ಬೀಚ್‌ನಲ್ಲಿ ಯುವಕ-ಯುವತಿಯರ ಅಸಭ್ಯ ವರ್ತನೆ: ಮಾಹಿತಿಯಿತ್ತವರಿಗೇ ಪೊಲೀಸರ ತರಾಟೆ

ಉಡುಪಿ: ಇಲ್ಲಿಂದ ಕುಂದಾಪುರ ಸಮೀಪದ ತ್ರಾಸಿ ಬೀಚ್‌ಗೆ ಕಾರಿನಲ್ಲಿ ತೆರಳಿದ್ದ ಯುವಕ ಯುವತಿಯರು ಬೀಚ್‌ನಲ್ಲಿ ಅಸಭ್ಯವಾಗಿ ವರ್ತಿ ಸುತ್ತಿದ್ದು, ವಾಪಸ್ಸಾಗುತ್ತಿದ್ದ ವೇಳೆ ಕೋಟೇಶ್ವರದ ಹಿಂದುಪರ ಸಂಘಟ ನೆಯ ಕಾರ್ಯಕರ್ತರು ಕೋಟೇಶ್ವರದಲ್ಲಿ ಅವರ ಕಾರನ್ನು ಅಡ್ಡಗಟ್ಟಿ ಕುಂದಾಪುರ ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ನಡೆದಿದೆ.
ಸೋಮವಾರ ಬೆಳಗ್ಗೆ ವಿದ್ಯಾರ್ಥಿ ಗಳ ತಂಡ ತ್ರಾಸಿ ಬೀಚ್‌ಗೆ ತೆರಳಿತ್ತು. ಈ ಕುರಿತು ಮಾಹಿತಿ ಪಡೆದ ಹಿಂದುಪರ ಸಂಘಟನೆಯ ಕಾರ್ಯಕರ್ತರು ತ್ರಾಸಿಯಿಂದ ಉಡುಪಿಯತ್ತ ಸಾಗುತ್ತಿದ್ದ ಕಾರನ್ನು ಕೋಟೇಶ್ವರದಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಜನರು ಗುಂಪುಗೂಡಿದ್ದು, ತಕ್ಷಣ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಜನರನ್ನು ಚದುರಿಸಿ ವಿದ್ಯಾರ್ಥಿಗಳನ್ನು ಕುಂದಾಪುರ ಠಾಣೆಗೆ ಕರೆದೊಯ್ದಿದ್ದಾರೆ.
ಈ ಸಂದರ್ಭದಲ್ಲಿ ಹಿಂದುಪರ ಸಂಘಟನೆಯ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ತ್ರಾಸಿಯಲ್ಲಿ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಮಾಹಿತಿ ಪಡೆದೇ ನಾವು ವಿಚಾರಿಸಲು ಕಾರನ್ನು ನಿಲ್ಲಿಸಿದ್ದೆವು. ಅಲ್ಲದೇ ತಕ್ಷಣ ಪೊಲೀಸರಿಗೆ ಮಾಹಿತಿಯನ್ನೂ ನೀಡಿದ್ದೆವು. ಆದರೂ ಪೊಲೀಸರು ನಮ್ಮ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದು ಹಿಂದುಪರ ಸಂಘಟ ನೆಯ ಕಾರ್ಯಕರ್ತರು ಹೇಳಿದ್ದಾರೆ.
ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಹಾಗೂ ಉಪನಿರೀಕ್ಷಕ ನಾಸಿರ್ ಹುಸೇನ್ ಅವರು ಹಿಂದುಪರ ಸಂಘಟನೆಯ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದು, ಪೊಲೀಸರಿಗೆ ಮೊದಲು ಮಾಹಿತಿ ನೀಡಬೇಕಿತ್ತು. ನಾವು ಕ್ರಮ ತೆಗೆದುಕೊಳ್ಳುತ್ತಿದ್ದೆವು ಎಂದು ಕಾರ್ಯಕರ್ತರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರಿನಲ್ಲಿ ಅನ್ಯಕೋಮಿನ ಇಬ್ಬರು ಯುವಕರು ಹಾಗೂ ಮೂವರು ಯುವತಿಯರಿದ್ದು, ವಿಚಾರಣೆ ವೇಳೆ ಅವರೆಲ್ಲಾ ಉಡುಪಿ ಕಾಲೇಜಿನ ವಿದ್ಯಾರ್ಥಿಗಳು ಎಂದು ಗೊತ್ತಾಗಿದೆ. ಈ ಕುರಿತು ಮನೆಯವರಿಗೆ ಕರೆ ಮಾಡಿದ ಪೊಲೀಸರು ಮಾಹಿತಿ ಪಡೆದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ, ಅವರನ್ನು ಕಾರಿನಲ್ಲಿ ಕಳುಹಿಸಿದ್ದಾರೆ.

LEAVE A REPLY