ಪ್ರಾಧಿಕಾರಕ್ಕೆ ಎನ್‌ಜಿಟಿ ನಿರ್ದೇಶನ : ರಾಷ್ಟ್ರೀಯ ಹೆದ್ದಾರಿಗಳಿಗೆ ಹಸಿರು ಕವಚ

ಹೊಸದಿಲ್ಲಿ: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಹಸಿರು ಕವಚ ಕಾಪಾಡಬೇಕು. ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಹೆದ್ದಾರಿಯ ಅಕ್ಕಪಕ್ಕ ಹಸಿರು ಕಾಪಾಡಲು ಆದ್ಯತೆ ನೀಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಸ್ವತಂತ್ರಕುಮಾರ್ ನೇತೃತ್ವದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ವಿಭಾಗೀಯ ಪೀಠ ಪ್ರಮುಖವಾಗಿ ದೆಹಲಿ, ಹರ್ಯಾಣ ಹಾಗೂ ರಾಜಸ್ತಾನ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಈ ರಾಜ್ಯಗಳ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೧ ಹಾಗೂ ೮ ರ ಎರಡೂ ಕಡೆಗಳಲ್ಲಿ ಗಿಡಗಳನ್ನು ನೆಡುವಂತೆ ಸೂಚನೆ ನೀಡಿದೆ. ಅಲ್ಲದೇ ಈ ರಾಜ್ಯಗಳ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ, ಸರ್ಕಾರಿ ಜಮೀನುಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಹಸಿರು ಕವಚ ನಿರ್ಮಿಸಬೇಕು ಎಂದೂ ತಿಳಿಸಿದೆ.
ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಆಡಳಿತಗಳು, ವಸತಿ ಸಮುಚ್ಚಯ ನಿರ್ಮಾಣ ಮಾಡುವವರಿಗೆ, ವಾಣಿಜ್ಯ ಕಟ್ಟಡ ನಿರ್ಮಿಸುವವರಿಗೆ ಗಿಡಗಳನ್ನು ಬೆಳೆಸುವಂತೆ ನಿರ್ದೇಶನ ನೀಡಬೇಕು. ಅಲ್ಲದೇ ವಸತಿ ಸಮುಚ್ಛಯಗಳು, ವಾಣಿಜ್ಯ ಕಟ್ಟಡಗಳ ಸುತ್ತಮುತ್ತ ಹಸಿರು ಕವಚ ನಿರ್ಮಾಣ ಮಾಡಬೇಕು ಎಂದು ನ್ಯಾಯಮಂಡಳಿ ಸೂಚನೆ ನೀಡಿದೆ.
ಸಾರ್ವಜನಿಕ ಉದ್ಯಾನಗಳಲ್ಲಿ ಹಸಿರೀಕರಣಕ್ಕೆ ಉತ್ತೇಜನ ನೀಡಬೇಕು. ಇತರ ಸ್ಥಳಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಲು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಮುಂದಾಗುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಉತ್ತಮ ಗುಣಮಟ್ಟದ ವಾತಾವರಣ ನಿರ್ಮಿಸಬೇಕು. ಶುದ್ಧ ಗಾಳಿ ಎಲ್ಲರಿಗೂ ಸಿಗುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಹಸಿರು ನ್ಯಾಯಮಂಡಳಿ ಸೂಚಿಸಿದೆ.
ಯಾರು ಗಿಡಗಳನು ನೆಡುತ್ತಾರೋ, ಅವರೇ ಆ ಗಿಡಗಳ ನಿರ್ವಹಣೆ ಮಾಡಬೇಕು ಎಂದೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಿಳಿಸಿದೆ.
ಇದಕ್ಕೆ ಉತ್ತರ ನೀಡಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ೨೦೧೫ರ ಹಸಿರು ಹೆದ್ದಾರಿ ನಿಯಮಗಳಿಗೆ ಬದ್ಧವಾಗಿರುವುದಾಗಿ ತಿಳಿಸಿದೆ. ಈ ನಿಯಮದ ಪ್ರಕಾರ ಹೆದ್ದಾರಿ ಕಾರಿಡಾರ್ ಹಸಿರೀಕರಣದಲ್ಲಿ ಸಮುದಾಯ, ರೈತರು, ಖಾಸಗಿ ವಲಯ, ಸ್ವಯಂಸೇವಾ ಸಂಸ್ಥೆಗಳು ಹಾಗೂ ಸರ್ಕಾರಿ ಸಂಸ್ಥೆಗಳು ಪಾಲ್ಗೊಳ್ಳಬಹುದಾಗಿದೆ.
ಈಗಾಗಲೇ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡುವ ಕುರಿತಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಹಸಿರೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ತಿಳಿಸಿದೆ.

LEAVE A REPLY