ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯ ಹೆಚ್ಚಳಕ್ಕೆ ಕ್ಯಾಬಿನೆಟ್ ಅಸ್ತು: ಡಿಎ ಶೇ.4ರಿಂದ ಶೇ.5ಕ್ಕೆ ಏರಿಕೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಷಯಗಳಿಗೆ ಒಪ್ಪಿಗೆ ನೀಡಲಾಗಿದೆ. ಪ್ರಮುಖವಾಗಿ ಕೇಂದ್ರ ಸರ್ಕಾರದ ನೌಕರರಿಗೆ ಹೆಚ್ಚುವರಿಯಾಗಿ ಶೇ.1ರಷ್ಟು ತುಟ್ಟಿ ಭತ್ಯೆ (ಡಿಎ) ನೀಡುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಹಾಗೆಯೇ ಬಿಎಸ್‌ಎನ್‌ಎಲ್ ಮಾಲೀಕತ್ವದಲ್ಲಿ ಟಾವರ್‌ಗಳಿಗಾಗಿಯೇ ಪ್ರತ್ಯೇಕ ಕಂಪನಿಯನ್ನು ತೆರೆಯಲು ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗೊಂದು ಸಿಹಿ ಸುದ್ದಿಯಿದೆ. ಮಂಗಳವಾರ ನಡೆದ ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟವು ಕೇಂದ್ರ ಸರ್ಕಾರದ ನೌಕರರಿಗಿ ನೀಡುವ ಡಿಎಯಲ್ಲಿ ಶೇ.1 ರಷ್ಟನ್ನು ಹೆಚ್ಚು ಮಾಡಿದೆ. ಈ ವರೆಗೂ ಶೇಕಡಾ 4 ರಷ್ಟು ಡಿಎ ಪಡೆದುಕೊಳ್ಳುತ್ತಿದ್ದು, ಇದೀಗ ಶೇ.5 ರಷ್ಟು ಡಿಎ ಸಿಗಲಿದೆ. ಹಾಗೆಯೇ ನಿವೃತ್ತ ನೌಕರರಿಗೆ ನೀಡುವ ಪೆನ್ಶನ್‌ನಲ್ಲಿ ಶೇ.1ರಷ್ಟು ಡಿಆರ್‌ನ್ನು ಹೆಚ್ಚುವರಿಯಾಗಿ ನೀಡುವುದಕ್ಕೆ ಒಪ್ಪಿಗೆ ನೀಡಿದೆ. 1.1 ಕೋಟಿಯಷ್ಟು ಜನರು ಇದರ ಲಾಭ ಪಡೆದುಕೊಳ್ಳಲಿದ್ದು, ಇದರಲ್ಲಿ 49.26 ಲಕ್ಷ ಕೇಂದ್ರ ಸರ್ಕಾರದ ನೌಕರರು ಹಾಗೂ 61.17 ಲಕ್ಷ ಪಿಂಚಣಿದಾರರು ಇದ್ದಾರೆ.  ಇದು 1.7.2017ರಿಂದಲೇ ಪೂರ್ವ ನಿಗಯಾಗುವಂತೆ ಒಪ್ಪಿಗೆ ನೀಡಲಾಗಿದೆ. ಈ ಒಂದು ಹೆಚ್ಚಳದಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 3 ಸಾವಿಕ ಕೋಟಿ ಹೆಚ್ಚುವರಿಯಾಗಿ ಹೊರೆಯಾಗಲಿದೆ.
ಜಪಾನ್ ಜತೆ ರೇಷ್ಮೆ ಸಹಯೋಗಕ್ಕೆ ಒಪ್ಪಿಗೆ
ರೇಷ್ಮೆಹುಳು ಮತ್ತು ರೇಷ್ಮೆ ಕೈಗಾರಿಕೆ ಕ್ಷೇತ್ರದಲ್ಲಿನ ಸಹಯೋಗದ ಸಂಶೋಧನೆಗಾಗಿ ಭಾರತದ ಕೇಂದ್ರೀಯ ರೇಷ್ಮೆ ಮಂಡಳಿ (ಸಿ.ಎಸ್.ಬಿ.) ಮತ್ತು ಜಪಾನ್‌ನ ಕೃಷಿಜೈವಿಕ ವಿeನಗಳ ರಾಷ್ಟ್ರೀಯ ಸಂಸ್ಥೆ (ಎನ್.ಐ.ಎ.ಎಸ್.) ನಡುವೆ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ದ ಬಗ್ಗೆ ವಿವರಣೆ ನೀಡಲಾಯಿತು. ಈ ತಿಳಿವಳಿಕೆ ಒಪ್ಪಂದದ ತರುವಾಯ ಭಾರತೀಯ ಜವಳಿ ಮತ್ತು ಉಡುಪು ಉದ್ಯಮವು ವಿಶ್ವದರ್ಜೆಯ ರೇಷ್ಮೆ ಮತ್ತು ರೇಷ್ಮೆ ಉತ್ಪನ್ನಗಳ ತಯಾರಿಕೆಗೆ ಶಕ್ತವಾಗಲಿದೆ.  ಉತ್ಪಾದನೆ ಮತ್ತು ಗುಣಮಟ್ಟದ ಸುಧಾರಣೆಯು ಅಂತಿಮವಾಗಿ ರೇಷ್ಮೆ ಉತ್ಪನ್ನಗಳ ರಫ್ತು ಹೆಚ್ಚಳ ಮಾಡಲಿದೆ. ಈ ಮಧ್ಯೆ  ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಆರ್ಮೇನಿಯಾ ನಡುವೆ ಎಂ.ಓ.ಯು.ಗೆ ಸಂಪುಟದ ಅನುಮೋದನೆ ನೀಡಿತು.
ಮೊರಕ್ಕೊ ಜತೆಗಿನ ಒಪ್ಪಂದಕ್ಕೆ ಅನುಮೋದನೆ
ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಮೊರಕ್ಕೋ ನಡುವಿನ ಒಪ್ಪಂದಕ್ಕೆ ಅನುಮೋದನೆ ನೀಡಿತು. ಈ ಒಪ್ಪಂದದ ಕೆಲ ಪ್ರಮುಖ ಅಂಶಗಳು ಹೀಗಿವೆ
* ಮಕ್ಕಳ ಹೃದಯನಾಳದ ಕಾಯಿಲೆಗಳು ಮತ್ತು ಕ್ಯಾನ್ಸರ್ ಸೇರಿದಂತೆ ಸಾಂಕ್ರಾಮಿಕವಲ್ಲದ ರೋಗಗಳ ಚಿಕಿತ್ಸೆಗೆ ಸಹಕಾರ
* ಔಷಧ ನಿಯಂತ್ರಣ ಮತ್ತು ಔಷಯ ಗುಣಮಟ್ಟ ನಿಯಂತ್ರಣ
* ತಾಯಿಯ, ಮಗುವಿನ ಮತ್ತು ನವಜತ ಶಿಶುವಿನ ಆರೋಗ್ಯ
* ಉತ್ತಮ ಪದ್ಧತಿಗಳ ವಿನಿಮಯಕ್ಕಾಗಿ ಆಸ್ಪತ್ರೆಗಳ ಜೋಡಣೆ
* ಆರೋಗ್ಯ ಸೇವೆಗಳು ಮತ್ತು ಆಸ್ಪತ್ರೆಗಳ ಆಡಳಿತ ಮತ್ತು ನಿರ್ವಹಣೆಯಲ್ಲಿ ತರಬೇತಿ
* ಪರಸ್ಪರು ನಿರ್ಧರಿಸುವ ಯಾವುದೇ ಇತರ ಕ್ಷೇತ್ರದಲ್ಲಿನ ಸಹಕಾರ
ಒಪ್ಪಿಗೆ ಪಡೆದ ಇತರೆ ಪ್ರಮುಖ ವಿಷಯಗಳು
ಭಾರತೀಯ ಸಂಚಾರ ನಿಗಮ್ ಲಿಮಿಟೆಡ್‌ನ ಮೊಬೈಲ್ ಟವರ್ ಆಸ್ತಿಯ ನಿರ್ವಹಣೆಗಾಗಿಯೇ ಪತ್ಯೇಕ ಕಂಪನಿಯನ್ನು ತೆರೆಯಲು ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಇನ್ನು ಇದರ ಸಂಪೂರ್ಣ ಮಾಲೀಕತ್ವವನ್ನು ಬಿಎಸ್‌ಎನ್‌ಎಲ್ ಹೊಂದಿರಲಿದೆ. 4,42,000 ಸಾವಿರ ಮೊಬೈಲ್ ಟವರ್‌ಗಳು ಭಾರತದಲ್ಲಿದ್ದು, ಇದರಲ್ಲಿ 66 ಸಾವಿರಕ್ಕೂ ಹೆಚ್ಚಿನ ಟವರ್‌ಗಳು ಬಿಎಸ್‌ಎನ್‌ಎಲ್ ಟವರ್‌ಗಳಾಗಿವೆ.
ಇನ್ನು ಡೈರಿ ಪ್ರೋಸೆಸ್ಸಿಂಗ್ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಯ ಯೋಜನೆಯ ಅನುಷ್ಠನಕ್ಕೆ ಸಂಪುಟ ಸಮ್ಮತಿಸಿದೆ. ಇವುಗಳಲ್ಲದೆ, ಆಂಧ್ರ ಪದೇಶದಲ್ಲಿನ ಆರು ಪಥದ ರಾಷ್ಟೀಯ ಹೆದ್ದಾರಿ 16 ಹಾಗೂ ಕೆಲವು ರೈಲ್ವೆ ಮಾರ್ಗಗಳ ಡಬ್ಲಿಂಗ್‌ಗೂ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.

LEAVE A REPLY