ತಮಿಳುನಾಡಿನಲ್ಲಿ ಮುಂದುವರಿದ ರಾಜಕೀಯ ಹೈಡ್ರಾಮ: ಹೊಸಕೋಟೆ ರೆಸಾರ್ಟ್‌ನಲ್ಲಿ ಶಾಸಕರ ಹುಡುಕಾಟ

ಮಡಿಕೇರಿ:  ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮ ಮುಂದುವರೆದಿದ್ದು ಪ್ರಕರಣ ವೊಂದರ ವಿಚಾರಣೆಗೆ ಅಗತ್ಯವಾಗಿದ್ದು, ತಲೆಮರೆಸಿ ಕೊಂಡಿರುವ ತಮಿಳುನಾಡಿನ ಶಾಸಕರೊಬ್ಬರ ಪತ್ತೆಗಾಗಿ ಅಲ್ಲಿನ ಪೆಲೀಸರು ಇಲ್ಲಿಗೆ ಸಮೀಪದ ಏಳನೇ ಹೊಸಕೋಟೆಯ ರೆಸಾರ್ಟ್‌ನಲ್ಲಿ ಪರಿಶೀಲನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಟಿ.ಟಿ.ವಿ ದಿನಕರನ್ ಜೊತೆ ಗುರುತಿಸಿ ಕೊಂಡಿರುವರೆನ್ನಲಾದ ಆಡಳಿತಾರೂಢ ಎ.ಐ.ಎ.ಡಿ.ಎಂ.ಕೆ.ಯ 17 ಶಾಸಕರು   ಕಳೆದ 4 ದಿನಗಳಿಂದ ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರಿನ ಪ್ಯಾಡಿಂಗ್ಟನ್ ರೆಸಾರ್ಟ್‌ನಲ್ಲಿ  ಆಶ್ರಯ ಪಡೆದಿದ್ದು, ಈ ಹಿನ್ನೆಲೆಯಲ್ಲಿ ಈ ಶಾಸಕರೊಂದಿಗೆ ವಿಚಾರಣೆಗೆ ಅವಶ್ಯವಿರುವ ಶಾಸಕ ಪಳನಿಯಪ್ಪನ್ ಇರಬಹುದೆನ್ನುವ ಕಾರಣಗಳ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ರೆಸಾರ್ಟ್‌ಗೆ ಆಗಮಿಸಿ ಪರಿಶೀಲನೆ ನಡೆಸಿದರಾದರೂ ಅದು ಫಲಕಾರಿಯಾಗಿಲ್ಲ.ತಮಿಳುನಾಡಿನ ತಿರುಚ್ಚಿಯ ಡಿವೈಎಸ್‌ಪಿ ವಿಜಯರಾಘವನ್, ಚೆನ್ನೈನ ಡಿವೈಎಸ್‌ಪಿ ಸತ್ಯಮೂರ್ತಿ, ಕೊಯಮತ್ತೂರಿನ ಡಿವೈಎಸ್‌ಪಿ ವೇಲ್ ಮುರುಘನ್ ಸೇರಿದಂತೆ ನಾಲ್ವರು ಡಿವೈಎಸ್‌ಪಿಗಳ ನೇತೃತ್ವದ ಇಪ್ಪತ್ತು ಪೊಲೀಸ್ ಸಿಬ್ಬಂದಿಗಳನ್ನು ಹೊಂದಿದ ತಂಡ ಮಂಗಳವಾರ  ಮಧ್ಯಾಹ್ನದ  ವೇಳೆಗೆ ರೆಸಾರ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅಲ್ಲಿರುವ ಶಾಸಕರನ್ನು ವಿಚಾರಣೆಗೆ ಒಳಪಡಿಸಿದರು. ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಆಗಮಿಸಿದ್ದ ತಮಿಳುನಾಡು ಪೊಲೀಸ್  ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಸೋಮವಾರಪೇಟೆ ಡಿವೈಎಸ್‌ಪಿ ಅವರೊಂದಿಗೆ ಚರ್ಚಿಸಿ ಮಾಹಿತಿ ನೀಡಿ, ಅಲ್ಲಿಂದ ಮಡಿಕೇರಿ ಜಿಲ್ಲಾ  ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿ ಹಿಂತೆರಳಿರುವುದಾಗಿ ತಿಳಿಸಿದ್ದಾರೆ.

LEAVE A REPLY