರಿ ಬೆಲೆಯದ್ದಾಗಿದೆ. ಐಫೋನ್-ಎಕ್ಸ್ ಆರಂಭಿಕ ಬೆಲೆ 89,000 ರೂ. ಆಗಿದೆ. ಒರಿಜಿನಲ್ ಐಫೋನ್‌ನಿಂದ ತೊಡಗಿ ಕಂಪೆನಿಯ ಸಂಸ್ಥೆಯ ಬೆಳವಣಿಗೆಯಲ್ಲಿ ಇದು ಅತಿದೊಡ್ಡ ಹೆಜ್ಜೆ ಎಂದು ಆಪಲ್ ಸಿಇಒ ಟಿಮ್ ಕುಕ್ ಐಫೋನ್-ಎಕ್ಸ್ ಬಗ್ಗೆ ತಮ್ಮ ಮಾತಿನಲ್ಲಿ ಉಲ್ಲೇಖಿಸಿದ್ದಾರೆ. ಐಫೋನ್-ಎಕ್ಸ್ ಮೇಲೆ ಸಂಸ್ಥೆಗೆ ಇರುವ ಭಾವನಾತ್ಮಕ ಸಂಬಂಧವನ್ನು ಟಿಮ್ ಕುಕ್ ಅವರ ಮಾತುಗಳಲ್ಲಿ ಅರಿಯಬಹುದು.
ಐಫೋನ್-ಎಕ್ಸ್‌ನ ಹಿಂಭಾಗ ಮತ್ತು ಮುಂಭಾಗ ಸಂಪೂರ್ಣ ಗಾಜಿನ ಕವಚ ಹೊಂದಿದೆ. ಸಿಲ್ವರ್ ಅಥವಾ ಸ್ಪೇಸ್ ಗ್ರೇ ಬಣ್ಣದ ಈ ಸ್ಮಾರ್ಟ್‌ಫೋನ್ ದೀರ್ಘ ಬಾಳಿಕೆಯನ್ನು ಹೊಂದಿದೆ ಎಂದು ಆಪಲ್ ಹೇಳಿದೆ. ಅತ್ಯಂತ ನಯವಾದ ಸ್ಟೈನ್‌ಲೆಸ್ ಸ್ಟೀಲ್ ಕವಚವನ್ನು ಹೊಂದಿರುವ ಐಫೋನ್-ಎಕ್ಸ್‌ನ ಗುಣಮಟ್ಟವನ್ನು ಬೇರೆಲ್ಲಾ ಫೋನ್‌ಗಳಿಂದ ಹೆಚ್ಚಿಸಿದೆ. 7 ಪದರಗಳ ಬಣ್ಣ ಪ್ರಕ್ರಿಯೆಯಿಂದ ಅದ್ಭುತವಾದ ವರ್ಣ ಸಂಯೋಜನೆ, ಗಾಜಿನ ಫಿನಿಶಿಂಗ್ ಹಾಗೂ ರಿಫ್ಲೆಕ್ಟಿವ್ ಒಪ್ಟಿಕಲ್ ಲೇಯರ್ ಹೊಂದಿದ್ದು ಅತ್ಯಾಕರ್ಷಕವಾಗಿದೆ. ಐಫೋನ್-ಎಕ್ಸ್ ನೀರು ಮತ್ತು ಧೂಳು ನಿರೋಧಕತೆಯೊಂದಿಗೆ ದೀರ್ಘ ಬಾಳಿಕೆಯ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.
ಐಫೋನ್ 7, 7 ಪ್ಲಸ್ ಮತ್ತು 6ರಲ್ಲಿ ಬೆಲೆ ಇಳಿಕೆ
ಆಪಲ್ ಐಫೋನ್-ಎಕ್ಸ್ ಮತ್ತು ಐಫೋನ್ 8, 8ಪ್ಲಸ್ ಬಿಡುಗಡೆಯಾದ ಬಳಿಕ ಸಂಸ್ಥೆ ಬುಧವಾರ ದೇಶದಲ್ಲಿ ಲಭ್ಯವಿರುವ ಐಫೋನ್ 7, 7 ಪ್ಲಸ್ ಮತ್ತು ಐಫೋನ್ 6 ಆವೃತ್ತಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ. ಕಳೆದ ವರ್ಷ ಐಫೋನ್ 7ಮತ್ತು 7 ಪ್ಲಸ್ ಬಿಡುಗಡೆ ಮಾಡಿದ ಬಳಿಕ ಅದರ ಹಿಂದಿನ ಆವೃತ್ತಿಗಳ ಬೆಲೆ ಕಡಿಮೆ ಮಾಡಿತ್ತು.

LEAVE A REPLY