ಬ್ರಿಕ್ಸ್‌ನಲ್ಲಿ ಚೀನಾ, ಪಾಕ್ ಮೇಲೆ ಮೋದಿ ಮೇಲುಗೈ

  • ತರುಣ್ ವಿಜಯ್
ನಿಜ, ರಾಜತಾಂತ್ರಿಕ  ಜಗತ್ತಿನಲ್ಲಿ ವಿಜೇತರು ಮತ್ತು  ಪರಾಜಿತರೆಂಬುದಿಲ್ಲ. ಬದಲಾಗಿ ನಿರ್ಣಾಯಕ ನಡೆಗಳು ಕೆಲವೊಮ್ಮೆ ಇತರರ ಮೇಲೆ ಮೇಲುಗೈ ಸಾಧಿಸುತ್ತವೆ. ಚೀನಾದಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿಯವರು  ಇಂತಹ  ಮೇಲುಗೈ ಸಾಧಿಸಿದ್ದಾರೆ.
ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವಿನ ಮಾತುಕತೆಯ ಮೊದಲು ಮತ್ತು ನಂತರ ಏನೆಲ್ಲಾ ನಡೆಯಿತು ಎಂಬ ವಿವರಗಳನ್ನು ನಾನು ನೀಡುವ ಅಗತ್ಯವಿಲ್ಲ. ಪಾಕಿಸ್ಥಾನದಲ್ಲಿ ಇರುವ ಭಯೋತ್ಪಾದಕ ಸಂಘಟನೆಗಳನ್ನು ಖಂಡಿಸುವ ನಿರ್ಣಯಕ್ಕೆ ಚೀನಾವೂ ಸಹಿ ಹಾಕುವಂತಾದುದೇ ಅದನ್ನು ವಿವರಿಸುತ್ತದೆ.  ಭಯೋತ್ಪಾದನೆಯ ಮೇಲಿನ ಬ್ರಿಕ್ಸ್ ನಿರ್ಣಯವು ಮೇಲ್ನೋಟಕ್ಕೆ ಕಾಣುವುದಕ್ಕಿಂತ ಮಹತ್ವದ್ದಾಗಿದೆ ಹಾಗೂ ಗೋವಾದಲ್ಲಿ ಕೈಗೊಂಡ ಬ್ರಿಕ್ಸ್ ನಿರ್ಣಯಕ್ಕಿಂತಲೂ ಪ್ರಾಮುಖ್ಯದ್ದಾಗಿದೆ.  ತಮ್ಮಲ್ಲಿ ಭಯೋತ್ಪಾದಕ ಸಂಘಟನೆಗಳೇ ಇಲ್ಲ ಎಂದು ಹೇಳುವ  ಪಾಕಿಸ್ಥಾನ ಆಡಳಿತ ಮತ್ತು ಕರಾಚಿಯ ಮಾಧ್ಯಮಗಳು ಈ ನಿರ್ಣಯವನ್ನು ಹೇಗೆ ವ್ಯಾಖ್ಯಾನಿಸುತ್ತವೆ ಎಂದು ನೋಡುವುದು ಕುತೂಹಲಕರವಾಗಿದೆ.
ವಿದೇಶಾಂಗ ಕಾರ್‍ಯದರ್ಶಿ ಜೈಶಂಕರ್ ಅವರು ಮಾಧ್ಯಮಗಳೊಂದಿಗೆ ನುಡಿದ ಮಾತುಗಳು ಭಾರತದ ನಿಲುವನ್ನು ಸ್ಪಷ್ಟಪಡಿಸಿದವು. ಭಾರತ ಮತ್ತು ಚೀನಾಗಳ ನಡುವಿನ ಈ ಬಗೆಯ ಬಾಂಧವ್ಯವು ಮುಂದುವರಿದರೆ ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದವು ನಿರಂತರವಾಗಿ ಉಳಿಯಲಿದೆ ಎಂದು ಅವರು ಹೇಳಿದರು. ಅದು ನಿಜ. ಈ  ಕುರಿತಂತೆ ಹೆಚ್ಚೇನೂ ಹೇಳಬೇಕಾಗಿಲ್ಲ. ಭಾರತದ ನಿಲುವು ಈಗಾಗಲೇ ನಿಚ್ಚಳವಾಗಿದೆ- ಡೋಕ್ಲಾಂಗೆ ಸಂಬಂಧಿಸಿ ಭಾರತವು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವೆಂದು ಸಾಧಿಸಿ ತೋರಿಸಿದೆ. ಸೈನಿಕ ಕಾರ್‍ಯಾಚರಣೆಗೂ ಸಿದ್ಧ, ರಾಜತಾಂತ್ರಿಕ ಪರಿಹಾರಕ್ಕೂ ಸಿದ್ಧ!  ತಮ್ಮ ಸೈನಿಕ ದುಸ್ಸಾಹಸ ಹಾಗೂ ಮಾಧ್ಯಮ ಸಮರ ಫಲ ನೀಡದೆಂಬುದು ಚೀನಾಕ್ಕೀಗ ಅರಿವಾಗಿದೆ.
ಶ್ರೀಸಾಮಾನ್ಯ ಚೀನೀ ಪ್ರಜೆಯ ದೃಷ್ಟಿಯಲ್ಲಿ ಮೋದಿಯವರು ಬಹಳ ಗೌರವ ಪಡೆದಿದ್ದಾರೆ. ಚೀನಾವು ಮೋದಿಯವರನ್ನು ಬ್ರಿಕ್ಸ್ ಸಮ್ಮೇಳನಕ್ಕೆ  ಆಹ್ವಾನಿಸಲು ತನ್ನೆಲ್ಲಾ  ನಿಲುವುಗಳನ್ನು ಸಡಿಲಿಸಿದ್ದೇ ಇದಕ್ಕೆ ಸಾಕ್ಷಿ.  ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರು ಭಾರತ ಮತ್ತು ಚೀನಾ ನಡುವಿನ ಸಂಬಂಧ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದುದು, ಉಭಯ ರಾಷ್ಟ್ರಗಳ ಜನರ ಹಿತಾಸಕ್ತಿ ಕಾಯಲಾಗುವುದು ಹಾಗೂ ಪಂಚಶೀಲ ತತ್ವದ ಆಧಾರದಲ್ಲಿ ಸಂಬಂಧವನ್ನು ಸುಧಾರಿಸಲಾಗುವುದು ಎಂದು ಹೇಳಿರುವುದು ಇದಕ್ಕೆ ಸಾಕ್ಷಿ. ಇವು ಅವಸರದಲ್ಲಿ ರೂಪಿಸಿದ ತೀರ್ಮಾನಗಳಲ್ಲ.  ಅದು ಚೀನಾವು ಯೋಜಿತವಾಗಿ ರೂಪಿಸಿದ ನಿರ್ಧಾರ. ಇದಕ್ಕೆ  ಸಾಕಷ್ಟು ರಾಜತಾಂತ್ರಿಕ ಸಮಾಲೋಚನೆ ನಡೆದಿದೆ. ತಾಳ್ಮೆಯಿಂದ ಬಹಳಷ್ಟು ವಿಶ್ಲೇಷಣೆಗಳನ್ನು ನಡೆಸಿ ಭಾರತದೊಂದಿಗೆ ಸೌಹಾರ್ದ ಸಂಬಂಧ ಹೊಂದುವುದು ಉಚಿತವೆಂಬ ನಿರ್ಧಾರಕ್ಕೆ ಬರಲಾಗಿದೆ.
ಹಾಗೆಂದು ಭವಿಷ್ಯದಲ್ಲಿ ಎಲ್ಲವೂ ಸುಗಮವಾಗಿ ಸಾಗಲಿದೆ ಎಂದು ಅರ್ಥವಲ್ಲ. ಭಾರತಕ್ಕೆ ಕಳವಳಕಾರಿಯಾದ ವಿಷಯಗಳು ಇನ್ನೂ ಇದ್ದೇ ಇವೆ. ಪಾಕಿಸ್ಥಾನದ ಗ್ವಾದರ್ ಬಂದರಿನಲ್ಲಿ  ಚೀನಾದ ಹೂಡಿಕೆ, ಚೀನಾ -ಪಾಕಿಸ್ಥಾನ ಆರ್ಥಿಕ ಕಾರಿಡಾರ್, ಒನ್ ಬೆಲ್ಟ್ ಒನ್ ರೋಡ್ ಪಾಕ್ ಆಕ್ರಮಿತ ಕಾಶ್ಮೀರದಿಂದ ಹಾದುಹೋಗುವುದು ಭಾರತದ ಪಾಲಿಗೆ ಆತಂಕ ತರುವ ವಿಷಯಗಳೇ. ಪಾಕಿಸ್ಥಾನದ ಭಯೋತ್ಪಾದಕ ಸಂಘಟನೆಗಳನ್ನು ಚೀನಾ ಕೂಡಾ ರಕ್ಷಿಸಲೆತ್ನಿಸುವುದು  ಕಳವಳಕಾರಿ ವಿಷಯವೇ. ಭಾರತ ಮತ್ತು ಚೀನಾದ ಮಧ್ಯೆ ವ್ಯಾಪಾರ ಅಸಮತೋಲನವಿರುವುದು, ಚೀನಾದ ಸಂರಕ್ಷಣಾ ವಾದ ಕೂಡ ಕಡೆಗಣಿಸತಕ್ಕ ವಿಷಯವಲ್ಲ.
ಇದೇ ವೇಳೆ ಚೀನಾವು ಭಾರತದೊಂದಿಗೆ ಎಲ್ಲಾ ಕ್ಷೇತ್ರಗಳಲ್ಲೂ ವ್ಯವಹಾರ ನಡೆಸುತ್ತಿರುವುದನ್ನೂ ಗಮನಿಸಬೇಕು. ಸೌರ ಶಕ್ತಿಯಿಂದ ಹಿಡಿದು ಸ್ಮಾರ್ಟ್ ಸಿಟಿಯವರೆಗೆ, ಟರ್ಬೈನ್‌ಗಳ ನಿರ್ಮಾಣ, ಆಟಿಕೆಗಳು, ಪೀಠೋಪಕರಣಗಳು, ಸ್ಮಾರ್ಟ್ ಫೋನ್, ಇಂಟರ್ನೆಟ್ ಸೇವೆ ಮುಂತಾದವುಗಳಲ್ಲಿ ಚೀನಾದ ಪಾಲುದಾರಿಕೆ ಇದೆ. ಭಾರತದ ಕ್ರಿಕೆಟ್ ತಂಡವು ಈಗ ಚೀನೀ ಕಂಪನಿಯಿಂದ ಪ್ರಾಯೋಜಿಸಲ್ಪಟ್ಟಿದೆ. ಭಾರತದಲ್ಲಿ  ಅತ್ಯಂತ ಹೆಚ್ಚು ಜಾಹೀರಾತು ನೀಡಲ್ಪಡುತ್ತಿರುವುದು ಚೀನಾದ ಸ್ಮಾರ್ಟ್ ಫೋನ್. ಹುವಾಯ್ ಎಂಬ ಒಂದೇ ಕಂಪನಿ ಬೆಂಗಳೂರಿನಲ್ಲಿ ೨೨,೦೦೦ ಉದ್ಯೋಗಿಗಳನ್ನು ಹೊಂದಿದೆ. ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಚೀನಾದ ಸಹಯೋಗದಲ್ಲಿ ಕೈಗೊಳ್ಳಲಾಗುತ್ತದೆ.  ಆದರೆ ಈ ವರ್ಷ ಡೋಕ್ಲಾಂ ಬಿಕ್ಕಟ್ಟಿನಿಂದಾಗಿ ಚೀನಾವು ಈ ಯಾತ್ರೆಗೆ ತಡೆಯೊಡ್ಡಿತ್ತು.
ಚೀನಾವು ಇಂಥ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಗಳಿಗೆ ಪ್ರಬುದ್ಧ  ಪರಿಹಾರ ಕಂಡುಕೊಳ್ಳಬೇಕೆ ಹೊರತು ಡೋಕ್ಲಾಂನಂತಹ ಬಿಕ್ಕಟ್ಟು ಸೃಷ್ಟಿಸುವುದಲ್ಲ ಎಂಬುದನ್ನು ಅರಿತುಕೊಳ್ಳಬೇಕು.
ಮೋದಿಯವರ ಚೀನಾ ಭೇಟಿಯು ಜಿನ್‌ಪಿಂಗ್ ಅವರು ಈಗ ಸಕಾರಾತ್ಮಕ ಧೋರಣೆ ಹೊಂದಿರುವುದನ್ನು ಸೂಚಿಸಿದೆ. ಇನ್ನೀಗ ೨೦೨೨ರವರೆಗೆ ಜಿನ್‌ಪಿಂಗ್‌ರ ಸ್ಥಾನವು ಅಬಾಧಿತ ವಾಗಿರುವಂತೆ ತೋರುತ್ತಿದೆ. ತಮ್ಮ ಆಡಳಿತವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದಷ್ಟೇ ಅವರ ಗುರಿಯಲ್ಲ. ಭಾರತದೊಂದಿಗೆ ಸಂಬಂಧ ಸುಧಾರಣೆಯಲ್ಲೂ ಹೊಸ ಮೈಲುಗಲ್ಲು ಸಾಧಿಸಿ ಇತಿಹಾಸದಲ್ಲಿ ಅವರು ಸ್ಥಾನ ಪಡೆಯಬೇಕಾಗಿದೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೋದಿಯವರು ಅತ್ಯಂತ ಪ್ರಭಾವಿ ಪ್ರಧಾನಿಯಾಗಿ ಮೂಡಿಬಂದಿದ್ದಾರೆ. ಅತ್ತ ಜಿನ್‌ಪಿಂಗ್ ಕೂಡಾ ಚೀನಾದ ಅತ್ಯಂತ ಶಕ್ತಿಶಾಲಿ ಮುಖಂಡರಾಗಿದ್ದಾರೆ. ಕಳೆದ ವರ್ಷವಷ್ಟೇ ಕಮ್ಯುನಿಸ್ಟ್ ಪಕ್ಷವು ಅವರಿಗೆ  ಮಾವೋ, ಡೆಂಗ್  ಅವರಿಗೆ ನೀಡಿದಂತಹುದೇ ಸ್ಥಾನಮಾನವನ್ನು ನೀಡಿದೆ.  ಅವರು ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭಿಸಿದಂದಿನಿಂದ ಸಾವಿರಾರು ಮಂದಿ ಭ್ರಷ್ಟಾಚಾರಿಗಳನ್ನು ಜೈಲಿಗೆ ತಳ್ಳಿದ್ದಾರೆ. ಇತ್ತ ನಮ್ಮಲ್ಲಿಯೂ ಮೋದಿಯವರು ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಹೋರಾಟ ಆರಂಭಿಸಿದ್ದಾರೆ.  ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದು ಹಾಗೂ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದು  ಮೋದಿಯವರ ಆದ್ಯತೆಯಾಗಿದೆ. ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳು ಭಾರತದ ಅಭಿವೃದ್ಧಿಯ ಪಥಕ್ಕೆ ತಡೆಯೊಡ್ಡುತ್ತಿವೆ.  ನಮ್ಮ ಮೂಲಭೂತ ಸೌಕರ್ಯಗಳನ್ನು ಇನ್ನಷ್ಟೇ ಅಭಿವೃದ್ಧಿಪಡಿಸಬೇಕಾಗಿದೆ. ನಮ್ಮಲ್ಲಿ ಪದೇಪದೇ ಚುನಾವಣೆಗಳು ನಡೆಯುತ್ತಿರುತ್ತವೆ ಹಾಗೂ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಬೇಡಿಕೆಗಳನ್ನು ಹೊಂದಿರುತ್ತದೆ. ಬಹಳಷ್ಟು ಕ್ಷೇತ್ರಗಳಲ್ಲಿ ಭಾರತವು ಉನ್ನತಿ ಸಾಧಿಸಬೇಕಾದರೆ ಮೋದಿಯವರ  ಇನ್ನೂ ಹತ್ತು ವರ್ಷಗಳ ಆಡಳಿತ  ಅಗತ್ಯವಾಗಿದೆ.
ಚೀನಾ ಮತ್ತು ಭಾರತದಲ್ಲಿ ಈ ಇಬ್ಬರು ಬಲಿಷ್ಠ ನಾಯಕರಿಂದ ಬಹಳಷ್ಟನ್ನು ಸಾಧಿಸಬಹುದಾಗಿದೆ.
ಇವರಿಬ್ಬರ ನಾಯಕತ್ವವು ವಿಶ್ವದ ಜನಸಂಖ್ಯೆಯ ಶೇ. ೩೬ಕ್ಕಿಂತಲೂ ಹೆಚ್ಚು ಜನರ ಭವಿಷ್ಯವನ್ನು ರೂಪಿಸಬಲ್ಲುದು. ೨೦೨೪ರ ವೇಳೆಗಾಗುವಾಗ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲಿರುವುದನ್ನು ನೆನಪಿಸಿಕೊಳ್ಳಬೇಕು.
ಬ್ರಿಕ್ಸ್ ಸಮ್ಮೇಳನದ ನಂತರ ಕಾಣ ಬರುವ ನೋಟವೆಂದರೆ ಭಾರತ ಮತ್ತು ಚೀನಾಗಳ ಜನರು ಒಗ್ಗೂಡಿ ಕಾರ್‍ಯಾಚರಿಸಿದರೆ ಈ ಶತಮಾನವನ್ನು ಏಷ್ಯಾದ ಪಾಲಿಗೆ ಭವ್ಯವನ್ನಾಗಿಸಬಹುದು.

LEAVE A REPLY