ಗೋಣಿಕೊಪ್ಪಲಿನಲ್ಲಿ 1045 ಚೀಲ ವಿಯಟ್ನಾಂ ಕಾಳುಮೆಣಸು ವಶ: ಕಲಬೆರಕೆ ಶಂಕೆ

ಗೋಣಿಕೊಪ್ಪಲು: ವಿಯಟ್ನಾಂನಿಂದ ಆಮದು ಮಾಡಿಕೊಂಡ,  ಪುಡಿ ಮಾಡಿದ ಕಾಳುಮೆಣಸಿನ 25 ಕೆ. ಜಿ ತೂಕದ 1045 ಚೀಲಗಳನ್ನು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ವಶಪಡಿಸಿಕೊಂಡಿರುವ ಪೊಲೀಸರು ಅದರ ಮಾದರಿಯನ್ನು ಕಲಬೆರಕೆ ಪರೀಕ್ಷೆಗಾಗಿ ಮೈಸೂರಿನ ಕೇಂದ್ರಿಯ ಅಹಾರ ಮತ್ತು ತಂತ್ರಜ್ಞಾನ ಸಂಸ್ಥೆಗೆ ಕಳುಹಿಸಿದ್ದಾರೆ.
ಗೋದಾಮು ತಪಾಸಣೆ ವೇಳೆ ಗುರುಗು ಹತ್ತಿಯ ಬೀಜದ ಮೂರು ಚೀಲಗಳು ಸಿಕ್ಕಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಕಾಳು ಮೆಣಸು ಪುಡಿಗೆ ಹತ್ತಿಯ ಬೀಜವನ್ನು ಬಳಕೆ ಮಾಡಲಾಗುತ್ತಿತ್ತೇ ಎಂಬ ಶಂಕೆ ಸ್ಥಳೀಯರಿಂದ ವ್ಯಕ್ತವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಅವರಣದಲ್ಲಿ ಕಾಳುಮೆಣಸು ಗ್ರೇಡಿಂಗ್ ಹಾಗೂ ಹುಡಿ ಮಾಡಲು ಅವಕಾಶ ಇಲ್ಲದ್ದಿದ್ದರೂ ಅವಕಾಶ ನೀಡಿದ ಸಮಿತಿ ಹಾಗೂ ಕಾರ್ಯದರ್ಶಿ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೋಸ್‌ಮೇರಿ ಇಂಟರ್‌ನ್ಯಾಷ್‌ನಲ್ ಎಂಬ ಸಂಸ್ಥೆಯು ವಿಯಟ್ನಾಂನಿಂದ ಕಳಪೆ ಮಟ್ಟದ ಕಾಳುಮೆಣಸನ್ನು ಆಮದು ಮಾಡಿದೆ ಎಂದು ಆರೋಪಿಸಿ ವಿವಿಧ ಪಕ್ಷಗಳು ಹಾಗೂ ಬೆಳೆಗಾರರ ಒಕ್ಕೂಟ ಸೋಮವಾರ ಪ್ರತಿಭಟನೆ ನಡೆಸಿದ್ದವು.ನಂತರದ ಬೆಳವಣಿಗೆಯಲ್ಲಿ ಬೆಳೆಗಾರರ ಒಕ್ಕೂಟವು ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಹಾಗೂ ಮೂವರು ವ್ಯಾಪಾರಿಗಳ ವಿರುದ್ಧ  ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಗೋಣಿಕೊಪ್ಪ ಪೊಲೀಸರು ಮಂಗಳವರ ಬೆಳಿಗಿನಿಂದ ಸೌರವ್ ಬಂಕಾ ಅವರಿಗೆ ಸೇರಿದ ಗೋದಾಮಿನಲ್ಲಿ ದಾಸ್ತಾನು ಇರಿಸಿದ ೨೫ ಕೆ.ಜಿ ತೂಕದ ೧೦೪೫ ಪುಡಿಮಾಡಿದ ಕಾಳುಮೆಣಸು ಚೀಲಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆ ಸಂದರ್ಭ ವೀರಾಜಪೇಟೆ ತಹಶೀಲ್ದಾರ್ ಗೋವಿಂದ್ ರಾಜು, ಕೃಷಿ ಉತ್ಪನ್ನ ಮಾರುಕಟ್ಟೆ ಉಪ ನಿರ್ದೇಶಕ ಯೋಗಾನಂದ, ಕಾರ್ಯದರ್ಶಿ ಹಂಪಣ್ಣ, ಪೊಲೀಸ್ ವೃತ್ತ ನೀರಿಕ್ಷಕ ಪಿ.ಕೆ ರಾಜು, ಉಪನೀರಿಕ್ಷಕರುಗಳಾದ ರಾಜು, ಮಹೇಶ್ ಉಪಸ್ಥಿತರಿದ್ದರು.

LEAVE A REPLY