ಗ್ಯಾರೇಜ್ ಸೇರುತ್ತಿವೆ ಜನಸಾಮಾನ್ಯರ ಆಶ್ರಯವಾಗಿರುವ ಕೇರಳ ರಾಜ್ಯ ರಸ್ತೆ  ಸಾರಿಗೆ ನಿಗಮದ ಬಸ್‌ಗಳು

ಕಾಸರಗೋಡು: ಜನಸಾಮಾನ್ಯರ ಆಶ್ರಯವಾಗಿರುವ ಕೇರಳ ರಾಜ್ಯ ರಸ್ತೆ  ಸಾರಿಗೆ ನಿಗಮದ ಬಸ್‌ಗಳು ದಿನದಿಂದ ದಿನಕ್ಕೆ ಹೆಚ್ಚುಹೆಚ್ಚು  ಗ್ಯಾರೇಜ್ ಸೇರುತ್ತಿವೆ. ಆದರೆ ಗ್ಯಾರೇಜ್ ಸೇರಿದ ಬಸ್‌ಗಳನ್ನು  ದುರಸ್ತಿಗೊಳಿಸಿ ಮತ್ತೆ ರಸ್ತೆಗಿಳಿಸಲು ಸಾಧ್ಯವಾಗುತ್ತಿಲ್ಲ. ಟಯರ್, ಟ್ಯೂಬ್ ಮೊದಲಾದ ಆವಶ್ಯಕ ಬಿಡಿಭಾಗಗಳ ಕೊರತೆ ಇಂತಹ ಪರಿಸ್ಥಿತಿಗೆ ಪ್ರಮುಖ ಕಾರಣ.
ಉತ್ತಮ ವರಮಾನ ಲಭಿಸಬಹುದಾಗಿದ್ದ  ಓಣಂ ಹಬ್ಬದ ದಿನಗಳಲ್ಲೂ ಕೆಎಸ್‌ಆರ್‌ಟಿಸಿಗೆ ಹೆಚ್ಚಿನ ಬಸ್‌ಗಳನ್ನು  ಓಡಿಸಲು ಸಾಧ್ಯವಾಗಿಲ್ಲ. ಗ್ಯಾರೇಜ್ ಸೇರಿದ್ದ  ಕೆಎಸ್‌ಆರ್‌ಟಿಸಿ ಬಸ್‌ಗಳನ್ನು  ಗರಿಷ್ಠ ಪ್ರಮಾಣದಲ್ಲಿ  ದುರಸ್ತಿಗೊಳಿಸಿ ಓಣಂ ಹಬ್ಬದ ದಿನಗಳಲ್ಲಿ  ರಸ್ತೆಗಿಳಿಸಿ ಹೆಚ್ಚಿನ ವರಮಾನ ಪಡೆಯುವುದು ಉದ್ದೇಶವಾಗಿತ್ತು. ಆದರೆ ಇದು ಸಾಧ್ಯವಾಗಿಲ್ಲ.
ಬಿಡಿಭಾಗಗಳ ಕೊರತೆಯಿಂದ ಗ್ಯಾರೇಜ್ ಸೇರುವ  ಬಸ್‌ಗಳ  ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಟಯರ್, ಟ್ಯೂಬ್ ಸಹಿತ ವಿವಿಧ ಬಿಡಿಭಾಗಗಳ ಕೊರತೆಯನ್ನು  ಕೆಎಸ್‌ಆರ್‌ಟಿಸಿ ಅನುಭವಿಸುತ್ತಿದೆ. ಈ ಕಾರಣದಿಂದ ಕ್ಷಿಪ್ರವಾಗಿ ದುರಸ್ತಿಗೊಳಿಸಿ ಗ್ಯಾರೇಜ್‌ನಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬಿಡಿಭಾಗಗಳನ್ನು  ಖರೀದಿಸಲು ಹಣ ಇಲ್ಲದ ಸ್ಥಿತಿ ಇದೆ. ಗ್ರಾಮೀಣ ಪ್ರದೇಶದಲ್ಲಿ  ಸರ್ವೀಸ್ ಮಾಡುತ್ತಿದ್ದ  ಶೇಕಡಾ 30 ಕ್ಕಿಂತಲೂ ಅಕ ಬಸ್‌ಗಳು ಗ್ಯಾರೇಜ್‌ನಲ್ಲಿ  ತುಕ್ಕು ಹಿಡಿಯುತ್ತಿವೆ.
ಬಸ್ ಓಡಾಟದ ಶೆಡ್ಯೂಲ್ ಪುನರ್ ಕ್ರಮೀಕರಿಸಿದ್ದರೂ ಯಾವುದೇ ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ  ನಷ್ಟದಲ್ಲಿ  ಓಡುವ ಬಸ್‌ಗಳನ್ನು ರಸ್ತೆಯಿಂದ ಹಿಂದಕ್ಕೆ ಪಡೆಯಬೇಕೆಂದೂ ಕೇಳಿಕೊಳ್ಳಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಪೈಕಿ ಮೂರರಲ್ಲೊಂದು ಶೆಡ್ಯೂಲ್‌ಗಳು ನಷ್ಟದಲ್ಲಿವೆ ಎಂದು ಹೊಸತಾಗಿ ಪ್ರಕಟಗೊಂಡಿರುವ ಅಂಕಿಅಂಶದಲ್ಲಿ ಸೂಚಿಸಲಾಗಿದೆ.
೧೮೧೯ ಬಸ್‌ಗಳಿಗೆ ದಿನಂಪ್ರತಿ ಸರಾಸರಿ 10,000  ರೂ. ವರಮಾನವೂ ಲಭಿಸುತ್ತಿಲ್ಲ. ದಿನಂಪ್ರತಿ ಬಸ್ಸೊಂದರ ನಿರ್ವಹಣೆಗೆ ಕನಿಷ್ಠ 7,000 ರೂ.ಯಿಂದ 8,000 ರೂ. ತನಕ ವೆಚ್ಚ ವಾಗುತ್ತಿದೆ. ಪ್ರತಿ ದಿನ ಕನಿಷ್ಠ 10,000 ರೂಪಾಯಿ ಗಳಷ್ಟಾದರೂ ವರಮಾನ ಇಲ್ಲದ ಬಸ್‌ಗಳನ್ನು  ಜನವರಿ 31 ರ ಬಳಿಕ ಹಿಂಪಡೆಯಲು ಕೆಎಸ್‌ಆರ್‌ಟಿಸಿ ಮೆನೇಜ್‌ಮೆಂಟ್ ತೀರ್ಮಾನಿಸಿತ್ತು. ಇದಕ್ಕೆ ಮುಂಚಿತವಾಗಿ ವರಮಾನ ಹೆಚ್ಚಳವಾಗುವ ರೀತಿಯಲ್ಲಿ  ಬಸ್ ಓಡಾಟ ಶೆಡ್ಯೂಲ್ ಪುನರ್ ಕ್ರಮೀಕರಿಸಲು ಡಿಪ್ಪೋಗಳಿಗೆ ಮೆನೇಜ್‌ಮೆಂಟ್ ಸೂಚಿಸಿತ್ತು.
ಆದರೆ ಶೆಡ್ಯೂಲ್ ಪುನರ್ ಕ್ರಮೀಕರಣದಿಂದಲೂ 1819 ಬಸ್‌ಗಳ ವರಮಾನವನ್ನು  ಹೆಚ್ಚಿಸಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ  ಐದು ವಲಯಗಳ ಒಟ್ಟು  5840 ಶೆಡ್ಯೂಲ್‌ಗಳಲ್ಲಿ  ಶೇಕಡಾ 30ಕ್ಕಿಂತಲೂ ನಷ್ಟದಲ್ಲಿ ಬಸ್‌ಗಳು ಓಡುತ್ತಿವೆ. ಇವುಗಳಲ್ಲಿ  ಕೆಲವೊಂದು ಬಸ್‌ಗಳನ್ನು  ಕಳೆದು ತಿಂಗಳಾಂತ್ಯದಲ್ಲಿ  ಸರ್ವೀಸ್ ನಿಲುಗಡೆಗೊಳಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ  ದಿನಂಪ್ರತಿ ವರಮಾನವೂ ಕಡಿಮೆಯಾಗಿದೆ. ಪ್ರತಿ ದಿನ ವರಮಾನ 5.5 ಕೋಟಿ ರೂ. ಯಿಂದ 4.75 ಕೋಟಿ ರೂ. ಗಿಳಿದಿದೆ. ಕಳೆದ ಮಾರ್ಚ್ 31 ರ ಅಂಕಿ ಅಂಶದಂತೆ ಕೆಎಸ್‌ಆರ್‌ಟಿಸಿಗೆ ನಷ್ಟ1770.61 ಕೋಟಿ ರೂ. ಆಗಿದೆ.
ಬಸ್ ಪ್ರಯಾಣ ಟಿಕೆಟ್ ಮೂಲಕ ಲಭಿಸಿದ ವರಮಾನ ೧೮೨೭.೪೫ ಕೋಟಿ ರೂ. ಹಾಗೂ ಇತರ ಆದಾಯ ೩೩.೬೬ ಕೋಟಿ ರೂ. ಆಗಿದ್ದು , ಒಟ್ಟು  ವರಮಾನ ೧೮೬೧.೧೧ ಎಂಬುದನ್ನು  ಉಲ್ಲೇಖಿಸಲಾಗಿದೆ. ಒಟ್ಟು ವೆಚ್ಚ ೩೬೩೧. ೭೨ ಕೋಟಿ ರೂ. ಆಗಿದೆ. ಇತ್ತೀಚೆಗೆ ಜಾರಿಗೆ ತಂದ ಅವೈಜ್ಞಾನಿಕ ಪೆನ್ಶನ್ ಯೋಜನೆ ಕೆಎಸ್‌ಆರ್‌ಟಿಸಿ ಇಷ್ಟು  ನಷ್ಟ ಅನುಭವಿಸಲು ಕಾರಣವೆಂದು ಹೇಳಲಾಗಿದೆ. ಇದೀಗ ಸಿಬ್ಬಂದಿಗಳ ವೇತನ ಮತ್ತು  ಪೆನ್ಶನ್ ನೀಡಲು ಪ್ರತಿ ತಿಂಗಳು ಸಾಲ ಪಡೆಯುವಂತಾಗಿದೆ. ಈ ಮೂಲಕ ತೀರಾ ಆರ್ಥಿಕ ಮುಗ್ಗಟ್ಟಿನತ್ತ  ಸರಿಯಲಿದೆ ಎಂದು ಕೆಎಸ್‌ಆರ್‌ಟಿಸಿ ಎಂ.ಡಿ. ಎರಡು ತಿಂಗಳ ಹಿಂದೆ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ  ಸೂಚಿಸಿದ್ದರು.
೧೯೮೪ ರಲ್ಲಿ  ಪೆನ್ಶನ್ ಯೋಜನೆ ಜಾರಿಗೆ ಬಂದಿತ್ತು. ಆದರೆ ಇದಕ್ಕಾಗಿ ಪ್ರತ್ಯೇಕ ಫಂಡ್ ಇಟ್ಟಿರಲಿಲ್ಲ. ಇದರಿಂದಾಗಿ ಪ್ರತೀ ವರ್ಷ ೩.೪೮ ಕೋಟಿ ರೂ. ಪೆನ್ಶನ್ ನೀಡಲು ಅಗತ್ಯವಿತ್ತು. ಆದರೆ ಇಂದು ಈ ಮೊತ್ತ  ೬೩೦ ಕೋಟಿ ರೂ. ಗೇರಿದೆ. ಅಂದರೆ ಅಂದಿಗಿಂತ ೨೦೦ ಪಟ್ಟು  ಅಕ. ಆದರೆ ಅದಕ್ಕೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ಬಸ್ ವರಮಾನದಲ್ಲಿ  ಹೆಚ್ಚಳ ಉಂಟಾಗಿಲ್ಲ. ಈ ಹಿನ್ನೆಲೆಯಲ್ಲಿ  ಪೆನ್ಶನ್ ಮೊತ್ತಕ್ಕಾಗಿ ಬೇರೆ ವ್ಯವಸ್ಥೆ ಮಾಡದಿದ್ದಲ್ಲಿ  ಕೆಎಸ್‌ಆರ್‌ಟಿಸಿ ಇನ್ನಷ್ಟು  ಆರ್ಥಿಕ ಮುಗ್ಗಟ್ಟಿನತ್ತ ಸರಿಯುವುದರಲ್ಲಿ  ಸಂಶಯವಿಲ್ಲ.

LEAVE A REPLY