ಎಐಎಡಿಎಂಕೆಯಿಂದ ಶಶಿಕಲಾಗೆ ಗೇಟ್‌ಪಾಸ್: ದಿನಕರನ್ ಬಣಕ್ಕೆ ಇನ್ನೊಂದು ಶಾಕ್

ಚೆನ್ನೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್(ಚಿನ್ನಮ್ಮ) ಅವರನ್ನು ಪಕ್ಷದಿಂದ ಉಚ್ಛಾಟಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಇಂದು ಚೆನ್ನೈನಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ಎಐಎಡಿಎಂಕೆ ಸಾಮಾನ್ಯ ಮಂಡಳಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು ರಾಜಕಾರಣದಲ್ಲಿ ವಿವಾದದ ಕೇಂದ್ರ ಬಿಂದುವಾಗಿರುವ ಹಾಗೂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರ ವಿರುದ್ಧದ ಈ ನಿರ್ಧಾರ ದಿನಕರನ್ ಬಣದ ನೈತಿಕ ಬಲವನ್ನು ಅಡಗಿಸುವುದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಳನಿ ವಿರುದ್ಧ ಈಗಾಗಲೇ ದಿನಕರನ್ ಬಣದ ೨೦ಕ್ಕೂ ಹೆಚ್ಚು ಶಾಸಕರು ತಿರುಗಿಬಿದ್ದಿದ್ದಾರೆ.
ಈ ನಡುವೆ ಎಐಎಡಿಎಂಕೆಯ ಇಂದಿನ ಸಭೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ದಿನಕರನ್ ಬಣದ ಬಂಡಾಯ ಶಾಸಕ ವೆಟ್ರಿವಲ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದೇ ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸಿ.ವಿ.ಕಾರ್ತಿಕೇಯರ್ ನೇತೃತ್ವದ ಏಕ ಸದಸ್ಯ ಪೀಠ. ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆಯದೆ ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಲಾಗಿದೆ. ಇದರಿಂದ ಕೋರ್ಟ್‌ಅನ್ನು ತಪ್ಪು ದಾರಿಗೆ ಎಳೆದು ಕಾಲ ವ್ಯರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಶಾಸಕ ವೆಟ್ರಿವಲ್ ಇದಕ್ಕಾಗಿ ೧ ಲಕ್ಷ ರೂ. ದಂಡ ಪಾವತಿಸುವಂತೆ ಸೂಚಿಸಿದೆ.

LEAVE A REPLY