ಡೇರಾ ಸಚ್ಚಾ ಸೌಧದಲ್ಲಿ ಸಿಕ್ಕಿದವು ಓಬಿ ವ್ಯಾನ್, ಹಳೆ ನೋಟು, ಐಷಾರಾಮಿ ಕಾರುಗಳು!

ಸಿರ್ಸಾ: ಡೇರಾ ಸಚ್ಚಾ ಸೌದದ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಮೇಲೆ ಹೈಕೋರ್ಟ್ ಆದೇಶದಂತೆ ಡೇರಾದಲ್ಲಿ ಶೋಧ ಕಾರ್ಯ ಆರಂಭವಾಗಿದೆ.
ಅಚ್ಚರಿಯೆಂಬಂತೆ ನಂಬರ್ ಪ್ಲೆಟ್‌ಗಳಿಲ್ಲದ ಐಷಾರಾಮಿ ಕಾರುಗಳು, 7 ಸಾವಿರ ರೂ. ಮೌಲ್ಯದ ಹಳೆಯ ನೋಟುಗಳು, ಓಬಿ ವಾಹನ, ಪ್ಲಾಸ್ಟಿಕ್ ನಾಣ್ಯಗಳು ಹಾಗೂ ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಹರ್ಯಾಣದ ಸಿರ್ಸಾದಲ್ಲಿ ಭದ್ರತಾ ಪಡೆಯಿಂದ ಭಾರೀ ದೊಡ್ಡ ಮಟ್ಟದಲ್ಲಿ ಶೋಧ ಕಾರ್ಯ ನಡೆದಿದೆ. ಪಂಜಾಬ್ ಹಾಗೂ ಹರ್ಯಾಣ ಹೈ ಕೋರ್ಟ್ ನೇಮಕ ಮಾಡಿರುವಂತಹ ನ್ಯಾಯಮೂರ್ತಿ ಎಕೆಎಸ್ ಪವಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ೪೧ ಪ್ಯಾರಾ ಮಿಲಿಟರಿ ಪಡೆ, ೪ ಸೇನಾ ತಂಡಗಳು, ಹಲವು ಜಿಲ್ಲೆಗಳ ಪೊಲೀಸರು, ಎಸ್‌ಡ್ಬಲ್ಯೂಎಟಿ ತಂಡ ಹಾಗೂ ಶ್ವಾನ ಪಡೆಯು ಕಾರ್ಯಾಚರಣೆಗೆ ನೇಮಕವಾಗಿದೆ.
12,000 ರೂ. ನಗದು ವಶ
ಮೊದಲ ದಿನದ ಶೋಧದಲ್ಲಿ ನಂಬರ್ ಪ್ಲೇಟ್‌ಗಳಿಲ್ಲದ ಐಷಾರಾಮಿ ಕಾರು, 7 ಸಾವಿರ ರೂ. ಮೌಲ್ಯದ ಹಳೆಯ ನೋಟುಗಳು, ಓಬಿ ವಾಹನ ಹಾಗೂ ೧೨ ಸಾವಿರ ರೂಪಾಯಿಗಳ ನಗದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದಲ್ಲದೆ, ಲ್ಯಾಪ್‌ಟಾಪ್‌ಗಳು ಹಾಗೂ ಪ್ಲಾಸ್ಟಿಕ್ ನಾಣ್ಯಗಳನ್ನು ಡೇರಾ ಅವರಣಗಳಲ್ಲಿ ವಶಕ್ಕೆ ಪಡೆಯಲಾಗಿದೆ. ಇದೆಲ್ಲವೂ ಕೆಲವೇ ಗಂಟೆಗಳ ಶೋಧದಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳಾಗಿವೆ ಎಂದು ತಿಳಿದುಬಂದಿದೆ. ಅಳಿವಿನಂಚಿನಲ್ಲಿರುವ ಕೆಲವು ಪ್ರಾಣಿಗಳು ಕೂಡ ಈ ಒಂದು ಡೇರಾದ ಆವರಣದಲ್ಲಿ ಪತ್ತೆಯಾಗಿವೆ.
ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಸಹ ನಿರ್ದೇಶಕ ಸತೀಶ್ ಮಿಶ್ರಾ ದಾಳಿಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದು, ಕೆಲ ರೂಮುಗಳನ್ನು ವಶಕ್ಕೆ ತೆಗೆದುಕೊಂಡು ಮುದ್ರೆ ಹಾಕಲಾಗಿದೆ. ಇನ್ನು ಹಾರ್ಡ್ ಡಿಸ್ಕ್‌ಗಳು ಹಾಗೂ ಲೆಬಲ್‌ಗಳಿಲ್ಲದ ಸಾಕಷ್ಟು ಔಷಧಿಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 8 ಗಂಟೆಗೆ ಈ ಒಂದು ಶೋಧಕಾರ್ಯ ಆರಂಭವಾಗಿದ್ದು, ಪ್ರತಿಯೊಂದನ್ನು ಚಿತ್ರೀಕರಣಗೊಳಿಸಿಕೊಳ್ಳಲಾಗುತ್ತಿದೆ. ಇನ್ನು ಡೇರಾಗೆ ತೆರಳುವ ಮಾರ್ಗದಲ್ಲಿ ಕರ್ಫ್ಯೂ ಜಾರಿ ಮುಂದುವರೆದಿದೆ. ಸರಿ ಸುಮಾರು ೮೦೦ ಎಕರೆಯಲ್ಲಿರುವ ಡೇರಾ ಅವರಣವನ್ನು ೧೦ ವಿಭಾಗಗಳಾಗಿ ವಿಂಗಡಿಸಿಕೊಂಡು ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಪ್ರತಿಯೊಂದು ವಿಭಾಗವನ್ನು ಓರ್ವ ಹಿರಿಯ ಅಕಾರಿಯು ಮುನ್ನಡೆಸುತ್ತಿದ್ದಾರೆ.
ಸಿರ್ಸಾ ಜಿಲ್ಲೆಯಲ್ಲಿ ಸೆ.10ರವೆಗೂ ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತ ಮಾಡಲಾಗಿದೆ. ಸಾರ್ವಜನಿಕರಲ್ಲಿ ಯಾವುದೇ ರೀತಿಯ ಗಾಳಿ ಸುದ್ದಿಗಳು ಹರಡದಂತೆ ಹಾಗೂ ಪರಿಸ್ಥಿತಿಯು ಹಾಳುಗೆಡುವುದನ್ನು ತಪ್ಪಿಸುವುದಕ್ಕಾಗಿ ಈ ಒಂದು ಕ್ರಮವನ್ನು ಕೈಗೊಳ್ಳಲಾಗಿದೆ. ಇನ್ನು ಮಾಧ್ಯಮಗಳನ್ನು ಸಹ ಶಾ ಸತ್ನಂ ಸಿಂಗ್ ವೃತ್ತದ ಬಳಿಯೇ ತಡೆಯಲಾಗಿದ್ದು, ಡೇರಾದ ಮುಖ್ಯ ಸ್ಥಳದಿಂದ 7 ಕಿ,ಮೀ. ದೂರದಲ್ಲಿದೆ. ಈ ಒಂದು ವೃತ್ತವು ಡೇರಾದಿಂದ ನಗರವನ್ನು ಪ್ರತ್ಯೇಕಿಸುವ ಹೃದಯಭಾಗವಾಗಿದ್ದು, ಬಿಗಿ ಭದ್ರತೆಯನ್ನು ನೀಡಲಾಗಿದೆ.
ನ್ಯಾಯಮೂರ್ತಿ ಪವಾರ್ ಗುರುವಾರವೇ ಸಿರ್ಸಾಗೆ ಆಗಮಿಸಿದ್ದು, ಹಿರಿಯ ಅಧಿಕಾರಿಗಳು, ನಾಗರಿಕರು ಹಾಗೂ ಪೊಲೀಸ್ ಆಡಳಿತಾಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದರು.

LEAVE A REPLY