ನೇತ್ರ ವೈದ್ಯವಿಜ್ಞಾನದಲ್ಲೇ ಅಪೂರ್ವ ಪ್ರಕರಣ: ಕತ್ತಲಾಗಿದ್ದ ಬಾಳಿನಲ್ಲಿ ಬೆಳಗಿತು ‘ಜ್ಯೋತಿ’!

ಉಡುಪಿ: ಹುಟ್ಟು ಕುರುಡಿಯಾಗಿದ್ದ ಬಳ್ಳಾರಿ ಜಿಲ್ಲೆಯ ಜ್ಯೋತಿಬಾಯಿ ಎಂಬ ಯುವತಿಗೆ 24 ವರ್ಷಗಳ ಬಳಿಕ ದೃಷ್ಟಿಭಾಗ್ಯ ಒದಗಿದ್ದು, ಉಡುಪಿ ಪ್ರಸಾದ್ ನೇತ್ರಾಲಯದ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ನೇತ್ರ ವೈದ್ಯವಿಜ್ಞಾನದಲ್ಲೇ ಅಪೂರ್ವವಾದ ಈ ಪ್ರಕರಣ ಕರಾವಳಿ ಕರ್ನಾಟಕದ ಪ್ರಥಮ ಯಶಸ್ವಿ ಶಸ್ತ್ರಚಿಕಿತ್ಸೆ. ಸಾಮಾನ್ಯವಾಗಿ ಹುಟ್ಟು ಅಂಧರಿಗೆ ಅವರ ಒಂದು ವರ್ಷದೊಳಗಾಗಿ ಬದಲಿ ಕಣ್ಣು ಜೋಡಿಸಿದಲ್ಲಿ ಯಶಸ್ವಿಯಾಗುತ್ತದೆ. ಆ ಬಳಿಕ ಕಣ್ಣಿನ ನರಗಳು ನಿಷ್ಪ್ರಯೋಜಕವಾಗುತ್ತದೆ. ಜ್ಯೋತಿಬಾಯಿ ಪ್ರಕರಣದಲ್ಲಿ ಆಕೆ ಜನಿಸಿದ 24 ವರ್ಷಗಳ ಬಳಿಕ ಆಕೆಗೆ ಶಸ್ತ್ರಚಿಕಿತ್ಸೆ ಮಾಡಿದ್ದು ಅದು ಫಲಪ್ರದವಾಗಿದೆ  ಎಂದು ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಂಧತ್ವ ಪ್ರಮಾಣೀಕರಣ
ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನ ಕೆಂಚನಗುಡ್ಡ ತಾಂಡಾ ನಿವಾಸಿ ಜ್ಯೋತಿಬಾಯಿ ಹುಟ್ಟಿನಿಂದಲೇ ದೃಷ್ಟಿಹೀನರಾಗಿದ್ದು, ಕರ್ನಾಟಕ ಅಂಧರ ಸಂಘದ ಸದಸ್ಯೆ. ನೇತ್ರತಜ್ಞರು ಆಕೆಗೆ 15 ವರ್ಷಗಳ ಹಿಂದೆಯೇ ಶಾಶ್ವತ ಅಂಧತ್ವ ಪ್ರಮಾಣಪತ್ರ ನೀಡಿದೆ. ಅಲ್ಲದೇ ಸರಕಾರದ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ. ತನ್ನ ಸಮಸ್ಯೆ ಅನೇಕ ಆಸ್ಪತ್ರೆಗಳಲ್ಲಿ ತೋರಿಸಿದ್ದರೂ ಖ್ಯಾತ ನೇತ್ರತಜ್ಞರೆಲ್ಲರೂ ಕೈಚೆಲ್ಲಿದ್ದರು.
ಕೊನೆಯ ಪ್ರಯತ್ನವಾಗಿ ಪ್ರಸಾದ್ ನೇತ್ರಾಲಯದ ಬಗ್ಗೆ ತಿಳಿದ ಆಕೆ ತನ್ನ ತಾಯಿಯೊಂದಿಗೆ 2016ರ ಡಿ. 14ರಂದು ಇಲ್ಲಿನ ಪ್ರಸಾದ್ ನೇತ್ರಾಲಯಕ್ಕೆ ಭೇಟಿ ನೀಡಿದ್ದರು. ಆಕೆಯನ್ನು ಪರೀಕ್ಷಿಸಿದ ಡಾ. ಕೃಷ್ಣಪ್ರಸಾದ್ ಮತ್ತು ಡಾ. ಹರಿಪ್ರಸಾದ್ ಓಕುಡ ಶಸ್ತ್ರಚಿಕಿತ್ಸೆ ನಡೆಸಿ ಬದಲಿ ಕಣ್ಣು ಜೋಡಿಸಿ ಯತ್ನಿಸಬಹುದಾದರೂ ದುಬಾರಿ ಶಸ್ತ್ರಚಿಕಿತ್ಸೆಯಾಗಿರುವ ಕಾರಣ ಸುಮಾರು 45 ಸಾವಿರ ರೂ. ವೆಚ್ಚ ಬರಬಹುದೆಂದು ತಿಳಿಸಿದ್ದರು. ಆಕೆ ಬಳ್ಳಾರಿಗೆ ಮರಳಿದ್ದಳು.
ಉಚಿತ ಶಸ್ತ್ರಚಿಕಿತ್ಸೆ ಯಶಸ್ವಿ
ತೀರಾ ಬಡಕುಟುಂಬದ ಜ್ಯೋತಿಬಾಯಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಶಿಫಾರಸು ಪತ್ರದೊಂದಿಗೆ ಕಳೆದ ಆ. 13ರಂದು ಮತ್ತೆ ಪ್ರಸಾದ್ ನೇತ್ರಾಲಯಕ್ಕೆ ಆಗಮಿಸಿದಾಗ ಮಾನವೀಯ ನೆಲೆಯಲ್ಲಿ ಆಕೆಗೆ ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಡಾ. ಕೃಷ್ಣಪ್ರಸಾದ್ ಮತ್ತು ಡಾ. ಹರಿಪ್ರಸಾದ್ ಆ. 14ರಂದು ಜ್ಯೋತಿಬಾಯಿ ಅವರಿಗೆ 4 ಹಂತಗಳ ಶಸ್ತ್ರಚಿಕಿತ್ಸೆಯನ್ನು ನಡೆಸಿ, ರೋಗಿಯ ನಿರುಪಯುಕ್ತ ಕಣ್ಣಿನ ಕರಿಗಡ್ಡೆಯನ್ನು ತೆಗೆದು ಅದಕ್ಕೆ ಬದಲಾಗಿ ಉಡುಪಿಯ ನೇತ್ರದಾನಿಯೋರ್ವರಿಂದ ಪಡೆದ ಕಣ್ಣಿನ ಕರಿಗಡ್ಡೆ ಜೋಡಿಸಿ, ಗುಣಮಟ್ಟದ ಲೆನ್ಸ್ ಅಳವಡಿಸಲಾಯಿತು. ಶಸ್ತ್ರಚಿಕಿತ್ಸೆಯ ಮರುದಿನವೇ ಜ್ಯೋತಿಬಾಯಿ ಬಾಳಿನಲ್ಲಿ ಬೆಳಕು ಮೂಡುವಂತಾಯಿತು.
ಇದೀಗ ಜ್ಯೋತಿಬಾಯಿ ಕೈಯ ಚಲನೆ, ಮುಖ ಇತ್ಯಾದಿಗಳನ್ನು ಗುರುತಿಸುತ್ತಿದ್ದಾರೆ. ಆಕೆಯ ಇನ್ನೊಂದು ಕಣ್ಣು ಕುರುಡಾಗಿಯೇ ಇದೆ. ಅದನ್ನೂ ಮುಂದಿನ ದಿನಗಳಲ್ಲಿ ಸರಿಪಡಿಸುವ ವಿಶ್ವಾಸವನ್ನು ಡಾ. ಕೃಷ್ಣಪ್ರಸಾದ್ ವ್ಯಕ್ತಪಡಿಸಿದ್ದಾರೆ.
ತಿಮ್ಮರಾಯನಿಗೂ ಶಸ್ತ್ರಚಿಕಿತ್ಸೆ ಇಂಗಿತ
ಹುಟ್ಟು ಕುರುಡನಾಗಿರುವ ತಿಮ್ಮರಾಯ ಅವರೊಂದಿಗೆ ಜ್ಯೋತಿಬಾಯಿ ಮಂಗಳವಾರ ಉಡುಪಿಗೆ ಬಂದು ಮತ್ತೊಮ್ಮೆ ಕಣ್ಣಿನ ಪರಿಶೀಲನೆಗೊಳಪಟ್ಟಿದ್ದಾರೆ. ಇದೀಗ ಜ್ಯೋತಿಬಾಯಿ ಪ್ರಕರಣದಿಂದ ಉತ್ತೇಜಿತರಾಗಿರುವ ಡಾ. ಕೃಷ್ಣ ಪ್ರಸಾದ್ ಅವರು ತಿಮ್ಮರಾಯ ಅವರಿಗೂ ದೃಷ್ಟಿ ನೀಡುವ ಉತ್ಸಾಹದಲ್ಲಿದ್ದಾರೆ. 39 ವರ್ಷದ ತಿಮ್ಮರಾಯ ಸಹಕರಿಸಿದಲ್ಲಿ ಯತ್ನಿಸುವುದಾಗಿ ಡಾ. ಕೃಷ್ಣಪ್ರಸಾದ್ ತಿಳಿಸಿದ್ದಾರೆ.

LEAVE A REPLY