ಕಾವೇರಿ ವಿವಾದ : ಸುಪ್ರೀಂನಲ್ಲಿ ಉಭಯ ರಾಜ್ಯಗಳಿಂದ ವಾದ ಮಂಡನೆ

ನವದೆಹಲಿ: ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ-ತಮಿಳುನಾಡು ಕಾವೇರಿ ಜಲ ವಿವಾದ ಕುರಿತಂತೆ ಇಂದಿನಿಂದ ಮತ್ತೆ ವಿಚಾರಣೆ ಮುಂದುವರಿದಿದೆ.
ಕಾವೇರಿ ಜಲ ವಿವಾದ ನ್ಯಾಯಮಂಡಳಿಯು 2007ರಲ್ಲಿ ನೀಡಿದ ಅಂತಿಮ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿಗಳನ್ನು ಸಲ್ಲಿಸಿದ್ದು, ಸುಪ್ರೀಂಕೋರ್ಟ್‌ನಲ್ಲಿ ಉಭಯ ರಾಜ್ಯಗಳು ಇಂದು ತನ್ನ ವಾದ-ಪ್ರತಿವಾದಗಳನ್ನು ಮಂಡಿಸಿವೆ.
ಕಾವೇರಿ ಜಲಾನಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕೆಆರೆಸ್ ಜಲಾಶಯದ ನೀರಿ ಮಟ್ಟದಲ್ಲಿ ಏರಿಕೆಯಾಗಿದೆ. ಆದ್ದರಿಂದ ರಾಜ್ಯ ಮತ್ತಷ್ಟು ನೀರು ಹರಿಸಲು ನಿರ್ದೇಶನ ನೀಡಬೇಕೆಂದು ಇಂದು ವಿಚಾರಣೆ ವೇಳೆ ತಮಿಳುನಾಡು ಪರ ವಕೀಲರು ಕೋರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕದ ವಕೀಲರು, ಕಳೆದ ಮೂರು ವರ್ಷಗಳಿಂದ ಮುಂಗಾರು ಮಳೆ ವೈಫಲ್ಯದಿಂದ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಬರಗಾಲ ಪರಿಸ್ಥಿತಿ ಉಂಟಾಗಿದೆ. ಮಳೆಯಾಗಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಜಲಾಶಯ ಭರ್ತಿಯಾಗಿಲ್ಲ. ಹೀಗಾಗಿ ತಮಿಳುನಾಡಿಗೆ ಮತ್ತೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಪ್ರತಿವಾದ ಮಂಡಿಸಿದರು.
ಈಹಿಂದೆ ಎರಡೂ ರಾಜ್ಯಗಳ ನಡುವೆ ಕಾವೇರಿ ಜಲ ವಿವಾದದ ವೇಳೆ ಉಂಟಾಗಿರುವ ಭಾರೀ ನಷ್ಟಕ್ಕಾಗಿ ಪರಿಹಾರ ನೀಡಬೇಕೆಂದು ಕೋರಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಈ ವರ್ಷ ಜನವರಿಯಲ್ಲಿ ವಜಾಗೊಳಿಸಿತ್ತು. ಜನವರಿ ೯ರಂದು ತಮಿಳುನಾಡು ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ ರಾಜ್ಯಕ್ಕೆ ಕರ್ನಾಟಕ ಸಮರ್ಪಕವಾಗಿ ನೀರು ಹರಿಸದ ಕಾರಣ ಆ ರಾಜ್ಯದಿಂದ 2,480 ಕೋಟಿ ರೂ.ಗಳ ಪರಿಹಾರ ಒದಗಿಸಿಕೊಂಡುವಂತೆ ಕೋರಿತ್ತು. ಅದಾದ ಬಳಿಕ ಕಳೆದ ವರ್ಷ ಡಿ.9ರಂದು ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದವು. ನ್ಯಾಯಾಲಯ ಇದನ್ನು ವಿಚಾರಣೆಗಾಗಿ ಅಂಗೀಕರಿಸಿತ್ತು. ಸಂವಿಧಾನಿಕವಾಗಿ ಇರುವ ಅಧಿಕಾರ ಮತ್ತು ಹಕ್ಕನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದು ಈ ಅಂತಿಮ ವಿಚಾರಣೆ ಆರಂಭಿಸಿದೆ.

LEAVE A REPLY